Mysore
26
mist

Social Media

ಭಾನುವಾರ, 17 ಮೇ 2026
Light
Dark

ಬೇಸತ್ತ ಮನಸ್ಸುಗಳು ಸಿನೆಮಾ ನಾಯಕರಿಗೆ ಯಾಕೆ ಮಾರುಹೋಗುತ್ತವೆ?

ವಿಕ್ರಮ್ ಹತ್ವಾರ್

ಮೊನ್ನೆ ತಮಿಳುನಾಡಿನಲ್ಲಿ ಸಿನಿಮಾ ನಟ ವಿಜಯ್ ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಕುರಿತು ಅಲ್ಲಿ ಯಾವೆಲ್ಲ ಸಂಗತಿಗಳು ಪ್ರಭಾವ ಬೀರಿರಬಹುದು ಎಂದು ಆಲೋಚಿಸುತ್ತಿದ್ದಾಗ, ನಮ್ಮ ಮನೆ ಎದುರಿನ ಒಬ್ಬ ಹುಡುಗನೊಂದಿಗೆ ನಡೆದ ಮಾತುಕತೆಯ ನೆನಪಾಯಿತು.

ನಮ್ಮ ಮನೆಯ ಎದುರಿನ ಪಾರ್ಕಿನಲ್ಲಿ ಒಂದೆರಡು ಕುಟುಂಬದವರು ವಾಸವಿದ್ದಾರೆ. ಈಗ್ಗೆ ಎರಡು ವರ್ಷಗಳ ಹಿಂದೆ ಕಾಡಿನ ಹಾಗಿದ್ದ ಆ ಜಾಗ ಪಾರ್ಕ್ ಆಗಿ ಬದಲಾಗುವುದಕ್ಕೆ ಈ ಕುಟುಂಬ ದವರ ಶ್ರಮದ ಪಾಲಿದೆ. ಗಾರೆ ಕೆಲಸ, ತೋಟದ ಕೆಲಸ ಒಂದು ಹಂತಕ್ಕೆ ಮುಗಿದಿದೆ. ಗಂಡಸರು ಬೇರೆ ಬೇರೆ ಕೆಲಸಗಳಿಗೆ ಹೊರಗೆ ದುಡಿಯಲು ಹೋದರೆ, ಹೆಂಗಸರು ಅಲ್ಲೇ ಉಳಿದು ಪಾರ್ಕಿನ ಗಿಡ ಗಳಿಗೆ ನೀರುಣಿಸುವುದು, ಆಗಾಗ ಕಳೆ ಕೀಳುವುದು, ಚೊಕ್ಕ ಮಾಡು ವುದು, ಇತರೆ ಕೆಲಸಗಳಲ್ಲಿ ತೊಡಗಿರುತ್ತಾರೆ. ಅವರೂ ಹೊರಗೆ ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗುತ್ತಾರೆ. ಅಲೆಮಾರಿ ಬದುಕು. ಕೆಲಸವಿದ್ದ ಕಡೆ ನೆಲೆ. ಒಂದೇ ಕಡೆ ಇಷ್ಟು ದಿವಸ ನೆಲೆ ನಿಂತಿದ್ದು ಇದೇ ಮೊದಲು. ನೆಲೆ ಎಂದರೆ ನೆಲವೊಂದೇ ಗಟ್ಟಿ. ಮರದ ಕಂಬ ಹುಗಿದು, ನೀಲಿ ಟಾರ್ಪಾಲಿನ ಟೆಂಟಿನ ಹಾಗಿರುವ ಜೋಪಡಿ. ಮಳೆ ಗಾಳಿಗೆ ಅದು ಹಾರಿ ಹೋಗದೆ ಉಳಿದಿರುವುದೊಂದು ಅಚ್ಚರಿ.

