ಹನಿ ಉತ್ತಪ್ಪ
ಇವರ ಹೆಸರು ಮುತ್ತ ಮತ್ತು ಲಚ್ಚಿ. ಕೊಡಗಿನ ಜೇನುಕುರುಬ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಮುತ್ತ ಚಿಕ್ಕ ಹುಡುಗನಿದ್ದಾಗಿಂದಲೂ ಕಾಫಿತೋಟದ ಕೆಲಸವನ್ನೇ ನಂಬಿಕೊಂಡಿದ್ದಾರೆ. ನಲವತ್ತರ ಆಸುಪಾಸಿನವರಾದ ಮುತ್ತ ಮತ್ತು ಹೆಂಡತಿ ಲಚ್ಚಿ ಮಾಡದ ಸಾಲಕ್ಕೆ ಬಡ್ಡಿ ತೀರಿಸುತ್ತಾ ಜೀತದಾಳಾಗಿ ಬದುಕುತ್ತಿದ್ದಾರೆ ಎಂದರೆ ಹುಬ್ಬೇರಿಸಬೇಡಿ.
ಮುತ್ತ ಮತ್ತು ಲಚ್ಚಿಯರ ಮದುವೆಯಾದ ಹೊಸತು. ಹೆಂಡತಿಯನ್ನು ಎಲ್ಲಿಯೂ ಕೆಲಸಕ್ಕೆ ಕಳುಹಿಸಬಾರದು ಎಂಬುದು ಮುತ್ತನ ಆಸೆಯಾದರೂ ಸಂಸಾರದ ನೊಗ ಸಾಗಿಸಲು ಇಬ್ಬರೂ ಕೆಲಸ ಮಾಡಲೇಬೇಕಿತ್ತು. ಹದಿಹರಯದ ವಯಸ್ಸಿನವರಾಗಿದ್ದ ಮುತ್ತನಿಗೆ ತೋಟದ ಮಾಲೀಕರು ಕುಡಿತದ ಚಟ ಅಂಟಿಸಿದ್ದರು. ಹಾಗಾಗಿ ೭೫ ರೂಪಾಯಿಯಿಂದ ೧೦೦ ರೂಪಾಯಿ, ೧೫೦ ರೂಪಾಯಿಗೆ ದಿನಗೂಲಿ ಏರಿಕೆ ಆದರೂ ಸಂಸಾರದಲ್ಲಿ ಉಳಿಕೆ ಎಂಬುದು ಅಸಾಧ್ಯವೇ ಆಯಿತು.
ತೋಟದ ಮಾಲೀಕರು ಕ್ವಾಟರ್ ಕುಡಿಸಿ ಒಂದಕ್ಕೆ ಮೂರು ಪಟ್ಟು ಹಣ ವಸೂಲಿ ಮಾಡುವುದು ಒಂದು ಕಡೆಯಾದರೆ, ತಮಗೆ ಬೇಕಾದಷ್ಟು ಹಣ ನಮೂದಿಸಿ ಸಾಲಪತ್ರವನ್ನು ತಯಾರಿಸಿ ಅವರ ಮತ್ತೇರಿದ ಅಮಲಿನಲ್ಲಿ ಸಹಿ ಹಾಕಿಸಿಕೊಂಡು ಬಿಡುತ್ತಾರೆ! ಮುತ್ತ ದಂಪತಿ ಎದುರಿಸುತ್ತಿರುವುದು ಇದೇ ಸಮಸ್ಯೆಯನ್ನು. ಐದಾರು ದಿನ ಮಾಡಿದ ಕೆಲಸಕ್ಕೆ ವಾರದ ಕೊನೆಯಲ್ಲಿ ಸಂಬಳ ಅಂತ ತೆಗೆದುಕೊಳ್ಳುವಾಗ ಸಾಲಪತ್ರವನ್ನು ತೋರಿಸಿ, ೭೫ ಸಾವಿರ ರೂ. ಸಾಲ ಕಟ್ಟಿ, ಎಂದರೆ ಆ ಮುಗ್ಧ ಜೀವಕ್ಕೆ ಹೇಗಾಗಿರಬೇಡ? ತಾನು ಜೀವನಪರ್ಯಂತ ದುಡಿದರೂ ಇದು ದೊಡ್ಡ ಮೊತ್ತವನ್ನು ತೀರಿಸಲಾಗುವುದಿಲ್ಲ ಎಂಬ ಅರಿವು ಸ್ವತಃ ಮುತ್ತನವರಿಗೂ ಇದೆ. ಹಾಗೆಂದು ಮುತ್ತ ಸಾಲ ತೆಗೆದುಕೊಂಡೇ ಇಲ್ಲ ಎಂದಲ್ಲ. ಸ್ವಂತ ಸೂರು ಇಲ್ಲದೇ ಇದ್ದರೂ ಐವರು ಮಕ್ಕಳ ಕನಸುಗಳ ಜವಾಬ್ದಾರಿಗೆ ಹಣ ಬೇಡವೇ? ಮದುವೆ, ಮಕ್ಕಳ ಓದಿಗೆಂದು ಒಂದಷ್ಟು ಹಣ ಸಾಲ ಪಡೆದಿದ್ದರು. ಆದರೆ ಇಷ್ಟೊಂದು ಹಣವನ್ನು ಪಡೆದು ತೀರಿಸುವಷ್ಟು ಸ್ಥಿತಿವಂತ ತಾನಲ್ಲ ಎಂದು ತೋಟದ ಮಾಲೀಕರಲ್ಲಿ ಬೇಡಿಕೊಂಡಿದ್ದರು.
ಮಾಲೀಕರು ಮಣಿಯಲಿಲ್ಲ, ಇನ್ನು ಕರಗುವುದಂತೂ ದೂರದ ಮಾತೇ ಸರಿ. ಅದಕ್ಕಾಗಿ ಮುತ್ತ ಮತ್ತು ಲಚ್ಚಿ ಮೂರು ವರ್ಷಗಳ ಹಿಂದೆ ಬೇರೆ ಕೆಲಸವನ್ನು ಅರಸಿ ಅಲ್ಲಿಂದ ಬೀಡುಬಿಟ್ಟರು. ಕೆಲ ಇಲಾಖೆಯ ಅಧಿಕಾರಿಗಳಿಗೆ ತಮಗಾದ ಅನ್ಯಾಯವನ್ನು ವಿವರಿಸಿದರು. ಸ್ಪಂದನೆ ಸಿಗಲೇ ಇಲ್ಲ…! ಅಲ್ಲಿಂದ ಬಂದ ಮೇಲೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಊರಿನ ಕೆಲವರು ಕಳ್ಳರು ಎಂದು ಆರೋಪ ಹೊರಿಸುತ್ತಿದ್ದಾರೆ. ಮಾಲೀಕರು ದುಡ್ಡು ಕೊಡಬೇಕೆಂದು ಒತ್ತಾಯಿಸಿ, ಮಾನಸಿಕ ಹಿಂಸೆ ಕೊಡುತ್ತಲೇ ಇದ್ದಾರೆ.
ಉಳಿವುದಕ್ಕೆ ಸೂರಿಲ್ಲ; ಬದುಕಲ್ಲಿ ನೆಮ್ಮದಿಯೂ ಇಲ್ಲ ಎನ್ನುತ್ತಿದ್ದಾರೆ ಜೇನುಕುರುಬರ ಮುತ್ತ ಮತ್ತು ಲಚ್ಚಿ





