Mysore
27
light rain

Social Media

ಭಾನುವಾರ, 16 ಮಾರ್ಚ್ 2025
Light
Dark

ಯುವ ಡಾಟ್‌ ಕಾಮ್ :‌ ಸರ್ಕಾರಿ ಶಿಕ್ಷಕರ ಸಾರ್ಥಕ ಸೇವೆ

ಗ್ರಾಮೀಣ ಶಾಲೆಗಳೇ ಗುರಿ, ಮಕ್ಕಳಲ್ಲಿ ಸಂಶೋಧನಾ ಮನೋಭಾವ ಬೆಳೆಸುವುದೇ ಉದ್ದೇಶ… ಹೀಗೊಂದು ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ಮುಂದಡಿ ಇಡುತ್ತಿದೆ ‘ಮೈಸೂರು ಸೈನ್ಸ್ ಫೌಂಡೇಷನ್’.

– ಕೆಂಡಗಣ್ಣ ಜಿ.ಬಿ. ಸರಗೂರು

೨೦೧೨ರಲ್ಲಿ ಪ್ರಾರಂಭವಾದ ‘ಮೈಸೂರು ಸೈನ್ಸ್ ಫೌಂಡೇಷನ್’ ಸಂಸ್ಥೆ ಇಂದು ದಶಮಾನೋತ್ಸವನ್ನು ಪೂರೈಸಿ ಹಳ್ಳಿ ಹಳ್ಳಿಗೂ ದಾಪುಗಾಲಿಡುತ್ತಿದೆ. ವಿಜ್ಞಾನವನ್ನು ಮಕ್ಕಳ ಮನಸ್ಸನಲ್ಲಿ ಬಿತ್ತಿ ಬೆಳೆಯುತ್ತಿದೆ. ಈ ಬಗ್ಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಸಂತೋಷ್ ಕುಮಾರ್ ವಿವಿರಗಳನ್ನು ಬಿಚ್ಚಿಟ್ಟಿದ್ದಾರೆ.

ವಿವಿಧ ಸರ್ಕಾರಿ ಶಾಲೆಗಳ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಒಟ್ಟಾಗಿ ಕಟ್ಟಿದ ಸಂಸ್ಥೆ ‘ಮೈಸೂರು ಸೈನ್ಸ್ ಫೌಂಡೇಷನ್’. ತಾವು ಕೆಲಸ ಮಾಡುತ್ತಿರುವ ಶಾಲೆಗಳಲ್ಲಿ ಇರುವ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುತ್ತಿದ್ದಾರೆ. ಜೊತೆಗೆ ಮಂಡ್ಯ, ಮೈಸೂರು, ಚಾಮರಾಜನಗರಗಳನ್ನು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಗೆ ಒಳಗು ಮಾಡಿಕೊಂಡು ಹಳ್ಳಿ ಹಳ್ಳಿಗಳಿಗೂ ಖುದ್ದಾಗಿ ತೆರಳಿ ಮಕ್ಕಳಿಗೆ ವಿಜ್ಞಾನದ ಕೌತುಕಗಳ ಪರಿಚಯ ಮಾಡಿಸುತ್ತಿದ್ದಾರೆ.

