Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

‘ಕಾದಂಬರಿಯಲ್ಲಾದರೂ ಪ್ರೇಮವನ್ನು ಗೆಲ್ಲಿಸು’ ಎಂದವನೇ ನಿಮಿಷಗಳ ಕಾಲ ಮೌನವಾಗಿದ್ದು ಫೋನಿಟ್ಟ

ಅವಳ ಕೋಪದ ಕಟ್ಟೆಯೊಡೆದು, ‘ಕತ್ತೆ, ಇಲ್ಲಿ ಕಾದಂಬರಿಯ ಪಾತ್ರಗಳನ್ನು ಕಟ್ಟಿಹಾಕಲಾರದೇ ನಾನು ಪಡಿಪಾಟಲು ಪಡುತ್ತಿದ್ದರೆ ಇವನದು ಕಂಗ್ರಾಟ್ಸ್ ಅಂತೆ. ಮೊದಲು ಕಥೆ ಮುಗಿಸೋದು ಹೇಗೆ ಹೇಳು? ಮತ್ತೆ ಉಳಿದೆಲ್ಲ ಮಾತು’ ಎಂದು ಅಬ್ಬರಿಸಿದಳು. ಗೌರವ ತಣ್ಣಗೆ ನುಡಿದ, ‘ಲೋಕ ಹೇಳಿದಂತೆಲ್ಲ ಕೇಳಲು ಪಾತ್ರಗಳೇನು ನಾನು, ನೀನೆ? ಅಷ್ಟಕ್ಕೂ ಬದುಕಿಗೆ ಒಂದು ಅಂತ್ಯ ಅಥವಾ ಒಂದೇ ಅಂತ್ಯ ಅಂತ ಯಾಕಿರಬೇಕು? ನಿಧಾನವಾಗಿ ಪಾತ್ರಗಳ ಪಿಸುದನಿಯನ್ನು ಕೇಳಿಸಿಕೊ. ನಿನಗೇ ಎಲ್ಲವೂ ಹೊಳೆಯುತ್ತವೆ. ಆದರೆ ನೆನಪಿಟ್ಟುಕೋ, ಕಾದಂಬರಿಯಲ್ಲಾದರೂ ಪ್ರೇಮವನ್ನು ಗೆಲ್ಲಿಸು’ ಎಂದವನೇ ನಿಮಿಷಗಳ ಕಾಲ ಮೌನವಾಗಿದ್ದು ಫೋನಿಟ್ಟ.

ಕೊನೆಯ ಕಂತು

-ಸುಧಾ ಆಡುಕಳ preesugathu@gmail.com

‘‘ಆಗಿಂದ ಫೋನ್ ಹೊಡಕೋತಿದೆ. ಯಾರು ಎಂದು ನೋಡಬಾರದಾ?’’ ಕಾದಂಬರಿಯ ಬರವಣಿಗೆಯಲ್ಲಿ ಮುಳುಗಿಹೋಗಿದ್ದ ಮಹಿಮಾಳನ್ನು ಮಗನೊಂದಿಗೆ ವಾಕಿಂಗ್ ಮುಗಿಸಿ ಬಂದ ಮಧು ಎಚ್ಚರಿಸಿದ. ‘‘ಅಲ್ಲಿ ಫೋನ್ ಹೊಡ್ಕೋತಿದೆ, ಇಲ್ಲಿ ನನ್ನ ಕಾದಂಬರಿಯ ಪಾತ್ರಗಳು ಹೊಡ್ಕೋತಿವೆ. ಯಾರನ್ನು ಅಂತ ಗಮನಿಸೋದು? ಒಂಚೂರು ನೀನೇ ಎತ್ತಿ ಮಾತಾಡು ಮಾರಾಯ’’ ಎಂದಳು ಮಹಿಮಾ. ಪುಟ್ಟನ ಕೈಕಾಲು ತೊಳೆಸುತ್ತಿದ್ದ ಮಧು ಅವಳನ್ನು ದುರುಗುಟ್ಟಿ ನೋಡುತ್ತಾ ಹೇಳಿದ, ‘‘ನಮಸ್ಕಾರ ಮಾರಾಯ್ತಿ. ನಿನ್ನ ಫೋನಲ್ಲಿ ನಾನು ಮಾತಾಡೋದುಂಟಾ? ನಿನ್ನೆ ಕಳಿಸಿದ ಕಥೆ ಹೀಗಿದೆ, ನಾಳೆ ಕಳಿಸಬೇಕಾದ ಕವನ ಹೀಗಿರಲಿ ಅಂತ ಆಚೆಯಿಂದ ಶುರುಮಾಡಿಬಿಡ್ತಾರೆ ನಿನ್ನ ಸಂಪಾದಕರು. ಇನ್ನು ನಿನ್ನ ಅಭಿವಾನಿಗಳಂತೂ ನಾನವಳಲ್ಲ ಅಂದರೂ ಬಿಡದೇ ಮೇಡಂಗೆ ಹೀಗೆ ಹೇಳಿ, ಹಾಗೆ ಹೇಳಿ ಅಂತ ಪುರಾಣವನ್ನೇ ಶುರುಮಾಡ್ತಾರೆ. ಅದಕ್ಕಿಂತ ಪುಟ್ಟನ ಹೋಮ್ ವರ್ಕ್ ಮಾಡಿಸೋದು ಎಷ್ಟೋ ವಾಸಿ’’ ಎನ್ನುತ್ತಾ ಮಗನ ಕೈಹಿಡಿದು ಮಾಳಿಗೆಯ ಮೇಲಿರುವ ಓದುವ ಕೋಣೆಗೆ ನಡೆದ. ಮತ್ತೂ ಫೋನು ಎಡಬಿಡದೇ ಕರೆಯುತ್ತಿರಲಾಗಿ ಬರೆಯುತ್ತಿದ್ದ ಪುಟ ಮಡಚಿಟ್ಟು ಫೋನ್ ಎತ್ತಿದಳು. ಆಚೆಯಿಂದ ದೊಡ್ಡ ಸ್ವರದಲ್ಲಿ ವಿಶ್ವನಾಥರಾರು ಮಾತನಾಡತೊಡಗಿದರು. ಎಂಬತ್ತರ ಹರಯದ ಅವರಿಗೆ ಕಿವಿ ಮಂದವಾಗಿದ್ದರಿಂದ ತನ್ನಂತೆ ಪರರೆಂದು ಬಗೆದು ಕಿವಿಯ ತಮಟೆ ಹಾರಿಹೋಗುವಷ್ಟು ಜೋರಾಗಿ ಮಾತನಾಡುತ್ತಿದ್ದರು. ‘‘ಹೋಯ್‌ ಮೇಡಂ, ಎಲ್ಲಾ ಆರಾಮವೋ? ಹೇಗೆ ಸಾಗಿದೆ ನಿಮ್ಮ ಕೆಲಸಗಳೆಲ್ಲ? ಮೊನ್ನೆ ಬ್ಯಾಂಕಿಗೆ ನನ್ನ ಅಳಿಯ ಬಂದಿದ್ದನಂತೆ. ನೀವು ಹಣ ಎಣಿಸುವುದರಲ್ಲಿ ಬಿಜಿಯಿದ್ದಿರೆಂದು ಮಾತನಾಡಿಸಲಿಲ್ಲ ಅಂದ. ಈಗೀಗ ಬ್ಯಾಂಕಿನಲ್ಲಿ ಭಾರೀ ಕೆಲಸ, ಅಲ್ಲವೊ? ಮತ್ತೆ ಅವರಿವರಲ್ಲಿ ಮಾತಾಡುತ್ತ ಒಂದು ನೋಟು ಜಾರಿದರೆ ಸಂಬಳಕ್ಕೆ ಕೊಕ್ಕೆ’’ ಎಂದವರೇ, ತಮ್ಮ ಮಾತಿಗೆ ತಾವೇ ಕ್ಕೊಕ್ಕೊಕ್ಕೋ ಎಂದು ನಗುತ್ತಾ ಮಾತು ಮುಂದುವರಿಸಿದರು. ಕಾದಂಬರಿಯ ಲೋಕದಿಂದ ಲೌಕಿಕಕ್ಕಿಳಿಯಲು ನಿರಾಕರಿಸುವ ಮನಸ್ಸನ್ನು ಸಂಭಾಳಿಸುತ್ತ ಮಹಿಮಾ ಅವರ ಪ್ರಶ್ನೆಗಳಿಗೆ ಚುಟುಕು ಉತ್ತರಗಳನ್ನಷ್ಟೆ ನೀಡಿದಳು. ರಾಯರು ಅವಳ ಉತ್ತರಕ್ಕೆ ಕಾಯದೆ ಪ್ರಶ್ನೆಯ ಕೊನೆಯಲ್ಲಿ ಉತ್ತರವನ್ನೂ ತಾವೇ ಹೇಳಿಕೊಳ್ಳುತ್ತಿದ್ದರು. ರಾಯರು