Mysore
23
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ನೋಟರಿಗಳಿಗೂ ಶಿಕ್ಷೆ ಇದೆ 

court

ರಾಕೇಶ್ ಮತ್ತು ಪ್ರಿಯ ಪ್ರೀತಿಸಿ ಮದುವೆಯಾಗುತ್ತೇವೆ ಎಂದಾಗ ಪ್ರಿಯಾಳ ಮನೆಯಲ್ಲಿ ಒಪ್ಪಲಿಲ್ಲ. ಆದರೆ ಇವಳಿಗೆ ಅವನನ್ನ ಬಿಟ್ಟು ಇರಲಾಗದು. ಅವನ ತಂದೆ ತಾಯಿ ಒಪ್ಪಿದ್ದರಿಂದ ಇವಳು ಅವನ ಊರಿಗೆ ಹೋಗಿ ಹೆಸರನ್ನೂ ಬದಲಿಸಿಕೊಂಡಳು.

ಸದ್ಯಕ್ಕೆ ಯಾರಿಗೂ ತಿಳಿಯುವುದು ಬೇಡವೆನಿಸಿ ಅವರ ಊರಿನ ನೋಟರಿಯೊಬ್ಬರಿಂದ ಮದುವೆಯಾಗಿದೆ ಎನ್ನುವ ಪತ್ರ ಮಾಡಿಸಿಟ್ಟುಕೊಂಡರು. ಎರಡು ವರ್ಷಗಳಲ್ಲಿ ಅತ್ತೆ ಮತ್ತು ಗಂಡ ಇವಳನ್ನು ತವರು ಮನೆಗೆ ಹೋಗಿ ಅವರನ್ನು ಒಪ್ಪಿಸಿ ಇವನ ವ್ಯಾಪಾರಕ್ಕೆ ಹಣ ತೆಗೆದುಕೊಂಡು ಬರಲು ರೇವತಿಯನ್ನು (ಪ್ರಿಯ) ಪೀಡಿಸತೊಡಗಿದರು. ಹೊಡೆತ ಬಡಿತ ಮಿತಿಮೀರಿದಾಗ ಇವಳು ವರದಕ್ಷಿಣೆ ಕಿರುಕುಳದ ಕೇಸ್ ಹಾಕಿದಳು. ನ್ಯಾಯಾಲಯದಲ್ಲಿ ಆತ ತನಗೆ ಅವಳೊಡನೆ ಮದುವೆಯೇ ಆಗಿಲ್ಲ ಎನ್ನುವವಾದವನ್ನು ಮುಂದಿಟ್ಟ. ನ್ಯಾಯಾಲಯ ಮಾನ್ಯ ಮಾಡಿತು. ಕೊನೆಗೂ ಅವಳು ಸೋತಳು. ಕುಮಾರ್ ಮತ್ತು ಹೇಮಾವತಿಗೆ ಮದುವೆಯಾಗಿ ಆರು ವರ್ಷಗಳಾಗಿತ್ತು.

