ಬಾಪು ಸತ್ಯನಾರಾಯಣ
ಪಾಕಿಸ್ತಾನ ಮತ್ತು ಭಾರತ ವಿಭಜನೆಗೆ ಆಗ ತಯಾರಾಗಿತ್ತು. ಅಂದಿನ ಚಿತ್ರಣವನ್ನು ನೆನೆವಾಗ ೧೯೩೯ರಿಂದ ೧೯೪೫ರವರೆಗೆ ನಡೆದ ಎರಡನೇ ಜಾಗತಿಕ ಯುದ್ಧದ ಪರಿಸ್ಥಿತಿ ಕಣ್ಣಮುಂದೆ ಹಾದುಹೋಗುತ್ತದೆ. ಅಖಂಡ ಭಾರತ ಬ್ರಿಟಿಷರ ಕಪಿಮುಷ್ಟಿಯಿಂದ ಸ್ವತಂತ್ರವಾಯಿತು ಎಂದು ಸಂಭ್ರಮಿಸುವ ಬೆನ್ನಲ್ಲೇ ಇಬ್ಭಾಗವಾಗುವ ಸಂದರ್ಭ ತಲೆದೋರಿತು. ಯುದ್ಧ ಶುರುವಾದಾಗ ನನಗಿನ್ನೂ ಏಳರ ವಯಸ್ಸು. ಆದರೆ ಆ ದುರಿತ ಕಾಲಘಟ್ಟ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದಂತೆ ಉಳಿದಿದೆ. ಹುಡುಗಾಟಿಕೆಯ ವಯಸ್ಸಾದರೂ ಎದುರಿಸಿದ ಸಂಕಷ್ಟವನ್ನು ಇನ್ನೂ ಮರೆತಿಲ್ಲ!
ಈಗಿನಂತೆ ಶತ್ರು ವಿಮಾನಗಳು ದಾಳಿ ಮಾಡುವ ಸುಳಿವು ಸಿಕ್ಕಿದರೆ ಜೋರಾಗಿ ಸೈರನ್ ಶಬ್ದವಾಗುತ್ತಿತ್ತು. ಆಗೆಲ್ಲ ಪ್ರತಿ ರಸ್ತೆಗಳ ಅಂಚಿನಲ್ಲಿ ಚರಂಡಿಗಳನ್ನು ಮಾಡಿರುತ್ತಿದ್ದರು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ, ನಾವು ತಡಮಾಡದೇ ಸೈರನ್ ಶಬ್ದ ಕಿವಿಗೆ ಬಿದ್ದ ಕೂಡಲೇ ಚರಂಡಿಗೆ ಹಾರಿ ತಲೆತಗ್ಗಿಸಿ, ಮಿಸುಕಾಡದಂತೆ ಕೂತಿರುತ್ತಿದ್ದೆವು. ಸೈರನ್ ಸದ್ದು ಬಗೆ ಬಗೆಯಲ್ಲಿರುತ್ತಿತ್ತು. ಯುದ್ಧ ದಾಳಿ ಆಗುತ್ತಿದೆ ಎನ್ನುವಾಗ ಶಬ್ದ ಹೊರಡಿಸಿದರೆ, ಕಾವೇರಿದ ಸ್ಥಿತಿ ತಣ್ಣಗಾಗುತ್ತಿದೆ ಎನ್ನುವಾಗ ಬೇರೆಯದೇ ರೀತಿಯಲ್ಲಿ ಸದ್ದು ಮಾಡುತ್ತಿತ್ತು. ಯುದ್ಧ ದಾಳಿಗೆ ಬೆದರಿ ಚರಂಡಿಗೆ ಬಿದ್ದವರು AI Clear Singal ಎಂಬ ಸೈರನ್ ಶಬ್ದ ಬರುವ ತನಕವೂ ಅಲ್ಲೇ ಇರಬೇಕಿತ್ತು. ಆ ಸದ್ದು ಬಂದ ತಕ್ಷಣ ಯುದ್ಧವಿಮಾನಗಳು ಬಾಂಬು ಹಾಕುವುದಿಲ್ಲವೆಂಬ ಅರ್ಧಂಬರ್ಧ ಧೈರ್ಯದಿಂದ ಚರಂಡಿಯಿಂದ ಎದ್ದು ಹೊರಡುತ್ತಿದ್ದೆವು.
ಬೆಳಗಿನ ಓಡಾಟದ ಕತೆ ಹೀಗಾದರೆ, ರಾತ್ರಿಯ ನಿದ್ರೆಗೂ ಕಡಿವಾಣ ಬೀಳುತ್ತಿತ್ತು. ಈಗಿರುವಂತೆ ಮನೆಯ ಕದಗಳನ್ನು ಮುಚ್ಚಿ ಮಲಗುವ ಆರಾಮದಾಯಕ ಸ್ಥಿತಿ ಆಗ ನಮ್ಮ ಕನಸಿನ ಕಲ್ಪನೆಗೂ ದೂರವೇ ಹೌದು.