ಇಲ್ಲಿರುವವರೆಲ್ಲರೂ ಉತ್ತರ ಕರ್ನಾಟಕದಿಂದ ಬಂದಿರುವವರು. ದಿನಗೂಲಿ ಕಾರ್ಮಿಕರು. ಆಗಾಗ ಊರಿಗೆ ಹೋಗಿ ಬರುತ್ತಾರೆ. ಮಕ್ಕಳನ್ನು ಅಲ್ಲಿಯೇ ಓದಿಸುತ್ತಿದ್ದಾರೆ. ರಜೆಯ ಸಮಯದಲ್ಲಿ ಮಕ್ಕಳನ್ನು ಇಲ್ಲಿಗೆ ಕರೆಸಿಕೊಳ್ಳುತ್ತಾರೆ. ಕೆಲವೊಮ್ಮೆ ಇವರು ನಮ್ಮ ಬೀದಿಯ ಕೆಲವು ಕೆಲಸಗಳಿಗೂ ನೆರವಾಗುತ್ತಾರೆ. ಒಂದು ಹಂತದ ಪರಿಚಯ ವಿಶ್ವಾಸ ನಮ್ಮ ನಡುವೆ ಇದೆ.

ಒಮ್ಮೆ ಇದೇ ಪಾರ್ಕಿನಲ್ಲಿ ಅಡ್ಡಾಡುತ್ತಿರುವಾಗ, ಆ ಜೋಪಡಿಯ ಒಳಗಿಂದ ಒಬ್ಬ, ನನ್ನ ಬಳಿ ಓಡಿ ಬಂದು ಮಾತಿಗೆ ತೊಡಗಿದ. ‘ಸರ್, ಮೊನ್ನೆ ಸಿನಿಮಾದಲ್ಲಿ ನಿಮ್ಮನ್ನು ನೋಡಿದೆ’ ಅಂದ. ನನಗೆ ಒಮ್ಮೆಗೇ ಏನೆಂದು ತಿಳಿಯಲಿಲ್ಲ. ‘ಅದೇ ಸರ್, ಎಕ್ಕ ಸಿನಿಮಾದಲ್ಲಿ ಡಾಕ್ಟರ್ ಪಾರ್ಟ್ ಮಾಡಿದೀರಲ್ಲ’ ಅಂದ. ನಾನು ನಕ್ಕೆ. ಅದು ಒಂದೆ ರಡು ಪಾಸಿಂಗ್ ಶಾಟ್‌ನಲ್ಲಿ ಬಂದು ಹೋಗುವ ಸಣ್ಣ ಪಾತ್ರ. ‘ನೀವು ಸಿನಿಮಾದಲ್ಲಿ ಪಾರ್ಟ್ ಮಾಡ್ತೀರಾ? ’ ಅಂತ ಆತ ಉತ್ಸಾಹದಿಂದ ಕೇಳಿದ. ‘ಇಲ್ಲ. ಆ ಸಿನಿಮಾಗೆ ನಾನು ಕತೆ ಚಿತ್ರಕತೆ ಡೈಲಾಗ್ ಬರ್ದಿ ದೀನಿ’ ಎಂದೆ. ‘ಹೌದಾ ಸರ್! ನಿಮಗೆ ಆ ಹೀರೋ ಎಲ್ಲ ತುಂಬ ಕ್ಲೋಸ್ ಅಲ್ವಾ ಸರ್? ಅವರ ಜೊತೆ ತುಂಬ ಟೈಮ್ ಕಳೆದಿರ್ತೀರ! ’ ಅಂತ ಕೇಳಿದ. ‘ತುಂಬಾ ಕ್ಲೋಸ್ ಏನಿಲ್ಲ. ಆದರೆ ಹೌದು ಒಂದಿಷ್ಟು ಹೊತ್ತು ಕಳೆದಿದೀವಿ’ ಎಂದೆ. ಅಷ್ಟರಲ್ಲಿ ಆ ಕುಟುಂಬದವರಲ್ಲಿ ಇನ್ನೊಂದಿಬ್ಬರು ಬಂದು ಸೇರಿಕೊಂಡರು. ಸಿನಿಮಾದ ಕುರಿತು ಒಂದಿಷ್ಟು ಮಾತುಗಳಾದವು.

