ಸೌಮ್ಯ ಕೋಠಿ, ಮೈಸೂರು
ಹೆಣ್ಣು ಎಂದಾಕ್ಷಣ ಸ್ತ್ರೀಯಾಗಿ, ಅಮ್ಮನಾಗಿ, ಅಕ್ಕ-ತಂಗಿಯಾಗಿ, ಮಡದಿಯಾಗಿ, ಮಗಳಾಗಿ ಹೀಗೆ ಹಲವಾರು ಪಾತ್ರಗಳು ನಮ್ಮ ಕಣ್ಮುಂದೆ ಬರುತ್ತವೆ.
ಹಿಂದೆ ಹೆಣ್ಣು ಎಂದರೆ ಮತ್ತೊಬ್ಬರ ಆಸರೆಯಲ್ಲೇ ಬೆಳೆಯಬೇಕು ಎಂಬ ಭಾವನೆಯಿತ್ತು. ಬೆಳೆಯುತ್ತಾ ತಂದೆಯ ಆಸರೆ, ಮದುವೆಯ ಬಳಿಕ ಗಂಡನ ಆಸರೆ, ಮುಪ್ಪಾದ ಮೇಲೆ ಮಕ್ಕಳ ಆಸರೆಯಲ್ಲೇ ಬೆಳೆಯಬೇಕು ಎಂಬುದು ಈ ಹಿಂದೆ ಹೆಣ್ಣಿನ ಬಗೆಗಿದ್ದ ಮನೋಭಾವನೆ.
ಹೆಣ್ಣು ಮತ್ತೊಬ್ಬರ ಆಸರೆಯಲ್ಲಿ ಬೆಳೆಯುತ್ತಿದ್ದಾಳೆ ಅಂದುಕೊಂಡಿದ್ದ ಭಾವನೆಯೇ ಸರಿಯಿಲ್ಲ ಅನಿಸುತ್ತದೆ. ಕಾರಣ ಹೆಣ್ಣು ಭಾವನೆಗಳ ಆಗರ. ಆಕೆ ತನ್ನ ಪ್ರೀತಿ, ಮಮತೆಯಿಂದ ಎಲ್ಲರಲ್ಲೂ ಚೈತನ್ಯವನ್ನು ತುಂಬುವ ಮೂರ್ತಿ. ಮನೆಯ ಪುರುಷರಿಗೆ ಹೆಣ್ಣು ಮಾನಸಿಕವಾಗಿ ಸ್ಥೈರ್ಯ ತುಂಬುತ್ತಾಳೆ ಎಂಬುದೇ ವಾಸ್ತವ.
ಹೆಣ್ಣು ಸದಾ ಅರಳಿ ನಗುವ ಹೂವಿನಂತೆ. ತನಗೆ ನೋವಾದರೂ ತನಗೆ ಏನು ಬೇಕು ಎನ್ನುವುದಕ್ಕಿಂತಲೂ, ತನ್ನವರಿಗೆ ನಾನು ಏನು ಮಾಡಬೇಕು ಎಂಬುದರ ಬಗ್ಗೆ ಸದಾ ಚಿಂತಿಸುತ್ತಾಳೆ. ಇತಿಹಾಸದ ಪುಟಗಳಲ್ಲಿ ಹೆಣ್ಣಿಗೆ ಸಾಕಷ್ಟು ಮಹತ್ವ ನೀಡಲಾಗಿದೆ. ಸಾಮ್ರಾಜ್ಯವನ್ನು ಕಟ್ಟಿ ಆಡಳಿತ ನಡೆಸಿದ್ದರಲ್ಲಿಯೂ ಸಮಾಜದ ಅಭಿವೃದ್ಧಿಯಲ್ಲೂ ಹೆಣ್ಣು ತನ್ನ ಪ್ರಾಬಲ್ಯವನ್ನು ಮರೆದಿದ್ದಾಳೆ.
‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಹೆಣ್ಣಿನ ಮಹತ್ವ ಸಾರುವ ಒಂದು ನಾಣ್ಣುಡಿ. ಹೆಣ್ಣು ಶಾಲೆ ಇದ್ದಂತೆ. ಪ್ರತಿಯೊಬ್ಬರಿಗೂ ಜ್ಞಾನದ ದಾರಿಯನ್ನು ತೋರುತ್ತಾಳೆ. ತಾನು ಕಲಿತ್ತಿದ್ದನ್ನು ಮತ್ತೊಬ್ಬರಿಗೆ ಹಚ್ಚುವ ಆಕೆ ಬೆಳೆಯುವ ಮಕ್ಕಳಿಗೆ ಸಂಸ್ಕ ತಿ, ಆಚಾರ-ವಿಚಾರವನ್ನು ಕಲಿಸುತ್ತಾ ಸಮಾಜದ ಉತ್ತಮ ಪ್ರಜೆಯಾಗಿ ರೂಪಿಸುತ್ತಾಳೆ.
ಆಕೆ ಪ್ರತಿಯೊಂದು ಕೆಲಸದಲ್ಲೂ ಪ್ರೀತಿಯನ್ನು ತುಂಬುತ್ತಾಳೆ. ಮನೆಯ ಸಂಪೂರ್ಣ ಜವಾಬ್ದಾರಿ ಹೊರುವ ಹೆಣ್ಣು ದಿನದ ೨೪ ಗಂಟೆಯೂ ಯಾವುದೇ ಲಾಭವಿಲ್ಲದೆ ಮನೆಗಾಗಿ ದುಡಿಯುತ್ತಾಳೆ. ಗಂಡ ಮಕ್ಕಳ ಯೋಗಕ್ಷೇಮದಿಂದ ಹಿಡಿದು, ಮನೆಗೆಲಸ, ಅಡುಗೆ ಕೆಲಸಗಳನ್ನು ಮಾಡುತ್ತಾ, ಮಕ್ಕಳ ವಿದ್ಯಾಭ್ಯಾಸಕ್ಕೂ ಗಮನಕೊಟ್ಟು ಅವರನ್ನು ಸರಿದಾರಿಗೆ ತರುವಲ್ಲಿ ಹೆಣ್ಣಿನ ಪಾತ್ರ ಬಹಳ ದೊಡ್ಡದಿದೆ.
ಇಷ್ಟೆಲ್ಲ ದುಡಿದ ಹೆಣ್ಣು ತನ್ನ ಕುಟುಂಬಸ್ಥರಿಂದ ನಿರೀಕ್ಷಿಸುವುದು ಪ್ರೀತಿ, ಮಮತೆ, ಸಾಂತ್ವನ, ಒಂದಿಷ್ಟು ಒಳ್ಳೆಯ ಮಾತುಗಳು. ಇಷ್ಟಕ್ಕಾಗಿ ತನ್ನ ಇಡೀ ಜೀವನವನ್ನೇ ಮುಡಿಪಿಡುವ ಹೆಣ್ಣು ಭಾವನೆಗಳ ಆಗರವಲ್ಲದೇ ಮತ್ತೇನು? ಹೆಣ್ಣು ಆಸ್ತಿ-ಅಂತಸ್ತಿಗೆ ಆಸೆ ಪಡುವುದಕ್ಕಿಂತಲೂ ತನ್ನ ಕುಟುಂಬ, ತನ್ನ ಮಕ್ಕಳಿಗಾಗಿ ಜೀವನವನ್ನು ಸವೆಸುತ್ತಾಳೆ. ಇಂತಹ ಹೆಣ್ಣಿನ ಭಾವನೆಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು.
ಪ್ರಸ್ತುತ ಹೆಣ್ಣು ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾಳೆ. ಯಾರ ಆಸರೆಯೂ ಇಲ್ಲದೆ ತಾನು ಬದುಕಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಇದರ ನಡುವೆ ಕೆಲವರು ನಮ್ಮ ಆಚಾರ ವಿಚಾರಗಳನ್ನು ಮರೆತು ಪಾಶ್ಚಿಮಾತ್ಯ ಸಂಸ್ಕ ತಿಗೆ ಜೋತುಬಿದ್ದು, ಮೋಜು-ಮಸ್ತಿ ಮಾಡುವುದೇ ನಿಜವಾದ ಸ್ವಾತಂತ್ರ ಎಂದು ಭಾವಿಸುವುದು ತಪ್ಪು. ಸಾಧನೆಯ ಹಾದಿಯಲ್ಲಿ ಸಾಗುವ ಹೆಣ್ಣಿಗೆ ದೇಶದಲ್ಲಿ ಎಲ್ಲ ರೀತಿಯ ಸ್ವಾತಂತ್ರ್ಯವಿದೆ ಎಂಬುದನ್ನು ಮರೆಯಬಾರದು.