ಅವಳ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು, ಹತ್ತಿರದ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದವರು, ಒಳ್ಳೆಯ ತಾಳಮದ್ದಲೆಯ ಅರ್ಥಧಾರಿಗಳು. ಅನೇಕ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಊರಿನಲ್ಲಿ ಸಂಘಟಿಸುತ್ತಾ ಜನಮನ್ನಣೆಗೆ ಪಾತ್ರರಾಗಿದ್ದರು. ಅವರ ಕಲೆಯ ಪ್ರೀತಿ ಮಕ್ಕಳು, ಮೊಮ್ಮಕ್ಕಳವರೆಗೂ ಹರಿದಿತ್ತು. ಭರತನಾಟ್ಯವನ್ನು ಕಲಿಯುತ್ತಿರುವ ಮೊಮ್ಮಗಳಿಗಾಗಿ ಮಹಿಮಾ ಬರೆದ ಕಥೆಯೊಂದನ್ನು ಆರಿಸಿ ಏಕವ್ಯಕ್ತಿಯನ್ನು ಸಿದ್ಧಪಡಿಸಿದ್ದರು. ಅದರಲ್ಲಿ ಅವಳು ಅಭಿನಯಿಸುವ ಅಂಬೆಯ ಪಾತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದುಬಂದಿದ್ದವು. ‘‘ಈ ಭರತನಾಟ್ಯದವರಿದ್ದಾರಲ್ಲ, ಭಯಂಕರ ಒಳ್ಳೆಯ ಅಭಿನಯವನ್ನು ಕಲಿಸ್ತಾರೆ. ಆದರೆ ಎಂಥ ಗೊತ್ತುಂಟಾ? ಅವರ ಪ್ರಯೋಗದ ಪದ್ಯಗಳೆಲ್ಲ ಅದ್ಯಾವುದೋ ಅರ್ಥವಾಗದ ಭಾಷೆಯಲ್ಲಿರ‌್ತದೆ ಮಾರಾಯ್ರೆ. ಹಾಗಾಗಿ ಅವರ ಮುಖಭಾವ, ಕಣ್ಣಿನ ಚಲನೆ, ಹಸ್ತಾಭಿನಯಗಳಿಂದ ಕಥೆಯನ್ನು ಅರ್ಥ ಮಾಡಿಕೊಳ್ಳೋದರಲ್ಲಿ ಸಾಮಾನ್ಯ ಪ್ರೇಕ್ಷಕರಿಗೆ ಸಾಕುಸಾಕಾಗ್ತದೆ. ಹಾಗಂತ ನಾನು ಕಲೆಯನ್ನು ದೂರುತ್ತಿದ್ದೇನೆ ಅಂದುಕೊಳ್ಳಬೇಡಿ. ಅದರ ಆಳ, ಅಗಲ ಅರಿತವರಿಗೆ ಎಲ್ಲ ಚಂದ ಅರ್ಥವಾಗ್ತದೆ. ನಮ್ಮಂಥ ಸಾಮಾನ್ಯರ ಪಾಡಿನ ಬಗ್ಗೆ ಹೇಳಿದ್ದು ನಾನು. ಎಲ್ಲ ಕಲೆಯೂ ಹಾಗೇ ಅಲ್ಲವೊ? ರಾಮಾಯಣ, ಮಹಾಭಾರತ, ಭಾಗವತದ ಗಂಧಗಾಳಿಯಿಲ್ಲದವರು ನಮ್ಮ ತಾಳಮದ್ದಲೆಗೆ ಬಂದು ಕುಳಿತರೆ ಹೇಗಾದೀತು ಹೇಳಿ? ವಿಷಯ ಅದಲ್ಲ, ಈಗ ನನ್ನ ಮೊಮ್ಮಗಳಿಗೆ ಪೂರ್ಣಪ್ರಮಾಣದ ಅಭಿನಯವನ್ನು ಮಾಡಲು ಒಂದು ಆಖ್ಯಾನ ಬೇಕು. ಮೊನ್ನೆ ಪತ್ರಿಕೆಯ ವಿಶೇಷಾಂಕದಲ್ಲಿ ನಿಮ್ಮ ‘ಅಂಬೆಯ ಸ್ವಗತ’ ಎಂಬ ಕಥೆ ಓದಿದೆ. ನಂಗೆ ಬಹಳ ಹಿಡಿಸ್ತು ನೋಡಿ. ಅದನ್ನೇ ಇಟ್ಟುಕೊಂಡು ಒಂದು ಏಕವ್ಯಕ್ತಿ ಮಾಡೋಣ ಅಂತ. ಕಥೆಯಲ್ಲಿ ನಡುನಡುವೆ ಯಕ್ಷಗಾನದ ಹಾಡುಗಳ ಸಾಲುಗಳನ್ನೂ ಸೇರಿಸಿಬಿಟ್ಟಿದ್ದೀರಿ. ಆದರೆ ನಿಮ್ಮ ಅಂಬೆ ನಮ್ಮ ಯಕ್ಷಗಾನದ ಅಂಬೆಗಿಂತ ಒಂದು ತೂಕ ಹೆಚ್ಚೇ ನೋಡಿ. ಪುರಾಣ ಪಾತ್ರಗಳನ್ನು ವರ್ತಮಾನದ ನಿಕಷಕ್ಕೆ ಒಡ್ಡಿದಾಗ ಅಂತದೊಂದು ಅದ್ಭುತ ಹುಟ್ತದೆ. ನಾವೂ ತಾಳಮದ್ದಲೆಯಲ್ಲಿ ಹೀಗೆಲ್ಲ ಪ್ರಯತ್ನ ಮಾಡ್ತೇವೆ, ಆದರೆ ನಮಗೆ ಒಂದು ಚೌಕಟ್ಟು ಅಂತ ಇರ‌್ತದೆ. ಅದನ್ನು ಮುರಿದು ಹೋಗುವ ಸ್ವಾತಂತ್ರತ್ಯೃ ನಮಗಿಲ್ಲ. ನೀವು ಕಥೆಗಾರರು ಏನು ಬೇಕಾದರೂ ಮಾಡಿಬಿಡ್ತೀರಿ. ನಿಮ್ಮ ಕಥೆಯನ್ನು ಒಂದು ಅಭಿನಯ ಮಾಡೋಣ ಅಂತ. ಏನಂತೀರಿ?’’ ಎಂದು ಎದುರು ನಿಂತು ಸವಾಲು ಎಸೆಯುವಂತೆ ಕೇಳಿದ್ದರು. ತನ್ನ ಕಥೆಯೊಂದು ಪಾತ್ರವಾಗಿ ರಂಗಕ್ಕೇರುವ ವಿಷಯ ಅವಳಲ್ಲೂ ಪುಳಕ ಹುಟ್ಟಿಸಿ ಮರುಮಾತನಾಡದೇ ಒಪ್ಪಿಗೆ ಕೊಟ್ಟಿದ್ದಳು. ಮೊದಲ ಪ್ರದರ್ಶನಕ್ಕೆ ಆಹ್ವಾನಿತಳಾಗಿ ಹೋಗಿ, ಕಥೆಯೊಂದು ರಂಗದಲ್ಲಿ ಉಂಟುಮಾಡುವ ವಿಸ್ಮಯವನ್ನು ಕಣ್ತುಂಬಿಕೊಂಡು, ಸನ್ಮಾನದ ಭಾರವನ್ನು ಹೊತ್ತು ಬಂದಿದ್ದಳು. ಈಗೊಂದು ವರ್ಷದಿಂದ ಊರು, ಪರವೂರಿನಲ್ಲಿ ಅನೇಕ ಯಶಸ್ವಿ ಪ್ರದರ್ಶನಗಳಾದ ವಿವರಗಳು ಬರುತ್ತಲೇ ಇದ್ದವು. ಮೊದಮೊದಲು ಪ್ರದರ್ಶನಗಳ ನಂತರ ಫೋನ್ ಮಾಡುತ್ತಿದ್ದ ವಿಶ್ವನಾಥರಾಯರು ಇತ್ತೀಚೆಗೆ ನಿಲ್ಲಿಸಿದ್ದರು. ಒಂದೆರಡು ತಿಂಗಳ ಬಿಡುವಿನ ನಂತರ ಮತ್ತೆ ಇಂದೇ ಅವರು ಕರೆಮಾಡಿದ್ದು.

