Light
Dark

ಹಾಡು-ಪಾಡು | ಎದ್ದು ಹೊರಗೆ ಬಂದ ಹೆಣ್ಣ ಕೊರಳಿಗೆ ಮಾಧ್ಯಮಗಳ ಕುಣಿಕೆ

ಸಂಧ್ಯಾ ರಾಣಿ

ಮದುವೆ ಎನ್ನುವುದು ಸಂಬಂಧಕ್ಕೆ ಅನುವು ಮಾಡಿಕೊಡುವುದೇ ಹೊರತು ಸೆರೆಮನೆ ಅಲ್ಲವಲ್ಲ? ಮದುವೆ ಆಗಿದೆ, ಏನೇ ಆಗಲಿ ನಿನಗಾಗಲಿ, ನನಗಾಗಲಿ ಇದರಿಂದ ಬಿಡುಗಡೆ ಇಲ್ಲ ಎಂದು ಕೂತಾಗ ಆ ಸೆರೆಮನೆಯ ಸರಳುಗಳು ಎರಡೂ ಜೀವಗಳನ್ನೂ ಸುತ್ತುವರಿಯುತ್ತವೆ ಮತ್ತು ಎರಡು ಜೀವಗಳ ನಡುವೆಯೂ ಏರುತ್ತದೆ. ಮುಚ್ಚಿದ್ದ ಹೋಟೆಲ್ ಕೊಠಡಿಯ ಹೊರಗೆ ಮಾಧ್ಯಮ ಕ್ಯಾಮೆರಾಗಳೊಂದಿಗೆ ಕಾದು ನಿಲ್ಲುವುದರಿಂದಾಗಲಿ, ‘ಅಲ್ಲಿ ಇನ್ನೆಷ್ಟು ದಿನ, ಅಬ್ಬಬ್ಬಾ ಎಂದರೆ ಆರು ತಿಂಗಳು’ ಎಂದು ವ್ಯಂಗ್ಯವಾಡುವುದರಿಂದಾಗಲೀ ಆ ಮದುವೆಯ ಮರ್ಯಾದೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ, ಆ ಸಂಬಂಧವನ್ನೂ ಉಳಿಸಿಕೊಳ್ಳಲಾಗುವುದಿಲ್ಲ. 

 

ಇಸವಿ ೧೯೯೭, ಆಗಸ್ಟ್ ೩೧ರ ಬೆಳಗಿನ ಜಾವ. ಪ್ಯಾರಿಸ್‌ನ ಪಾಂಟ್ ಡೆ ಲ’ಅಲ್ಮಾ ಸುರಂಗದೊಳಗೆ ಕಪ್ಪು ಬಣ್ಣದ ಒಂದು ಮರ್ಸಿಡೆಸ್ ಬೆನ್ಜ್ ಕಾರ್ ವೇಗವಾಗಿ ಹೋಗುತ್ತಿತು. ಸುತ್ತಮುತ್ತಲೂ ಕ್ಯಾಮೆರಾ ಹಿಡಿದು ಬೈಕ್‌ಗಳಲ್ಲಿ ಹಿಂಬಾಲಿಸುತ್ತಿದ್ದ ಮಾಧ್ಯಮ ಛಾಯಾಗ್ರಾಹಕರು. ಅವರನ್ನು ತಪ್ಪಿಸಿಕೊಳ್ಳಲೆಂದು ಅತಿವೇಗವಾಗಿ ಹೋಗುತ್ತಿದ್ದ ಕಾರ್ ಸುರಂಗದ ಪಿಲ್ಲರ್ ಒಂದಕ್ಕೆ ಅದೇ ವೇಗದಲ್ಲಿ ಡಿಕ್ಕಿ ಹೊಡೆದಿತ್ತು. ಆ ಸುರಂಗದೊಳಗಿನ ಸುರಕ್ಷತಾ ವೇಗದ ಮಿತಿ ೫೦ ಕಿಮೀ ಇದ್ದರೆ ಕಾರ್ ಅದರ ದುಪ್ಪಟ್ಟಿಗಿಂತಲೂ ಹೆಚ್ಚಿನ ವೇಗದಲ್ಲಿ ಧಾವಿಸುತ್ತಿತ್ತು. ಬೇಟೆಗೆ ಅಟಕಾಯಿಸಿಕೊಂಡ ತೋಳಗಳ ಹಿಂಡಿನಂತೆ ಮೋಟರ್ ಸೈಕಲ್‌ಗಳು ಹಿಂಬಾಲಿಸಿ ಬರುತ್ತಲೇ ಇದ್ದವು. ಡಿಕ್ಕಿ ಹೊಡೆದ ಕಾರಿನ ಮುಂಬಾಗ ಪೂರ್ಣವಾಗಿ ನುಜ್ಜುಗುಜ್ಜಾಗಿತ್ತು. ಅಂತೂ ಇಂತೂ ಅವರನ್ನು ಹಿಂಬಾಲಿಸುತ್ತಿದ್ದ ಮಾಧ್ಯಮದ ಛಾಯಾಗ್ರಾಹಕರು ಆ ನುಜ್ಜುಗುಜ್ಜಾಗಿದ್ದ ಕಾರನ್ನು ತಲುಪಿೆುೀಂ ಬಿಟ್ಟರು. ಅವರಲ್ಲಿ ಕೆಲವರು