Mysore
24
overcast clouds

Social Media

ಬುಧವಾರ, 09 ಏಪ್ರಿಲ 2025
Light
Dark

ಬೇಸಿಗೆಯ ತಂಪು ರೆಸಿಪಿಗಳು

ರಮ್ಯಾ ಅರವಿಂದ್

ಬೇಸಿಗೆ ಪ್ರಾರಂಭವಾಗಿದೆ. ಸೂರ್ಯನ ತಾಪಮಾನ ಏರಿಕೆಯಾದಷ್ಟೂ ದೇಹದಲ್ಲಿನ ನೀರಿನಾಂಶ ಕಡಿಮೆಯಾಗಿ, ಬಾಯಾರಿಕೆ, ಆಯಾಸ ಹಾಗೂ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ದಿನವಿಡೀ ಲವಲವಿಕೆಯಿಂದಿರಲು ಸಾಧ್ಯವಾಗುವುದಿಲ್ಲ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಿಕೊಳ್ಳಲು ಹಾಗೂ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಡಲು ಮನೆಯಲ್ಲಿಯೇ ಸುಲಭವಾಗಿ, ಸರಳವಾಗಿ ರುಚಿಕರ ಆಹಾರ ಪದಾರ್ಥಗಳನ್ನು ತಯಾರಿಸಿಕೊಳ್ಳಬಹುದು.

೧.ರಾಗಿ ಹಾಲು: 

ಅತಿ ಸುಲಭವಾಗಿ ಹಾಗೂ ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಪಾನೀಯ ರಾಗಿ ಹಾಲು. ಐದು ಗಂಟೆಗಳ ಕಾಲ ನೆನೆಸಿದ ಒಂದು ಕಪ್ ರಾಗಿ, ಅರ್ಧ ಕಪ್ ತೆಂಗಿನ ತುರಿ, ಎರಡು ಏಲಕ್ಕಿಯನ್ನು ನುಣ್ಣಗೆ ರುಬ್ಬಿಕೊಂಡು ರುಬ್ಬಿದ ಮಿಶ್ರಣವನ್ನು ಒಂದು ಶುದ್ಧವಾದ ಬಟ್ಟೆಗೆ ಹಾಕಿಕೊಂಡು, ಹಿಂಡಿ ರಸವನ್ನು ತೆಗೆದುಕೊಳ್ಳಬೇಕು. ಉಳಿದ ಜಗಟನ್ನು ಎರಡನೇ ಬಾರಿ ಮಿಕ್ಸಿ ಪಾತ್ರೆಗೆ ಹಾಕಿ ಸ್ವಲ್ಪ ನೀರು ಸೇರಿಸಿ, ನುಣ್ಣಗೆ ರುಬ್ಬಿಕೊಂಡು ಪುನಃ ಹಾಲನ್ನು ತೆಗೆದುಕೊಳ್ಳಬಹುದು. ಹೀಗೆ ತಯಾರಿಸಿದ ಹಾಲಿಗೆ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಸೇರಿಸಿ ಅದಕ್ಕೆ ಒಂದು ಕಪ್ ಬೆಲ್ಲವನ್ನು ಸೇರಿಸಿದರೆ ರಾಗಿ ಹಾಲು ತಯಾರಾಗುತ್ತದೆ.

೨.ಜೀರಿಗೆ ಗಂಜಿ: 

ಬೇಸಿಗೆಯಲ್ಲಿ ಜೀರಿಗೆ ಗಂಜಿ ಮಕ್ಕಳು, ಬಾಣಂತಿಯರು ಸೇರಿದಂತೆ ಎಲ್ಲ ವಯೋಮಾನದವರ ದೇಹವನ್ನು ತಂಪಾಗಿರಿಸಲು ಸಹಾಯಕವಾಗಿದೆ. ಅಲ್ಲದೆ ಇದು ದೇಹಕ್ಕೆ ಶಕ್ತಿಯನ್ನೂ ತಂದು ಕೊಡುತ್ತದೆ. ಜೀರಿಗೆ ಗಂಜಿಯನ್ನು ತಯಾರಿಸಲು ಒಂದು ಕಪ್ ಅಡುಗೆ ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು, ಒಂದು ಕುಕ್ಕರಿನಲ್ಲಿ ೭ ಕಪ್ನೀರು, ಒಂದು ಚಿಟಿಕೆ ಉಪ್ಪಿನೊಂದಿಗೆ ಮೆದುವಾಗಿ ಬೇಯಿಸಿಕೊಳ್ಳಬೇಕು. ಒಂದು ಮಿಕ್ಸಿ ಪಾತ್ರೆಯಲ್ಲಿ ೧ ಕಪ್ ತೆಂಗಿನತುರಿ, ೩-೪ ಚಮಚ ಜೀರಿಗೆ ಹಾಗೂ ಸ್ಪಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವನ್ನು ಮೆದುವಾಗಿ ಬೆಂದಿರುವ ಅನ್ನಕ್ಕೆ ಬೆರೆಸಿ ಸ್ಪಲ್ಪ ನೀರನ್ನು ಸೇರಿಸಿ ತೆಳುವಾಗಿ ಮಾಡಿಕೊಂಡು, ಮೂರು-ನಾಲ್ಕು ನಿಮಿಷಗಳಕಾಲ ಕುದಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎರಡು ಚಮಚ ತುಪ್ಪವನ್ನು ಸೇರಿಸಿ ಸಾಕು. ಅದು ಬಿಸಿ ಇರುವಂತೆಯೇ ಉಪ್ಪಿನ ಕಾಯಿಯೊಂದಿಗೆ ಸವಿಯಲು ಸಿದ್ಧವಾಗುತ್ತದೆ.

