Mysore
25
overcast clouds
Light
Dark

ಎಳವೆಯಿಂದಲೇ ಸಭ್ಯತೆ ಬರಲಿ

 

• ರಮ್ಯ ಎಸ್.
ಅಂದು ನನ್ನ ತಾಯಿ ಮತ್ತು ನನ್ನ ಐದು ವರ್ಷದ ಮಗ ಟಿವಿ ನೋಡುತ್ತಾ ಕುಳಿತಿದ್ದರು. ‘ಛಿ, ಈಗಿನ ಕಾಲದ ಹುಡುಗಿಯರಿಗೆ ಒಂದು ಚೂರೂ ನಾಚಿಕೆ ಇಲ್ಲ’ ಅಜ್ಜಿ ಹೇಳಿದರು. ‘ಹೌದು ಅಜ್ಜಿ. ನಾಚಿಕೆ ಇಲ್ಲ. ಛೇ, ಛೇ..’ ಅಜ್ಜಿಯ ಮಾತಿಗೆ ತಾಳ ಹಾಕಿದ ಮೊಮ್ಮಗ. ಅಡುಗೆ ಮನೆಯಲ್ಲಿದ್ದ ನಾನು ಹೊರಬಂದೆ. ಒಂದು ಸುಂದರವಾದ ಚಿತ್ರಗೀತೆ ಪ್ರಸಾರವಾಗುತ್ತಿತ್ತು. ಅದರಲ್ಲಿ ನಾಯಕ-ನಾಯಕಿ, ಸಹನಟರೊಂದಿಗೆ ನೃತ್ಯವನ್ನು ಮಾಡುತ್ತಿದ್ದರು. ನಾಯಕಿ ಹಾಗೂ ಸಹನಟಿಯರು ಆಧುನಿಕ ವಿನ್ಯಾಸದ ತುಂಡುಡುಗೆ ತೊಟ್ಟಿದ್ದರು. ‘ಅದರಲ್ಲಿ ತಪ್ಪು ಏನು? ಕೇಳಿದೆ.
‘ತಪ್ಪಲ್ಲದೆ ಇನ್ನೇನು? ಬಟ್ಟೆ ಇರೋದು ಮೈ ಮುಚ್ಚಿಕೊಳ್ಳೋಕೆ. ಈ ಹುಡುಗಿಯರಿಗೆ ಯಾಕೆ ಅದು ಅರ್ಥ ಆಗಲ್ಲ?’ ಅಮ್ಮ ಅಸಹನೆಯಲ್ಲಿ ಹೇಳಿದರು.
ತಕ್ಷಣ ನನ್ನ ಮಗ ‘ಹೌದಮ್ಮಾ, ಅಜ್ಜಿ ಹೇಳಿದ್ದು ಸರಿ. ಹುಡುಗಿಯರಿಗೆ ನಾಚಿಕೆ ಇಲ್ಲ. ಎಷ್ಟು ಚಿಕ್ಕ ಬಟ್ಟೆ ಹಾಕ್ತಾರೆ ನೋಡಿ’ ಮೂಗು ಮುರಿದ.

‘ಮತ್ತೆ ಸಿನಿಮಾ ನಟರು ಶರ್ಟ್ ಬಿಚ್ಚಿ ಓಡಾಡುತ್ತಾ ಶೂಟಿಂಗ್ ಮಾಡುತ್ತಾರಲ್ಲ ಅವರು ಸರೀನಾ?’ ಕೇಳಿದೆ. ‘ಅವರೆಲ್ಲಾ ಗಂಡಸರು ತಟ್ಟನೆ ಉತ್ತರಿಸಿದರು ಅಮ್ಮ. ಅಜ್ಜಿಯ ಮಾತಿಗೆ ಹಿಗ್ಗಿದ ಮಗ, ‘ಹೌದಮ್ಮಾ ಅವರೆಲ್ಲ ಹೀರೋಸ್ ಹೆಮ್ಮೆಯಿಂದ ಹೇಳಿದ.
ಹುಬ್ಬೇರಿಸುತ್ತಾ, ‘ಓಹ್, ಅಂದ್ರೆ ಹುಡುಗರು ಮೈಮುಚ್ಚೋದು ಬೇಡ್ವಾ? ಪ್ರಶ್ನಿಸಿದೆ. ಮಗನಿಗೆ ಗೊಂದಲವಾಯಿತು.