ಕ್ಯಾಮೆರಾ ಬಿಟ್ಟು ಗಾಯಾಳುಗಳನ್ನು ಕಾಪಾಡಬಹುದೇನೋ ಎಂದು ನೋಡಲು ಹೋದರು. ಆದರೆ ಕೆಲವರು ಆಗಲೂ ಕರ್ತವ್ಯ ಪ್ರಜ್ಞೆ ಬಿಡಲೇ ಇಲ್ಲ, ಕ್ಯಾಮೆರಾ ಕ್ಲಿಕ್ಕಿಸುತ್ತಲೇ ಇದ್ದರು. ಹಾಗೆ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದದ್ದು ಲೇಡಿ ಡಯಾನ… ಅದೇ ಡಯಾನ, ದೇವತೆಯಂತಹ ಮುಖದ ಡಯಾನ. ಸೇರಿದ ದೊರೆ ಮನೆತನಕ್ಕೆ ಹೊಂದಿಕೊಳ್ಳಲಾರದೆ, ದೊರೆಸಾನಿಯ ಮಗನೊಡನೆ ಸಂಸಾರ ಸಾಧ್ಯವಾಗದೆ, ಇಬ್ಬರು ಮಕ್ಕಳಾದ ನಂತರ ಅರಸೊತ್ತಿಗೆಯನ್ನು ತೊರೆದು ಹೊರನಡೆದಿದ್ದ ಡಯಾನ. ನಂತರದ ದಿನಗಳಲ್ಲಿ ದೋದಿ ಫೆುೀಂದ್ ಜೊತೆಗಿನ ಸಂಬಂಧದಲ್ಲಿ ನೆಮ್ಮದಿ ಕಂಡುಕೊಳ್ಳಬಯಸಿದ ಡಯಾನ. ಇನ್ನೇನು ತಾನು ಬಯಸುತ್ತಿದ್ದ ಸಾಂಸಾರಿಕ ಬದುಕು ಸಿಕ್ಕಿಬಿಟ್ಟಿತು ಎಂದು ಸಂಭ್ರಮದಿಂದ ಎದುರು ನೋಡುತ್ತಿದ್ದ ಡಯಾನ ಗಾಯಗೊಂಡ ಕನಸಿನಂತೆ ಕಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಳು. ಅವರಿಬ್ಬರ ಆ ಖಾಸಗಿ ಕ್ಷಣಗಳನ್ನು ಸೆರೆಹಿಡಿದು ಹರಾಜು ಹಾಕುವ ಹಪಾಹಪಿಯಲ್ಲಿದ್ದ ಮಾಧ್ಯಮ ಅವಳನ್ನು ಸುರಂಗದೆಡೆಗೆ ತಳ್ಳಿದ್ದರೆ, ಕಾರನ್ನು ಓಡಿಸುತ್ತಿದ್ದ ಪೌಲ್ ಎನ್ನುವ ಡ್ರ್ತ್ಯೈವರ್ ನ ಒಳಸೇರಿದ್ದ ಆಲ್ಕೋಹಾಲ್ ಮತ್ತು ಆಂಟಿ ಡಿಪ್ರೆಸೆಂಟ್ ಔಷಧಿ ಕಾರಿನ ಆಕ್ಸಿಲೇಟರ್ ನನ್ನು ಒತ್ತಿ ಹಿಡಿದು ಅಪಘಾತಕ್ಕೆ ಕಾರಣವಾಗಿತ್ತು. ಆಕ್ಸಿಡೆಂಟ್ ಆದ ನಂತರವೂ ಜೀವದಿಂದಿದ್ದ ಡಯಾನಾ ತುಟಿಗಳಲ್ಲಿದ್ದದ್ದು ಎರಡೇ ಮಾತುಗಳು, ‘ಓಹ್ ಮೈ ಗಾಡ್’, ‘ಲೀವ್ ಮಿ ಅಲೋನ್..’ ? ’ಅ್ಂಯೋ ದೇವರೆ’, ’ನನ್ನನ್ನು ನನ್ನ ಪಾಡಿಗೆ ಬಿಡಿ’ ಎನ್ನುವ ಈ ಮಾತುಗಳನ್ನು ಅವರು ಪದೇಪದೇ ಮಂತ್ರದಂತೆ ಪಠಿಸುತ್ತಿದ್ದರು. ಆಸ್ಪತ್ರೆಗೆ ಹೋಗುವ ಹಾದಿಯಲ್ಲಿ ಹೃದಯಾಘಾತಕ್ಕೊಳಗಾದ ಡಯಾನಾ ಸಾವನ್ನಪ್ಪಿದ್ದರು. ಸ್ಥಳದಲ್ಲಿದ್ದ ನಾಗರಿಕ ವೀಕ್ಷಕರು ಸಿಟ್ಟಿಗೆದ್ದು ಆ ಛಾಯಾಗ್ರಾಹಕರಲ್ಲಿ ಕೆಲವರ ಮೇಲೆ ಹಲ್ಲೆಯನ್ನು ಮಾಡಿದ್ದರು.