೩.ಕಾಮಕಸ್ತೂರಿ

ಬೀಜದ ಪಾಯಸ ತಂಪಿನ ಬೀಜ ಎಂದೇ ಕರೆಯುವ ಕಾಮಕಸ್ತೂರಿ ಬೀಜದ ಪಾಯಸವನ್ನು ತಯಾರಿಸಲು ಮೊದಲು ೨ ಚಮಚದಷ್ಟು ಕಾಮಕಸ್ತೂರಿ ಬೀಜಗಳನ್ನು ೧೫ ನಿಮಿಷಗಳ ಕಾಲ ನೆನೆಸಿಡಬೇಕು. ನಂತರ ಅರ್ಧ ಕಪ್ ತೆಂಗಿನ ತುರಿಯನ್ನು ಒಂದು ಮಿಕ್ಸಿ ಪಾತ್ರೆಗೆ ಹಾಕಿ, ಸ್ವಲ್ಪ ನೀರು ಬೆರಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರಒಂದು ಶುದ್ಧವಾದ ಬಟ್ಟೆಯಿಂದ ತೆಂಗಿನ ಕಾಯಿ ತುರಿಯ ಹಾಲನ್ನು ತೆಗೆದುಕೊಳ್ಳಬೇಕು. ಮತ್ತೊಂದು ಮಿಕ್ಸಿ ಪಾತ್ರೆಯಲ್ಲಿ ೫ ಬಾದಾಮಿ, ೫ ಗೋಡಂಬಿ, ೧ ಏಲಕ್ಕಿಯನ್ನು ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ ಅರ್ಧಕಪ್ ಬೆಲ್ಲವನ್ನು ಮಧ್ಯಮ ಉರಿಯಲ್ಲಿ ಕರಗಿಸುತ್ತಾ ಆಗಲೇ ತಯಾರಿಸಿದ ಕಾಯಿ ಹಾಲನ್ನು, ಬಾದಾಮಿ, ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ, ನಂತರ ನೆನೆಸಿದ ಕಾಮಕಸ್ತೂರಿ ಬೀಜವನ್ನು ಸೇರಿಸಿ ಒಂದೆರಡು ನಿಮಿಷಗಳ ಕಾಲ ಕುದಿಸಬೇಕು. ಹೀಗೆ ತಯಾರಿಸಿದ ಕಾಮಕಸ್ತೂರಿ ಬೀಜದ ಪಾಯಸ ಸವಿಯಲು ಸಿದ್ಧವಾಗುತ್ತದೆ.