ನಾನು ಇನ್ನೇನು ಹೊರಡುವವನಿದ್ದೆ, ಆಗ ಆತನ ಮಾತು ಮತ್ತೊಂದು ಕಡೆ ತಿರುಗಿತು. ‘ಆ ಹೀರೋ ಮನೆಗೆ ನಾನು ಹೋಗಿದ್ದೆ’ ಎಂದ. ಏನಾದರು ಕೆಲಸ ಇದ್ದಿತ್ತಾ ಅಲ್ಲಿ ಅಂತ ಕೇಳಿದರೆ, ‘ಇಲ್ಲ ಇಲ್ಲ. ಸುಮ್ಮನೆ ಹೋಗಿದ್ದೆ. ನಾನು ಪ್ರತೀವಾರ ರಜೆ ಇರುವಾಗ ಒಂದೊಂದು ಕಡೆ ಹೋಗ್ತೀನಿ’ ಎಂದ. ಕೊನೆಗೆ ಕೇಳಿದರೆ, ಆತನಿಗೆ ಇದೊಂದು ಹವ್ಯಾಸ. ಹೆಚ್ಚು ಕಡಿಮೆ ಎಲ್ಲಾ ನಟ ನಟಿಯರ ಮನೆಯನ್ನು ಆತ ನೋಡಿ ದ್ದಾನೆ. ಅಷ್ಟೇ ಅಲ್ಲ. ಕ್ರಿಕೆಟರ್ ಮನೆಗಳ ಹತ್ತಿರ ಹೋಗಿ ನಿಂತು ನೋಡಿ ಬಂದಿದ್ದಾನೆ. ಯಾರಾದರು ಕಾಣಿಸಿದರೆ ಕೈ ಬೀಸೋದು. ಸಿಕ್ಕರೆ ಒಂದು ಸೆಲ್ಛಿ ತೆಗೆದುಕೊಳ್ಳೋದು. ‘ನಮಗೆ ಅದೊಂಥರ ಖುಷಿ. ಮತ್ತೆ, ನಮ್ಮೂರಲ್ಲಿ ಆ ಫೋಟೋ ತೋರಿಸಿದ್ರೆ ಜನ ನಮ್ಮನ್ನು ನೋಡೋ ರೀತೀನೇ ಬೇರೆ. ಸಿಗೋ ಮರ್ಯಾದೆನೇ ಬೇರೆ’ – ಅವನು ಹಾಗೆ ಹೇಳುತ್ತಲೇ ತನ್ನ ಮೊಬೈಲ್ ತೆಗೆದು ಫೋಟೊಗಳನ್ನು ತೋರಿಸಿದ. (ಇದೇ ರೀತಿ ವಿನಾಕಾರಣ ಸಿನಿಮಾ ಮೋಹ ಇರುವ ಇನ್ನೊಂ ದೆರಡು ಸಂಗತಿಗಳು ನೆನಪಾದವು. ಒಬ್ಬ ನಟನೊಂದಿಗೆ ಎಲ್ಲಿಯೋ ಒಂದು ಕಡೆ ಕಾಣಿಸಿಕೊಂಡಿದ್ದಾನೆ ಎನ್ನುವುದನ್ನು ಗುರುತು ಹಿಡಿದು, ಒಬ್ಬರು ಬಂದು ನಮ್ಮೊಂದಿಗಿದ್ದ ಒಬ್ಬಾತನನ್ನು ಮಾತನಾಡಿಸಿದ್ದರು! )