ಇಸವಿ ೨೦೦೮, ಜೂನ್ ೧೫. ಅಂತಹುದೇ ಎಂದು ಹೇಳಲಾಗದಿದ್ದರೂ, ಇದನ್ನೇ ಹೋಲುವ ಮತ್ತೊಂದು ಘಟನೆ ನಮ್ಮಲ್ಲೂ ನಡೆಯಿತು. ಶಾಸಕ ರಘುಪತಿ ಭಟ್ ಅವರ ಹೆಂಡತಿ ಪದ್ಮಪ್ರಿಯಾ ಅವರು ನಾಲ್ಕು ಗೋಡೆಗಳ ನಡುವೆ ಬಹುಶಃ ಬೇಟೆಗೆ ಮೊದಲಿನ ಕ್ಷಣಗಳಲ್ಲಿ ಬೇಟೆಯಾಗುವ ಜೀವವೊಂದು ಎದುರಿಸುವ ತಲ್ಲಣವನ್ನು ಅನುಭವಿಸುತ್ತಿದ್ದರು. ಅವರನ್ನೂ ಅದೇ ಮಾಧ್ಯಮದ ಒತ್ತಡ ನೇಣಿನೆಡೆಗೆ ನೂಕುತ್ತಿತ್ತು. ಗಂಡನೊಡನೆ ಇರಲು ಸಾಧ್ಯವಿಲ್ಲ ಎಂದು ಆಕೆ ಮನೆಬಿಟ್ಟು, ಹೊಸಜೀವನ ಕಟ್ಟಿಕೊಳ್ಳಲು ನಡೆದಿದ್ದರು. ಆದರೆ ಗಂಡ ಹೆಂಡತಿಯರ ನಡುವಣ ಸಮಸ್ಯೆಯ ನಡುವೆ ಸಮಾಜ, ರಾಜಕೀಯ ಮತ್ತು ಮಾಧ್ಯಮ ಹೋದ ಪರಿಣಾಮವಾಗಿ, ಅದರಲ್ಲೂ ಮಾಧ್ಯಮ ರೋಚಕತೆಯ ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಒದಗಿಸುವ ಹಪಾಹಪಿಗೆ ಬಿದ್ದ ಪರಿಣಾಮವಾಗಿ ಪದ್ಮಪ್ರಿಯಾ ದಿಕ್ಕುತೋಚದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಅಲ್ಲಿ ರಾಜಕೀಯ ಕೂಡ ಭಾಗಿಯಾಗಿದ್ದ ಕಾರಣಕ್ಕೆ ರಾಜ್ಯದ ಗೃಹಸಚಿವರು ಆತ್ಮಹತ್ಯೆಯನ್ನು ‘ಮಾನಸಿಕ ಖಿನ್ನತೆ’ಯ ಖಾತೆಗೆ ಸೇರಿಸಿದರು. ಒಟ್ಟಿಗೆ ಬದುಕುವುದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಎಲ್ಲೋ ದೂರದ ದೆಹಲಿಯ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿದ್ದ ಪದ್ಮಪ್ರಿಯಾಗೆ ಮಾಧ್ಯಮಗಳ ಆರೋಪ, ವಿಚಾರಣೆ, ನಿಂದನೆ ಎಲ್ಲವೂ ಆಯಾ ಕ್ಷಣಕ್ಕೆ ತಲುಪುತ್ತಿತ್ತು. ಮತ್ತೆ ಈ ಕಟಕಟೆಯ ನಡುವೆ ನಿಲ್ಲುವುದಕ್ಕಿಂತ ಸಾವೇ ಮೇಲಾಗಿ ಕಂಡಿರಬೇಕು ಅವರಿಗೆ. ಆನಂತರ ಮಾಧ್ಯಮದ ಈ ನಡೆ ಈ ಅನ್ಯಾಯದ ಸಾವಿಗೆ ಕಾರಣವಾದ ಬಗೆಗೆ ವ್ಯಾಪಕ ಟೀಕೆ ವ್ಯಕ್ತವಾಯಿತು.