‘‘ಮೊನ್ನೆ ಹೊನ್ನೂರಿನಲ್ಲಿ ಮೊಮ್ಮಗಳ ಅಂಬೆಯಿತ್ತು ಹೋಯ್‌. ನಿಮಗೇ ಗೊತ್ತಲ್ಲ, ಹೊನ್ನೂರು ಅಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳ ದೊಡ್ಡ ಅಡ್ಡೆ. ನೋಡುಗರೆಲ್ಲ ಮಹಾನ್ ಕುಳಗಳೆ. ಆದರೆ ಇವಳು ಚೂರು ಹರಡಿಬಿಟ್ಲು ನೋಡಿ. ಇವಳ ಪ್ರದರ್ಶನದ ಮೊದಲು ಭೀಷ್ಮ ವಿಜಯ ತಾಳಮದ್ದಲೆ, ಅದರಲ್ಲಿ ನನ್ನದೇ ಪರಶುರಾಮ. ಅಪರೂಪಕ್ಕೆ ಪರಶುರಾಮನ ಅರ್ಥ ಜಪ್ಪಿಯಬಿಟ್ಟೆ ನೋಡಿ. ಮಹಾನ್ ಪಂಡಿತರೆಲ್ಲ ಅರ್ಥ ಹೇಳಿಯಾದಮೇಲೆ ಇವಳ ಅಭಿನಯ ಹೇಗಾಗ್ತದೋ ಅಂತ ಒಳಗೊಳಗೇ ಹೆದರಿಕೆಯಿತ್ತು. ಆದ್ರೆ ರೈಸಿಬಿಟ್ಲು ಹೋಯ್‌. ಅಂಬೆ ಬೆಂಕಿಗೆ ಹಾರಿದ ಮೇಲೆ ಒಂದು ಶಬ್ದ ಇದ್ರೆ ಕೇಳಿ. ಮೌನ? ಮತ್ತೆ ಚಪ್ಪಾಳೆಯೇ ಚಪ್ಪಾಳೆ. ನಿಮ್ಮ ಅಂಬೆ ಗೆದ್ದುಬಿಟ್ಲು ಮಾರಾಯ್ರೇ’’ ಎಂದವರೇ ಮತ್ತೊಮ್ಮೆ ಗಹಗಹಿಸಿ ನಕ್ಕರು. ಇವರ ಅಂಬೆಯ ಆಖ್ಯಾನ ಯಾವಾಗ ಮುಗಿಯುವುದೋ ಎಂದು ಕಾಯುತ್ತಿರುವ ಮಹಿಮಾ. ‘‘ಭಾರೀ ಖುಶಿಯಾಯ್ತ ರಾಯರೇ. ನನ್ನದೂ ಒಂದು ಅಭಿನಂದನೆಯನ್ನು ನಿಮ್ಮ ಮೊಮ್ಮಗಳಿಗೆ ಹೇಳಿಬಿಡಿ’’ ಎಂದು ಮಾತುಕತೆಯನ್ನು ಮುಗಿಸುವ ಹಂತಕ್ಕೆ ಹೋದಳು. ರಾಯರು ಮಾತ್ರ ಇನ್ನೂ ಪೀಠಿಕೆಯ ಉಮೇದಿನಲ್ಲಿದ್ದರು. ‘‘ಹಾಂ, ಈಗ ಕೇಳಿ, ಯಾಕೆ ಫೋನ್ ಮಾಡಿದ್ದು ಅಂತ. ಪ್ರದರ್ಶನವೆಲ್ಲ ಮುಗಿದ ಮೇಲೆ ಕಥೆ ಚರ್ಚೆಗೆ ಬಂತು ನೋಡಿ. ಅದೇ ನೀವು ನಿಮ್ಮ ಕಥೆಯಲ್ಲಿ ಹೇಳಿದ್ದೀರಲ್ಲ, ಭೀಷ್ಮನೊಡನೆ ನಡೆದ ಯುದ್ಧ ಸಂಧಾನದಲ್ಲಿ ಕೊನೆಗೊಂಡ ನಂತರ ಪರಶುರಾಮರು ಅಂಬೆಗೆ ಕಾಡಿಗೆ ಹೋಗಿ ತಪಸ್ಸು ಮಾಡುವಂತೆ ಹೇಳಿದರೆಂದು. ಅದರ ಬಗ್ಗೆ. ಪರಶುರಾಮರು ಹಾಗೆಲ್ಲ ಹೇಳಿದ್ದಲ್ಲವಂತೆ ಮಾರಾಯ್ರೆ. ಅಂಬೆ ತಾನೇ ತಾನಾಗಿ ಕಾಡಿಗೆ ಹೋದದ್ದಂತಲ್ಲವಾ? ವಿದ್ವಾನ್ ಗಣಪತಿ ಶರ್ಮರು ಆ ವಾಕ್ಯವನ್ನು ಹಿಡಿದೇಬಿಟ್ಟರು ನೋಡಿ. ಮತ್ತೆ ನಮ್ಮ  ಯಕ್ಷಗಾನದಲ್ಲಿಯೂ ಕಥೆಯಿರುವುದು ಹಾಗೆಯೇ ಈಗ ಚಂಡು ನಿಮ್ಮ ಅಂಗಳಕ್ಕೆ ಬಂದು ಬಿದ್ದಿದೆ. ನೀವು ಕಥೆುಂನ್ನು ಇನ್ನೊಂದು ಸಲ ಓದಿ ನೋಡಿ. ಅದೊಂದು ವಾಕ್ಯ ಸರಿವಾಡಬಹುದೇ ಎಂದು. ಇಲ್ಲ ಅಂದರೆ ಅದನ್ನು ಬರೆಯೋದಕ್ಕೆ ನಿಮಗೊಂದು ಆಧಾರ ಅಂತ ಇರತ್ತಲ್ಲ, ಆ ಮೂಲವನ್ನೊಂಚೂರು ನನಗೆ ಹೇಳಿಬಿಡಿ. ಹಾಗೆಲ್ಲಾ ಆಧಾರವಿಲ್ಲದೇ ಬರೆಯೋರಲ್ಲ ನೀವು ಅಂತ ಗೊತ್ತು. ಮುಂದಿನ ಪ್ರದರ್ಶನಗಳಲ್ಲಿ ಹೀಗೇನಾದರೂ ಚರ್ಚೆ ಬಂದರೆ ನಮಗೂ ಒಂದು ಆಧಾರ ಅಂತ ಆಗ್ತದೆ ನೋಡಿ’’. ಅವರ ಮಾತು ಮುಗಿಯುವ ಸೂಚನೆ ಕಾಣದ ಮಹಿಮಾ, ‘‘ಆಯ್ತು, ನಾನು ಇನ್ನೊಂದು ಸಲ ಓದಿ ನೋಡಿ ನಿಮಗೆ ಹೇಳ್ತೇನೆ’’ ಎಂದು ಫೋನಿಟ್ಟಳು.