ಆ ನಂತರ ನಮ್ಮ ಮಾತು ಅವರ ಊರಿನ ರಾಜಕೀಯದತ್ತ ಅದು ಹೇಗೋ ತಿರುಗಿಕೊಂಡಿತು. ಬಹುಶಃ ಆಗ ಯಾವುದೋ ಚುನಾವಣೆ ಇದ್ದಿರಬೇಕು. ರಾಜಕೀಯ ಪಕ್ಷಗಳ ನಾಯಕರ ಬಗ್ಗೆ ಮಾತಾಡ್ತಾ ಅವರ ಊರಿನ, ತಾಲ್ಲೂಕಿನ, ಜಿಲ್ಲೆಯ ನಾಯಕರ ಬಗ್ಗೆ ಮಾತಾಡಲು ಶುರುವಿಟ್ಟ. ಅವರುಗಳು ಅಲ್ಲಿ ನಡೆಸುವ ದಂಧೆಗಳು, ಅವರ ಕುಟುಂಬದ ವಿವರಗಳು, ವರ್ತನೆ, ಹಗೆತನ, ಪ್ರತಿಯೊಂದು ವಿಷಯವೂ ಆತನಿಗೆ ತಿಳಿದಿತ್ತು. ಅಷ್ಟೇ ಅಲ್ಲದೆ, ಊರಿನಲ್ಲಿ ನಡೆಯುವ ಮಟ್ಕಾ ಇತ್ಯಾದಿ ಎಲ್ಲ ಬಗೆಯ ಕಾನೂನು ಬಾಹಿರ ಚಟುವಟಿಕೆಗಳ ಜಾಲಗಳ ಪರಿಚಯವೂ ಇತ್ತು. ಅವನ ಲೋಕಜ್ಞಾನ ಕಂಡು ನಾನು ಬೆರಗಾಗಿದ್ದೆ. ನಾವೆಲ್ಲ ಎಂಥ ಬೆಪ್ಪುಗಳು ಎಂದು ಅರಿವಾಗಿ.

ಸಿನಿಮಾ ಮೋಹ ಮತ್ತು ರಾಜಕೀಯ ಪ್ರಜ್ಞೆ ನಮ್ಮ ಸಮಾಜದಲ್ಲಿ ಹೇಗೆ ಒಂದಕ್ಕೊಂದು ಹೆಣೆದುಕೊಂಡು ಕೆಲಸ ಮಾಡುತ್ತದೆ ಅಂತ ನಿರ್ಣಯ ಮಾಡುವುದು ಸುಲಭವಲ್ಲ. ಸಿನಿಮಾ ನಟ/ ನಟಿಯ ರಾದ ಮಾತ್ರಕ್ಕೆ ಜನರು ಮರುಳಾಗಿ ಅವರನ್ನು ಗೆಲ್ಲಿಸುತ್ತಾರೆ ಅಂತಲೂ ಇಲ್ಲ. ಆದರೆ ಜನರಿಗೆ ನಾಯಕರಲ್ಲಿ ಇರುವ ಯಾವುದೋ ಒಂದು ಆಕರ್ಷಣೆಯ ಅಂಶ ಇಷ್ಟವಾಗಿರುತ್ತದೆ. ಅದು ಸಮಾಜ ಸೇವೆ, ಸರಳತೆ, ಬುದ್ಧಿವಂತಿಕೆ, ಔದಾರ್ಯ, ಪ್ರಾಮಾಣಿಕತೆ, ಭ್ರಷ್ಟರಲ್ಲ ಎನ್ನುವ ಭರವಸೆ, ಇತ್ಯಾದಿ ಸಂಗತಿಗಳೆಲ್ಲ ಜನರ ಮನಸ್ಸಿನಲ್ಲಿ ಕೆಲಸ ಮಾಡುತ್ತಿ ರುತ್ತವೆ. ಎಲ್ಲಕ್ಕಿಂತ ಪ್ರಬಲವಾದ ಆಕರ್ಷಣೆ ಎಂದರೆ ಸಿನಿಮಾ. ಅದಕ್ಕಾಗಿಯೇ ಎಷ್ಟೋ ಮಂದಿ ರಾಜಕಿಯ ಮಹತ್ವಾಕಾಂಕ್ಷೆ ಇರುವವರು ಮೊದಲು ಸಿನಿಮಾದಲ್ಲಿ ನಟಿಸಿ ಜನರ ಮನಸ್ಸಲ್ಲಿ ನೆಲೆಯೂರಲು ಪ್ರಯತ್ನಿಸುತ್ತಾರೆ. ಕೆಲವು ಅಧಿಕಾರಿಗಳೂ ನಟನೆ ಯಲ್ಲಿ ತೊಡಗಿ ನಂತರ ರಾಜಕೀಯಕ್ಕೆ ಇಳಿದಿದ್ದಾರೆ. ಗೆದ್ದ ಮೇಲೂ, ನಟನೆಯಲ್ಲಿ ಆಸಕ್ತಿ ಕುಂದಿದ ಮೇಲೂ, ಜನರಿಗೆ ಕಣ್ಣಿಗೆ ಕಾಣಿಸಿ ಕೊಳ್ಳುತ್ತಿರಬೇಕು ಎಂಬ ಸಲುವಾಗಿ ಆಗಾಗ ಸಿನಿಮಾದಲ್ಲಿ ನಟಿಸುವವರಿದ್ದಾರೆ.

