ತಂಬೂರಿ ಇಟ್ಟಿದ್ದ ದಿಕ್ಕಿಗೆ ತಲೆಯೊಡ್ಡಿದ್ದ ಬಸಪ್ಪನ ಜೀವ ಮಗನ ಮಾತಿಗೆ ಜಿಗಿಯುತ್ತಿತ್ತು. ಹೆಂಡತಿ ಹಾಡುವುದು ಬೇಡವೆನ್ನುತ್ತಿದ್ದರೆ ಇತ್ತ ಮಗ, ಅಪ್ಪ ಹಾಡಲೇಬೇಕೆಂದು ನನ್ನೊಳಗಿನ ಪದಗಳಿಗೆ ಆಸರೆಯಾಗಿ ನಿಂತಿದ್ದ. ಅಪ್ಪನಿಂದ ಅಷ್ಟೋ ಇಷ್ಟೋ ಪದಗಳನ್ನು ಎದೆಯೊಳಗಿರಿಸಿಕೊಂಡಿದ್ದ ಮಗನನ್ನು ಕಣ್ಣೆತ್ತಿ ನೋಡಿದ ಗವಿಬಸಪ್ಪನವರ ಕಣ್ಣುಗಳಲ್ಲಿ ನೀಲಗಾರ ಪರಂಪರೆ ಉಳಿವಿನ ಭರವಸೆಯ ಬಾಷ್ಪಗಳು ಅರಿವಿಲ್ಲದೆ ಕದಪಿನ ಮೇಲೆ ಹರಿದವು.
ಹೊಟ್ಟೆಗಿಟ್ಟಿಲ್ಲದ ಕಾಲದಲ್ಲಿ ಹಸಿವಿನೊಂದಿಗೆ ಹೋರಾಟ ನಡೆಸಿ, ಎದೆಯೊಳಗೆ ಪದವಿಳಿಸಿಕೊಂಡ ನೆನಪುಗಳು ಒಂದೊಂದೇ ಗರಿಗೆದರಿದವು. ‘ನಮ್ಮಪ್ಪ ನಮ್ಮವ್ವೆ ಮೂಢ್ ಜೀಮ್ಗಳು. ಅಕ್ಸರಗಿಕ್ಸರ ಗೊತ್ತಿರ್ನಿಲ್ಲ. ಹಟ್ಟಿತುಂಬ ಹೈಕಮಕ್ಳು. ಆರ್ ಎಕ್ರೆ ಹೊಲಯಿತ್ತು. ಮಳೆ ಇಲ್ದೆ ಬೆಳೆಯಿಲ್ಲ. ನಮ್ಮಪ್ಪಂಗೆ ಮೂರ್ ಜನ ಗಂಡ್ ಮಕ್ಕ, ನಾಕ್ ಜನ ಹೆಣ್ ಮಕ್ಕ. ನನ್ತಮ್ಮ ಒಬ್ಬ ಕುಂಟ. ನಾನೊಬ್ನೀಯೆ ಹೊಲ ನೋಡ್ಬೇಕಿತ್ತು. ನಾಮು ಸಣ್ಣವರಾಗಿದ್ದಾಗ ನಮ್ಮಪ್ಪ ಮಾದೇಸ್ವರ ಮಂಟೇಸ್ವಾಮಿ ಬಿಳಿಗಿರಿ ರಂಗಪ್ಪನ ಕತೆಗಳನ್ನ ಹೇಳನು. ಆಗ ಹಳ್ಳಿ ಮ್ಯಾಲೆ ಗುಡ್ಡರು ದಾಸಯ್ಗಳು ಬರರು. ನಾನೂವಿ ಪದ ಹಾಡದ್ನ ಕಲಿಬೇಕಲ್ಲ ಅಂದ್ಕಂಡು ನನ್ ವಾರ್ಗೆಯವರ್ ಜೊತೆ ಹೇಳ್ಕಂಡಿ. ಇಲ್ಲೀಯೆ ಹತ್ತಿರ್ದಲ್ಲಿ ಕೃಷ್ಣಾಪುರ ಕಾಳಾವರದ ಸಿದ್ಸೆಟ್ರು ಅಂತ ಅವರೆ, ಅವ್ರು ಕಲಿಸ್ಕೊಡ್ತಾರಂತೆ ಅಂತ ಪ್ರೆಂಡ್ಗಳು