ಎರಡು ಮಕ್ಕಳಾದ ನಂತರ ಅವನು ಶಿಲ್ಪಳ ಜೊತೆಗೆ ಸ್ನೇಹ ಬೆಳೆಸಿದ. ಅವಳು ಗರ್ಭಿಣಿಯಾದಾಗ ಮದುವೆ ಮಾಡಿಕೊಳ್ಳಬೇಕು ಎನ್ನುವ ಒತ್ತಾಯ ಎದುರಾಯ್ತು. ಆದರೆ ಒಂದು ಮದುವೆ ಅಸ್ತಿತ್ವದಲ್ಲಿ ಇರುವಾಗ ಮತ್ತೊಂದು ಮದುವೆಯಾಗುವುದು ಅಪರಾಧ ಎಂದು ಅವನಿಗೆ ತಿಳಿದಿತ್ತು. ಅದಕ್ಕೆ ತಾಲ್ಲೂಕು ಆಫೀಸಿನ ಮುಂದೆ ಕುಳಿತಿದ್ದ ನೋಟರಿಯ ಬಳಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಅವಳು ಸ್ವಇಚ್ಛೆಯಿಂದ ಇವನಿಗೆ ವಿಚ್ಛೇದನ ನೀಡುತ್ತಿದ್ದಾಳೆ ಮತ್ತು ಮತ್ತೊಂದು ಮದುವೆಗೆ ಒಪ್ಪಿದ್ದಾಳೆ ಎಂದು ದಾಖಲೆ ಬರೆಸಿ ನೋಟರೈಸ್ ಮಾಡಿಸಿ ಕೊಂಡು ನಿರಳವಾಗಿ ಮತ್ತೊಂದು ಮದುವೆ ಮಾಡಿ ಕೊಂಡ. ಹೇಮಾವತಿಯ ವಿದ್ಯಾವಂತ ಅಣ್ಣ, ತಂಗಿಯ ಮೂಲಕ ನ್ಯಾಯಾಲಯದಲ್ಲಿ ಬಹುಪತ್ನಿತ್ವ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿದ.

ಇದನ್ನು ಓದಿ : ಮೈಸೂರು ದಸರಾ | ಯುವ ಸಂಭ್ರಮದಲ್ಲಿ ಮೊಳಗಿದ ದೇಶಪ್ರೇಮ

ಎಷ್ಟೋ ಜನ ವಿದ್ಯಾವಂತರು ಕೂಡ ಆತುರದಲ್ಲಿ ಅಥವಾ ಒತ್ತಡದಲ್ಲಿ ಮದುವೆ ಮತ್ತು ವಿಚ್ಛೇದನವನ್ನು ನೋಟರಿಗಳ ಮುಂದೆ ಮಾಡಿಕೊಂಡು ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ನಮ್ಮಲ್ಲಿ ಅಸ್ತಿತ್ವದಲ್ಲಿ ಇರುವ ನೋಟರಿಗಳ ಕಾನೂನು ೧೯೫೨ ಇದರ ಸೆಕ್ಷನ್ ೮ರಲ್ಲಿ ನೋಟರಿಗಳ ಕಾರ್ಯವ್ಯಾಪ್ತಿಯೇನು ಎನ್ನುವುದನ್ನು ಬಹಳ ಸ್ಪಷ್ಟವಾಗಿ ನೀಡಲಾಗಿದೆ. ಮದುವೆ ಮಾಡುವ, ವಿವಾಹ ನೋಂದಾವಣೆ ಮಾಡಿಕೊಡುವ, ವಿಚ್ಛೇದನ ಕೊಡಿಸಿಕೊಡುವ, ಮಕ್ಕಳನ್ನು ದತ್ತು ಕೊಡಿಸುವ, ಆಸ್ತಿ ವಿಭಾಗ ಮಾಡುವ, ಪವರ್ ಆಫ್ ಅಟಾರ್ನಿ ಮಾಡಿಕೊಡುವ, ಹೆಸರು ಬದಲಾವಣೆ ಮಾಡಿಕೊಡುವುದು, ದಾನಪತ್ರ ರಿಜಿಸ್ಟರ್ ಮಾಡಿಕೊಡುವ ಅಧಿಕಾರ ನೋಟರಿಗಳಿಗೆ ಇರುವುದಿಲ್ಲ. ಹಾಗೆ ಮಾಡಿಕೊಂಡ ಮದುವೆ, ವಿಚ್ಛೇದನ, ದತ್ತು ಮತ್ತು ಇತರೆ ವ್ಯವಹಾರಗಳನ್ನು ಮತ್ತು ದಾಖಲೆಗಳನ್ನು ಕಾನೂನು ಮಾನ್ಯ ಮಾಡುವುದಿಲ್ಲ. ಹಾಗಾಗಿ ಮಹಿಳೆಯರು ವರದಕ್ಷಿಣೆ ಕಿರುಕುಳದ ದಾವೆ ಹೂಡಲು, ಗಂಡನ ಆಸ್ತಿಯಲ್ಲಿ ಹಕ್ಕು ಪಡೆಯಲು, ಜೀವನಾಂಶ ಪಡೆಯಲು ಸಾಧ್ಯವಾಗುವುದಿಲ್ಲ.

