ರಮ್ಯ ಅರವಿಂದ್
ಬಸಳೆ ಸೊಪ್ಪು ಬಳ್ಳಿಯ ರೂಪದಲ್ಲಿ ಬೆಳೆಯುವ ಒಂದು ಸೊಗಸಾದ ಸೊಪ್ಪು. ಭಾರತದ ಎಲ್ಲ ಭಾಗಗಳಲ್ಲಿಯೂ ಈ ಸೊಪ್ಪು ಕಾಣಸಿಗುತ್ತದೆ. ಇದನ್ನು ಸುಲಭವಾಗಿ ಮನೆಯಲ್ಲಿಯೇ ಬೆಳೆಯಬಹುದಾಗಿದ್ದು, ವಿಶೇಷವಾದ ಪೌಷ್ಟಿಕಾಂಶಯುಕ್ತ ಈ ಸೊಪ್ಪನ್ನು ಬೇಸಿಗೆಯ ಸಂದರ್ಭದಲ್ಲಿ ಬಳಸುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ. ಈ ಸೊಪ್ಪು ಮಕ್ಕಳಲ್ಲಿನ ರಕ್ತಹೀನತೆಯ ಸಮಸ್ಯೆಯ ನಿವಾರಣೆಗೆ ಪರಿಣಾಮಕಾರಿಯಾಗಿದೆ. ಈ ಸೊಪ್ಪನ್ನು ವಾರಕ್ಕೊಮ್ಮೆಯಾದರೂ ಅಡುಗೆಯಲ್ಲಿ ಬಳಸಿದರೆ ದೇಹದ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು. ಈ ಸೊಪ್ಪಿನಿಂದ ಸರಳವಾಗಿ ರುಚಿಕರವಾದ ಖಾದ್ಯಗಳನ್ನು ತಯಾರಿಸಬಹುದು. ಅವು ಯಾವುವು ತಿಳಿಯೋಣ ಬನ್ನಿ.
ಬಸಳೆ ಸೊಪ್ಪಿನ ದೋಸೆ: ಬಸಳೆ ಸೊಪ್ಪಿನಿಂದ ದೋಸೆ ತಯಾರಿಸಿದರೆ ಅದು ತಿಳಿ ಹಸಿರು ಬಣ್ಣದಿಂದ ಆಕರ್ಷಿತವಾಗಿ ಕಾಣುತ್ತದೆ. ಈ ದೋಸೆಯನ್ನು ತಯಾರಿಸಲು ಮೊದಲಿಗೆ ಒಂದು ಕಪ್ ಅಕ್ಕಿಯನ್ನು ನಾಲ್ಕು ಗಂಟೆಗಳ ಕಾಲ ನೆನೆಸಬೇಕು. ನಂತರ ನೆನೆಸಿದ ಅಕ್ಕಿಗೆ ಒಂದು ಕಪ್ ಬಸಳೆ ಎಲೆಗಳು, ಅರ್ಧ ಚಮಚ ಜೀರಿಗೆ, ಒಂದು ಇಂಚು ಶುಂಠಿ, ನಾಲ್ಕರಿಂದ ಐದು ಮೆಣಸಿನಕಾಯಿ, ಅರ್ಧ ಕಪ್ ತೆಂಗಿನಕಾಯಿ ತುರಿ ಸೇರಿಸಿ ಒಂದು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿಕೊಳ್ಳಬೇಕು. ರುಬ್ಬಿದ ತಕ್ಷಣವೇ ದೋಸೆಯನ್ನು ತಯಾರಿಸಿಕೊಳ್ಳಬಹುದು.
ಬಸಳೆ ಸೊಪ್ಪಿನ ಬಜ್ಜಿ: ಬಜ್ಜಿ ಎಲ್ಲರಿಗೂ ಪ್ರಿಯವಾದ ಖಾದ್ಯ. ಬಜ್ಜಿಯನ್ನು ಬಸಳೆ ಸೊಪ್ಪಿನಿಂದ ತಯಾರಿಸಿದರೆ ಮತ್ತಷ್ಟು ರುಚಿಕರ ಮತ್ತು ಆರೋಗ್ಯಕರ. ಇದನ್ನು ತಯಾರಿಸಲು ಎರಡು ಕಪ್ ಕಡಲೆ ಹಿಟ್ಟು, ಎರಡು ಚಮಚ ಅಕ್ಕಿ ಹಿಟ್ಟು, ಅಗತ್ಯಕ್ಕೆ ತಕ್ಕಷ್ಟು ಬಸಳೆ ಸೊಪ್ಪಿನ ಎಲೆಗಳು, ಎರಡು ಚಮಚ ಅಚ್ಚಕಾರದ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಒಂದು ಚಿಟಿಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಸೇರಿಸುತ್ತಾ ಮಂದ ಹದಕ್ಕೆ ಬರುವಂತೆ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಬಸಳೆ ಎಲೆಗಳನ್ನು ಕಲಸಿದ ಹಿಟ್ಟಿನ ಮಿಶ್ರಣದೊಳಗೆ ಮುಳುಗಿಸಿ ಕಾದ ಎಣ್ಣೆಗೆ ನಿಧಾನವಾಗಿ ಒಂದರ ನಂತರ ಒಂದನ್ನು ಹಾಕುತ್ತಾ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಬಿಸಿ ಬಿಸಿಯಾದ ಬಸಳೆ ಬಜ್ಜಿ ಸವಿಯಲು ಸಿದ್ಧವಾಗುತ್ತದೆ.