ಹೇಳುದ್ರು ಅನ್ನಿ. ಅವ್ರು ನಾನು ಎಲ್ಲಿಗೆ ಪದ ಹೇಳಕೆ ಹೋಯಿತೀನೋ ಅಲ್ಲಲ್ಲಿಗೆ ಬಂದು ಕಲ್ತಕಾ ಬೇಕು ಅಂದ್ರು. ನಮ್ಮ ಗುರ್ಗಳು ನೀಲಗಾರರು. ಹೆಗಲಿಗೆ ತಂಬೂರಿ ಏರಿಸ್ಕಂಡು ಕುಂತ್ಬುಟ್ರೆ ಕಂಟಿನೀಸ್ ಆಗಿ ಮೂರ್ ರಾತ್ರಿ ಹಾಡೋರು. ನಮ್ಮಪ್ಪ ಹೇಳ್ತಿದ್ದ ಕತೆಗೆ ಮ್ಯಾಚ್ ಆಗದು. ನಮ್ಮೂರು ದೊಡ್ಮೋಳೆಗೆ ಬಂದ್ರೆ ತಿಂಗ್ಳಾನ್ಗಟ್ಲೆ ಉಳ್ಕಳರು. ಅವ್ರ ಹಿಂದ್ಗುಂಟ ಬಿಕ್ಸ ಮಾಡಕೆ ಹೋಗ್ಬೇಕಿತ್ತು. ಇವ್ರ ಹತ್ರ ಕತೆ ಕಲಿತಿರೋರೆಲ್ಲ ದಿನಕ್ಕೆ ಒಬ್ಬೊಬ್ಬರು ನಮ್ಮ ಗುರುಗಳಿಗೆ ಬೀಡಿ, ಕಾಪಿ, ತಿಂಡಿ ಕೊಡಿಸ್ಬೇಕಿತ್ತು.
ಎಳೆದ್ರಲ್ಲಿಯೇ ಈ ಕತೆಯೆಲ್ಲ ಕೇಳಿದ್ನಲ್ಲ ಬಿರ್ ಬಿರ್ನೆ ಪದಯೆಲ್ಲ ಕಲ್ತಿ. ಇಸ್ಕೂಲ್ ಮುಕಾನೇ ನೊಡ್ನೇ ಇಲ್ಲಾ ನಾನು. ಅಪ್ಪ ಇಂವ ಇಸ್ಕೂಲ್ ಗಿಸ್ಕೂಲ್ಗೆ ಹೋಗದಿಲ್ಲ, ಪದ ಹಾಡದೇ ಇವ್ನ ಬದುಕು ಅಂತ ನಿಚ್ಚಯಿಸ್ಕಂಡು ಬುಟ್ಟಿದ್ರು. ಎಳೆದ್ರಲ್ಲೆ ನಂಗೆ ಸಿದ್ದಪ್ಪಾಜಿ ಗುಡ್ಡನ್ನ ಬುಡುಸ್ಬುಟ್ಟಿದ್ರು. ನಂತ್ರ ಇದೇ ನಂಗೆಬದುಕಾಗೋಯ್ತು. ಮನೆ ತುಂಬ ಮಕ್ಕ ಎಲ್ಲರ್ಗೂವಿ ಮದುವೆ ಮಾಡ್ಬೇಕು ಅಂತ ನಮ್ಮಪ್ಪ ಕಷ್ಟಪಟ್ ಇಟ್ಟಿದ್ದ ತುಂಡು ಭೂಮಿ ನಮ್ಮ ಕಷ್ಟಕ್ಕೆ ಕರಗಿಯೋಯ್ತು. ನಮ್ ಗುರುಗಳು ಹೇಳ್ಕೊಟ್ಟ ಕತೆ ನನ್ನ ಕೈಹಿಡೀತು. ನನ್ನ ಮಕ್ಕಳನ್ನ ಅಷ್ಟು ಇಷ್ಟು ಓದಿಸ್ದಿ. ಮದುವೆ ಮಾಡ್ದಿ’ ಹೀಗೆ ಹೇಳುತ್ತಲೇ ಗದ್ಗದಿತರಾದ ಗವಿ ಬಸಪ್ಪ ತನ್ನ ಆದ್ಯ ನೀಲಗಾರ ಮಂಟೇದನನ್ನು ನೆನೆಸಿಕೊಂಡರು.
ಬಡತನವನ್ನೇ ಬಾಳಿ ಬದುಕಿದ ಬಸಪ್ಪ ಹೊಟ್ಟೆ ಬಟ್ಟೆಗೆ ತತ್ವಾರವಿಲ್ಲದೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಮಾತಾಡುತ್ತಲೇ ಅನುಭಾವಿಯಂತೆ ಕಾಣತೊಡಗಿದರು. ತಾತ್ವಿಕ ವಿಚಾರಗಳು ನಿರರ್ಗಳವಾಗಿ ಹರಿಯತೊಡಗಿತು. ಹೆಗಲಿಗೇರಿದ ತಂಬೂರಿ, ಎಡಗೈನ ತೋರುಬೆರಳು ಹೆಬ್ಬೆರಳಿನಲ್ಲಿದ್ದ ನುಡಿಯುತ್ತಿದ್ದ ಕಂಚಿನ ಗಗ್ಗರ, ಬಲಗೈನ ತೋರುಬೆರಳಲ್ಲಿದ್ದ ನತ್ತು ಇವೆಲ್ಲವೂ ಬಸಪ್ಪನವರ ಕಂಠಕ್ಕೆ ಒದಗಿ ತಮಗೆ ತಾವೇ ನುಡಿಯುತ್ತಿದ್ದವು.
ಹಾಡಿಗಲ್ಲದೆ ಮಾತು ಮಾತಿಗೂ ತಂಬೂರಿ ತಂತಿ ನಾದ ಹೊಮ್ಮಿಸುತ್ತಿತ್ತು. ಒಂದು ಬಗೆಯಲ್ಲಿ ಬಸಪ್ಪನವರ ಬದುಕು ನಾದಮಯವೇ ಆಗಿತ್ತು ಎಂಬುದನ್ನು ಧ್ವನಿಸುತ್ತಿತ್ತು. ಅನುಭಾವಿಯಂತೆ ಮಾತನಾಡುತ್ತ ಅರಿವಿಲ್ಲದೆ ತಂಬೂರಿ ತಂತಿಯನ್ನುಮೀಟುತ್ತಲೇ ತನ್ನ ಬದುಕಿನ ಏಳುಬೀಳುಗಳನ್ನು ಅರುಹತೊಡಗಿದ ಬಸಪ್ಪ ತನ್ನ ಕ್ವಾರಣ್ಯದ ಕತೆಯನ್ನು ಮುಂದುವರಿಸಿದರು.
‘ನಾನು ತಂಬೂರ್ಯ ಹೊತ್ಕಂಡು ಊರೂರ್ ಅಲೆದಿವ್ನಿ. ಜನ ಕೊಟ್ಟ ರಾಗಿ, ಜ್ವಾಳ, ಅಕ್ಕಿ, ಅಸಿಟ್ಟಿಂದ ಏಡೊತ್ತು ಊಟ ಮಾಡಿವ್ನಿ. ಏನೂ ಇಲ್ದೆ ಇದ್ದಾಗ ನನ್ನ ಜೊತೆ ನನ್ ಹೆಡ್ತಿ ಮಕ್ಕಳ್ನೂವಿ ಉಪವಾಸ ಕೆಡ್ಗಿವ್ನಿ. ಏಟೇ ಕಷ್ಟ ಆದ್ರೂವಿ ನಾನು ಹಾಡದ್ ಮಾತ್ರ ಬಿಡ್ನಿಲ್ಲ. ಗುರುಗಳು ಕೊಟ್ಟ ಜೋಳ್ಗೆ ಇವತ್ತೂವೆ ಸೈತ ಬರ್ದಾಗಿಲ್ಲ. ಇನ್ನೂ ನಾಕ್ ಜನಕ್ಕೆ ಊರೂರ್ ತಿರ್ಗಿ ಒಪ್ಪೊತ್ತು ಊಟ ಹಾಕೋ ಧೈರ್ಯ ಅದೆ. ಆ ಪರಂಜ್ಯೋತಿ ನಮ್ಮ ಕೈಬಿಡ್ದೆ ಇಲ್ಲಿಗಂಟ ನಡಿಸ್ಕಂಡ್ ಬಂದವ್ನೆ. ಇದು ನನ್ ತಲೆಗಿಯೇ ತೀರ್ ಹೋಗ್ಬಾರ್ದು ಅಂತ ನನ್ ಮಗನ್ಗೂವಿ ಕಲಿಸಿವ್ನೀನಿ. ಅವ್ನೂವೇ ಚೂರು ಪಾರು ಕತೆ ಮಾಡ್ತಾನೆ. ಅದೇ ನನಗೆ ಸಮಾಧಾನ. ನಾನು ಸುಮ್ನೆ ಕೂರಕಿಲ್ಲ. ಯಾರಾದ್ರೂ ಸತ್ರೆ ರಾತ್ರಿ ಕತೆಗೆ ಕರಿತಾರೆ, ಹಂಗಿಯೇ ತಿಥಿ ಕತೆಗೂ ಕರಿತಾರೆ. ಕರ್ದವ್ರೂ ತುಂಬಾ ಗೌರವದಿಂದ ನಡಿಸ್ಕಾತಾರೆ. ಹಿಂಗೆ ಹೊಟ್ಟೆಪಾಡು ನಡೀತಾ ಅದೆ.’