ಮೈಸೂರಿನಲ್ಲಿ ಬೇರು, ಮಂಡ್ಯದಲ್ಲಿ ಚಿಗುರು

‘ಮೈಸೂರು ಸೈನ್ಸ್ ಫೌಂಡೇಷನ್’ ೨೦೧೨ರಲ್ಲಿ ರಚನೆಗೊಂಡ ರೀತಿಯೇ ಚೆಂದ. ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಜ್ಞಾನ, ಗಣಿತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಒಬ್ಬಿಬ್ಬರು ಶಿಕ್ಷಕರು ಪಾಂಡವಪುರದಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಮೈಸೂರಿನ ಸಿ. ಕೃಷ್ಣೇಗೌಡರ ಸಂಪರ್ಕಕ್ಕೆ ಬರುತ್ತಾರೆ. ಪರಿಚಯ ಬೆಳೆಯುತ್ತಾ ಹೋಗುತ್ತದೆ. ಹೀಗಿರುವಾಗ ನಾವು ಒಟ್ಟಾಗಿ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡೋಣ ಎಂದು ಕೃಷ್ಣೇಗೌಡರು ಸಲಹೆ ನೀಡುತ್ತಾರೆ. ಇದಕ್ಕೆ ಒಪ್ಪಿದ ಇತರ ಶಿಕ್ಷಕರು ತಮ್ಮ ಪರಿಚಯಸ್ಥ ಶಿಕ್ಷಕರೊಂದಿಗೆ ಈ ಮಾಹಿತಿ ಹಂಚಿಕೊಂಡು ೯ ಮಂದಿಯ ತಂಡವನ್ನು ಪ್ರಾರಂಭದಲ್ಲಿ ಕಟ್ಟುತ್ತಾರೆ. ಒಳ್ಳೆಯ ಕಾರ್ಯಕ್ಕೆ ತಮ್ಮದೂ ಅಳಿಲು ಸೇವೆ ಸೇರಲಿ ಎಂದು ಎಲ್ಲರೂ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ಒಂದು ಭಾಗವನ್ನು ಇದಕ್ಕಾಗಿ ಎತ್ತಿಡುತ್ತಾರೆ. ಹೀಗೆ ಶುರುವಾದ ಸಂಸ್ಥೆಯಲ್ಲಿ ಈಗ ೧೩ ಮಂದಿ ಇದ್ದಾರೆ.

ಏನೇನು ಮಾಡುತ್ತಾರೆ?

ವಾರಾಂತ್ಯದ ರಜೆಗಳಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರದ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರ ಸಹಕಾರದೊಂದಿಗೆ ಮಕ್ಕಳಿಗೆ ವಿವಿಧ ರೀತಿಯ ವಿಜ್ಞಾನ ಸಂಬಂಧಿ ಚಟುವಟಿಕೆಗಳನ್ನು ಮಾಡಿಸುತ್ತಾರೆ. ತಾವೇ ಎಲ್ಲ ಪರಿಕರಗಳನ್ನು ತೆಗೆದುಕೊಂಡು ಹೋಗಿ ವಿಜ್ಞಾನ ಮಾದರಿಗಳನ್ನು ಮಕ್ಕಳಿಂದಲೇ ಮಾಡಿಸುತ್ತಾರೆ. ಮೌಢ್ಯ, ತಪ್ಪು ನಂಬಿಕೆಗಳ ಬಗ್ಗೆ ಅರಿವು ಮೂಡಿಸಿ ಮಕ್ಕಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಿದ್ದಾರೆ. ಜೊತೆಗೆ ವಿಜ್ಞಾನಿ-ವಿದ್ಯಾರ್ಥಿ ಸಂವಾದಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಇರುವ ಪ್ರಶ್ನೆಗಳಿಗೆ ವಿಷಯ ತಜ್ಞರಿಂದ ಉತ್ತರ ಕೊಡಿಸುತ್ತಾರೆ.

ಸಂಡೇ ಸೈನ್ಸ್

ಆಗಸ್ಟ್ ತಿಂಗಳಿನ ಭಾನುವಾರಗಳಲ್ಲಿ ‘ಸಂಡೇ ಸೈನ್ಸ್’ ಎನ್ನುವ ವಿಶೇಷ ಅಭಿಯಾನ ಮಾಡುತ್ತಿದ್ದು, ಗ್ರಾಮೀಣ ಭಾಗದ ಶಾಲೆಗಳಿಗೆ ಹೋಗಿ ಅಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳಿಗೆ ವಿಜ್ಞಾನದ ಕೌತುಕಗಳ ಬಗ್ಗೆ ತಿಳಿಸಿಕೊಡಲಿದೆ. ಜೊತೆಗೆ ಪಠ್ಯದಲ್ಲಿ ಇರುವ ವಿಚಾರಗಳನ್ನೇ ಆಯ್ಕೆ ಮಾಡಿಕೊಂಡು ಅವುಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಿದೆ ಶಿಕ್ಷಕರ ತಂಡ.

ಆಸಕ್ತರು ಕೈ ಜೋಡಿಸಿ

‘ಯಾರೇ ಬಂದರೂ ತಮ್ಮ ತಂಡವನ್ನು ಸೇರಿಕೊಳ್ಳಬಹುದು.

