Mysore
27
broken clouds
Light
Dark

ಹೆಣ್ಣೆಂದು ಮೂಗು ಮುರಿಯುವ ಕಾಲ ಮುಗಿಯಿತು.

• ಮಹೇಂದ್ರ ಹಸಗೂಲಿ

ಹೆಣ್ಣು ಈ ಜಗದ ಕಣ್ಣು ಮಾತ್ರವಲ್ಲ ಕುಟುಂಬದ ಕಣ್ಣು. ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುವಂತಾಗಿದ್ದರೂ ಹೆಣ್ಣಿನ ಬಗೆಗಿನ ಕೀಳರಿಮೆ ಎಲ್ಲೋ ಒಂದು ಕಡೆ ಜೀವಂತ ಇದೆ ಅನಿಸುತ್ತದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇಂತಹ ಮನಸ್ಥಿತಿ ಕಡಿಮೆಯಾಗಬೇಕಿದೆ.

ಸರ್ಕಾರ ಭ್ರೂಣ ಹತ್ಯೆ ತಡೆ ಕಾಯ್ದೆ ಜಾರಿಗೊಳಿಸದಿದ್ದರೆ ಇಂದು ಹೆಣ್ಣುಮಕ್ಕಳ ಪ್ರಮಾಣ ಕುಸಿದು ಪ್ರತಿ ಸಾವಿರ ಪುರುಷರಿಗೆ ಕೇವಲ 400 ಮಹಿಳೆಯರ ಸರಾಸರಿಯೂ ಸಿಗುತ್ತಿರಲಿಲ್ಲ. ಇಂದಿಗೂ ಹೆಣ್ಣು ಮಗು ಹುಟ್ಟಿದರೆ ಮೂಗು ಮುರಿಯುವ ಜನರೇ ಹೆಚ್ಚು ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಮಹಿಳೆಯರಿಗೇ ಈ ಕುರಿತಂತೆ ಹೆಚ್ಚು ತಾತ್ಸಾರ ಮನೋಭಾವನೆ ಇರುವುದು ವಿಪರ್ಯಾಸವೇ ಸರಿ.

ಮಹಿಳೆ ಪುರುಷರಿಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ. ರಾಜಕೀಯ, ಕ್ರೀಡೆ, ಶಿಕ್ಷಣ ಕ್ಷೇತ್ರ, ಆರೋಗ್ಯ ಕ್ಷೇತ್ರ, ರಕ್ಷಣಾ ಕ್ಷೇತ್ರ, ಬಸ್, ಲಾರಿ, ಕಾರು, ಆಟೋ ಚಾಲಕರಾಗಿಯೂ ಮಹಿಳೆಯ ಪಾತ್ರ ಹೆಚ್ಚಾಗಿದೆ. ಸಂಕಷ್ಟ ಬಂದಾಗ ಹೆಣ್ಣು ದೇವತೆಗಳ ಮೊರೆ ಹೋಗುವ ನಾವು ಹೆಣ್ಣು ಹುಟ್ಟಿದಾಗ ದೇವತೆ ಹುಟ್ಟಿದ್ದಾಳೆ ಎಂದು ಸಂತಸ ಪಡುವುದಿಲ್ಲ. ಸಮಾಜದಲ್ಲಿ ಗಂಡಿನಷ್ಟೇ ಸಮಾನವಾದ ಹಕ್ಕು ಹೆಣ್ಣಿಗೂ ಇದೆ. ಹೆಣ್ಣು ಪ್ರತಿಯೊಬ್ಬರ ಬದುಕಿನಲ್ಲಿ ತಾಯಿ, ಅಕ್ಕ, ತಂಗಿ, ಮಡದಿ ಹೀಗೆ ನಾನಾ ಪಾತ್ರಗಳನ್ನು ನಿಭಾಯಿಸುತ್ತಾಳೆ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಝಾನ್ಸಿರಾಣಿ ಲಕ್ಷ್ಮಿ ಭಾಯಿ, ಮದರ್ ತೆರೆಸಾ, ಕಲ್ಪನಾ ಚಾವ್ಹಾ, ಕಿರಣ್ ಬೇಡಿ, ಕರ್ಣ೦ ಮಲ್ಲೇಶ್ವರಿ, ಪಿ.ಟಿ.ಉಷಾ, ಪಿ.ವಿ.ಸಿಂಧು ಮುಂತಾದ ಮಹಿಳೆಯರು ಸಾಧನೆ ಮಾಡಿದ್ದಾರೆ. ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್, ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ, ಮುಖ್ಯಮಂತ್ರಿ ಜಯಲಲಿತಾ, ಮೊದಲ ಮಹಿಳಾ ಸ್ಪೀಕರ್, ಸಚಿವೆಯಾಗಿದ್ದ ಗುಂಡ್ಲುಪೇಟೆ ತಾಲ್ಲೂಕಿನ ಕೆ.ಎಸ್.ನಾಗರತ್ನಮ್ಮ ಅವರ ಸಾಧನೆ ಇಂದಿಗೂ ಅನನ್ಯ.