ಹೀಗೆ ಶ್ರುತಿ ತಪ್ಪದ ಅಭಿವ್ಯಕ್ತಿಯಲ್ಲಿ ತಲ್ಲೀನರಾಗಿದ್ದ ಬಸಪ್ಪನವರ ಮಾತು ಕೂಡ ಕಾವ್ಯಾತ್ಮಕ ಪರಿವೇಷದಲ್ಲಿತ್ತು. ಮತ್ತಷ್ಟು ಹಾಡುವ ಉಮೇದಿತ್ತು. ನೀಲಗಾರ ಪರಂಪರೆಯ ಹಿರಿಯ ಗಾಯಕ ಗವಿ ಬಸಪ್ಪ ಅವರ ದೇಸಿ ಪ್ರತಿಭೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ಸೇರಿದಂತೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ
” ಕಾಲ ಬದಲಾಗದೆ. ತಂಬೂರಿ ಹಿಡ್ಕಂಡು ಹಾಡುದ್ರೆ, ಜಾಸ್ತಿ ಜನ ಕೇಳಲ್ಲ. ಅದ್ಕಿಯೇ ನಾನೂವೆ ಕೀಬೋರ್ಡು, ತಪಲ, ಡೋಲಕ್ಕು ಹಾಕ್ಕಂಡು ಹಾಡ್ತೀವ್ನಿ. ಆದ್ರೂವಿ ನಂಗೆ ತಂಬೂರಿಜೊತೆ ಹಾಡದ್ರಲ್ಲೆ ಸುಖ. ತಂಬೂರಿ ಜೊತೆಲಿದ್ರೆ ನಂಗೆ ಜೀಮ ಇದ್ದಂಗೆ. ತಂಬೂರಿ ತಂತ್ಯ ಸ್ರುತಿ ಮಾಡ್ಕಂಡು ನಾನು ಕುಂತ್ರೆ ನನ್ನನ್ನೆ ನಾನು ಮರ್ತ್ಬುಡ್ತೀನಿ. ನಮ್ಮಪ್ಪ ಸಿದ್ದಪ್ಪಾಜಿ, ಮಾದಪ್ಪನ ಕತೆ ಮಾಡ್ತಾಯಿದ್ರೆ ನನ್ ಎದೆಯೊಳಗೆ ದೀಪಉರ್ದಂಗೆ ಆಯ್ತದೆ.ಡೆಲ್ಲಿ, ಕಲ್ಕತ್ತಾ, ಬಾಂಬೆ ಇಲ್ಲೆಲ್ಲಾ ಹಾಡಿವ್ನಿ. ಅಲ್ಲಿರೋ ನಮ್ ಜನ ತುಂಬಾ ಸಂತೋಷ ಪಟ್ಟವರೆ. ನನ್ ಜೀಮ ಆರೋಗೋವರ್ಗೂವಿ ಹಾಡ್ತಾನೆ ಇರ್ತೀನಿ”
– ಡಾ.ಮೈಸೂರು ಉಮೇಶ್





