ಭಾರತೀಯ ಸಮಾಜದ ಕೌಟುಂಬಿಕ ಪದ್ಧತಿಯಲ್ಲಿ ಗಂಡ- ಹೆಂಡತಿ ನಡುವಿನ ಸಂಬಂಧಕ್ಕೆ ಮಹತ್ವದ ಸ್ಥಾನವಿದೆ. ಈ ಮಧುರ ಸಂಬಂಧದ ಅಡಿಪಾಯವೇ ಪರಸ್ಪರ ಪ್ರೀತಿ ಮತ್ತು ನಂಬಿಕೆ. ಆದರೆ, ಮದುವೆಗೂ ಮುಂಚೆ ಅಥವಾ ಮದುವೆ ಯಾದ ಹೊಸತರಲ್ಲಿ ಗಂಡ- ಹೆಂಡತಿಯ ನಡುವೆ ಇದ್ದಷ್ಟು ಪ್ರೀತಿ ನಂತರದ ದಿನಗಳಲ್ಲಿ ಕಡಿಮೆಯಾಗಬಹುದು. ಇದರಿಂದ ಸಂಸಾರದಲ್ಲಿ ವಿವಾಹೇತರ ಸಂಬಂಧದ ಕಿರಿಕಿರಿ, ಗಲಾಟೆ, ಮನಸ್ತಾಪಗಳು ಎದುರಾಗಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಿವಾಹೇತರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮದುವೆಯಾದ ಗಂಡಸು ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇರಿಸಿ ಕೊಳ್ಳುವುದು, ವಿವಾಹಿತ ಮಹಿಳೆ ಪರ ಪುರುಷನತ್ತ ಆಕರ್ಷಿತಳಾಗುವುದು ಕೂಡ ಹೆಚ್ಚುತ್ತಿದೆ. ಗಂಡ ಅಥವಾ ಹೆಂಡತಿ ಬೇರೆ ಮಹಿಳೆ ಅಥವಾ ಗಂಡಸಿನ ಕಡೆ ಆಕರ್ಷಿತರಾಗಬಾರದು ಎಂದಾದರೆ ಪರಸ್ಪರ ಅರಿತು ದಾಂಪತ್ಯ ನಡೆಸಬೇಕು.
ಪ್ರೀತಿ, ವಿಶ್ವಾಸ, ನಂಬಿಕೆ,ಪರಸ್ಪರ ತಿಳಿವಳಿಕೆ ಮತ್ತು ತಾಳ್ಮೆ ಇವು ವೈವಾಹಿಕ ಸಂಬಂಧವನ್ನು ಕಾಪಾಡಿ ಕೊಳ್ಳಲು ಅತ್ಯಗತ್ಯ. ಕುಟುಂಬದಲ್ಲಿ ಸಮಸ್ಯೆಗಳು ಎದುರಾದಾಗ ಅವುಗಳಿಂದ ದೂರ ಓಡಿ ಹೋಗುವ ಬದಲು ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಉತ್ತಮ.
ಗಂಡ-ಹೆಂಡತಿ ನಿಜವಾಗಿಯೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ, ಬಂಧವು ಮತ್ತಷ್ಟು ಬಲಗೊಳ್ಳು ವುದರಲ್ಲಿ ಯಾವುದೇ ಅನುಮಾನವಿಲ್ಲ.
ಒತ್ತಡದ ಜೀವನ ಶೈಲಿಯಿಂದಾಗಿ ಗಂಡ-ಹೆಂಡತಿ ನಡುವೆ ಮುಕ್ತ ಮಾತುಕತೆಯೇ ಇಲ್ಲವಾಗುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗುತ್ತಿದೆ. ಅದರಲ್ಲೂ ಉದ್ಯೋಗಸ್ಥ ದಂಪತಿ ಕಚೇರಿ ಕೆಲಸದ ಒತ್ತಡ, ಹಣ ಸಂಪಾದನೆಯ ಹಿಂದೆ ಬಿದ್ದು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಪಾಳಿಗಳಲ್ಲಿ ಕೆಲಸಕ್ಕೆ ಹೋಗುವ ದಂಪತಿಯಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಗಂಡ ಕಚೇರಿಯಲ್ಲಿರುವಾಗ ಗೃಹಕೃತ್ಯ ನಿಭಾಯಿಸುವ ಹೆಂಡತಿ, ಗಂಡ ಕಚೇರಿ ಕೆಲಸ ಮುಗಿಸಿ ಬರುವ ವೇಳೆಗೆ ತಾನು ಕಚೇರಿಗೆ ಹೊರಟು ನಿಲ್ಲುವ ಹೆಂಡತಿ, ಇಲ್ಲಿ ಮುಕ್ತ ಮಾತುಕತೆಗೆ ಸಮಯವೆಲ್ಲಿದೆ?
ಮುಕ್ತ ಮಾತುಕತೆಯಲ್ಲಿ ತೊಡಗಿ:
ಸಂಸಾರದಲ್ಲಿ ಸರಿಗಮಪ ಸರಿಯಾಗಿರಲು ಪರಸ್ಪರ ಮುಕ್ತ ಮಾತುಕತೆಯೊಂದೇ ಪರಿಹಾರ. ಮಾತುಕತೆಯೇ ಇಲ್ಲದೇ ಹಣದ ಹಿಂದೆ ಬಿದ್ದರೆ ಸಂಬಂಧದಲ್ಲಿ ಅಂತರ ಮೂಡಲು ಕಾರಣವಾಗುತ್ತದೆ. ಸಂಸಾರದಲ್ಲಿನ ಆಗು-ಹೋಗುಗಳನ್ನು ಗಂಡ-ಹೆಂಡತಿ ಇಬ್ಬರೂ ಪರಸ್ಪರ ಮುಕ್ತ ಮಾತುಕತೆಯ ಮೂಲಕ ಬಗೆಹರಿಸಿಕೊಂಡರೆ ಇಬ್ಬರ ಮನಸ್ಸೂ ಹೊರಗಿನವರ ಕಡೆಗೆ ವಾಲುವುದಿಲ್ಲ.