ಮಗನನ್ನು ಬರೆಯಲು ಹಚ್ಚಿ ಕೆಳಗೆ ಬಂದ ಮಧು ವಿಷಯವೇನೆಂದು ಕೇಳಿದ. ಮಹಿಮಾ ಸಂಕ್ಷಿಪ್ತವಾಗಿ ವಿವರಿಸುತ್ತಿದ್ದಂತೆ, ‘‘ನಿಂಗೆ ನಾನು ಆ ದಿನವೇ ಹೇಳಿದ್ದೆ, ಆವಯ್ಯನ ಸಹವಾಸ ಬೇಡ ಅಂತ. ನಮ್ಮ ಬ್ಯಾಂಕಿನಲ್ಲಿ ಜಗಳವಾಡಿ ನಿಮ್ಮ ಬ್ಯಾಂಕಿಗೆ ಹೋದ ಕುಳ ಅವರು. ಎಲ್ಲದರಲ್ಲೂ ಚರ್ಚೆ, ಒರಟು. ಈ ತಾಳಮದ್ದಲೆಯಲ್ಲಿ ಅರ್ಥ ಹೇಳುವವರೇ ಹೀಗೆ. ಸೀದಾ ಸಾದಾ ಮಾತಾಡಿಯೇ ಗೊತ್ತಿಲ್ಲ. ಈಗ ನೀನು ಅವರಿಗೆಂದು ಕಥೆಯನ್ನು ಹೊಸದಾಗಿ ಬರೆದುಕೊಡಬೇಕು ನೋಡು’’ ಎನ್ನುತ್ತಾ ತನ್ನ ತಕರಾರನ್ನು ದಾಟಿಸಿದ. ಮಹಿಮಾ ಅವನ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಮತ್ತೆ ತನ್ನ ಕಾದಂಬರಿಯ ಪುಟಗಳ ಮೇಲೆ ದೃಷ್ಟಿ ಹಾಯಿಸಿದಳು. ನಾಳೆಯೇ ಕೊನೆಯ ಕಂತು ಅಚ್ಚಿಗೆ ಹೋಗಬೇಕಿತ್ತು. ಆದರೆ ಕಾದಂಬರಿಯ ಪಾತ್ರಗಳೆಲ್ಲವೂ ಅವಳ ಯಾವ ತೀರ್ಮಾನಗಳಿಗೂ ಕಿಂಚಿತ್ತೂ ಕಿಮ್ಮತ್ತು ಕೊಡದೆ ಮುನಿಸಿಕೊಂಡಿದ್ದವು. ಅವುಗಳನ್ನು ಸಂಭಾಳಿಸುವುದರಲ್ಲಿ ಹೈರಾಣಾಗುತ್ತಿದ್ದವಳ ತಲೆಯಲ್ಲಿ ಇದೀಗ ಅಂಬೆ ಬೇರೆ ಬಂದು ಕೂತಿದ್ದಳು. ಇದೀಗ ಅವಳ ಸಿಟ್ಟು ಗೌರವನ ಮೇಲೆ ತಿರುಗಿತು. ಪಟ್ಟುಹಿಡಿದು ಕಾದಂಬರಿಯ ಬರವಣಿಗೆಯನ್ನು ಪ್ರಾರಂಭಿಸುವಂತೆ ಮಾಡಿದ ಅವನೇ ಇವೆಲ್ಲವುಗಳಿಗೂ ಕಾರಣವೆಂದು ಅನ್ನಿಸಿ, ಅವನಿಗೊಂದಿಷ್ಟು ಬೈದಾದರೂ ಹಗುರಾಗಬೇಕೆಂದು ಫೋನ್ ಎತ್ತಿಕೊಂಡಳು. ಥಟ್ಟನೆ ಅವನೂರಿನಲ್ಲೀಗ ನಡುರಾತ್ರಿಯಂದು ಅರಿವಾಗಿ ಹಾಗೆಯೇ ಫೋನಿಟ್ಟಳು. ಬ್ಯಾಂಕಿನಲ್ಲಿ ದುಡ್ಡೆಣಿಸಿ ಆದ ಬೇಸರವನ್ನು ನೀಗಲು ಆಗೀಗ ಕಥೆ, ಕವನಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿಕೊಂಡು ಆರಾಮವಾಗಿದ್ದಳು ಮಹಿಮಾ. ಚಿಕ್ಕಂದಿನಲ್ಲಿ ಅಪ್ಪನೊಂದಿಗೆ ನೂರಾರು ಯಕ್ಷಗಾನವನ್ನು, ಕೀರ್ತನೆಗಳನ್ನು, ತಾಳಮದ್ದಲೆಗಳನ್ನು ಕೇಳಿ ಬೆಳೆದ ಅವಳಿಗೆ ಕಥೆಯನ್ನು ಹೇಳುವ ಕಲೆ ತಾನಾಗಿಯೇ ದಕ್ಕಿತ್ತು. ಪುರಾಣ ಪಾತ್ರಗಳನ್ನು ವರ್ತಮಾನದ ಬೆಳಕಿನಲ್ಲಿ ತುಸು ಅಡ್ಡಾಡಿಸಿ ಅವಳು ಬರೆಯುವ ಕಥೆಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿದ್ದವು. ಸಮೃದ್ಧವಾದ ಹಳ್ಳಿಯ ಬಾಲ್ಯದ ಅನುಭವಗಳೂ ಅಲ್ಲಲ್ಲಿ ಇಣುಕಿ ಕಥೆಯನ್ನು ಇನ್ನಷ್ಟು ಆಪ್ತವಾಗಿಸುತ್ತಿದ್ದವು. ತಾನು ಬರೆದುದೆಲ್ಲವನ್ನೂ ತನ್ನ ಬಾಲ್ಯದ ಗೆಳೆಯ ಗೌರವನಿಗೆ ಮೊದಲ ಓದಿಗೆಂದು ಕಳಿಸುವುದು ಅವಳ ರೂಢಿಯಾಗಿತ್ತು. ಅವನಿಂದ ಪ್ರತಿಸಲವೂ ನೂರಾರು ತಕರಾರುಗಳ ಸುರಿಮಳೆಯಾಗುತ್ತಿತ್ತಾದರೂ ಅಪರೂಪಕ್ಕೊಮ್ಮೆ ಅವನಿಂದ ಸಿಗುವ ಶಹಬ್ಬಾಸ್‌ಗಿರಿಗಾಗಿ ಅವಳು ಕಾಯುತ್ತಿದ್ದಳು. ಇದ್ದಕ್ಕಿದ್ದಂತೆ ಒಂದು ದಿನ ಇವಳು ಬರೆದ ಪ್ರೇಮಕಥೆಯೊಂದನ್ನು ಓದಿದ ಗೌರವ್ ನೀನೊಂದು ಕಾದಂಬರಿ ಬರೆ ಎಂದು ಒತ್ತಾಯಿಸತೊಡಗಿದ. ಮೊದಮೊದಲು ಮಹಿಮಾ, ‘‘ಕಾದಂಬರಿಯಲ್ಲ ನಿಮ್ಮಂಥ ಗಂಡಸರಿಗೆ ಕಣೋ, ಕೂತು ಬರೆಯಲು ನಾವು ಅಷ್ಟೆಲ್ಲ ಸಮಯವನ್ನೆಲ್ಲಿಂದ ತರೋದು?’’ ಎಂದು ಅವನ ಬಯಕೆಯನ್ನು ತಳ್ಳಿಹಾಕಿದ್ದಳು. ಆದರೆ ಗೌರವ್ ಹಲಸಿನ ಮೇಣದಂತೆ ಅವಳನ್ನು ಹಿಡಿದುಬಿಟ್ಟಿದ್ದ, ‘‘ಅರೆ! ಇಡಿಯ ಕಾದಂಬರಿಯನ್ನು ಒಮ್ಮೆಲೇ ಬರೆಯಬೇಕೇನು? ಕಥೆಯಂತೆ ವಾರಕ್ಕೊಂದು ಅಧ್ಯಾಯ ಬರೆದರಾಯಿತು. ನನ್ನ ಫ್ರೆಂಡ್‌ಗೆ ಹೇಳಿ ವಾರಪತ್ರಿಕೆಯಲ್ಲಿ ಪ್ರಕಟಣೆಗೆ ವ್ಯವಸ್ಥೆ ಮಾಡ್ತೇನೆ. ಮಹೀ, ನಿಂಗೊತ್ತಾ? ಇಲ್ಲೆಲ್ಲ ನೊವೆಲಿಸ್ಟ್ ಅಂದರೆ ಅವರ ಅಂತಸ್ತೇ ಬೇರೆ. ನೀನು ನಿನ್ನೆ ಬರೆದ ಕಥೆಯನ್ನೇ ಇನ್ನೊಂಚೂರು ಹಿಗ್ಗಿಸಿದರೆ ಕಾದಂಬರಿಯಾಗತ್ತೆ. ಒಂದೊಳ್ಳೆ ಪ್ರೇಮಕಾದಂಬರಿಯನ್ನು ಬರೆ. ನನ್ನ ಫ್ರೆಂಡ್ಸ್‌ಗಳಲ್ಲಿ ಅನೇಕರು ಅನುವಾದಕರಿದ್ದಾರೆ. ಇಂಗ್ಲಿಷ್‌ಗೆ ಅನುವಾದ ಮಾಡಿಸೋಣ. ಒಳ್ಳೆಯ ಪ್ರಕಾಶಕರು ಪ್ರಕಟಿಸಿದರೆ ವರ್ಲ್ಡವೈಡ್ ಫೇಮಸ್ ಆಗ್ತೀಯ. ಯಾರಿಗೆ ಗೊತ್ತು? ಆ ಕಾದಂಬರಿಯ ಕಾರಣಕ್ಕಾಗಿ ನೀನು ಇಲ್ಲಿಗೂ ಬರಬಹುದೇನೊ?’’ ಎಂದೆಲ್ಲಾ ಹೇಳಿ ಕನಸಿನ ವಿಮಾನವನ್ನು ಹತ್ತಿಸಿದ್ದ.

