Light
Dark

ವನಿತೆ ಮಮತೆ : ಮಾರ್ಗರೇಟ್ ಆಳ್ವ ಎಂಬ ಮಾದರಿ ರಾಜಕಾರಣಿ

ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ದೇಶದ ಪರಮೋಚ್ಛ ಹುದ್ದೆಯನ್ನು ಮಹಿಳೆಯೊಬ್ಬರು ಮತ್ತೆ ಅಲಂಕರಿಸಿದಂತಾಗಿದೆ.

ಇದರ ಬೆನ್ನಲ್ಲೇ ವಿಪಕ್ಷಗಳು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕನ್ನಡತಿ ಮಾರ್ಗರೇಟ್ ಆಳ್ವ ಅವರನ್ನು ಆಯ್ಕೆ ಮಾಡಿದೆ. ಅವರ ಗೆಲುವು-ಸೋಲು ರಾಜಕೀಯ ಲೆಕ್ಕಾಚಾರ. ಅದರಾಚೆಗೆ ಮಾರ್ಗರೇಟ್ ಆಳ್ವ ನಿಜಕ್ಕೂ ಆ ಸ್ಥಾನಕ್ಕೆ ಅರ್ಹರು. ಅವರ ಸಾಧನೆ, ನಿಭಾಯಿಸಿದ ಜವಾಬ್ದಾರಿಗಳೇ ಇದಕ್ಕೆ ಸಾಕ್ಷಿ.

ಮಂಗಳೂರಿನ ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಏ.೧೪, ೧೯೪೨ರಲ್ಲಿ ಹುಟ್ಟಿದ ಮಾರ್ಗರೇಟ್ ಆಳ್ವ ನಂತರ ವಿದ್ಯಾಭ್ಯಾಸ ಪಡೆದದ್ದೆಲ್ಲವೂ ಬೆಂಗಳೂರಿನಲ್ಲಿ. ೮೦ ವರ್ಷದ ಮಾರ್ಗರೇಟ್ ಅವರು ಸುಮಾರು ೬೦ ವರ್ಷಗಳನ್ನು ರಾಜಕಾರಣದಲ್ಲಿಯೇ ಕಳೆದವರು. ೧೯೭೪ರಲ್ಲಿ ಮೊದಲಿಗೆ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಅವರು ನಂತರ ೧೯೮೦, ೮೬, ೯೨ರಲ್ಲಿ ಲೋಕಸಭೆಗೆ ಆಯ್ಕೆಯಾದವರು. ಸಂಸದೀಯ ವ್ಯವಹಾರಗಳ ಖಾತೆ, ಯುವಜನ ಮತ್ತು ಕ್ರೀಡಾ ಖಾತೆ, ಮಹಿಳೆ-ಮಕ್ಕಳ ಕಲ್ಯಾಣ ಖಾತೆಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡವರು. ಅದಕ್ಕಿಂತ ಹೆಚ್ಚಾಗಿ ಗೋವಾ, ಗುಜರಾತ್, ರಾಜಸ್ಥಾನ, ಉತ್ತರಾಖಾಂಡ್ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದವರು.

ಕಾಂಗ್ರೆಸ್‌ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಹೈಕಮಾಂಡ್ ದೃಷ್ಟಿಯಲ್ಲಿ ಒಳ್ಳೆಯ ನಾಯಕಿ ಎನ್ನಿಸಿಕೊಂಡ ಮಾರ್ಗರೇಟ್ ಆಳ್ವ ಅವರು ಸೋಲು-ಗೆಲುವು ಎಲ್ಲವನ್ನೂ ಸಮಾನವಾಗಿ ಕಂಡು ಕ್ಷೇತ್ರದ ಜನತೆಯೊಂದಿಗೆ ಸದಾ ಭಾಂದವ್ಯ ಇಟ್ಟುಕೊಂಡವರು. ಕ್ಷೇತ್ರದ ಅಭಿವೃದ್ಧಿಗಾಗಿ ಅರ್ಹನಿಶಿ ದುಡಿದವರು. ಇಂತಹ ಅಪರೂಪದ ರಾಜಕಾರಣಿ ಎಲ್ಲ ಮಹಿಳೆಯರಿಗೂ ಮಾದರಿ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