ಇಂತಹ ವಿಚ್ಛೇದನದ ನಂತರ ಮತ್ತೊಂದು ಮದುವೆಯಾಗಿದ್ದರೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ೮೨ ಮತ್ತು ೮೩ರ ಅಡಿಯಲ್ಲಿ ೩ ರಿಂದ ೧೦ ವರ್ಷಗಳ ಕಾಲ ಶಿಕ್ಷೆ ಇರುತ್ತದೆ. ನೋಟರಿಗಳ ಮೂಲಕ ಮಕ್ಕಳನ್ನು ದತ್ತು ಪಡೆಯುವುದು ಶಿಕ್ಷಾರ್ಹ ಅಪರಾಧ. ಹಾಗೆ ಪಡೆದ ಮಕ್ಕಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ ಮತ್ತು ಕಾನೂನು ಬಾಹಿರ ದತ್ತಕ ಎಂದು ಪಡೆದುಕೊಂಡ ಮತ್ತು ಕೊಟ್ಟ ವ್ಯಕ್ತಿಗಳಿಗೆ ಜೈಲು ಶಿಕ್ಷೆ ಇರುತ್ತದೆ. ನೋಟರಿಗಳು ತಮ್ಮ ಕಾನೂನು ನೀಡಿರುವ ಕೆಲಸಗಳ ವ್ಯಾಪ್ತಿ ಮೀರಿ ಇಂತಹ ಕೆಲಸಗಳನ್ನು ದಾಖಲೀಕರಣಗೊಳಿಸಿದರೆ ಅವರಿಂದ ನೋಟರಿ ಲೈಸೆನ್ಸ್‌ಅನ್ನು ಹಿಂದಿರುಗಿ ಪಡೆಯಲಾಗುತ್ತದೆ. ನೋಟರಿಗಳನ್ನು ಅಪರಾಧಿ ಎಂದು ಪರಿಗಣಿಸಿ ದಂಡ ವಿಧಿಸುವುದು ಮತ್ತು ಜೈಲು ಶಿಕ್ಷೆಗೂ ಒಳಪಡಿಸಬಹುದಾಗಿರುತ್ತದೆ.

ಭಾರತೀಯ ಕಾನೂನು ಮತ್ತು ಸಂಸದೀಯ ವಿಷಯಗಳ ಸಚಿವಾಲಯವು ೨೦೨೪ನೆಯ ಅಕ್ಟೋಬರ್ ತಿಂಗಳಿನಲ್ಲಿ ಸುತ್ತೋಲೆಯನ್ನು (N -೧೫೦೧೧/೨೧೧/೨೦೨೪-NC) ಹೊರಡಿಸಿ ನೋಟರಿಗಳು ತಮ್ಮ ನಿಗದಿತ ಕೆಲಸಗಳನ್ನು ಹೊರತುಪಡಿಸಿ ಬೇರೆ ದಾಖಲೆಗಳನ್ನು ಮಾಡಬಾರದು, ಈ ವಿಷಯದಲ್ಲಿ ಎಚ್ಚರಿಕೆ ವಹಿಸದಿರುವುದು ಶಿಕ್ಷಾರ್ಹ ಅಪರಾಧ ಎಂದು ಸ್ಪಷ್ಟಪಡಿಸಿದೆ. ನೋಟರಿಗಳು ಮಹಿಳೆಯಾಗಲೀ ಪುರುಷರಾಗಲೀ ಕಾನೂನನ್ನು ಅವಗಣನೆ ಮಾಡಿದರೆ ಅಪರಾಧಿಗಳಾಗುತ್ತಾರೆ.

(ಲೇಖಕರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಕೀಲರು)

-ಅಂಜಲಿ ರಾಮಣ್ಣ

 

Tags:
error: Content is protected !!