ವಿನುತ ಕೋರಮಂಗಲ
ಪಾಂ… ಪಾಂ… ಎಂಬ ಸದ್ದು ಕಿವಿಗೆ ಬೀಳುತ್ತಲೇ ಏನೇ ಕೆಲಸ ಮಾಡುತ್ತಿದ್ದರೂ ಅವೆಲ್ಲವನ್ನು ಅಲ್ಲಲ್ಲೇ ಬಿಟ್ಟು ಮನೆಯಲ್ಲಿ ವಾರದಿಂದಲೂ ಸಂಗ್ರಹಿಸಿಟ್ಟಿದ್ದ ಗಾಜಿನ ಖಾಲಿ ಬಾಟಲುಗಳು, ಒಡೆದ ಪ್ಲಾಸ್ಟಿಕ್ ವಸ್ತುಗಳು, ತುಕ್ಕು ಹಿಡಿದ ಕಬ್ಬಿಣದ ಸಾಮಾನುಗಳನ್ನು ತುಂಬಿದ್ದ ಚೀಲದೊಡನೆ ಹೊರಗೆ ಓಡುತ್ತಿದ್ದೆ. ಆಗಲೇ ಬೀದಿಯ ಮಕ್ಕಳೆಲ್ಲರೂ ಸ್ಪರ್ಧೆಗೆ ಬಿದ್ದವರಂತೆ ನನಗಿಂತಲೂ ಮುಂದಾಗಿ ತಿಂಡಿ ತೆಗೆದುಕೊಳ್ಳಲು ತಳ್ಳುಗಾಡಿಯ ಸುತ್ತಲು ಜಮಾಯಿಸಿರುತ್ತಿದ್ದರು.
ಕಲ್ಲುಸಕ್ಕರೆ, ಕಡ್ಲೆ ಮಿಠಾಯಿ, ಕೊಬ್ಬರಿ ಮಿಠಾಯಿ, ಬಟಾಣಿ, ಬೊಂಬಾಯಿ ಮಿಠಾಯಿ, ಕಡಲೆ ಪಪ್ಪು, ಸೌತೆಕಾಯಿ, ಕಲ್ಲಂಗಡಿ, ಮೂಸಂಬಿ, ಐಸ್ ಕ್ಯಾಂಡಿ… ಹೀಗೆ ಋತುಮಾನಕ್ಕೆ ತಕ್ಕಂತಹ ತಿಂಡಿಗಳು. ಗಾಜಿನ ಬಾಟಲುಗಳಲ್ಲಿದ್ದ ವಿವಿಧ ಬಗೆಯ ತಿಂಡಿಗಳು ಸುತ್ತಲು ನೆರೆದ ಮಕ್ಕಳ ಬಾಯಲ್ಲಿ ನೀರೂರಿಸುತ್ತಿದ್ದವು.
ಪ್ರತಿವಾರ ಹಳೆಯ ವಸ್ತುಗಳು ಸಿಗದಿದ್ದಾಗ, ಬರೆದು ಮುಗಿಸಿದ ನೋಟ್ ಪುಸ್ತಕಗಳು ತಿಂಡಿಗಾಗಿ ತ್ಯಾಗಕ್ಕೆ ತಯಾರಾಗುತ್ತಿದ್ದವು. ಅವು ನನ್ನ ಪುಸ್ತಕಗಳೆ ಆಗಬೇಕೆಂತೇನೂ ಇಲ್ಲ… ಅಣ್ಣನದ್ದು, ತರಗತಿಯಲ್ಲಿ ಬೇರೆಯವರಿಂದ ಎಗರಿಸಿದ್ದೂ ಆಗಿರುತ್ತಿತ್ತು. ಬಾಲ್ಯದಲ್ಲಿ ನನಗೆ ಕದಿಯುವುದು ಆಜನ್ಮಸಿದ್ಧಹಕ್ಕು ಎನಿಸಿಬಿಟ್ಟಿತ್ತು. ಇಡೀ ಬೀದಿಯ ಮಕ್ಕಳೆಲ್ಲ ಒಂದೆಡೆ ತಿಂಡಿಕೊಳ್ಳುತ್ತಾ, ಹಂಚಿಕೊಳ್ಳುತ್ತಾ, ತಿನ್ನುತ್ತಾ ಆಟವಾಡುತ್ತಾ ನಲಿಯುತ್ತಿದ್ದವು. ಕಲ್ಲುಸಕ್ಕರೆಯನ್ನು ಹಂಚಿಕೊಳ್ಳುವಾಗ ಬಟ್ಟೆಯಲ್ಲಿ ತಿಂಡಿಯಿಟ್ಟು ಬಾಯಲ್ಲಿ ಕಡಿದು ‘ಕಾಗೆ ಎಂಜಲು ಏನಾಗಲ್ಲ ತಿನ್ನು’ ಎನ್ನುತ್ತಿದ್ದೆವು. ಈ ಸಂಗತಿ ಗಳೇನು ಶತಮಾನ ಹಿಂದೇನೂ ಸಂಭವಿಸಿದ್ದಲ್ಲ. ಕೇವಲ ಹತ್ತಿಪ್ಪತ್ತು ವರ್ಷಗಳ ಹಿಂದಷ್ಟೇ. ಮನೆಯಲ್ಲಿ ಬಳಸಲು ಯೋಗ್ಯವಲ್ಲದ ವಸ್ತುಗಳು ಪಾಂ… ಪಾಂ… ತಳ್ಳುಗಾಡಿ ಸೇರಿ, ಅಲ್ಲಿನ ತಿಂಡಿಗಳು ಮಕ್ಕಳ ಕೈ ಸೇರುತ್ತಿದ್ದವು. ಈ ನೆಪದಲ್ಲಿ ಕೇರಿಯ ಮಕ್ಕಳೆಲ್ಲರೂ ಒಗ್ಗೂಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಮಾಲ್ ಸಂಸ್ಕ ತಿ ಬಂದು, ಅದು ಬದುಕಿನ ಫ್ಯಾಷನ್ ಆಗಿಹೋಗಿದೆ. ಅಲ್ಲೇ ಕೊಂಡು, ಅಲ್ಲೇ ತಿನ್ನುವ, ಬೇಕಾಗಿದ್ದು ಬೇಡವಾದ್ದನ್ನೆಲ್ಲ ಮನೆಗೊಯ್ಯುವ ಕೊಳ್ಳುಬಾಕ ಮನಸ್ಥಿತಿ ಎಲ್ಲೆಡೆಯೂ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೀದಿಯ ಮಕ್ಕಳೆಲ್ಲ ಒಟ್ಟಾಗಿ ಕಲೆತು ಆಡುವ ದೃಶ್ಯವಂತು ಬಲು ಅಪರೂಪ! ಅಕ್ಷರಸ್ಥರೆನಿಸಿಕೊಂಡ ನಾವು, ನಮ್ಮ ಮಕ್ಕಳನ್ನು ಆಡಲು ಬೀದಿಗೆ ಬಿಡದೆ ಅಕ್ಷರಶಃ ಅವರನ್ನು ಗೃಹಬಂಧನದಲ್ಲಿಟ್ಟಿದ್ದೇವೆ. ನಾವು ಬಿಟ್ಟರೂ ಮೊಬೈಲ್ ಮಾಯೆ ಎಲ್ಲರನ್ನೂ ಆವರಿಸಿಕೊಂಡಿದೆ. ಒಂದೇ ಮನೆಯಲ್ಲಿ ಹಲವು ದ್ವೀಪಗಳು. ಬೀದಿಯಲ್ಲಿ ಮಾರುವ ವಸ್ತುಗಳನ್ನು ಖರೀದಿಸುವವರು ನಿರ್ಗತಿಕರೆಂದು, ಮಾಲ್ ಗಳಿದ್ದಲ್ಲಿಗೆ ತಾವೇ ಹೋಗಿ ಕೊಳ್ಳುವವರನ್ನು ಅಂತಸ್ತಿನ ಸಂಕೇತವೆಂಬ ಭ್ರಮೆಯೊಳಗೆ ಜಗತ್ತು ಮುಳುಗಿ ಹೋಗುತ್ತಿದೆ.
ಇಲಿಗಳೆಲ್ಲವನ್ನು ತನ್ನ ಹಿಂದೆ ಸಾಲು ಗಟ್ಟಿ ಬರುವಂತೆ ಕೊಳಲನ್ನು ಊದುತ್ತಾ ಬರುವ ಕಿಂದರಿ ಜೋಗಿಯಂತೆ ; ತಳ್ಳುಗಾಡಿಯ ಪಾಂ…ಪಾಂ… ಸದ್ದು ಮಾಡುತ್ತ ಊರ ಮಕ್ಕಳೆಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದ ಅದೇ ಮಾಂತ್ರಿಕರು ಕಡಿಮೆಯಾಗಿದ್ದಾರೆ. ಗ್ರಾಹಕರನ್ನು ಕಳ್ಳರಂತೆ ಪರಿಗಣಿಸಿ ಸಿಸಿಟಿವಿ ಇಡುವ ಮಾಲ್‌ಗಳೆಲ್ಲಿ? ಕೈಯಲ್ಲಿ ಕಾಸಿಲ್ಲದಾಗ ‘ತಗೋ ಮಗ ತಿನ್ಕೊ… ಕಾಸಿದ್ದಾಗ ಕೊಡಿವಂತೆ’ ಎಂದು ನಗುತ್ತಾ, ನಾವು ನಗುವಂತೆ ಕೈಗೆ ತಿನಿಸು ಕೊಟ್ಟು ಹೋಗುತ್ತಿದ್ದ ಆ ಮಾನವೀಯತೆಯ ಜನರೆಲ್ಲಿ! ಏನಿಲ್ಲದಿದ್ದರೂ ತಿಂಡಿ ಸಿಕ್ಕೇಸಿಗುತ್ತದೆಂಬ ನಂಬಿಕೆಯನ್ನು ಮೂಡಿಸುತ್ತಿದ್ದ ಇಂತಹ ಮಾಂತ್ರಿಕರ ಕಡೆಗೆ ಸಮಾಜ ಸೌಜನ್ಯದ ನೋಟ ಬೀರಬೇಕಾಗಿದೆ.
” ಏನಿಲ್ಲದಿದ್ದರೂ ತಿಂಡಿ ಸಿಕ್ಕೇಸಿಗುತ್ತದೆಂಬ ನಂಬಿಕೆಯನ್ನು ಮೂಡಿಸುತ್ತಿದ್ದ ಇಂತಹ ಮಾಂತ್ರಿಕರ ಕಡೆಗೆ ಸಮಾಜ ಸೌಜನ್ಯದ ನೋಟ ಬೀರಬೇಕಾಗಿದೆ.”




