ಜಹಂಗೀರ್ ರತನ್ ಜೀ ದಾದಾಬಾಯ್ ಟಾಟಾ ಅರ್ಥಾತ್ ಜೆಆರ್‌ಡಿ ಟಾಟಾ ದೇಶ ಕಂಡ ಯಶಸ್ವಿ ಉದ್ಯಮಿ. ಟಾಟಾ ಎನ್ನುವ ದೊಡ್ಡ ಸಾಮ್ರಾಜ್ಯವನ್ನು ೫೩ ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಉದ್ಯಮ ಸಾಹಸಿ. ಯುವಕರ ಪಾಲಿನ ದೊಡ್ಡ ಸ್ಫೂರ್ತಿ.
ಜು.೨೯ರಂದು ಹುಟ್ಟಿದ ಜೆಆರ್‌ಡಿ ಹುಟ್ಟು ಶ್ರೀಮಂತ ಹೌದು. ದೊಡ್ಡ ಕುಟುಂಬದ ಕುಡಿ. ರಾಶಿ ರಾಶಿ ಅವಕಾಶಗಳು ಮುಂದಿದ್ದಾಗ ಏನು ಬೇಕಾದರೂ ಸಾಧಿಸಬಹುದು ಎನ್ನುವುದು ಸರಿಯಾದರೂ, ಅಷ್ಟು ದೊಡ್ಡ ಸಂಸ್ಥೆಯನ್ನು ಮತ್ತಷ್ಟು ವಿಸ್ತಾರವಾಗಿ ಕಟ್ಟಿ ಬೆಳೆಸುವ ಕಾರ್ಯಕ್ಕೆ ಗೌರವ ಸಲ್ಲಲೇಬೇಕು.
ತಮ್ಮ ೨೧ನೇ ವಯಸ್ಸಿಗೆ ಜವಾಬ್ದಾರಿ ಹೊತ್ತುಕೊಂಡ ಆರ್‌ಜೆಡಿ ಟಾಟಾ ಟೀ, ಟೈಟಾನ್, ಟಾಟಾ ಏರ್‌ಲೈನ್ಸ್, ಟಾಟಾ ಮೋಟಾರ್ಸ್, ವೋಲ್ಟಾಸ್ ರೀತಿಯ ಹೆಸರಾಂತ ಉದ್ಯಮಗಳನ್ನು ಆರಂಭಿಸಿದವರು. ಆ ಮೂಲಕ ದೇಶದ ದೊಡ್ಡ ಯುವ ಸಮುದಾಯಕ್ಕೆ ಉದ್ಯೋಗದ ಬಾಗಿಲು ತೆರೆದವರು. ಒಂದು ಹಂತದಲ್ಲಿ ನಷ್ಟದ ಸುಳಿಗೆ ಜಾರುತ್ತಿದ್ದ ಸಂಸ್ಥೆಯನ್ನು ಲಾಭದ ಹಳಿಗೆ ಮರಳಿಸಿದ ಆರ್‌ಜೆಡಿ ಜೀವನ ಚರಿತ್ರೆಯ ಅಧ್ಯಯನವೇ ಒಂದು ಸಿಲಬಸ್. ಉಕ್ಕಿನ ಉತ್ಪಾದನೆಯಿಂದ ಆರಂಭವಾದ ಸಂಸ್ಥೆಯನ್ನು ಸೋಪು, ಶ್ಯಾಂಪೂ ಸೇರಿ ಎಲ್ಲ ಬಗೆಯ ವಸ್ತುಗಳನ್ನು ಉತ್ಪಾದಿಸುವ, ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡುವ ಮಟ್ಟಕ್ಕೆ ಕೊಂಡೊಯ್ದ ಅವರ ಬದ್ಧತೆ ಸಲಾಂ.