ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ೨೦೨೪-೨೦೨೫ ರಲ್ಲಿ ಸುಮಾರು ೨೫ ಕ್ಕೂ ಹೆಚ್ಚು ಪರೀಕ್ಷೆಗಳನ್ನು ಆಯೋಜಿಸಿ ೨೬ ಲಕ್ಷಕ್ಕೂ ಹೆಚ್ಚು ಅರ್ಜಿಗಳ ನಿರ್ವಹಣೆಯೊಂದಿಗೆ ಸುಮಾರು ೭ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ.
ಈ ವರ್ಷದ ಆರಂಭದಲ್ಲಿ ನಿಗಮ-ಮಂಡಳಿಯ ಹಲವಾರು ಪರೀಕ್ಷೆಗಳನ್ನು ನಡೆಸಿ ಯಾವುದೇ ಗೊಂದಲವಿಲ್ಲದೆ ಫಲಿತಾಂಶ ಪ್ರಕಟಿಸಿರುವುದು ಶ್ಲಾಘನೀಯ. ಕಳಂಕ / ವಿವಾದವಿಲ್ಲದೆ ಪರೀಕ್ಷೆ ಆಯೋಜಿಸಿ ಅಂಕಗಳನ್ನು ಪ್ರಕಟಿಸಿ ತದನಂತರ ಫಲಿತಾಂಶ,ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಸುತ್ತದೆ ಕೆಇಎ. ಸದ್ಯ, ಒಳ ಮೀಸಲಾತಿ ಸಂಬಂಧ ಸಮಸ್ಯೆ ಬಗೆಹರಿದಿದ್ದು ರಾಜ್ಯದಲ್ಲಿ ಉದ್ಯೋಗದ ಸಮಸ್ಯೆಯನ್ನು ನೀಗಿಸುವ ದಿಸೆಯಲ್ಲಿ ೫೬,೦೦೦ ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಣಯವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ಮೊದಲ ದಿನವೇ ಮಾಡಿದ್ದಾರೆ.
ಅಧಿಸೂಚನೆಯಾಗದೆ ದಣಿದು ಬಸವಳಿದ ಯುವ ಜನರಿಗೆ ಹುದ್ದೆ ಭರ್ತಿ ಸಂಬಂಧ ಸಿಎಂ ಉವಾಚವು ಕೇವಲ ಮಾತಾಗದೇ ಗ್ಯಾರಂಟಿ ಆದರೆ ಈ ಹೊತ್ತಿನಲ್ಲಿ ನಿಜಕ್ಕೂ ಯುವ ಜನತೆಗೆ ಟಾನಿಕ್ ಆಗಬಲ್ಲದು. ಇಂದು ಉಖಾರ್ಹ ವಿಷಯ: ಕೆಇಎ ಪರೀಕ್ಷೆ ನಡೆಸಿದ ಕೆಲವೇ ದಿನಗಳ ಅಂತರದಲ್ಲಿ ಪ್ರತಿಯೊಬ್ಬರ ಅಂಕಗಳನ್ನು ಪ್ರಕಟಿಸುತ್ತದೆ. ಆದರೆ, ಕೆಪಿಎಸ್‌ಸಿಯಿಂದ ಇವತ್ತಿನವರೆಗೂ ಅದು ಸಾಧ್ಯವಾಗಿಲ್ಲ ಏಕೆ? ಮೊನ್ನೆ ಪೊಲೀಸ್ ಕಾನ್ಸ್‌ಟೇಬಲ್‌ನ ೩ ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿನ ಜವಾಬ್ದಾರಿಯನ್ನು ಕೆಇಎಗೆ ನೀಡಿದ್ದು ಸ್ವಾಗತಾರ್ಹ. ಸಿಎಂ ಡಿ.ಕೆ. ಶಿವಕುಮಾರ್ ತಾವು ನುಡಿದಿರುವಂತೆ ೫೬ ಸಾವಿರ ಬೃಹತ್ ಹುದ್ದೆಗಳನ್ನು ಶತಾಯ ಗತಾಯ ತುಂಬಬೇಕಿದೆ. ಅರ್ಹ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹುದ್ದೆ ನ್ಯಾಯಯುತವಾಗಿ ದೊರಕಲು ಪರೀಕ್ಷಾ ಜವಾಬ್ದಾರಿಯನ್ನು ಸಾಧ್ಯವಾದಷ್ಟು ಕೆಇಎ ಗೆ ನೀಡಲಿ. ಈ ಮೊದಲಿನಿಂದಲೂ, ರಾಜ್ಯದಲ್ಲಿ ಅಧಿಕಾರದಲ್ಲಿ ಯಾವುದೇ ಸರ್ಕಾರವಿದ್ದರೂ ಕೆಪಿಎಸ್‌ಸಿ ಭ್ರಷ್ಟಾಚಾರ, ಪಕ್ಷಪಾತ, ಲಂಚ, ರಾಜಕಾರಣಿಗಳ ಪ್ರಭಾವ ತಡೆಯಲು ಸಾಧ್ಯವೇ ಆಗುತ್ತಿಲ್ಲ. ಇದು ಇವತ್ತಿಗೂ ಅರ್ಥವಾಗದ ಮಿಲಿಯನ್ ಡಾಲರ್ ಪ್ರಶ್ನೆ! ಭವಿಷ್ಯದಲ್ಲಿ ನೇಮಕಾತಿ ಸಂಬಂಧ ಪ್ರತಿಯೊಂದು ಇಲಾಖಾ ಪರೀಕ್ಷೆಗಳ ಹೊಣೆಯನ್ನೂ ಕೆಇಎಗೆ ಕೊಡುವುದು ಸ್ಪರ್ಧಾ ಆಕಾಂಕ್ಷಿಗಳ ಹಿತ ದೃಷ್ಟಿಯಿಂದ ಒಳ್ಳೆಯದು.
– ಅನಿಲ್ ಕುಮಾರ್, ನಂಜನಗೂಡು