ಈ ಎರಡೂ ಘಟನೆಗಳಲ್ಲೂ ಹೆಣ್ಣನ್ನು ಮತ್ತು ಹೆಣ್ಣಿನ ಖಾಸಗಿ ಬದುಕನ್ನು ಭೂತಕನ್ನಡಿಯಿಂದ ನೋಡುವ, ಅದಕ್ಕೆ ಯಾರು ಬೇಕಾದರೂ ಭಾಷ್ಯ ಬರೆಯಬಹುದು ಎನ್ನುವ ಅದೇ ಮನೋಭಾವ ಕೆಲಸ ಮಾಡಿತ್ತು. ಒಂದಾನೊಂದು ಕಾಲದಲ್ಲಿ ಕೆಲವು ಪೀತಪತ್ರಿಕೆಗಳು ಹೆಣ್ಣನ್ನು ಕುರಿತು ಕೇವಲವಾದ ತಲೆಬರಹಗಳನ್ನು ಕೊಟ್ಟು ತಮ್ಮ ಸರಕನ್ನು ಭಿಕರಿ ಮಾಡುತ್ತಿದ್ದವು. ಆನಂತರ ಬಂದದ್ದು ದೃಶ್ಯಮಾಧ್ಯಮಗಳ ಸರದಿ. ೨೪/೭ ಸುದ್ದಿ ಕೊಡುವ ಆತುರ, ಅನಿವಾರ್ಯತೆ ಅವೂ ಕೂಡ ಇದೇ ರೋಚಕತೆಯ ಹಾದಿಯನ್ನು ಹಿಡಿದವು. ದಿನದಿನಕ್ಕೂ ಇದೇ ಮಾಧ್ಯಮಗಳು ಸಭ್ಯ ಪ್ರಪಂಚದ ಒಂದೊಂದೇ ಸೀಮೆಯನ್ನು ದಾಟಿದಂತೆಲ್ಲಾ ಮಾಧ್ಯಮದ ಒಳಗಿನಿಂದಲೇ ಅದಕ್ಕೆ ಪ್ರತಿಭಟನೆ ಬರಲು ಪ್ರಾರಂಭವಾಯಿತು. ಖಾಸಗಿತನದ ಹಕ್ಕು ಮತ್ತು ಅದರ ಸಂರಕ್ಷಣೆಯ ಬಗ್ಗೆ ಚರ್ಚೆಗಳು ನಡೆದವು. ಆದರೂ ಈ ವೋಯರಿಸಂ ಅಥವಾ ಇಣುಕಿನೋಡುವ ಚಟ ಕಡಿಮೆಯಾಗುವ ಬದಲು ಹೆಚ್ಚುತ್ತಲೇ ಹೋಯಿತು. ಗಂಡನೊಬ್ಬ ತನ್ನದೇ ಹೆಂಡತಿಗೆ ಮುತ್ತು ಕೊಟ್ಟರೆ ಹಿಡಿದು ಬಡಿಯುವ ಇದೇ ಕಾಲಮಾನದಲ್ಲಿ, ಅವನು ಬೀದಿಬೀದಿಯಲ್ಲಿ ಹೆಂಡತಿಯನ್ನು ಹೊಡೆದು, ಒದ್ದು ಹಲ್ಲೆ ಮಾಡುತ್ತಿದ್ದರೆ ‘ಅವನ ಹೆಂಡತಿ, ಅವನ ಸಂಸಾರ, ಏನು ಬೇಕಾದರೂ ಮಾಡಿಕೊಳ್ಳಲಿ’ ಎಂದು ತಮ್ಮಪಾಡಿಗೆ ತಾವು ನಡೆದು ಹೋಗುವವರು ನಾವು. ಮಾಧ್ಯಮಗಳಿಗೂ ಅಲ್ಲಿ ಸಮಸ್ಯೆಯ ಪರಿಹಾರಕ್ಕಿಂತ ಅದನ್ನು ಎಷ್ಟು ರಸವತ್ತಾಗಿಸಿ, ಹಸಿದ ತೋಳಗಳೆದುರಲ್ಲಿ ಉಣಬಡಿಸಬಹುದು ಎನ್ನುವುದೇ ಮುಖ್ಯ. ಆಗಲೂ ನಮ್ಮ ಕಣ್ಣೆದುರಲ್ಲಿ ಕೆಡುಕಿನ ಒಂದು ಸ್ವರೂಪ ಕಾಣುತ್ತಿತ್ತು. ಹಾಗಾಗಿ ನಾವೂ ‘ನಮ್ಮಲ್ಲೇ ಮೊದಲು, ನಮ್ಮಲ್ಲೇ ಮೊದಲು’ ಎಂದು ಕುಣಿಯುತ್ತಿದ್ದ ಮಾಧ್ಯಮಗಳನ್ನು ಮನಸಾರೆ ಬೈದು, ನಮ್ಮನಮ್ಮ ನೈತಿಕ ಪ್ರಜ್ಞೆಯ ಬೆನ್ನುಸವರಿ, ನಾವೇ ನಮ್ಮನ್ನು ಸುಭಗರೆಂದುಕೊಂಡು ಸಮಾಧಾನ ಪಟ್ಟುಕೊಂಡೆವು.