ಹೀಗೆ ಮಹಿಳೆ ಕಾಲಿಡದ ಕ್ಷೇತ್ರವಿಲ್ಲ ಎಂಬಂತೆ ಸಾಕಷ್ಟು ಸಾಧನೆಗಳನ್ನು ಮಹಿಳೆ ಮಾಡಿದ್ದಾಳೆ. ಗಂಡಿಗಿಂತ ತಾನೇನೂ ಕಡಿಮೆಯಿಲ್ಲ ಎಂಬುದನ್ನು ಪುರುಷ ಪ್ರಧಾನ ಸಮಾಜದಲ್ಲಿ ನಿರೂಪಿಸಿದ್ದಾಳೆ. ವಾಯುಪಡೆಯ ಪೈಲೆಟ್ ಲಿಫ್ಟಿನೆಂಟ್ ಅವನಿ ಚತುರ್ವೇಧಿ, ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ಸ್ನೇಹ ದುಬೆ, ಮುಖ್ಯ ಸಂರಕ್ಷಣಾ ವಿಜ್ಞಾನಿ ಬೆಂಗಳೂರು ವನ್ಯಜೀವಿ ಅಧ್ಯಯನ ಕೇಂದ್ರದ ಕೃತಿ ಕಾರಂತ್, ನಿರ್ದೇಶಕಿ, ಪರಿಸರ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ತುಳಸಿಗೌಡ, ಅಗ್ನಿ 4 ಮತ್ತು 5 ಯೋಜನಾ ನಿರ್ದೇಶಕಿಯಾಗಿದ್ದ ಟೆಸ್ಸಿ ಥಾಮಸ್. ಭಾರತೀಯ ಸಾಹಸೋದ್ಯಮ ಬಂಡವಾಳರಾಗಿ ಕಲಾರಿ ಕ್ಯಾಪಿಟಲ್ ಸಂಸ್ಥಾಪಕಿ, ವ್ಯವಸ್ಥಾಪಕ ನಿರ್ದೇಶಕಿ ವಾಣಿಕೋಲ ಅವರು ಸಾಹಸಿ ಮತ್ತು ದಿಟ್ಟ ಮಹಿಳೆಯರಾಗಿದ್ದಾರೆ.

ಸಮಾಜ ಮಹಿಳೆಯರ ಶಕ್ತಿಯನ್ನು ಅರಿಯಬೇಕಿದೆ. ಭವ್ಯ ಭಾರತದಲ್ಲಿ ಪುರುಷನಷ್ಟೇ ಹೆಣ್ಣಿಗೂ ಬದುಕುವ, ಸಾಧಿಸುವ ಛಲ ಇದೆ, ಹಕ್ಕೂ ಇದೆ.
mahendrahasaguli60@gmail.com