ಒಟ್ಟಿನಲ್ಲಿ ಹೇಗೋ ಜನರ ಮನಸ್ಸನ್ನು ಮರುಳುಗೊಳಿಸಿ ತಮ್ಮ ಕಡೆ ಸೆಳೆದುಕೊಂಡಿರಬೇಕು. ಆದರೆ, ಇಷ್ಟರಿಂದಲೇ ಜನ ನಾಯಕರಾಗಿ ರಾರಾಜಿಸುತ್ತಾರೆ ಅಂತೇನೂ ಇಲ್ಲ. ವಿಜಯ್ ಗೆಲುವಿ ನಿಂದ ಪ್ರೇರಿತರಾಗಿ ಕರ್ನಾಟಕದಲ್ಲೂ ಅಂಥದ್ದೊಂದು ಸಾಧ್ಯತೆ ಇದೆಯೇ ಎಂದು ಸಿನಿಮಾದವರೂ ಮಾಧ್ಯಮದವರೂ ಬಹಳ ಹುರುಪಿನಲ್ಲಿದ್ದಾರೆ. ಅಲ್ಲಿ ಆದ ಮಾತ್ರಕ್ಕೆ ಇಲ್ಲೂ ಆಗುತ್ತದೆ ಅಂತ ಹೇಳಲಾಗುವುದಿಲ್ಲ. ಆಗಲಾರದು ಅಂತಲೂ ಅಲ್ಲ. ಆದರೆ, ಅದು ಕೇವಲ – ಅಲ್ಲಿ ಆ ಸಿನಿಮಾ ನಟ ಗೆದ್ದ; ಇಲ್ಲೂ ಗೆಲ್ಲಬಹುದು ಅನ್ನು ವಷ್ಟು ಸರಳವಲ್ಲ. ರಾಜಕೀಯ ಕ್ಷೇತ್ರದಲ್ಲಿ ಪ್ರಯತ್ನಿಸಿ ಸೋತಿರುವ ಘಟಾನುಘಟಿ ನಟ/ನಟಿಯರ ಪಟ್ಟಿಯೂ ದೊಡ್ಡದಿದೆ. ಹಾಗೆ ಸೋತವರ ಸಿನಿಮಾ ಸ್ಟಾರ್ಡಮ್ ಕುಂದಿದ ಹಾಗೂ ಕಾಣುತ್ತಿಲ್ಲ. ಹಾಗಿದ್ದರೆ, ಇಂಥ ಸಂದರ್ಭದಲ್ಲಿ ಸಿನಿಮಾ ಮೋಹವನ್ನೂ ಮೀರಿದ ಯಾವುದೋ ಅಂಶ ಜನರ ಮನಸ್ಸನ್ನು ಆಳುತ್ತಿರುತ್ತದೆ ಅಂತಾಯಿತು. ಅದು ಜಾತಿಯೋ ಹಣವೋ ಅಪನಂಬಿಕೆಯೋ ಇರಬಹುದು. ಅಂತೆಯೇ, ಸಿನಿಮಾ ಮೋಹ ಒಂದೇ ಗೆಲುವಿನ ಕಾರಣವಾಗಿರುವು ದಿಲ್ಲ. ಆಮಿಷಗಳು, ಸಂಘಟನೆ, ಹಣ ಬಲ, ಜಾತಿ ಬಲ ಸಾಲದು. ಅದೆಲ್ಲವನ್ನೂ ಮೀರಿ, ಆ ಕಾಲಘಟ್ಟದಲ್ಲಿ ಎಲ್ಲ ಹಳೆಯ ಆಯ್ಕೆಗಳ ಬಗ್ಗೆ ಒಂದು ಜುಗುಪ್ಸೆ ಹೊಂದಿ, ಹೊಸ ಆಯ್ಕೆಯ ಬಗ್ಗೆ ಉಮೇದು ಹೆಚ್ಚಿರಬೇಕು. ಮೋಹದ ಜೊತೆ ಭವಿಷ್ಯದ ಬಗೆಗಿನ ಭರವಸೆಯೂ ತಳವೂರಿರಬೇಕು. ಒಂದು ಯುವ ಪಡೆ ಆಕಾಂಕ್ಷೆಗಳ ಆಕಾಶಬುಟ್ಟಿ ಯಲ್ಲಿ ತೇಲುತ್ತಿರಬೇಕು.