ಇಸವಿ ೨೦೨೨- ಈಗ ನಡೆಯುತ್ತಿರುವ ಕಾಲ ಸಾಮಾಜಿಕ ಜಾಲತಾಣಗಳ ಕಾಲ, ಮೊಬೈಲ್ ಫೋನ್‌ಗಳ ಕಾಲ. ಮೊಬೈಲ್ ಫೋನ್ ಹಿಡಿದ ಸುಮಾರು ಜನ ಒಂದಲ್ಲ ಒಂದು ಸಲ ಅವರು ಬೈಯುತ್ತಿದ್ದ, ದೂಷಿಸುತ್ತಿದ್ದ, ಛೀಮಾರಿ ಹಾಕುತ್ತಿದ್ದ ಮಾಧ್ಯಮದ ಭಾಗಗಳಾಗಿ ಹೋಗಿದ್ದಾರೆ. ಯಾರ ಮೇಲೆ ಯಾರು ಬೇಕಾದರೂ ವೈಯಕ್ತಿಕ ವಿಷಯಗಳನ್ನು ಕುರಿತು ಟೀಕೆಟಿಪ್ಪಣಿ ಮಂಡಿಸಬಹುದು, ತಪ್ಪು-ಸರಿಗಳ ವಿಚಾರಣೆ ನಡೆಸಬಹುದು, ತೀರ್ಪು ಕೊಟ್ಟು, ಸಹಿ ಹಾಕಬಹುದು. ಎಲ್ಲಿಯಾದರೂ ಒಂದು ಅಪಘಾತವಾದರೆ ಮೊದಲೆಲ್ಲಾ ಸುತ್ತಮುತ್ತಲಿನವರು ಸಹಾಯಕ್ಕೆ ಧಾವಿಸುತ್ತಿದ್ದರು. ಈಗ ಅವರ ಕಿಸೆಯಲ್ಲಿನ, ಕೈಗಳಲ್ಲಿನ ಮೊಬೈಲ್ ಕ್ಯಾಮೆರಾ ಕಣ್ಣು ತೆರೆಯುತ್ತದೆ. ಶೂಟ್ ಮಾಡಿದ್ದನ್ನು, ‘ನಾವೇ ಮೊದಲು, ನಾವೇ ಮೊದಲು’ ಎಂದು ಅದನ್ನು ತಮ್ಮ ತಮ್ಮ ವಾಟ್ಸಾಪ್ ಗುಂಪುಗಳಿಗೆ ಫಾರ್ವರ್ಡ್ ಮಾಡುತ್ತಾರೆ. ಬೀದಿಯಲ್ಲಿ ಯಾರೋ ಗಂಡು ಹೆಣ್ಣೊಬ್ಬಳ ಮೇಲೆ ಹಲ್ಲೆ ಮಾಡುತ್ತಿದ್ದರೆ, ಸರಿಯಾಗಿ ವಿಶುವಲ್ ಸಿಗುವ ಸ್ಥಳಕ್ಕೆ, ಬಂದು ನಿಂತುಕೊಂಡು, ಅದನ್ನು ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ, ಪರ ವಿರೋಧ ಚರ್ಚೆ ಆರಂಭಿಸುತ್ತೇವೆ. ಯಾವುದೋ ತಾಯಿೋಂ ಟೀಚರೋ ಮಗುವನ್ನು ದಂಡಿಸಿ, ಹಿಂಸೆ ಕೊಡುತ್ತಿದ್ದರೆ, ಪುಟ್ಟಪುಟ್ಟ ಮಕ್ಕಳು ಕೇಳಲಾಗದ ಅಶ್ಲೀಲ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರೆ ಅದನ್ನೂ ಕೂಡ ಕರ್ತವ್ಯ ಬಿಡದ ಹೆಮ್ಮೆಯಲ್ಲಿ ಎಗ್ಗಿಲ್ಲದೆ ಫಾರ್ವರ್ಡ್ ಮಾಡುತ್ತಿದ್ದೇವೆ. ಆ ಮಕ್ಕಳಿಗೂ ಇರಬಹುದಾದ ಖಾಸಗಿತನದ ಹಕ್ಕಿನ ಬಗ್ಗೆ ನಮಗೆ ಪರಿವೆಯಾಗಲಿ, ಕಾಳಜಿಯಾಗಲಿ ಇರುವುದಿಲ್ಲ. ಜನಗಳ ಮನೆಯ ಬೆಡ್ ರೂಮ್ ಕಿಟಕಿಗಳನ್ನು ಇಣುಕುತ್ತಿದ್ದ ಮಾಧ್ಯಮದ ಕ್ಯಾಮೆರಾ ಈಗ ನಮ್ಮೆಲ್ಲರ ಕೈಗಳಿಗೂ ಬಂದುಬಿಟ್ಟಿದೆ. ಈಗ ನಮ್ಮ ಕಣ್ಣೆದುರಲ್ಲಿ ಆ ಕೆಡುಕಿನ ಸ್ವರೂಪ ಕಾಣುತ್ತಿಲ್ಲ. ಆ ಕೆಡುಕು ನಮ್ಮದೇ ಸ್ವರೂಪ ತಾಳಿಬಿಟ್ಟಿದೆ, ನಾವು ಅದರ ಪ್ರತಿರೂಪಗಳಾಗಿಬಿಟ್ಟಿದ್ದೇವೆ.