‘ಗಂಡುಮಕ್ಕಳು ಹೇಗಿದ್ದರೂ ನಡೆಯುತ್ತೆ, ಹೆಣ್ಣುಮಕ್ಕಳು… ಎನ್ನುತ್ತಿದ್ದ ಅಮ್ಮನ ಮಾತನ್ನು ಅಲ್ಲಿಗೆ ತಡೆದು, ಅಮ್ಮ ಚಿಕ್ಕಮಗುವಿನ ದಾರಿ ತಪ್ಪಿಸಬೇಡಿ’ ಎಂದವಳೇ, ಮಗನನ್ನು ನನ್ನ ಕಡೆ ತಿರುಗಿಸಿಕೊಂಡು, ‘ನೋಡು ಪುಟ್ಟ, ಹೆಣ್ಣಾಗಲಿ, ಗಂಡಾಗಲಿ ಇಬ್ಬರೂ ಒಂದೇ, ದೇಹ ಇಬ್ಬರಿಗೂ ಇರುತ್ತೆ. ಬಟ್ಟೆ ಅವರವರ ಇಷ್ಟಕ್ಕೆ ಸಂಬಂಧಿಸಿದ್ದು. ಯಾವ ಬಟ್ಟೆ ಮುಜುಗರ ತರಿಸುವುದಿಲ್ಲವೋ, ಅಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಕು’ ಎಂದು ಹೇಳಿದೆ.

ನನ್ನಮ್ಮನಿಗೆ ಸಿಟ್ಟು ಬಂತು. ಮೊಮ್ಮಗನ ಮುಂದೆ ನಾನು ಹಾಗೆ ಹೇಳಿದ್ದು ಅವರಿಗೆ ಇಷ್ಟವಾಗಲಿಲ್ಲ. ‘ಹಾಗಾದರೆ ಈಗಿನ ಹೆಣ್ಣುಮಕ್ಕಳು ಏನು ಹಾಕಿಕೊಳ್ಳದೇ ಇರಲಿ ಬಿಡು. ಮಾನ ಮರ್ಯಾದೆ ಏನೂ ಇಲ್ಲ ಅನ್ನುವಂತೆ’ ಎಂದುಬಿಟ್ಟರು. ಮಗ ನಗಲು ಶುರುಮಾಡಿದ. ‘ಅಮ್ಮ ಅಕ್ಕಮಹಾದೇವಿ, ಗೊಮ್ಮಟೇಶ್ವರ ಕೂಡ ಬಟ್ಟೆ ತ್ಯಜಿಸಿದ್ದರು. ಅವರೇನು ಮನ, ಮರ್ಯಾದೆ ಬಿಟ್ಟಿದ್ದರೆ?’ ಕೇಳಿದೆ.
‘ಅವರೆಲ್ಲರೂ ಪುಣ್ಯ ಪುರುಷರು. ಅವರಿಗೂ ಇವರಿಗೂ ಯಾವ ಹೋಲಿಕೆ?’ ಕೋಪದಲ್ಲೇ ಹೇಳಿದರು.

‘ಇದು ಹೋಲಿಕೆ ಅಲ್ಲ. ಯಾರನ್ನೇ ಆಗಲಿ ತೊಡುವ ಬಟ್ಟೆಯಿಂದ ಅಳೆಯಬಾರದು. ಅದು ಅವರವರ ಇಷ್ಟಕ್ಕೆ ಬಿಟ್ಟಿದ್ದು ಎಂದು ಹೇಳಿದ ನಂತರ ಮಗನಿಗೆ ‘ನೋಡು ಪುಟ್ಟ ಬಟ್ಟೆ ಇರುವುದು ನಮ್ಮ ಮೈ ಮುಚ್ಚಲು. ಇದು ನಾಗರಿಕತೆಯ ಸಂಕೇತ, ಗೌರವ ತೋರುವ, ಸಭ್ಯ ಬಟ್ಟೆಗಳನ್ನು ಹೆಣ್ಣು ಗಂಡು ಇಬ್ಬರೂ ಹಾಕಿಕೊಳ್ಳಬೇಕು. ಆದರೆ ಎಲ್ಲರಿಗೂ ಅವರಿಷ್ಟದ ಬಟ್ಟೆ ತೊಡುವ ಸ್ವಾತಂತ್ರ್ಯವಿದೆ. ಅದನ್ನು ನಾವು ಹಿಯಾಳಿಸಬಾರದು. ಬಟ್ಟೆಯಿಂದ ಮಾತ್ರ ಗೌರವ ಸಿಗುವುದಿದ್ದರೆ, ಮಹಾತ್ಮ ಗಾಂಧೀಜಿಯವರು ತುಂಡುಪಂಚೆ ತೊಡುತ್ತಿದ್ದರು. ಆದರೂ ನಾವು ಅವರನ್ನು ಗೌರವಿಸುತ್ತೇವೆ ಅಲ್ಲವೇ? ತೊಡುವ ಬಟ್ಟೆ ನೋಡಿ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು ತಿಳಿಹೇಳಿದೆ. ಸರಿಯೆನ್ನುವಂತೆ ತಲೆಯಾಡಿಸಿದ.