ಇದು ಕೇವಲ ಮೊನ್ನೆ ತಮಿಳುನಾಡಿನಲ್ಲಿ ನಡೆದ ಗೆಲುವಿನ ವಿಚಾರ ಮಾತ್ರವಲ್ಲ. ಅದು ಕೇವಲ ಸಿನಿಮಾ ಸ್ಟಾರ್ಡಮ್‌ನಿಂದ ಉಂಟಾದದ್ದಲ್ಲ. ಈ ಹಿಂದೆ ದೆಹಲಿಯಲ್ಲಿ, ಬಂಗಾಳದಲ್ಲಿ, ಭಾರತದ ಕೇಂದ್ರದ ಚುನಾವಣೆಯಲ್ಲೂ ಆಗಿರುವುದು ಇದೇ ಬೇಸತ್ತ ಮನಸ್ಸುಗಳ ಭರವಸೆ ಆಕಾಂಕ್ಷೆಗಳ ಆಟ. ಆಗಲೂ ಕೆಲಸ ಮಾಡಿದ್ದು ಅಭಿವೃದ್ಧಿ ಎನ್ನುವ, ಭ್ರಷ್ಟಾಚಾರ ರಹಿತ ಎನ್ನುವ, ಹೊಸ ಯುಗ ಎನ್ನುವ ಮೋಹದ ಅಲೆ ಬೀಸಿದ ಸ್ಟಾರ್ ಆಟಗಾರರ ವರಸೆಯೇ. ಇದು ಮೋಸದ ಆಟ ಅಂತ ಹೇಳುವ ಮತ್ತೊಬ್ಬ ಆಟಗಾರ ಬರುತ್ತಾನೆ. ಅಷ್ಟರಲ್ಲಿ ತಾನು ಏನೇನೆಲ್ಲ ಆಟವಾಡಬೇಕೋ ಅದನ್ನು ಈತ ಆಡಿ ಮುಗಿಸಿರುತ್ತಾನೆ. ಜನರಂತು ಚಪ್ಪಾಳೆ ಹೊಡೆಯುತ್ತಲೇ ಇರುತ್ತಾರೆ. ಎಲ್ಲರೂ ಜನರ ಮನಸ್ಸಿನಲ್ಲಿ ತನ್ನ ಪರವಾದ ಅಲೆ ಎಬ್ಬಿಸಲು ಸಿನಿಮಾ, ಧರ್ಮ, ಸಿದ್ಧಾಂತ, ಅಭಿವೃದ್ಧಿಗಳ ತಂತ್ರ ರೂಪಿಸುತ್ತ ಲೆಕ್ಕಾಚಾರ ಹಾಕುತ್ತಿರುತ್ತಾರೆ. ಆ ಲೆಕ್ಕಾಚಾರ ಒಮ್ಮೊಮ್ಮೆ ಸರಿಯಾಗಿರುತ್ತೆ, ಕೆಲವೊಮ್ಮೆ ತಲೆಕೆಳಗಾಗುತ್ತೆ; ಮತ ನೀಡಿ ಆಯ್ಕೆ ಮಾಡಿದ ಜನರ ಲೆಕ್ಕಾಚಾರವೂ ಕೂಡ.

(ಲೇಖಕರು ಕನ್ನಡದ ಹೆಸರಾಂತ ಕಥೆಗಾರರು)
vhathwar@gmail.com

 

Tags:
error: Content is protected !!