ಇದೆಲ್ಲಾ ಮಾತುಗಳನ್ನು ಇತ್ತೀಚೆಗೆ ನಡೆದ ಗಂಡು ಹೆಣ್ಣಿನ ನಡುವಣ ಸಂಬಂಧವನ್ನು ಕುರಿತಾದ ಒಂದು ‘ಮಾಧ್ಯಮ ವಿಚಾರಣೆ’ಯ ಹಿನ್ನೆಲೆಯಲ್ಲೇ ಹೇಳಬೇಕಾಗಿದೆ. ಗಂಡಹೆಂಡತಿಯ ನಡುವಣ ಸಂಬಂಧ, ಸಮಸ್ಯೆಗಳು ಆ ಕೋಣೆಯ ಬಾಗಿಲಿನ ಹೊರಗಡೆ ಇರುವವರಿಗೆ ಎಂದಿಗೂ ಪೂರ್ಣವಾಗಿ ತಿಳಿಯುವುದಿಲ್ಲ. ಅದೇನಿದ್ದರೂ ನಾವು ಅವರಿಬ್ಬರ ಮಾತುಗಳನ್ನು ಕೇಳಿ ಕಟ್ಟಿಕೊಂಡ ಕಥನಗಳು ಅಷ್ಟೇ. ಹೊರಜಗತ್ತಿನಲ್ಲಿ ಅತ್ಯಂತ ಸುಭಗರಂತೆ ನಡೆದುಕೊಳ್ಳುವ ಗಂಡು ಅಥವಾ ಹೆಣ್ಣು ತಮ್ಮ ತಮ್ಮ ಸಂಸಾರದಲ್ಲಿ, ತಮ್ಮ ತಮ್ಮ ಹೆಂಡತಿ, ಗಂಡನಿಗೆ ಅದಕ್ಕಿಂತ ವ್ಯತಿರಿಕ್ತವಾದ ಮುಖದಲ್ಲಿ ಎದುರಾಗಬಹುದು. ಅವರ ನಡುವೆ ಏನಾದರೂ ಸಮಸ್ಯೆ ಬಂದರೆ ಅದನ್ನು ಅವರೇ ಪರಿಹರಿಸಿಕೊಳ್ಳಬೇಕು. ವೈಯಕ್ತಿಕ ವ್ಯಕ್ತಿತ್ವ ದೃಢವಾಗಿರುವ ಈ ಕಾಲದಲ್ಲಿ ಎಷ್ಟೋ ಸಲ ಮನೆಯಲ್ಲಿ ದೊಡ್ಡವರೂ ಕೂಡ ಈ ವಿಷಯ ಮಾತನಾಡುವುದು ಸರಿಹೋಗುವುದಿಲ್ಲ. ಏಕೆಂದರೆ ದಾಂಪತ್ಯದಲ್ಲಿ ಜಗಳವಾದಾಗ ಗಂಡ ಅಥವಾ ಹೆಂಡತಿ ತಾವು ಒಬ್ಬರು ಇನ್ನೊಬ್ಬರಿಗೆ ಹೇಳಿದ ಮಾತುಗಳನ್ನು ಮರೆತುಬಿಡಬಹುದು. ಆದರೆ ಮೂರನೆಯವರು ಆಡಿದ ಮಾತುಗಳು ಅಥವಾ ಮೂರನೆಯವರೆದುರಲ್ಲಿ ಒಪ್ಪಿಸಿದ ಆರೋಪ ಪಟ್ಟಿ ಮರೆವಿಗೆ ಹೋಗುವುದೇ ಇಲ್ಲ. ಹಾಗಿರುವಾಗ ಆ ಸಂಬಂಧದ ನಡುವೆ ಮಾಧ್ಯಮ ಪ್ರವೇಶಿಸಿದರೆ? ಇಬ್ಬರ ನಡುವಿನ ಜಗಳವನ್ನು ಬೀದಿಜಗಳ ಮಾಡಿಕೊಂಡರೆ? ಬಹಳಷ್ಟು ಸಲ ಅದು ಸಮಸ್ಯೆಯ ಪರಿಹಾರ ಹುಡುಕುವುದಕ್ಕಿಂತ ಹೆಚ್ಚಾಗಿ ಆ ಇನ್ನೊಂದು ವ್ಯಕ್ತಿಯನ್ನು ತುಳಿಯಲೆಂದೇ ಆಗಿರುತ್ತದೆ.