ಮೊದಮೊದಲು ಕಾದಂಬರಿಯ ಬರವಣಿಗೆ ಮಹಿಮಾಳಿಗೆ ಖುಶಿಕೊಟ್ಟಿದ್ದಂತೂ ಖರೆ. ಅವಳು ಹೇಳಿದಂತೆ ಕೇಳುತ್ತ, ಅವಳಾಡಿಸಿದಂತೆ ಆಡುತ್ತ, ಅವಳು ಹೇಳಿದಲ್ಲಿಗೆಲ್ಲ ಹೋಗಿ ಮುದ್ದಾಡುತ್ತಿದ್ದ ಕಾದಂಬರಿಯ ಯುವಪ್ರೇಮಿಗಳಿಬ್ಬರ ಒಡನಾಟ ಅವಳಲ್ಲಿಯೂ ಹೊಸ ಹುರುಪೊಂದನ್ನು ಹುಟ್ಟಿಸಿತ್ತು. ಕಾದಂಬರಿಯ ಪ್ರೇಮಿಗಳಿಬ್ಬರೂ ಕವಿಗಳೇ ಆಗಿದ್ದರಿಂದ ಆಗಾಗ ಅವರಿಬ್ಬರೂ ಬರೆಯುತ್ತಿದ್ದ ಪ್ರೇಮದ ಸಾಲುಗಳು ಓದುಗರಿಗೂ ಪ್ರೀತಿಯ ಅಮಲೇರಿಸುತ್ತಿತ್ತು.
‘‘ನೀನೊಂದು ಮಹಾಬೆಳಗು
ನಿನ್ನ ಕೈ ಹಿಡಿದಾಗ ಕಂಪಿಸಿದೆ’’
ಎಂಬ ನಾಯಕನ ಸಾಲುಗಳಿಗೆ ಸಂವಾದಿಯಾಗಿ ನಾಯಕಿ
‘‘ನೀನೊಂದು ಪರ್ವತದ ಬೆರಗು
ನಿನ್ನೊಡಲಿಂದ ನಾ ನದಿಯಾಗಿ ಹರಿದೆ’’

ಎಂದೆಲ್ಲ ಬರೆದು ಕಥೆಗೆ ಕಾವ್ಯದ ಮೋಹಕತೆಯನ್ನು ತಂದಿದ್ದಳು. ‘‘ಪ್ರೇಮದಲ್ಲಿ ಮುಳುಗು, ಬೇರೆಲ್ಲವೂ ತನ್ನಷ್ಟಕ್ಕೇ ಘಟಿಸುವುದು’’ ಎಂದು ನಾಯಕಿಯೆಂದರೆ ನಾಯಕ, ‘‘ಪ್ರೇಮವೆಂದರೆ ಸಾಗರ, ಹನಿನೀರು ಕುಡಿದುಬಿಡು, ಜೀವನವಿಡೀ ನಶೆಯಲ್ಲಿರುವೆ’’ ಎಂದು ಬರೆದು ನಶೆಯೇರಿಸುತ್ತಿದ್ದ. ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಲು ಹುಡುಕುತ್ತಿದ್ದ ಉಪಾಯಗಳೂ ಹೊಸತಾಗಿದ್ದವು. ವಿಜ್ಞಾನದ ನವನವೀನ ಪ್ರಾತ್ಯಕ್ಷಿಕೆಗಳು, ತಮ್ಮೂರಿನ ಔಷಧೀಯ ಸಸ್ಯಗಳ ಸಂಗ್ರಹಗಳು, ವಿಶ್ವವಿದ್ಯಾನಿಲಯದ ಉಪನ್ಯಾಸಗಳು, ಭಾಷಣಗಳು ಎಲ್ಲದರಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಒಟ್ಟಿಗೆ ಹೊರಹೋಗುವ ಸಂದರ್ಭಗಳನ್ನು ಕಾಲೇಜಿನ ನಿಯಮಾನುಸಾರವೇ ಅವರು ಸೃಷ್ಟಿಸಿಕೊಳ್ಳುತ್ತಿದ್ದರು. ಕಾಲೇಜು ಪ್ರವಾಸದ ದಿನಗಳಲ್ಲಿ ಪ್ರವಾಸಕ್ಕೆ ಕೊಕ್ ಕೊಟ್ಟು ಇಬ್ಬರೇ ಹಂಪಿಯ ಕಲ್ಲುಗಳ ನಡುವೆ ಸುತ್ತಿ ಬಂದಿದ್ದರು. ತಮ್ಮ ಆಸಕ್ತಿಯ ಬಗ್ಗೆ ಮಾತ್ರ ಒಬ್ಬರಿಗೊಬ್ಬರು ರಾಜಿಯಾಗದೇ ಬೇರೆಬೇರೆ ಯೂನಿವರ್ಸಿಟಿಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆಂದು ಸೇರಿದ್ದರು. ನಾಯಕಿಯ ಕನಸಿಗೆ ಆಗಸದ ಹರಹು ಕಿರಿದಾದರೆ, ನಾಯಕ ಭೂಮಿಯಿಂದ ಕಾಲು ಕೀಳದಷ್ಟು ಸರಳ. ಮೊಬೈಲ್ನಲ್ಲಿ ಪ್ರೀತಿಯ ಸಾಲುಗಳನ್ನು ಟಂಕಿಸುತ್ತಲೇ ‘ಸುಪರ್ ಕಂಡಕ್ಷರ್’ಗಳ ಬಗ್ಗೆ ಮಹಾಪ್ರಬಂಧವನ್ನು ಬರೆಯುವಷ್ಟು ಜಾಣೆ ಅವಳು. ಒಂದು ಸಾಲಿಗೆ ಉತ್ತರಿಸಲು ಇಡೀ ದಿನ ತಲೆಕೆಡಿಸಿಕೊಳ್ಳುವ ಭಾವುಕ ಇವನು. ಹೀಗೆ ಅವರಿಬ್ಬರ ಪ್ರೀತಿಯ ಯಾನ ಓದುಗರನ್ನು ಬೆರಗಿನಿಂದ ಆವರಿಸಿಕೊಂಡಿತ್ತು. ಇದೀಗ ಕಾದಂಬರಿ ಮುಗಿಯುತ್ತ ಬಂದಿದೆ. ಕಥೆಗೊಂದು ಅಂತ್ಯವನ್ನು ಮಹಿವಾ ಯೋಚಿಸುತ್ತಿದ್ದಾಳೆ. ನಾಯಕಿ ಇದೀಗ ದೂರದ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಜನಪ್ರಿಯ ಉಪನ್ಯಾಸಕಿ. ದೇಶ, ವಿದೇಶಗಳಲ್ಲಿ ಅವಳ ಉಪನ್ಯಾಸಕ್ಕೆ ವಿದ್ಯಾರ್ಥಿಗಳು ಮುಗಿಬೀಳುತ್ತಾರೆ. ನಾಯಕನಿಲ್ಲಿ ತಾನು ಹುಟ್ಟಿಬೆಳೆದ ಹಳ್ಳಿಯಲ್ಲಿಯೇ ಒಂದು ಔಷಧೀಯ ಸಸ್ಯಗಳ ವನವನ್ನು ಮತ್ತು ಔಷಧ ತಯಾರಿಕಾ ಘಟಕಗಳನ್ನೂ ನಡೆಸುತ್ತಿದ್ದಾನೆ. ಅವನು ಅಲ್ಲಿಗೆ ಹೋಗಲಾರ, ಅವಳು ಇಲ್ಲಿರಳಾರಳು. ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಅಗಲುವ ಇರಾದೆಯಿಲ್ಲ. ಇಬ್ಬರೂ ಒಬ್ಬರೆಂಬಂತೆ ಬದುಕಿದ್ದಾರೆ. ಇಲ್ಲಿಯವರೆಗೂ. ಅವನಿಗೀಗ ಅವಳ ಸಾಂಗತ್ಯ ಬೇಕು, ಸನಿಹವಿರದ ಶಬ್ದಗಳ ಪ್ರೀತಿ ಅವನನ್ನು ಸಂತೈಸಲಾರದು. ಅವಳಿಗೋ ಎಲ್ಲವನ್ನೂ ತನ್ನೊಳಗೇ ಸೃಷ್ಟಿಸಿಕೊಳ್ಳುವ ಉಮೇದು. ಪ್ರೇಮ ದೇಹದ ಬುಂಕೆಯನ್ನು ಮೀರಿದ್ದು ಎಂಬಷ್ಟು ತನ್ಮಯಿ ಅವಳು. ಒಟ್ಟಿಗಿರುವ ವಿಷಯದಲ್ಲಿ ಇತ್ತೀಚೆಗೆ ಅಂಕದ ಕೋಳಿಯಂತೆ ಕಿತ್ತಾಡುತ್ತಾರೆ ಇಬ್ಬರೂ. ಆಧಾರ, ಉಪಮೆ, ರೂಪಕಗಳಿಗೇನೂ ಕೊರತೆಯಿಲ್ಲ ಇಬ್ಬರಲ್ಲೂ. ಗಿಬ್ರಾನ್, ರೂಮಿ, ಕಾಳಿದಾಸ, ಅಕ್ಕ, ಅಲ್ಲಮ, ಮಜನೂ, ಪಾರೋತಿ ಎಲ್ಲರೂ ಬಂದುಹೋಗುತ್ತಾರೆ ನಡುನಡುವೆ. ಮಹಿಮಾಳೂ ದಣಿದಿದ್ದಾಳೆ ಇವರಿಬ್ಬರ ಜಗಳದಲ್ಲಿ. ಇಲ್ಲಿಗೇ ಬಂದುಬಿಡು ಎಂದು ನಾಯಕಿಗೆ ಮಹಿಮಾ ಬುದ್ಧಿವಾದ ಹೇಳುತ್ತಾಳೆ. ಶತಶತಮಾನದಿಂದ ಗಂಡನ ಆಸಕ್ತಿಗೆಂದು ತಮ್ಮ ಬಯಕೆಗಳೆಲ್ಲವನ್ನೂ ಬದಿಗಿಟ್ಟು ಬಾಳಿಲ್ಲವೆ ನನ್ನ ಅಕ್ಕಂದಿರು? ಇನ್ನೂ ಹಾಗೆಯೇ ಇರು ಎನ್ನುವ ನೀನೆಂಥ ಬರಹಗಾರ್ತಿ? ಎಂದು ಇವಳ ಮೋರೆಗೆ ಹೊಡೆದಂತೆ ಹೇಳಿಹೋಗಿದ್ದಾಳೆ ಅವಳು. ಹೋಗಲಿ, ನೀನಾದರೂ ಅವಳಿರುವಲ್ಲಿಗೆ ಹೋಗಿ ಏನಾದರೂ ಮಾಡು ಎಂದರೆ ಈ ನಾಯಕ ಹಸಿರಿನಿಂದ ನಳನಳಿಸುವ ತನ್ನ ತೋಟವನ್ನೂ, ಅದರ ನಡುವೆ ಕುಳಿತು ತಮ್ಮ ಬಾಳಿನ ಸವಿಯನ್ನು ಮೆಲುಕು ಹಾಕುವ ಅಮ್ಮ-ಅಪ್ಪನನ್ನೂ, ತಾನು ಉದ್ಯೋಗ ನೀಡಿರುವ ಊರಿನ ಹತ್ತಾರು ಹುಡುಗ-ಹುಡುಗಿಯರನ್ನೂ ಮೌನವಾಗಿಯೇ ತೋರಿಸುತ್ತಾನೆ. ಹೋಗಲಿ ಎಂದು ಹೊಸದೊಂದು ತಂತ್ರ ಹೆಣೆಯುತ್ತಾಳೆ ಮಹಿಮಾ. ನಾಯಕನ ಫಾಕ್ಟರಿಯಲ್ಲಿ ಕೆಲಸ ಮಾಡುವ ಹುಡುಗಿಯನ್ನು ಅವನಿಗೂ, ನಾಯಕಿಯ ಸಂಶೋಧನೆಯಲ್ಲಿ ಜತೆಯಾಗಿರುವ ಪರಂಗಿಯವನೊಬ್ಬನನ್ನು ಅವಳಿಗೂ ತೋರಿಸಿ ಆಸೆ ಹುಟ್ಟಿಸುತ್ತಾಳೆ. ‘‘ಸಂಗಾತವೆಂದರೆ ಬರಿಯ ಅನುಕೂಲಸಿಂಧುವೆಂದುಕೊಂಡೆಯಾ?’’ ಇಬ್ಬರೂ ಸೇರಿಯೇ ಅಬ್ಬರಿಸುತ್ತಾರೆ! ಮಹಿಮಾ ಸಮಯದ ಸಯಮವನ್ನು ಬದಿಗೊತ್ತಿ ಗೌರವನಿಗೆ ಕರೆ ಮಾಡುತ್ತಾಳೆ, ‘‘ಮಲಗಿದ್ದೇನೆ ಕಣೇ. ಏನೇ ನಿಂದು ನಡುರಾತ್ರಿಯಲ್ಲಿ? ಎಷ್ಟೊಳ್ಳೆಯ ಕನಸು ಬೀಳ್ತಿತ್ತು ಗೊತ್ತಾ? ಇನ್ನೊಂದು ಕ್ಷಣ ತಡೆದರೆ ಅವಳಿಗೆ ಮುತ್ತು ಕೊಟ್ಟಾಗಿರುತ್ತಿತ್ತು’’ ಅವನ ಲೇವಡಿಗೆ ಕುದಿದು ಹೋಗುವ ಮಹಿಮಾ ಕಾದಂಬರಿಯ ಪಾತ್ರಗಳ ಗೋಜಲನ್ನು ನಿದ್ದೆಗಣ್ಣಿನಲ್ಲಿರುವ ಅವನ ತಲೆಯೊಳಗೆ ತುಂಬುತ್ತಾಳೆ. ನಿನ್ನಿಂದಲೇ ಶುರುವಾದ ಕಾದಂಬರಿಯಿದು, ನೀನೇ ಮುಗಿಸು ಎಂದು ಹಠ ಹಿಡಿಯುತ್ತಾಳೆ. ‘‘ಕಂಗ್ರಾಟ್ಸ್ ಕಣೇ, ಕಾದಂಬರಿಯ ಪಾತ್ರಗಳು ನಿನ್ನೊಂದಿಗೆ ಹಠ ಶುರುಮಾಡಿವೆಯೆಂದರೆ ನೀನು ಯಶಸ್ವಿ ಕಾದಂಬರಿಕಾರ್ತಿ ಎಂದರ್ಥ. ಜಗತ್ತಿನ ದೊಡ್ಡ ದೊಡ್ಡ ಕಾದಂಬರಿಕಾರರಿಗೆ ಮಾತ್ರವೇ ಹೀಗೆಲ್ಲಾ ಆಗಿದೆ ಗೊತ್ತಾ? ಕ್ಯಾರಿಆನ್ ಮೈ ಗರ್ಲ್’’ ಎಂದು ಅವನು ಸಂಭ್ರಮಿಸಿದಾಗ, ಅವಳ ಕೋಪದ ಕಟ್ಟೆಯೊಡೆದು, ‘‘ಕತ್ತೆ, ಇಲ್ಲಿ ಕಾದಂಬರಿಯ ಪಾತ್ರಗಳನ್ನು ಕಟ್ಟಿಹಾಕಲಾರದೇ ನಾನು ಪಡಿಪಾಟಲು ಪಡುತ್ತಿದ್ದರೆ ಇವನದು ಕಂಗ್ರಾಟ್ಸ್ ಅಂತೆ. ಮೊದಲು ಕಥೆ ಮುಗಿಸೋದು ಹೇಗೆ ಹೇಳು? ಮತ್ತೆ ಉಳಿದೆಲ್ಲ ಮಾತು’’ ಅಬ್ಬರಿಸಿದಳು. ಗೌರವ ತಣ್ಣಗೆ ನುಡಿದ, ‘‘ಲೋಕ ಹೇಳಿದಂತೆಲ್ಲ ಕೇಳಲು ಪಾತ್ರಗಳೇನು ನಾನು, ನೀನೆ? ಅಷ್ಟಕ್ಕೂ ಬದುಕಿಗೆ ಒಂದು ಅಂತ್ಯ ಅಥವಾ ಒಂದೇ ಅಂತ್ಯ ಅಂತ ಯಾಕಿರಬೇಕು? ನಿಧಾನವಾಗಿ ಪಾತ್ರಗಳ ಪಿಸುದನಿಯನ್ನು ಕೇಳಿಸಿಕೊ. ನಿನಗೇ ಎಲ್ಲವೂ ಹೊಳೆಯುತ್ತವೆ. ಆದರೆ ನೆನಪಿಟ್ಟುಕೋ, ಕಾದಂಬರಿಯಲ್ಲಾದರೂ ಪ್ರೇಮವನ್ನು ಗೆಲ್ಲಿಸು’’ ಎಂದವನೇ ನಿಮಿಷಗಳ ಕಾಲ ಮೌನವಾಗಿದ್ದು ಫೋನಿಟ್ಟ.

‘‘ಮಹೀ, ಪುಟ್ಟ ಮಲಗುವ ಸಮಯವಾಗಿದೆ. ಕಥೆ ಹೇಳಬೇಕಂತೆ, ಬಂದು ಮಲಗಿಸಿ ಹೋಗು’’. ಮಧುವಿನ ಮಾತು ಅವಳನ್ನು ಎಚ್ಚರಿಸಿತು. ‘‘ನಂಗೆ ಇನ್ನೂ ತುಂಬಾ ಬರೆಯೋದಿದೆ ಮಧು. ನೀನೇ ಇವತ್ತು ಏನಾದರೂ ಕಥೆ ಹೇಳಿ ಮಲಗಿಸು’’. ವಿನಂತಿಸುವ ದನಿಯಲ್ಲಿ ಹೇಳಿದಳು. ಮಧು ಹತ್ತಿರ ಬಂದು ಅವಳಿಗೆ ಹೇಳಿದ, ‘‘ನೋಡು ಮಹೀ, ನಾನೂ ಈ ಕಾದಂಬರಿ ಶುರುವಾದಾಗಿನಿಂದ ನೋಡ್ತಾನೆ ಇದ್ದೀನಿ. ಬ್ಯಾಂಕ್ ಮುಗಿಸಿ ಬಂದವಳೇ ರೂಮು ಸೇರಿದರೆ ಬೇರೆ ಪ್ರಪಂಚವೇ ಬೇಡ ನಿನಗೆ. ಬರೆಯಬೇಡವೆಂದು ನಾನು ಹೇಳೋದಿಲ್ಲ, ಆದರೆ ಯಾವುದೂ ಬದುಕಿಗಿಂತ ದೊಡ್ಡದಾಗಬಾರದು. ನಿನಗೆ ಬೇರೆಲ್ಲ ಮರೆತುಹೋದರೆ ಹೋಗಲಿ, ಪುಟ್ಟನ ಅಮ್ಮನೆಂಬುದನ್ನು ಮರೆಯಬೇಡ. ನಮ್ಮ ಸಾಧನೆ ನಮಗೆ ಮುಖ್ಯ ಹೌದು, ಆದರೆ ಮಕ್ಕಳಿಗಾಗಿ ನಾವು ನಮ್ಮ ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು. ಅವನಿಗೆ ಮಲಗುವಾಗ ಒಂದು ಕಥೆ ಹೇಳುವಷ್ಟೂ ಬಿಡುವಿಲ್ಲವೆಂದರೆ??..’’ ಅವನ ಮಾತುಗಳನ್ನು ನಡುವೆಯೇ ತುಂಡರಿಸಿದ ಮಹಿಮಾ, ‘‘ಅರ್ಥವಾಯ್ತು, ಪ್ಲೀಸ್ ನಿನ್ನ ಭಾಷಣವನ್ನು ನಿಲ್ಲಿಸು. ಈಗೇನು? ಅವನಿಗೊಂದು ಕಥೆ ಹೇಳಬೇಕು ತಾನೆ? ಬಂದೆ ನಡಿ’’ ಎಂದವಳೇ ಬೆಡ್ ರೂಮಿನಲ್ಲಿ ಕಾಯುತ್ತಿರುವ ಮಗನ ಪಕ್ಕದಲ್ಲಿ ಹೋಗಿ ಮಲಗಿ ಅವನನ್ನು ತಬ್ಬಿ ದೀಪವಾರಿಸಿದಳು. ‘‘ಇವತ್ತು ಯಾವ ಕಥೆ ಬೇಕು ನನ್ನ ಪುಟ್ಟನಿಗೆ? ರಾಜಕುಮಾರನದಾ? ಮಾಯದ ಜಿಂಕೆಯದಾ? ಮೊಲದ್ದಾ? ತೋಳದ್ದಾ?’’ ಅವಳು ಕೇಳುತ್ತಿರುವಂತೆಯೇ ಪುಟ್ಟ, ‘‘ನಂಗೆ ತೋಳದ ಕಥೆ ಬೇಕು’’ ಎಂದ. ಮಹಿಮಾ ತಾನು ಬಾಲ್ಯದಲ್ಲಿ ಕೇಳಿದ ‘ತೋಳ ಬಂತಲ್ಲೋ ತೋಳ’ ಕಥೆಯನ್ನು ರಂಜನೀಯವಾಗಿ ಮಗನಿಗೆ ಹೇಳತೊಡಗಿದಳು.
