ರಮ್ಯಾ ಅರವಿಂದ್
ಪಚ್ಚೆ ಹೆಸರು ಮತ್ತು ಹೆಸರುಕಾಳು ದೇಹಾರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹೆಸರು ಕಾಳು ಕಡಿಮೆ ಪ್ರಮಾಣದ ಕೊಬ್ಬು ಮತ್ತು ಅಧಿಕ ಪ್ರಮಾಣದ ಪ್ರೋಟೀನ್ ಅಂಶ ಜತೆಗೆ ನಾರಿನಾಂಶ ಹೊಂದಿರುವುದರಿಂದ ನಿತ್ಯದ ಆಹಾರದಲ್ಲಿ ಈ ಕಾಳನ್ನು ಬಳಸುವುದು ಉತ್ತಮ. ಇದು ದೇಹದಲ್ಲಿರುವ ಅನಗತ್ಯ ಕೊಬ್ಬಿನಾಂಶವನ್ನು ಕರಗಿಸುವುದಲ್ಲದೆ ದೇಹದ ತೂಕವನ್ನು ಇಳಿಸಲು ಸಹಕಾರಿಯಾಗಲಿದೆ.
ನಮ್ಮ ದಿನನಿತ್ಯದ ಆಹಾರದಲ್ಲಿ ನಾವು ಹೆಸರು ಕಾಳನ್ನು ಬಳಸಿಕೊಂಡು ರುಚಿಕರವಾದ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಅವು ಯಾವುವು? ಹೇಗೆ ತಯಾರಿಸುವುದು? ಎಂದು ನೋಡೋಣ.
೧) ಹೆಸರು ಕಾಳಿನ ಪರೋಟ:
ರಾತ್ರಿ ನೆನೆಸಿದ ಹೆಸರು ಕಾಳನ್ನು ಒಂದು ಕುಕ್ಕರಿಗೆ ಹಾಕಿ ತಕ್ಕಷ್ಟು ನೀರು ಹಾಕಿ ೫-೧೦ ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಅದನ್ನು ಒಂದು ಜಾಲರಿ ಪಾತ್ರೆಯಲ್ಲಿ ಸೋಸಿಕೊಳ್ಳಬೇಕು. ಸೋಸಿದ ನೀರನ್ನು ಗೋಧಿ ಹಿಟ್ಟು ಕಲಸಿಕೊಳ್ಳಲು ಬಳಸಬಹುದು. ಒಂದು ಪಾತ್ರೆಯಲ್ಲಿ ಗೋಧಿಹಿಟ್ಟಿಗೆ ಒಂದು ಚಿಟಿಕೆ ಅರಿಶಿನ, ಎರಡು ಚಮಚ ಅಚ್ಚಕಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದು ಚಮಚ ಅಡುಗೆ ಎಣ್ಣೆಯೊಂದಿಗೆ ಕಲಸಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ೨-೩ ಚಮಚ ಅಡುಗೆ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಒಂದೆರಡು ಹಸಿಮೆಣಸಿನ ಕಾಯಿ, ಸಣ್ಣಗೆ ಹಚ್ಚಿದ ಶುಂಠಿ, ಅರ್ಧ ಚಮಚ ಜೀರಿಗೆ, ಒಂದೆರಡು ಕ್ಯಾರೆಟ್ ತುರಿ, ಕರಿ ಬೇವು, ಕೊತ್ತಂಬರಿ ಸೊಪ್ಪು ಎಲ್ಲವನ್ನು ಬಾಣಲೆಗೆ ಹಾಕಿ ಮಧ್ಯಮ ಉರಿಯಲ್ಲಿ ೨-೩ ನಿಮಿಷ ಉರಿದುಕೊಳ್ಳಬೇಕು. ನಂತರ ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು, ಮೊದಲೇ ಬೇಯಿ ಸಿಟ್ಟು ನೀರಿನಾಂಶವನ್ನು ತೆಗೆದ ಹೆಸರು ಕಾಳನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಗೋಧಿಹಿಟ್ಟನ್ನು ಮಡಚಿ, ಅದಕ್ಕೆ ಈ ಮಿಶ್ರಣವನ್ನು ತುಂಬಿ ಅದು ಹೊರಬರದಂತೆ ಮೆದುವಾಗಿ ಲಟ್ಟಿಸಿಕೊಳ್ಳಬೇಕು. ಹೀಗೆ ತಯಾರಿಸಿದ ಪರೋಟವನ್ನು ಕಾದ ಕಾವಲಿಯ ಮೇಲೆ ಹಾಕಿ ಬೇಯಿಸಿಕೊಂಡರೆ ರುಚಿಯಾದ ಹೆಸರುಕಾಳಿನ ಪರೋಟ ಸವಿಯಲು ಸಿದ್ಧವಾಗುತ್ತದೆ.