ಸಣ್ಣಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಳ್ಳುವುದು, ರೇಗಾಡುವ ಬದಲು ಸಂಬಂಧ ದಲ್ಲಿ ಪ್ರಣಯವನ್ನು ಕಾಪಾಡಿಕೊಳ್ಳಿ. ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಿರಿ. ಸಣ್ಣ ಪುಟ್ಟ ಸಂತೋಷಗಳನ್ನು ಒಟ್ಟಿಗೇ ಆನಂದಿಸಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿ. ಪ್ರತಿಯೊಂದು ಸಂಬಂಧದಲ್ಲೂ ನಂಬಿಕೆ ಅತ್ಯಂತ ಮುಖ್ಯ. ಗಂಡ ಹೆಂಡತಿಯನ್ನು ಅನುಮಾನಿಸುವುದು, ಹೆಂಡತಿ ಗಂಡನನ್ನು ಅನುಮಾನಿಸುವುದು ಅಸಮಾಧಾನಕ್ಕೆ ಕಾರಣವಾಗಲಿದೆ. ಹೀಗಾಗಿ ನಿಮ್ಮ ಬಾಳ ಸಂಗಾತಿಯ ಮೇಲೆ ನಂಬಿಕೆ ಇಡಿ. ಅನುಮಾನಪಟ್ಟು ಕಾಲು ಕೆರೆದು ಜಗಳವಾಡಲು ಹೋಗಬೇಡಿ.
ಅವರ ಇಷ್ಟಕ್ಕೂ ಸ್ವಲ್ಪ ಬೆಲೆ ಕೊಡಿ:
ಧಾರಾವಾಹಿ,ಸಿನಿಮಾ, ವಾರ್ತೆ ಎಂದು ಟಿವಿ ರಿಮೋಟ್‌ಗಾಗಿ ಕಿತ್ತಾಡುವ ಬದಲು, ಅವರ ಇಷ್ಟದಂತೆ ಬಟ್ಟೆ ಧರಿಸುವುದು, ಇವರ ಇಷ್ಟದಂತೆ ಬದುಕುವುದನ್ನು ಕೊಂಚ ರೂಢಿಸಿಕೊಂಡರೆ ಸಂಸಾರದಲ್ಲಿ ಸರಿಗಮಪ ತಾನೇ ತಾನಾಗಿ ಸರಿ ಹೋಗುತ್ತದೆ. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಗಂಡ-ಹೆಂಡತಿ ಸಂಬಂಧದಲ್ಲಿ ಪ್ರೀತಿ ಎಂಬುದು ತುಂಬಾ ಮುಖ್ಯ. ಗಂಡನಾದವನು ಹೆಂಡತಿಗೆ ಪ್ರೀತಿ ತೋರುವುದರಲ್ಲಿ, ಹೆಂಡತಿ ತನ್ನ ಗಂಡನಿಗೆ ಪ್ರೀತಿ ತೋರುವುದರಲ್ಲಿ ಎಂದಿಗೂ ಜುಗ್ಗುತನ ಮಾಡಬೇಡಿ. ನಿಮ್ಮ ಅತಿಯಾದ ಪ್ರೀತಿ, ಕಾಳಜಿ ಸಂಸಾರವನ್ನು ಹಳಿ ತಪ್ಪದಂತೆ ನೋಡಿಕೊಳ್ಳುತ್ತದೆ.
ಹೊಂದಾಣಿಕೆ ಇರಲಿ:
ಇಬ್ಬರ ನಡುವೆ ಹೊಂದಾಣಿಕೆ ಎಂಬುದು ಅತಿ ಮುಖ್ಯ.ಸಂಸಾರದಲ್ಲಿ ಸಣ್ಣಪುಟ್ಟ ತಪ್ಪು ನಡೆದರೆ, ಅದಕ್ಕಾಗಿ ದೊಡ್ಡ ಜಗಳ ಮಾಡಬೇಡಿ, ಪರಸ್ಪರ ಪ್ರೀತಿಯಿಂದ ಮಾತನಾಡಿಸಿ, ಆ ತಪ್ಪುಗಳು ಮತ್ತೆ ನಡೆಯದಂತೆ ತಿಳಿ ಹೇಳಿ.ಹೀಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದಾಗ ಖಂಡಿತವಾಗಿಯೂ ದಾಂಪತ್ಯದ ಬಂಧ ಮತ್ತಷ್ಟು ಬಲಗೊಳ್ಳಲಿದೆ.
ಕುಟುಂಬಕ್ಕೂ ಸಮಯ ಕೊಡಿ:
ಮನೆ ಕೆಲಸ, ಹೊರಗಿನ ಕೆಲಸ ಎಷ್ಟೇ ಇದ್ದರೂ ಕೂಡ ಗಂಡ ಹೆಂಡತಿಗಾಗಿ, ಹೆಂಡತಿ ಗಂಡನಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಿ. ಸಿನಿಮಾ, ಡಿನ್ನರ್, ಪ್ರವಾಸ ಎಂದು ಕುಟುಂಬದೊಂದಿಗೆ ಒಂದಷ್ಟು ಸಮಯವನ್ನು ಕಳೆಯಿರಿ. ಹೀಗೆ ಮಾಡುವುದರಿಂದ ಕೌಟುಂಬಿಕ ಸಂಬಂಧ ಆರೋಗ್ಯಕರವಾಗಿರುತ್ತದೆ.