ರಾತ್ರಿ ಸಮಯದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು. ರಾತ್ರಿ ಸಮೀಪಿಸಿದ ಕೂಡಲೇ ಪ್ರತಿಯೊಂದು ಕಿಟಕಿ, ಬಾಗಿಲುಗಳನ್ನು ಕಪ್ಪು ಬಣ್ಣದ ಬಟ್ಟೆಯನ್ನೋ ಅಥವಾ ರಟ್ಟನ್ನೋ ಹಾಕಿ ಮುಚ್ಚಬೇಕಂಬ ಷರತ್ತನ್ನು ಯಾರೂ ಮೀರುವಂತಿರಲಿಲ್ಲ. ಅಷ್ಟಕ್ಕೇ ಸುಮ್ಮನಾಗುವಂತಿರಲಿಲ್ಲ. ಮನೆಯೊಳಗೆ ಎಲೆಕ್ಟ್ರಿಕ್ ಬಲ್ಬ್‌ಗಳನ್ನು ಹಚ್ಚದೆ ಮೋಂಬತ್ತಿಯೋ ಅಥವಾ ಮಿಣಿಮಿಣಿ ದೀಪ ಹಚ್ಚಿ ರಾತ್ರಿಗಳನ್ನು ಕಳೆಯಬೇಕಿತ್ತು. ಮೊದಲೇ ಕವಿದ ಕತ್ತಲನ್ನು ಇನ್ನಷ್ಟು ಗಾಢವಾಗಿಸುವ ಜೊತೆಗೆ ಬೆಳಕಿಗೂ ನಿರ್ಬಂಧ ಹೇರುವ ಹಿಂದಿನ ಉದ್ದೇಶ ಏನಿರಬಹುದೆಂದು ಯೋಚಿಸುತ್ತಿದ್ದೆ. ಆಗ ನಮ್ಮ ಹಿರಿಯರು ಹೇಳಿದ್ದು, ರಾತ್ರಿ ಸಮಯದಲ್ಲಿ ಶತ್ರು ವಿಮಾನಗಳಿಗೆ ನಾವಿರುವ ಸ್ಥಳಗಳ ಸುಳಿವು ಸಿಗಬಾರದೆಂದು ಮನೆಯಿಂದ ಬೆಳಕು ತೂರುವ ಕಿಂಡಿಗಳಾದ ಕಿಟಕಿ, ಬಾಗಿಲುಗಳನ್ನು ಕಪ್ಪು ಬಟ್ಟೆಯಿಂದ ಬಂದೋಬಸ್ತ್ ಮಾಡುವುದು ಎಂದು. ಈ ಯುದ್ಧದ ಸಮಯದಲ್ಲಿ ನಾವು ಇನ್ನೊಂದು ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಆಗ ದಿನನಿತ್ಯದ ಆಹಾರಕ್ಕೆ ಅಕ್ಕಿ, ಸಕ್ಕರೆ, ಗೋಽ ಇತ್ಯಾದಿ ಪದಾರ್ಥಗಳನ್ನು ರೇಷನ್ ಅಂಗಡಿಯಿಂದಲೇ ಪಡೆಯಬೇಕಾಗಿತ್ತು.
ಸಾಮಾನ್ಯವಾಗಿ ನಮಗೆ ರೇಷನ್ ಕಾರ್ಡ್‌ನಲ್ಲಿ ಸಿಗುತ್ತಿದ್ದದ್ದು, ಬರ್ಮಾದಿಂದ ಬರುತ್ತಿದ್ದ ದಪ್ಪ ಅಕ್ಕಿ. ಎಲ್ಲೋ ಅಪರೂಪಕ್ಕೆ ಸಣ್ಣಕ್ಕಿ ಸಿಗುತ್ತಿತ್ತು. ಉಳಿದಂತೆ ಆಟ, ಪಾಠ ಇತ್ಯಾದಿ ಚಟುವಟಿಕೆಗಳು ಎಂದಿನಂತೆ ಸಾಗುತ್ತಿತ್ತು.
ಆ ಸಮಯದಲ್ಲಿ ಎತ್ತಿನಗಾಡಿಯಲ್ಲಿ ಕೂತು ಯುದ್ಧ ಕುರಿತ ಜಾಗೃತಿ ಸಂದೇಶಗಳನ್ನು ಜಾಗಟೆ ಅಥವಾ ಮೈಕ್ ಮೂಲಕ ಜನರಿಗೆ ತಿಳಿಸುತ್ತಿದ್ದರು. ಒಂದು ಸಂದರ್ಭದಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಜಪಾನೀಯರು ಬಂದು ಬಾಂಬ್ ಹಾಕುತ್ತಾರೆ ಎಂದು ಕೆಲ ಪುಂಡರು ಸುಳ್ಳು ವದಂತಿ ಹಬ್ಬಿಸಿದ್ದರು. ಊರ ಜನರೆಲ್ಲ ವಿಚಲಿತರಾಗಿದ್ದರು. ಯಾರಲ್ಲಿ ಹೋಗಿ ವಿಚಾರಿಸುವುದೆಂದು ತಿಳಿಯದಿದ್ದ ಸಂದರ್ಭದಲ್ಲಿ ಎತ್ತಿನಗಾಡಿಯಲ್ಲಿ ಬಂದ ಸಂದೇಶ ಧೈರ್ಯ ತುಂಬಿತ್ತು. ‘ಸುಳ್ಳು ಸುದ್ದಿಗೆ ಕಿವಿಗೊಟ್ಟು, ಗಾಬರಿ ಪಡಬೇಡಿ’ ಎಂಬ ಆಶ್ವಾಸನೆ ಆತಂಕದಲ್ಲಿದ್ದವರಿಗೆ ಆಧಾರವಾಗಿತ್ತು.