೨) ರಾಗಿ ಮತ್ತು ಹೆಸರುಕಾಳಿನ ದೋಸೆ:
ಒಂದು ಪಾತ್ರೆಯಲ್ಲಿ ಅರ್ಧ ಕಪ್ ಹೆಸರು ಕಾಳು ಮತ್ತು ಅರ್ಧ ಕಪ್ ರಾಗಿಯನ್ನು ತೆಗೆದುಕೊಂಡು ಚೆನ್ನಾಗಿ ನೀರಿನಲ್ಲಿ ತೊಳೆದು ಅದಕ್ಕೆ ೨ ಕಪ್ ನೀರನ್ನು ಸೇರಿಸಿ ೪-೫ ಗಂಟೆಗಳ ಕಾಲ ನೆನೆಯಲು ಬಿಡಬೇಕು. ನಂತರ ಅದರಲ್ಲಿರುವ ನೀರನ್ನು ಬಸಿದು ಅದಕ್ಕೆ ಅರ್ಧ ಇಂಚು ಶುಂಠಿ, ಒಂದು ಚಮಚ ಜೀರಿಗೆ, ೪-೫ ಹಸಿ ಅಥವಾ ಒಣ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಒಂದು ಕಪ್ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಒಂದು ಪಾತ್ರೆಗೆ ವರ್ಗಾಯಿಸಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಮಧ್ಯಮ ಉರಿಯಲ್ಲಿ ಅಡುಗೆ ಎಣ್ಣೆ ಅಥವಾ ತುಪ್ಪ ಹಾಕಿ ದೋಸೆ ತಯಾರಿಸಬಹುದು. ಇದು ಮಧು ಮೇಹಿಗಳಿಗೆ ಹಾಗೂ ದೇಹದ ಕೊಬ್ಬಿನಾಂಶ ಕರಗಿಸಲು ಸಹಕಾರಿ.
೩) ಹೆಸರು ಕಾಳು ಡ್ರೈಫ್ರೂಟ್ ಲಡ್ಡು:
ಮಕ್ಕಳಿಗೆ ಅತಿ ಪ್ರಿಯಕರ, ಆರೋಗ್ಯಕ್ಕೂ ಉತ್ತಮವಾದದು ಹೆಸರು ಕಾಳು ಡ್ರೈ-ಟ್ ಲಡ್ಡು. ಇದನ್ನು ತಯಾರಿಸಲು ಅರ್ಧ ಕೆ.ಜಿ. ಹೆಸರು ಕಾಳು, ೨೦೦ ಗ್ರಾಂ ಕಡಲೆ ಬೀಜ, ೧೦೦ ಗ್ರಾಂ ಬಾದಾಮಿ, ೫೦ ಗ್ರಾಂ ಒಣದ್ರಾಕ್ಷಿ ಎಲ್ಲವನ್ನೂ ಪ್ರತ್ಯೇಕವಾಗಿ ಉರಿದುಕೊಳ್ಳಬೇಕು. ಬಳಿಕ ಮಿಕ್ಸಿಯಲ್ಲಿ ಪ್ರತ್ಯೇಕವಾಗಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಪುಡಿ ಮಾಡಿದ ಬೆಲ್ಲವನ್ನು ಸ್ವಲ್ಪವೇ ನೀರನ್ನು ಸೇರಿಸಿ ಬೆಲ್ಲ ಕರಗಿದ ನಂತರ ಅದನ್ನು ಸೋಸಿಕೊಂಡು ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ೪-೫ ನಿಮಿಷ ಕುದಿಸಿಕೊಂಡು ಪಾಕ ತಯಾರಿಸಿಕೊಳ್ಳಬೇಕು. ಈಗ ನುಣ್ಣಗೆ ಪುಡಿ ಮಾಡಿದ ಎಲ್ಲ ಪದಾರ್ಥಗಳನ್ನು ಬೆಲ್ಲದ ಪಾಕಕ್ಕೆ ಸೇರಿಸಿ ಕಲಸಿ ಉಡ್ಡೆ ಗಳನ್ನು ತಯಾರಿಸಿಕೊಳ್ಳಬೇಕು. ನಂತರ ಅದಕ್ಕೆ ತುಪ್ಪ ಸವರಿದರೆ ರುಚಿಯಾದ ಲಡ್ಡು ಸವಿಯಲು ಸಿದ್ಧ.