ಕುರಿಕಾಯುವ ಹುಡುಗ ಒಬ್ಬನೇ ಗುಡ್ಡದಲ್ಲಿ ಕುಳಿತು ಬೇಸರವಾದಾಗೊಮ್ಮೆ ‘‘ತೋಳ ಬಂತಲ್ಲೋ ತೋಳ’’ ಎಂದು ಕೂಗಿದ್ದು, ಊರಿನವರೆಲ್ಲ ಕೈಗೆ ಸಿಕ್ಕ ಆಯುಧಗಳನ್ನು ಎತ್ತಿಕೊಂಡು ಗುಡ್ಡಕ್ಕೆ ದೌಡಾಯಿಸಿದ್ದು, ಹೋಗಿ ನೋಡಿದರೆ ಹುಡುಗ ಸುಮ್ಮನೆ ಹೇಳಿದ್ದೆಂದು ಗೊತ್ತಾಗಿದ್ದು, ಇದೇ ಮತ್ತೊಂದು ಬಾರಿ ಪುನರಾವರ್ತನೆಯಾದದ್ದು, ಮತ್ತೊಂದು ದಿನ ನಿಜವಾಗಿಯೂ ತೋಳ ಬಂದದ್ದು, ಸಹಾಯಕ್ಕಾಗಿ ಹುಡುಗ ಕೂಗಿದರೂ ಯಾರೂ ಬರದೇ ಇದ್ದದ್ದು..? ತೋಳ ಹುಡುಗನನ್ನು ಎತ್ತಿಕೊಂಡು ಹೋದದ್ದು.?? ‘‘ಬೇಡ ಅಮ್ಮಾ, ನಂಗೆ ಈ ಕಥೆ ಬೇಡ.’’ ಪುಟ್ಟ ಕಿರುಚಿದ ಶಬ್ದಕ್ಕೆ ಮಧು ಕೋಣೆಯೊಳಗೆ ಬಂದು ದೀಪಹಾಕಿ ಅಸಹನೆಯಲ್ಲಿರುವ ಮಗನನ್ನು ಕಂಡು, ‘‘ನಿನ್ನ ಹೊಸಕಥೆಗಳ ಪ್ರಯೋಗವನ್ನೆಲ್ಲ ಅವನ ಮೇಲೆ ಮಾಡಬೇಡ ಮಾರಾಯ್ತಿ. ಮಕ್ಕಳಿಗೆ ಹೇಳುವ ಕಥೆಯನ್ನು ಮಾತ್ರವೇ ಹೇಳು.’’ ಎಂದು ಮುಖಕ್ಕೆ ಹೊಡೆದಂತೆ ಹೇಳಿಹೋದ. ಪೆಚ್ಚಾದ ಅಮ್ಮನ ಮುಖವನ್ನು ನೋಡಿ ಪುಟ್ಟ ಹೇಳಿದ, ‘‘ಅವ್ಮಾ, ಕಥೆ ಚಂದಿತ್ತು, ಆದರೆ ಆ ಹುಡುಗ ಪಾಪ, ಸಾಯಬಾರದಿತ್ತು’’. ಮಹಿಮಾ ಮಗನನ್ನು ಮುದ್ದಿಸುತ್ತ ಹೇಳಿದಳು, ‘‘ಹೋಗಲಿ ಬಿಡು. ಇನ್ನೊಂದು ಚಂದದ ಕಥೆ ಹೇಳ್ತೇನೆ’’ ಪುಟ್ಟ ನಿರಾಕರಿಸುತ್ತ ನುಡಿದ, ‘‘ಬೇಡ ಅವ್ಮಾ, ಈ ಕಥೆಯನ್ನೇ ಚಂದ ಮಾಡೋಣವೆ? ವಾಪಸ್ ಹೋಗಿ ಹೊಸಾ ಕಥೆ ಮಾಡೋಣ’’ ಪುಟ್ಟ ಎದ್ದು ಕುಳಿತು ಸಾಭಿನಯವಾಗಿ ಹೇಳತೊಡಗಿದ, ‘‘ಅದೇ ಆ ಹುಡುಗ ಕೊನೆಯ ಬಾರಿ ನಿಜವಾಗಿ ತೋಳವೇ ಬಂದಾಗ ಹೆದರಿಕೆಯಿಂದ ಕೂಗಿಕೊಳ್ಳುತ್ತಾನೆ, ಆಗ ಊರಿನವರೆಲ್ಲರೂ ಆಯುಧಗಳನ್ನು ಹಿಡಿದು ಓಡಿಬರುತ್ತಾರೆ. ಆದರೆ ಈ ಸಲ ಪುಟ್ಟನಿಗೆ ಕಾಣದಂತೆ ಅಡಗಿಕೊಂಡು ಬರುತ್ತಾರೆ. ತೋಳ ಪುಟ್ಟನ ಹತ್ತಿರ, ಹತ್ತಿರ ಬರ್ತಾ ಇದೆ ಎನ್ನುವಾಗ?’’ ಅವನು ತೋಳದ ಹಾಗೆ ಕೆಂಗಣ್ಣು ಬಿಟ್ಟು ಹತ್ತಿರ ಬರುತ್ತಿರುವಾಗ ನಡುವೆ ಬಾಯಿಹಾಕಿ ಮಹಿಮಾ ಹೇಳಿದಳು, ‘‘ಊರಿನವರು ತೋಳದ ತಲೆಯ ಮೇಲೆ ಡಬ್ ಎಂದು ಬಡಿದು ಕೊಲ್ಲುತ್ತಾರೆ’’ ಪುಟ್ಟ ಮುನಿಸಿಕೊಂಡು ಹೇಳಿದ, ‘‘ಅವ್ಮಾ, ಇದು ನನ್ನ ಕಥೆ. ನೀನು ನಡುವೆ ಬಾಯಿ ಹಾಕಬಾರದು. ತೋಳ ಇನ್ನೇನು ಹುಡುಗನ ಮೈಮೇಲೆ ಹಾರುತ್ತದೆಯೆನ್ನುವಾಗ ಅವರೆಲ್ಲರೂ ಪೊದೆಯಿಂದ ಹೊರಬಂದು ತೋಳವನ್ನು ಓಡಿಸುತ್ತಾರೆ, ಅಷ್ಟೆ. ಯಾಕೆಂದರೆ ತೋಳಕ್ಕೂ ಮಗು ಇದೆಯಲ್ವಾ ಮನೆಯಲ್ಲಿ?’’ ಪುಟ್ಟನ ಕಣ್ಣಿನಲ್ಲಿರುವ ಕರುಣೆಯ ಬೆಳಕು ಅವಳನ್ನು ಬೆಳಗಿಸಿತು. ಅವನನ್ನು ಮುದ್ದಿಸಿ, ಚುಕ್ಕುಬಡಿದು ಮಲಗಿಸಿ ಕಣ್ಮುಚ್ಚಿದಳು.

ಅಂಬೆ ಅವಳೆದುರು ತೇಲಿಬಂದು ಮಾತನಾಡುತ್ತಿದ್ದಳು, ‘‘ನಾನು ನಿನ್ನ ಅಂಬೆ ಕಣೇ, ನನಗೆ ತಪಸ್ಸನ್ನಾಚರಿಸಲು ಹೇಳಿದ್ದು ಯಾರೆಂಬುದು ನಿನಗೆ ಮಾತ್ರವೇ ಗೊತ್ತು. ಅಸಲಿಗೆ ನಿಜವಾದ ಅಂಬೆಯಬವಳೊಬ್ಬಳು ಇದ್ದಳೆಂದು ನಿನಗ್ಯಾರು ಹೇಳಿದ್ದು? ಅವರವರಿಗೆ ಅವರವರ ಅಂಬೆಯರು ಹೇಳಿದ್ದೇ ಸತ್ಯ. ಹಾಂ, ಏನೆನ್ನುತ್ತಾರೆ ನಿನ್ನ ಕಾದಂಬರಿಯ ನಾಯಕ, ನಾಯಕಿಯರು? ಕರುಣೆಯಿರಲಿ ಮಾರಾಯ್ತಿ ಅವರ ಮೇಲೆ. ಸೋಲಿಸಬೇಡ, ಗೆಲ್ಲಿಸು.’’ ಥಟ್ಟನೆ ಎದ್ದ ಮಹಿಮಾ, ಮುಗುಳ್ನಗುತ್ತಾ ಬಂದು ಕಾದಂಬರಿಯ ಹಾಳೆಗಳನ್ನು ತೆಗೆದು ಸರಸರನೆ ಕೊನೆಯ ಕಂತನ್ನು ಬರೆದು ಮುಗಿಸಿದಳು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