Mysore
31
overcast clouds

Social Media

ಮಂಗಳವಾರ, 22 ಏಪ್ರಿಲ 2025
Light
Dark

ಬರಹ: ಬದುಕು : ನನ್ನ ಕವಿತೆಗಂಟಿದ ಕಥೆಗಳು

ಕೀರ್ತಿ ಎಸ್. ಬೈಂದೂರು keerthisba2018@gmail.com

ಬೆಳಗಿನ ಖಾಲಿತನ ಸರಿಸಿಟ್ಟ ಮನೆಯಂಗಳ ಬೈಗಿನಲ್ಲಿ ಗಾಳಿಪಟ ತಾಂರಿಗಾಗಿ ಮಕ್ಕಳ ದಂಡಿನ ಗೌಜಿನಲ್ಲಿರುತ್ತಿತ್ತು. ಪತ್ರಿಕೆ ಹರಿದು, ಅನ್ನ ನುರಿದು ಅಂಟಾಗಿಸಿ, ಹಿಡಿಕಡ್ಡಿಗಳನ್ನು ಅಲ್ಲಲ್ಲಿ ಒತ್ತಿಟ್ಟು, ಸ್ಕೆಚ್ ಪೆನ್‌ನಲ್ಲಿ ಎರಡು ಕಣ್ಣರಳಿಸಿ, ಉದ್ದಕ್ಕೆ ಬಾಲ ಜೋತು ಬಿಟ್ಟ ಗಾಳಿಪಟ ಹಕ್ಕಿಗಳಲ್ಲೇ ವಿಶೇಷ ಅಂತೆನಿಸುತ್ತಿತ್ತು. ಮಾರನೇ ದಿನ ಆಗಸವನ್ನೇ ಕೊಂಡುಕೊಂಡಷ್ಟು ಗತ್ತಿನಿಂದ ಹಾರುವುದೇನು! ಅದನ್ನು ಕಂಡದ್ದೇ ನಾನು ಮತ್ತು ನನ್ನ ಅಕ್ಕ ಸೇರಿ ಹುಮ್ಮಸ್ಸಿನಲ್ಲಿಯೇ ಗಾಳಿಪಟ ತಯಾರು ಮಾಡಿಬಿಟ್ಟೆವು. ಹಾರುವುದು ಹೋಗಲಿ, ಈ ಗಾಳಿಪಟ ಏಳುವುದೂ ಇಲ್ಲ. ಮತ್ತೆ ತಿಳಿದದ್ದು, ಗಾಳಿಪಟ ಹಾರುವುದಕ್ಕೆ ಹಗುರಾಗುವ ಅರ್ಹತೆಯಿರಬೇಕು ಎಂದು. ಮುಂದಿನ ಪ್ರಯತ್ನ ನಮ್ಮದು; ಸಹಕಾರ ಎದುರು ಮನೆಯವರದ್ದು. ಆದರೂ ನಾವೇ ಕೂತು ಮಾಡಿಸಿಕೊಂಡ ಕಾರಣಕ್ಕೆ ನಮ್ಮ ಹೆಸರಿಟ್ಟು ದಾರ ಕಟ್ಟಿ ಹಾರಿಸಿದ್ದೆವು. ಹಗುರಾಗಿ ಮೇಲಕ್ಕೆ ಥೇಟ್ ಹಕ್ಕಿಯಾಗಿ ಹಾರಾಡಿದ್ದ ಗಾಳಿಪಟವನ್ನು ಕಾಣುವಾಗ ಬೀಸಿದ್ದ ಚಪ್ಪಾಳೆ, ಖುಷಿಯಲ್ಲವು ಎಂಟು ಸಾಲಿನ ಪುಟ್ಟ ಕವಿತೆಯಾಗಿತ್ತು.

ಹಾಸ್ಟೆಲ್‌ನ ಏಕತಾನತೆಯ ಬದುಕಿನಲ್ಲಿ ಮನೆಯವರ ಫೋನ್‌ಗಾಗಿ ಕಾಯುವುದು ಕೂಡ ಸೇರಿಹೋಗಿತ್ತು. ಮನೆಯಿಂದ ಮತ್ತೆ ಹಾಸ್ಟೆಲ್ ಸೇರಿದ ದಿನ ವಿಪರೀತ ವೈರಾಗ್ಯ ತಾಳಿದ ಕವಿತೆ, ರುಚಿಗಟ್ಟಾದ ಅಡುಗೆಯು ಕವಿತೆ, ಬೆಳಗಿನ ಸೂರ್ಯೋದಯ ಮತ್ತು ರಾತ್ರಿಯ ಚಂದ್ರನ ಕುರಿತು ಹೀಗೆ ಹಲವು ಕವಿತೆಗಳನ್ನು ಸುಮ್ಮನೆ ಬರೆಯುತ್ತಿದ್ದೆನಷ್ಟೆ. ಅಡುಗೆ ಕವಿತೆ ಎಷ್ಟು ಯಶಸ್ವಿಯಾಯಿತೆಂದರೆ, ಕೇಳಿದ ತಕ್ಷಣವೆ ಮೆಸ್ ಆಂಟಿಯರೆಲ್ಲ ಮನೆಗೆ ಫೋನ್ ಮಾಡಿಕೊಡುತ್ತಿದ್ದರು. ಕವಿತೆಯ ಪ್ರೋಂಜನವೆಂದು ಈಗ ನಕ್ಕು ಸುಮ್ಮನಾಗುವುದು.
(ಲೇಖಕಿ ಮಾನಸಗಂಗೋತ್ರಿಯಲ್ಲಿ ಇದೀಗ ತಾನೇ ಕನ್ನಡ ಎಂ.ಎ. ವ್ಯಾಸಂಗ ಮುಗಿಸಿದ್ದಾರೆ)

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