ಕೋಪದಲ್ಲಿದ್ದ ಅಮ್ಮನ ಕೈ ಹಿಡಿದು, ‘ಅಮ್ಮ, ಕಾಲ ತುಂಬಾ ಬದಲಾಗಿದೆ. ಹೆಣ್ಣು ಗಂಡಿಗೆ ಸಮಾನವಾಗಿ ಓದು, ಕೆಲಸ ಗಳಿಸುತ್ತಾಳೆ. ಹೊರಗೆ ದುಡಿದರೂ ಮನೆ ಮಕ್ಕಳ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಾಳೆ. ಅಲ್ಲಿ ಒಪ್ಪುವ ಸಮಾನತೆ ಬಟ್ಟೆಯ ವಿಷಯಕ್ಕೆ ಯಾಕೆ ಬದಲಾಗಬೇಕು? ತೊಡುವ ಬಟ್ಟೆಯಿಂದ ಯಾರ ವ್ಯಕ್ತಿತ್ವವನ್ನು ಅಳೆಯಬಾರದು. ಉಡುಗೆ ತೊಡುಗೆ ಅವರವರ ಇಷ್ಟಕ್ಕೆ ಬಿಟ್ಟದ್ದು. ಸಭ್ಯತೆಯನ್ನು ಬರೇ ಹೆಣ್ಣುಮಕ್ಕಳಿಗಲ್ಲ, ಗಂಡುಮಕ್ಕಳಿಗೂ ಹೇಳಿಕೊಡಬೇಕು. ಇಲ್ಲವಾದರೆ ಗಂಡು ಮೇಲು, ಹೆಣ್ಣು ಕೀಳು ಎನ್ನುವ ಭಾವನೆ ಬೆಳೆಸಿಕೊಳ್ಳುತ್ತಾರೆ. ಅದು ತಪ್ಪು. ಎಲ್ಲರೂ ಸಮಾನರು ಎಂದು ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಟ್ಟರೆ, ಪರಸ್ಪರ ಅರ್ಥ ಮಾಡಿಕೊಂಡು, ಒಬ್ಬರನ್ನೊಬ್ಬರು ಗೌರವಿಸುತ್ತಾರೆ ಹೇಳಿ ಸುಮ್ಮನಾದೆ.

ಕೆಲದಿನಗಳ ನಂತರ ಮಗನ ಶಾಲೆಯಲ್ಲಿ ಪೋಷಕರ ಸಭೆ ಇತ್ತು. ಅಮ್ಮನನ್ನು ಕರೆದುಕೊಂಡು ಹೋದೆ. ಮಗನ ಶೈಕ್ಷಣಿಕ ಬೆಳವಣಿಗೆ ಬಗ್ಗೆ ಹೇಳಿದ ಶಿಕ್ಷಕಿ, ‘ಸಮರ್ಥ್ ತುಂಬಾ ತಿಳಿವಳಿಕೆ ಇರುವ ಮಗು. ಹೆಣ್ಣುಮಕ್ಕಳ ಬಗ್ಗೆ ನೀವು ಹೇಳಿಕೊಟ್ಟಿರುವ ವಿಷಯವನ್ನು ತರಗತಿಯಲ್ಲಿ ಹೇಳಿದ. ಕೇಳಿ ತುಂಬಾ ಸಂತೋಷವಾಯಿತು. ಮನೆಯಲ್ಲಿ ಸಿಗುವ ಇಂತಹ ಸೂಕ್ಷ್ಮ ಪಾಠಗಳು ಮಕ್ಕಳ ಪಾಲಿಗೆ ಉತ್ತಮವಾದ ಮಾರ್ಗದರ್ಶಿಗಳು, ನಿಮ್ಮ ಮಾರ್ಗದರ್ಶನಕ್ಕಾಗಿ ಶಾಲೆಯ ಕಡೆಯಿಂದ ಧನ್ಯವಾದಗಳು ಕೈ ಜೋಡಿಸಿದರು.
ನಮ್ಮ ಮಾತು ಕೇಳಿಸಿಕೊಳ್ಳುತ್ತಿದ್ದ ಅಮ್ಮನ ಕಡೆ ನೋಡಿದೆ. ನನ್ನ ಕೈಸವರಿ, ತನ್ನ ಗೆಳೆಯ, ಗೆಳತಿಯರೊಂದಿಗೆ ಮಾತನಾಡುತ್ತಿದ್ದ ಮೊಮ್ಮಗನ ಕಡೆ ಹೆಮ್ಮೆಯ ನೋಟ ಬೀರಿದರು!
ramnanda0227@gmail.com