೪.ಗಸಗಸೆ ಹಾಲು

ರುಚಿಕರವಾದ ಗಸೆಗಸೆ ಹಾಲನ್ನು ತಯಾರಿಸಲು ಮೊದಲಿಗೆ ೨ ಚಮಚೆ ಗಸಗಸೆ, ೧೦-೧೫ ಬಾದಾಮಿಯನ್ನು ೪-೫ ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಬಾದಾಮಿಯ ಸಿಪ್ಪೆಗಳನ್ನು ತೆಗೆದು ಒಂದು ಮಿಕ್ಸಿ ಪಾತ್ರೆಯಲ್ಲಿ ನೆನೆಸಿದ ಗಸಗಸೆ, ಬಾದಾಮಿ, ಅರ್ಧಕಪ್ ತೆಂಗಿನತುರಿ, ೧ ಏಲಕ್ಕಿ, ಸ್ಪಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಅದನ್ನು ಹತ್ತಿ ಬಟ್ಟೆಯ ಸಹಾಯದಿಂದ ಚೆನ್ನಾಗಿ ಸೋಸಿಕೊಂಡು ಗಸೆಗಸೆ ಬಾದಾಮಿ ಹಾಲನ್ನು ತೆಗೆದುಕೊಳ್ಳಬೇಕು. ಹೀಗೆ ಎರಡು ಬಾರಿ ಜಗಟಿನಿಂದ ಹಾಲನ್ನು ತೆಗೆದುಕೊಳ್ಳಬೇಕು. ಇದಕ್ಕೆ ಅರ್ಧ ಕಪ್ ಬೆಲ್ಲ ಸೇರಿಸಿದರೆ ಗಸಗಸೆ ಹಾಲು ಸವಿಯಲುಸಿದ್ಧವಾಗುತ್ತದೆ. ಹೀಗೆ ಬೇಸಿಗೆಯಿಂದ ದೇಹವನ್ನು ತಂಪಾಗಿಸಲು ಮನೆಯಲ್ಲಿ ಸುಲಭವಾಗಿ, ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಸೇವಿಸಬಹುದು.

ಬಿಸಿಲಿಗೆ ತಂಪು ಹತ್ತಿ ಉಡುಪು: 

ಬೇಸಿಗೆ ಬಂದೇ ಬಿಡ್ತು! ಸೂರ್ಯನ ಬಿಸಿಲ ಶಾಖಕ್ಕೆ ತತ್ತರಿಸಿ ಹೋಗುವವರು ಅನೇಕರು. ಈ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಅದರ ಜೊತೆಗೆ ತೊಡುವ ಉಡುಪು ಕೂಡ ದೇಹದ ಶಾಖವನ್ನು ನಿಯಂತ್ರಿಸುತ್ತದೆ. ಹಾಗಾಗಿ ಮಳೆಗೊಂದು, ಚಳಿಗೊಂದು ಎಂಬಂತೆ ಬೇಸಿಗೆ ಕಾಲಕ್ಕೂ ನಿರ್ದಿಷ್ಟ ಉಡುಪುಗಳನ್ನು ತೊಡುವುದರಿಂದ ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಬಹುದು. ಪಾಲಿಸ್ಟರ್ ಮತ್ತು ರೆಯಾನ್ ಬಟ್ಟೆಗಳಿಗಿಂತ ಹತ್ತಿ ಉಡುಪುಗಳು ಬೇಸಿಗೆ ಕಾಲಕ್ಕೆ ಸೂಕ್ತ. ಏಕೆಂದರೆ, ಉರಿಯ ಅನುಭವ ನೀಡದೆ, ಬೆವರನ್ನು ಬೇಗನೆ ಹೀರುವ ಬಟ್ಟೆಯೆಂದರೆ ಅದು ಹತ್ತಿಯೇ. ಆದ್ದರಿಂದ ಬೇಸಿಗೆ ಬಂದಂತೆ ಹತ್ತಿ ಬಟ್ಟೆಗಳ ಬೆಲೆ ದುಬಾರಿಯಾಗಿ ಬಿಡುತ್ತದೆ. ಹತ್ತಿಯ ಉಡುಪಿನ ಆಯ್ಕೆಯಲ್ಲೂ ತಿಳಿ ಬಣ್ಣವನ್ನೇ ಆಯ್ಕೆ ಮಾಡಿಕೊಳ್ಳುವುದು ಒಳಿತು. ಕಾರಣ ಇಷ್ಟೆ, ಗಾಢ ಬಣ್ಣ ಸೂರ್ಯನ ಬಿಸಿ ಶಾಖವನ್ನು ಹೀರಿಕೊಳ್ಳುತ್ತದೆ. ಆನ್‌ಲೈನ್ ಯುಗದಲ್ಲಿ ನಾನಾ ರೀತಿಯ ವಿನ್ಯಾಸವುಳ್ಳ ಹತ್ತಿ ಉಡುಪುಗಳು ಸುಲಭವಾಗಿ ಕೈಗೆಟಕುತ್ತವೆ. ಜೊತೆಗೆ ಅನೇಕ ಅಂಗಡಿಗಳಲ್ಲಿ ಮಹಿಳೆಯರನ್ನು ಆಕರ್ಷಿಸುವ ‘ಸಮ್ಮರ್ ಆಫರ್’ ಕೂಡ ಭರ್ಜರಿಯಾಗಿ ಸಾಗುತ್ತಿವೆ.

Tags: