Mysore
21
overcast clouds
Light
Dark

ಕಲ್ಪವೃಕ್ಷವ ನಂಬಿದ ಕಾಯಕ ಲಾಭದಾಯಕ

ತೆಂಗು ಮೌಲ್ಯವರ್ಧನೆ ಮಾಡಿ ಕೋಕೋ ಕೇವ್ ಎಂಬ ನವೀನ ಕಿರು ಉದ್ಯಮ ಸ್ಥಾಪನೆ

ತೆಂಗು ಬಹುಉಪಯೋಗಿ. ಇದರಿಂದ ತಯಾರಾಗುವ ಪ್ರತಿಯೊಂದು ಪದಾರ್ಥಗಳೂ ನಿತ್ಯ ಬದುಕಿಗೆ ಅತ್ಯವಶ್ಯಕ. ಇಂತಿಪ್ಪ ಕಲ್ಪವೃಕ್ಷದಿಂದ ಸಾಕಷ್ಟು ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ಅವುಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಂಡರೆ ಖಂಡಿತ ಲಾಭದಾಯಕ ಎನ್ನುವುದಕ್ಕೆ ಮೈಸೂರಿನಲ್ಲಿ ‘ಕೋಕೋ ಕೇವ್’ ಒಳ್ಳೆಯ ಉದಾಹರಣೆ.

ಮೈಸೂರಿನ ರಮಾನುಜ ರಸ್ತೆಯಲ್ಲಿ ಅಡ್ಡಾಡಿದರೆ ‘ಕೋಕೋ ಕೇವ್’ ಎನ್ನುವ ಹಸಿರಾದ ಮಳಿಗೆ ಕಾಣಸಿಕ್ಕುತ್ತದೆ. ೯ ತಿಂಗಳ ಹಿಂದಷ್ಟೇ ಶುರುವಾದ ಈ ನವೀನ ಮಳಿಗೆ ಈಗ ಹೆಚ್ಚು ಮಂದಿಯನ್ನು ಆಕರ್ಷಿಸಿ ಮುನ್ನಡೆಯುತ್ತಿದೆ. ಇದಕ್ಕೆ ಮುಖ್ಯವಾದ ಕಾರಣ ಎಳನೀರು ಮತ್ತು ಅದರ ಉಪ ಉತ್ಪನ್ನಗಳು. ಇದನ್ನು ಮುನ್ನಡೆಸುತ್ತಿರುವುದು ದಿನೇಶ್ ಮತ್ತು ಕುಟುಂಬ.

ಎಳನೀರಿನಿಂದ ಏಳು ಬಗೆಯ ತಿನಿಸು

ಬೇಸಿಗೆ ಹೊಸ್ತಿಲಲ್ಲಿ ನಿಂತಿರುವ ಈ ಸಮಯದಲ್ಲಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ಅದೇ ರೀತಿ ಕೋಕೋ ಕೇವ್‌ನಲ್ಲಿ ಎಳನೀರಿನಿಂದಲೇ ತಯಾರಿಸಿದ ಐಸ್‌ಕ್ರೀಮ್, ಎಳನೀರು ಕ್ರಶ್, ಎಳನೀರು ಕೂಲರ್, ಸ್ಕೂಪ್, ಕೋನ್, ಫುಡ್ಡಿಂಗ್‌ಗಳು ಎಲ್ಲರ ಮೆಚ್ಚುಗೆ ಗಳಿಸಿವೆ. ಆ ಮೂಲಕ ಹೊಸದಾಗಿ ಆರಂಭವಾದ ಉದ್ದಿಮೆ ಭರವಸೆ ಮೂಡಿಸಿದೆ.

ಕುಟುಂಬದ ನಿರ್ವಹಣೆ

ದಿನೇಶ್ ಅವರು ಹೆಂಡತಿ ಮಕ್ಕಳು, ಇಬ್ಬರು ಕೆಲಸದ ಆಳುಗಳನ್ನು ಒಟ್ಟಾಗಿಸಿಕೊಂಡು ಎಳನೀರಿನಿಂದ ಏಳು ಬಗೆಯ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರು ಮಾಡುತ್ತಿದ್ದಾರೆ. ಇದಕ್ಕೆ ಬೇಕಾದ ಅಗತ್ಯ ಯಂತ್ರೋಪಕರಣಗಳನ್ನು ತರಿಸಿಕೊಂಡಿರುವ ಇವರು ಸ್ಥಳೀಯವಾಗಿ ದಿನವೂ ಎಳನೀರು ತರಿಸಿಕೊಂಡು ಐಸ್‌ಕ್ರೀಮ್, ಎಳನೀರು ಕ್ರಶ್, ಎಳನೀರು ಕೂಲರ್, ಸ್ಕೂಪ್, ಕೋನ್, ಫುಡ್ಡಿಂಗ್‌ಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಒಳ್ಳೆಯ ರುಚಿ ಮತ್ತು ಕೈಗೆಟಕುವ ಬೆಲೆ ನಿಗದಿ ಮಾಡಿರುವುದರಿಂದ ಕೋಕೋ ಕೇನ್‌ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕುತ್ತಿದೆ.