ಯಾವುದೇ ಮದುವೆಗೆ ಕೇವಲ ಮದುವೆಯ ಶಾಸ್ತ್ರ ಅಥವಾ ದಾಖಲಾತಿ ಮಾತ್ರ ತಳಹದಿ ಆಗಿರಲು ಸಾಧ್ಯವಿಲ್ಲ. ಅದಕ್ಕಾಗಿ ಪರಸ್ಪರ ಗೌರವ, ಪರಸ್ಪರರ ಒಳಿತಿನ ಬಗ್ಗೆ ಗಮನ ಇರಬೇಕಾಗುತ್ತದೆ. ಮದುವೆಯ ಆಚೆಗೆ ಹೆಣ್ಣಾಗಲೀ, ಗಂಡಾಗಲೀ ಮತ್ತೊಂದು ಸಂಬಂಧಕ್ಕೆ ಕೈಚಾಚಿದರೆ ಕೈಕಳಚಿಸಿಕೊಂಡ ಇನ್ನೊಂದು ಜೀವಕ್ಕೆ ಅವಮಾನ, ಅಪಮಾನ, ನೋವು, ದುಃಖ ಎಲ್ಲವೂ ಆಗುತ್ತದೆ. ಆದರೆ ಅದರ ನಂತರ ಮುಂದೆ ಏನು? ಮದುವೆ ಎನ್ನುವುದು ಸಂಬಂಧಕ್ಕೆ ಅನುವು ಮಾಡಿಕೊಡುವುದೇ ಹೊರತು ಸೆರೆಮನೆ ಅಲ್ಲವಲ್ಲ? ಮದುವೆ ಆಗಿದೆ, ಏನೇ ಆಗಲಿ ನಿನಗಾಗಲಿ, ನನಗಾಗಲಿ ಇದರಿಂದ ಬಿಡುಗಡೆ ಇಲ್ಲ ಎಂದು ಕೂತಾಗ ಆ ಸೆರೆಮನೆಯ ಸರಳುಗಳು ಎರಡೂ ಜೀವಗಳನ್ನೂ ಸುತ್ತುವರಿಯುತ್ತವೆ ಮತ್ತು ಎರಡು ಜೀವಗಳ ನಡುವೆಯೂ ಏರುತ್ತದೆ. ಮುಚ್ಚಿದ್ದ ಹೋಟೆಲ್ ಕೊಠಡಿಯ ಹೊರಗೆ ಮಾಧ್ಯಮ ಕ್ಯಾಮೆರಾಗಳೊಂದಿಗೆ ಕಾದು ನಿಲ್ಲುವುದರಿಂದಾಗಲಿ, ‘ಅಲ್ಲಿ ಇನ್ನೆಷ್ಟು ದಿನ, ಅಬ್ಬಬ್ಬಾ ಎಂದರೆ ಆರು ತಿಂಗಳು’ ಎಂದು ವ್ಯಂಗ್ಯವಾಡುವುದರಿಂದಾಗಲೀ ಆ ಮದುವೆಯ ಮರ್ಯಾದೆಯನ್ನು ಉಳಿಸಿಕೊಳ್ಳಲಾಗುವುದಿಲ್ಲ, ಆ ಸಂಬಂಧವನ್ನೂ ಉಳಿಸಿಕೊಳ್ಳಲಾಗುವುದಿಲ್ಲ.