ವಿಜ್ಞಾನದ ಆಸಕ್ತಿ ಇರುವ ಯುವ ಮನಸ್ಸುಗಳು, ವಿವಿಧ ಕ್ಷೇತ್ರಗಳ ಪ್ರತಿಭಾವಂತರಿಗೆ ಮುಕ್ತ ಅವಕಾಶವಿದೆ. ಕೆಲವು ವೇಳೆಗಳಲ್ಲಿ ಎಲ್ಲ ಕಡೆಗಳಿಗೂ ಹೋಗಲು ಸಾಧ್ಯವಾಗುವುದಿಲ್ಲ. ಸಂಶೋಧನಾ ವಿದ್ಯಾರ್ಥಿಗಳು, ವಿಷಯ ಪರಿಣತರು ಜೊತೆಯಾದರೆ ಹತ್ತಿರದಲ್ಲಿ ಇರುವ ಶಾಲೆಗಳಿಗೆ ಹೋಗಿ ತರಬೇತಿ ನೀಡಲು ಸಹಾಯವಾಗುತ್ತದೆ’ ಎನ್ನುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ. ಸಂತೋಷ್ ಕುಮಾರ್ ಅವರ ಆಹ್ವಾನಕ್ಕೆ ನೀವೂ ಕೈ ಜೋಡಿಸಲು ಅವಕಾಶವಿದೆ.

ನೀವೂ ಸಂಪರ್ಕಿಸಿ

ಈಗಾಗಲೇ ತಂಡದ ಕಾರ್ಯವನ್ನು ನೋಡಿ ಇಸ್ರೋ ಅಧ್ಯಕ್ಷರಾಗಿದ್ದ ಕಿರಣ್ ಕುಮಾರ್ ಅವರು ಮೂರು ಬಾರಿ ತಂಡದೊಂದಿಗೆ ಸೇರಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಗ್ಯಾನ್ ಪ್ರಸಾರ್‌ನಿಂದ

ಎರಡು ಬಾರಿ ಗೋಲ್ಡ್ ಕ್ಯಾಟಗರಿ ಅವಾರ್ಡ್ ಕೂಡ ಸಂಸ್ಥೆ ಪಡೆದುಕೊಂಡಿದೆ. ಇಂತಹ ಪರಿಣಿತರ ತಂಡ ನಮ್ಮ ಶಾಲೆಗೂ ಭೇಟಿ ನೀಡಬೇಕು ಎಂದು ಶಿಕ್ಷಕರು, ಮಕ್ಕಳು ಅಂದುಕೊಂಡರೆ ಅದಕ್ಕೆ ಅವಕಾಶ ಇದೆ. ನೀವು ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿ, ಅಗತ್ಯ ಸಹಕಾರ ನೀಡಿದರೆ ‘ಮೈಸೂರು ಸೈನ್ಸ್ ಫೌಂಡೇಷನ್’ ನಿಮ್ಮ ಶಾಲೆಗೂ ಬರುತ್ತದೆ. ಸಂಪರ್ಕಕ್ಕೆ: ದೂ. ಸಂ. 9844405284, 8105503863, 9113868440

ಸಂಸ್ಥೆಯ ನಾವಿಕರು

ಡಾ.ಟಿ. ತಿಪ್ಪೇಸ್ವಾಮಿ. ವಿಜ್ಞಾನಿಗಳು, ಸಿಎಸ್‌ಆರ್‌ಟಿಐ, ಮಹಾ ಪೋಷಕರು, ಪ್ರೊ. ಎಂ.ಆರ್. ನಂದನ್, ಗೌರವಾಧ್ಯಕ್ಷರು, ಸಿ. ಕೃಷ್ಣೇಗೌಡ, ಅಧ್ಯಕ್ಷರು, ಡಾ. ಟಿ. ಶಿವಲಿಂಗಸ್ವಾಮಿ, ಉಪಾಧ್ಯಕ್ಷರು, ಜಿ.ಬಿ. ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ, ಎನ್. ಮಹದೇವಪ್ಪ, ಜಂಟಿ ಕಾರ್ಯದರ್ಶಿ, ಎಂ.ಜಿ.ಎನ್, ಪ್ರಸಾದ್, ಖಜಾಂಚಿ,  ಸದಸ್ಯರು ಸಿ. ಪುರಂದರ್, ಜಿ.ಕೆ. ಕಾಂತರಾಜು, ಸಿ.ಎನ್. ಗೀತಾ, ಎಚ್.ವಿ. ಮುರಳೀಧರ್, ಬಿ.ಎಸ್. ಕೃಷ್ಣಮೂರ್ತಿ, ಎಚ್.ಎಸ್.ಮಂಜುಳಾ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