ಕೊರೋನಾ ವೇಳೆಯಲ್ಲಿ ಹುಟ್ಟಿದ ಆಲೋಚನೆ

ಹಲವಾರು ಮಂದಿಯ ಉದ್ಯೋಗ ನಷ್ಟಕ್ಕೆ ಕೊರೋನಾ ಕಾರಣ. ಹಾಗೆಯೇ ಕೆಲವಾರು ಮಂದಿ ಹೊಸ ಉದ್ದಿಮೆ, ಹೊಸ ಸಾಹಸದತ್ತ ಮುಖ ಮಾಡಲು ಇದೇ ಕೊರೋನಾ ಕಾರಣ. ಇಂಜಿನಿಯರಿಂಗ್ ಮಾಡಿದ್ದ ಮಗ ಕೊರೋನಾ ವೇಳೆಯಲ್ಲಿ ಮನೆಯಲ್ಲಿಯೇ ಬಂಧಿಯಾದಾಗ ಏನಾದರೂ ಹೊಸದಾಗಿ ಮಾಡಬೇಕು ಎಂದು ದಿನೇಶ್ ಅವರ ಕುಟುಂಬ ನಿರ್ಧರಿಸುತ್ತದೆ. ಆಗ ವಿವಿಧ ಆಲೋಚನೆಗಳು ಸುಳಿದು ಹೋಗುತ್ತವೆ. ಪರಿವರ್ತ ಹಣ್ಣುಗಳನ್ನು ಬಳಸಿಕೊಂಡು ನೈಸರ್ಗಿಕವಾಗಿ ಐಸ್‌ಕ್ರೀಮ್ ತಯಾರು ಮಾಡಬೇಕು ಎಂದು ಮೊದಲಿಗೆ ಅಂದುಕೊಳ್ಳುತ್ತಾರೆ. ಆದರೆ ಮುಂದೆ ದಾರಿ ಬದಲಾಗಿ ಒಂದೇ ವಸ್ತುವನ್ನು ಗುರಿಯಾಗಿಸಿಕೊಂಡು ಅದರಿಂದಲೇ ಬೇರೆ ಬೇರೆ ರೀತಿಯ ಉತ್ಪನ್ನಗಳನ್ನು ತಯಾರು ಮಾಡಬೇಕು ಎಂದುಕೊಂಡು ಎಳನೀರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಮನೆಯೇ ಮಳಿಗೆಯಾಯ್ತು

ಎಳನೀರನ್ನು ಕೇಂದ್ರವಾಗಿಟ್ಟುಕೊಂಡು ಉದ್ದಿಮೆ ಶುರುಮಾಡಿದ ಮೇಲೆ ಸೂಕ್ತ ಸ್ಥಳದ ಹುಡುಕಾಟ ನಡೆಯಿತು. ಬೇರೆ ಕಡೆಗಳಲ್ಲಿ ಬಾಡಿಗೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ರಮಾನುಜ ರಸ್ತೆಯಲ್ಲಿ ಇರುವ ಮನೆಯ ಒಂದು ಭಾಗವನ್ನೇ ಮಳಿಗೆಯನ್ನಾಗಿ ಪರಿವರ್ತಿಸಲಾಯಿತು. ಆಗ ನಮ್ಮ ಮನಸ್ಸಿನಲ್ಲಿ ಇದ್ದದ್ದು ಒಳ್ಳೆಯ ಸೇವೆ, ಗುಣಮಟ್ಟದ ತಿನಿಸುಗಳನ್ನು ನೀಡಿದರೆ ಗೆಲುವು ಸಿಗುತ್ತದೆ ಎನ್ನುವುದು. ಈಗ ನಮ್ಮ ಪ್ರಯತ್ನಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತಿದೆ. ಮುಂದೆ ಬೇಸಿಗೆ ಬರುವುದರಿಂದ ಮತ್ತಷ್ಟು ಬೆಳವಣಿಗೆ ಆಗಬಹುದು ಎನ್ನುವ ಅಂದಾಜಿದೆ ಎನ್ನುವುದು ದಿನೇಶ್ ಅವರ ವಿಶ್ವಾಸ.

ಈಗ ಆರೋಗ್ಯ ಚೆನ್ನಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಎಳನೀರಿಗೆ ಹೆಚ್ಚಿನ ಬೇಡಿಕೆ ಇದೆ. ನಾವು ಎಳನೀರಿನ ಮೌಲ್ಯವರ್ಧನೆ ಮಾಡಿದ್ದೇವೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು, ಎಲ್ಲ ವಯೋಮಾನದವರೂ ನಮ್ಮಲ್ಲಿಗೆ ಬರುತ್ತಿದ್ದಾರೆ. ಒಳ್ಳೆಯ ಗುಣಮಟ್ಟ ಮತ್ತು ಕಡಿಮೆ ದರ ಇರುವುದರಿಂದ ಉದ್ಯಮ ಚೆನ್ನಾಗಿ ನಡೆಯುತ್ತಿದೆ. – ದಿನೇಶ್, ಮಾಲೀಕರು, ಕೋಕೋ ಕೇವ್

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