ಬೈಬಲ್‌ನ ಒಂದು ಕಥೆ ನೆನಪಾಗುತ್ತಿದೆ. ವ್ಯಭಿಚಾರಿ ಹೆಣ್ಣೊಬ್ಬಳನ್ನು ಏಸುವಿನ ಬಳಿ ಕರೆತರಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಇವಳನ್ನು ಕಲ್ಲು ಹೊಡೆದು ಸಾಯಿಸಬೇಕು. ನೀನು ಏನು ಹೇಳುತ್ತೀಯಾ ಎಂದು ಕೇಳಲಾಗುತ್ತದೆ. ಇದೊಂದು ತರಹ ಎರಡು ಅಲಗಿನ ಕತ್ತಿ ಇದ್ದಂತೆ. ಅವಳನ್ನು ಶಿಕ್ಷಿಸಬಾರದು ಎಂದರೆ ಏಸುವಿಗೆ ಧರ್ಮ ವಿರೋಧಿ, ಶಾಸ್ತ್ರ ವಿರೋಧಿ ಎಂದು ಪಟ್ಟ ಕಟ್ಟಬಹುದು, ಅದೇ ಏಸು ಅವಳನ್ನು ಶಿಕ್ಷಿಸಿ ಎಂದರೆ ಅವನು ಅದುವರೆಗೂ ಬೋಧಿಸುತ್ತಿದ್ದ ದೆುಂ, ಕರುಣೆಗಳ ಪಾಠವನ್ನು ಅವನ ಮುಖಕ್ಕೆ ಹಿಡಿದು ಪ್ರಶ್ನಿಸಬಹುದು. ಆ ಸಂದರ್ಭದಲ್ಲಿ ಏಸು ಹೇಳುವುದು ಒಂದೇ ಮಾತು, ‘ಆಯಿತು ಅವಳನ್ನು ಕಲ್ಲುಹೊಡೆದು ಕೊಲ್ಲಿ, ಆದರೆ ಮೊದಲ ಕಲ್ಲನ್ನು ಇದುವರೆವಿಗೂ ಯಾವುದೇ ತಪ್ಪನ್ನು ಮಾಡದವರು ಎಸೆಯಬೇಕು.’ ಪ್ರತಿೊಂಬ್ಬರ ಆತ್ಮಸಾಕ್ಷಿ ಅವರು ಎಂದೋ ಮಾಡಿದ್ದ ತಪ್ಪು ಅಥವಾ ತಪ್ಪುಗಳನ್ನು ಅವರ ಮುಂದಿಡುತ್ತದೆ. ಅವರ ಕೈಗಳಲ್ಲಿದ್ದ ಕಲ್ಲುಗಳು ಕೆಳಕ್ಕೆ ಬೀಳುತ್ತವೆ. ಜನ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಾರೆ. ಅದೊಂದು ಸತ್ಯಯುಗವೇ ಇರಬೇಕು. ಜನರ ಬಳಿ ಆಗೆಲ್ಲಾ ಮನಸ್ಸಾಕ್ಷಿ ಇರುತ್ತಿತ್ತು ಮತ್ತು ಅದರ ಕಣ್ಣು-ಬಾಯಿಗೆ ಪಟ್ಟಿ ಕಟ್ಟಲಾಗಿರಲಿಲ್ಲ. ಆದರೆ ಈಗ ಮೊದಲ ಕಲ್ಲನ್ನು ನಾವು ಆತ್ಮಸಾಕ್ಷಿಗೇ ಬೀಸಿ ಅದನ್ನು ಕೊಂದು ಬಿಟ್ಟಿದ್ದೇವೆ. ಆಮೇಲೆ ಎಲ್ಲವೂ ಸಲೀಸು. ನಮ್ಮೆಲ್ಲಾ ತಪ್ಪುಗಳಿಗೆ, ಅಪರಾಧಗಳಿಗೆ ಮುಸುಕು ಹೊದಿಸಿ, ಇನ್ನೊಬ್ಬರ ಮೇಲೆ ಕಲ್ಲು ಎಸೆಯುವುದರ ಮೂಲಕ ಅವರನ್ನು ಕೆಳಗೆ ತಳ್ಳಿ ನಮ್ಮ ನೈತಿಕ ಅಹಂ ಅನ್ನು ಸ್ಥಾಪಿಸಿಕೊಳ್ಳಬಹುದು. ಹಾಗಾಗಿೆುೀಂ ಕಲ್ಲು ಬೀಸುವ ಮೊದಲು ಇಲ್ಲಿ ಯಾರೂ ತಮ್ಮತಮ್ಮ ತಪ್ಪುಗಳ ಬಗ್ಗೆ ೋಂಚಿಸುತ್ತಿಲ್ಲ. ಕಲ್ಲು ಬೀಸುತ್ತಿರುವವರ ಸಂತೆಯಲ್ಲಿ ಏಸುಕ್ರಿಸ್ತನನ್ನು ಮೊದಲು ಶಿಲುಬೆಗೇರಿಸಲಾಗಿದೆ.
ಯಾಕೆಂದರೆ ಇವತ್ತು ಮಾಧ್ಯಮದ ಜೊತೆ ಸಾಮಾಜಿಕ ಜಾಲತಾಣವೂ ಸೇರಿಕೊಂಡಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