Mysore
23
overcast clouds
Light
Dark

ನನ್ನ ಪ್ರೀತಿಯ ಮೇಷ್ಟು: ಪರಶುರಾಮ್ ಮತ್ತು ಸ್ಟ್ಯಾನ್ಲಿ ಎಂಬ ಅಣ್ಣಂದಿರ ಗರಡಿ

೧೮ ವರ್ಷಗಳಿಂದ ಒಡನಾಡಿಯ ಒಡನಾಟ ನನ್ನದು. ಅಲ್ಲಿ ಕಲಿದದ್ದು ಬೆಟ್ಟದಷ್ಟು. ಅಣ್ಣಂದಿರ ರೀತಿ, ಗುರುಗಳ ರೀತಿ ಇರುವ ಸ್ಟ್ಯಾನ್ಲಿ ಮತ್ತು ಪರಶುರಾಮ್ ಸರ್ ನನಗೆ ಮತ್ತು ನನ್ನಂಥವರಿಗೆ ಬೆಳಕು.

ಕಲೆ, ಸೇವೆ, ಕ್ರೀಡೆ, ಸಾಹಿತ್ಯ ಹೀಗೆ ಬದುಕಿನ ಎಲ್ಲ ಮಗ್ಗಲುಗಳನ್ನು ಒಡನಾಡಿಯಲ್ಲಿ ಕಲಿಯಲು ಅವಕಾಶ ಇದೆ. ಜೀವನವನ್ನು ಸಮಾಜಮುಖಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ನನ್ನಿಬ್ಬರು ಗುರು ಸಮಾನರಾದ ಈ ಅಣ್ಣಂದಿರು ಪ್ರತಿ ಹಂತದಲ್ಲಿಯೂ ಹೇಳಿಕೊಡುತ್ತಿರುತ್ತಾರೆ.

ನಾನು ೫ನೇ ತರಗತಿಯಲ್ಲಿ ಇರಬೇಕಾದರೆ ಒಡನಾಡಿಯ ಒಡಲು ಸೇರಿದೆ. ಅದಾದ ಮೇಲೆ ಅಲ್ಲಿಂದಲೇ ಕಲಿತು ಈಗ ಅಲ್ಲಿಯೇ ಮಕ್ಕಳಿಗೆ ಕರಾಟೆ ಮತ್ತು ಯೋಗ ಕ್ಲಾಸ್ ಮಾಡುತ್ತಿದ್ದೇನೆ. ಇದಕ್ಕೆಲ್ಲವೂ ಈ ಇಬ್ಬರು ಅಣ್ಣಂದಿರೇ ಕಾರಣ.

ಒಡನಾಡಿಗೆ ಯಾರೇ ಹೊಸಬರು ಬಂದರೂ ಅವರನ್ನು ಮೋಟಿವೇಟ್ ಮಾಡುತ್ತಾರೆ. ಬದುಕು ಎಂದರೆ ಇಷ್ಟೆನಾ ಎಂದುಕೊಂಡವರಿಗೆ ಜೀವನ ಇಷ್ಟೊಂದು ಸುಂದರವಾಗಿದೆ ಎನ್ನುವಂತೆ ಮಾಡುತ್ತಾರೆ. ಅದು ಅವರ ಶಕ್ತಿ. ನಾನು ಅವರ ಕೆಲಸಗಳನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಮಾತುಗಳನ್ನು ಕೇಳಿ ಬೆಳೆದಿದ್ದೇನೆ. ಇದೀಗ ಅವರ ಹಾದಿಯನ್ನೇ ಹಿಡಿದಿದ್ದೇನೆ. ಇದು ನನ್ನ ಪಾಲಿನ ಅತಿ ದೊಡ್ಡ ಹೆಮ್ಮೆ.

ಪರಶುರಾಮ್, ಸ್ಟ್ಯಾನ್ಲಿ ಎನ್ನುವ ಹೆಸರುಗಳನ್ನು ನೆನೆದರೆ ನನಗೆ ಉತ್ಸಾಹ ಹೆಚ್ಚಾಗುತ್ತದೆ. ಸೋತು ನಿಂತೆ ಎನ್ನುವಾಗ ಅವರ ಹೆಸರನ್ನು, ಅವರ ಮಾತುಗಳನ್ನು ನೆನೆದುಕೊಂಡರೆ ಸಾಕು ಶಕ್ತಿ ಬಂದಂತಾಗುತ್ತದೆ. ಅಷ್ಟರ ಮಟ್ಟಿಗೆ ಅವರು ನನ್ನ ಪಾಲಿಗೆ ಯಶಸ್ವಿ ಗುರುಗಳು.

ಈಗ ನಾನು ಒಡನಾಡಿಯಲ್ಲಿ ಇಲ್ಲ. ಒಂದು ರೀತಿಯಲ್ಲಿ ಸಬಲೆಯಾಗಿ ನನ್ನ ತಾಯಿಯೊಂದಿಗೆ ಬದುಕುತ್ತಿದ್ದೇನೆ. ಈ ಸಬಲತೆಯ ಹಿಂದಿನ ಶಕ್ತಿ ನನ್ನ ಅಣ್ಣಂದಿರು.

ನನಗೆ ವಿಜ್ಞಾನದ ಬಗ್ಗೆ ಆಸಕ್ತಿ ಇತ್ತು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿಲ್ಲ ಎಂದು ನನಗೆ ಕಾಲೇಜಿನಲ್ಲಿ ಸೈನ್ಸ್‌ಗೆ ಸೀಟ್ ಸಿಗಲಿಲ್ಲ. ನಿರಾಶಳಾಗಿ ಕುಳಿತಿದ್ದಾಗ ನನಗೆ ಕಾಮರ್ಸ್ ತೆಗೆದುಕೋ ಎಂದು ಮಾರ್ಗದರ್ಶನ ಮಾಡಿ, ಅದರಲ್ಲಿಯೇ ಯಶ ಕಾಣುವಂತೆ ಮಾಡಿದವರು ಈ ಗುರು ದ್ವಯರು. ಅದೇ ರೀತಿ ಮಹಾಜನ ಕಾಲೇಜಿನಲ್ಲಿ ಸಿಕ್ಕ ನನ್ನ ಗುರು ಸುಮನಾ ಮೇಂಡ. ಅವರ ಸಲಹೆ, ಮಾರ್ಗದರ್ಶನವೂ ನನ್ನ ಪಾಲಿಗೆ ಅತಿ ಮುಖ್ಯವಾಗಿದೆ.

– ವರ್ಷ ಸರಸ್ವತಿ, ಚಾಮರಾಜನಗರ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