ಬಸಳೆ ಸೊಪ್ಪಿನ ದಾಲ್ : ಬಸಳೆ ಸೊಪ್ಪಿನ ದಾಲ್ ಫ್ರೈಅನ್ನು ತಯಾರಿಸಲು ಮೊದಲಿಗೆ ಒಂದು ಕುಕ್ಕರ್ ಪ್ಯಾನ್‌ನಲ್ಲಿ ಕಾಲು ಕಪ್ ತೊಗರಿಬೇಳೆ, ಕಾಲು ಕಪ್ ಹೆಸರುಬೇಳೆ, ಐದು ಹಸಿಮೆಣಸಿನಕಾಯಿ (ಉದ್ದವಾಗಿ ಸೀಳಿದ) ಸಣ್ಣಗೆ ಹಚ್ಚಿದ ಬಸಳೆ ಸೊಪ್ಪು, ಒಂದು ಚಿಟಿಕೆ ಅರಿಶಿನ, ಕಾಲು ಚಮಚ ಅಡುಗೆ ಎಣ್ಣೆ, ಒಂದೂವರೆ ಲೋಟದಷ್ಟು ನೀರನ್ನು ಸೇರಿಸಿ ೧೫ ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು (ಅಂದರೆ ಕುಕ್ಕರ್ ಮೂರು ಕೂಗು ಬರುವವರೆಗೂ) ಕುಕ್ಕರ್ ಆರಿದ ನಂತರ ಮಿಶ್ರಣವನ್ನು ಒಂದು ಸೌಟಿನ ಸಹಾಯದಿಂದ ಕಲಸಿಕೊಳ್ಳಬೇಕು. ಈಗ ಒಂದು ಬಾಣಲೆಯಲ್ಲಿ ನಾಲ್ಕು ಚಮಚ ಅಡುಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಕಾಲು ಚಮಚ ಸಾಸಿವೆ, ಕಾಲು ಚಮಚ ಜೀರಿಗೆ, ಒಂದು ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎರಡು ಒಣ ಮೆಣಸಿನಕಾಯಿ, ಸಣ್ಣಗೆ ಹಚ್ಚಿದ್ದ ಈರುಳ್ಳಿ, ಒಂದು ಟೊಮೇಟೊ ಎಲ್ಲವನ್ನು ಬಾಡಿಸುತ್ತಾ ಕುಕ್ಕರಿನಲ್ಲಿರುವ ಮಿಶ್ರಣವನ್ನು ಸೇರಿಸಿ ಒಂದು ಸೌಟಿನಿಂದ ಕಲೆಸುತ್ತಾ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಹೀಗೆ ಮಾಡಿದ ರುಚಿಕರ ದಾಲ್ ಫ್ರೈ ಸವಿಯಲು ಸಿದ್ಧವಾಗುತ್ತದೆ.
ಬಸಳೆ ಸೊಪ್ಪಿನ ಚಟ್ನಿ: ಎರಡು ಹಿಡಿಯಷ್ಟು ಬಸಳೆ ಸೊಪ್ಪನ್ನು ನುಣ್ಣಗೆ ಹಚ್ಚಿಕೊಂಡು ಒಂದು ಪಾತ್ರೆಯಲ್ಲಿ ಎರಡು ಚಮಚ ಅಡುಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಉರಿದುಕೊಳ್ಳಬೇಕು. ನಂತರ ಒಂದು ಮಿಕ್ಸಿ ಪಾತ್ರೆಯಲ್ಲಿ ಅರ್ಧ ಇಂಚು ಶುಂಠಿ, ೪ ಹಸಿ ಮೆಣಸಿನಕಾಯಿ, ಎರಡು ಎಸಳು ಬೆಳ್ಳುಳ್ಳಿ, ಕಾಲು ಚಮಚ ಜೀರಿಗೆ, ಸ್ವಲ್ಪ ಹುಣಸೆಹಣ್ಣು, ಕಾಲು ಕಪ್ಪಿನಷ್ಟು ಕಾಯಿತುರಿ ಹಾಗೂ ಬಸಳೆ ಸೊಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಬೇಕು. ನಂತರ ಒಗ್ಗರಣೆ ಹಾಕಿದ ಸಾಸುವೆ, ಕರಿಬೇವವನ್ನು, ಈಗಾಗಲೇ ರುಬ್ಬಿಕೊಂಡ ಮಿಶ್ರಣಕ್ಕೆ ಬೆರೆಸಬೇಕು. ಹೀಗೆ ಮಾಡಿದರೆ ಬಸಳೆ ಸೊಪ್ಪಿನ ಚಟ್ನಿ ಸವಿಯಲು ಸಿದ್ಧವಾಗುತ್ತದೆ.
ಹೀಗೆ ಬಸಳೆ ಸೊಪ್ಪಿನಿಂದ ಆಹಾರವನ್ನುತಯಾರಿಸಿಕೊಂಡು ಸೇವಿಸಿದರೆ, ಇದು ಸವಿಯಲು ಇರುತ್ತದೆ. ಆರೋಗ್ಯಕ್ಕೆ ಹೆಚ್ಚು ಅನುಕೂಲವಾಗಿಯೂ ಇರುತ್ತದೆ.