Mysore
22
overcast clouds
Light
Dark

ಮಾಧವರಾಯರು ಹೇಳಿದ ಮೋತಿಖಾನೆಯ ಕಥೆ

ಸಿರಿ ಮೈಸೂರು

ಮೈಸೂರು ಮಹಾನಗರಪಾಲಿಕೆ ಕಚೇರಿಯ ಎದುರಿಗಿರುವ ಕರಿಕಲ್ಲು ತೊಟ್ಟಿ ದ್ವಾರ ಅರಮನೆಗೆ ಅಗತ್ಯ ದಾಸ್ತಾನುಗಳನ್ನು ಒದಗಿಸಲು ಕಟ್ಟಿದ್ದು ಎಂಬುದು ಎಷ್ಟು ಜನರಿಗೆ ಗೊತ್ತು? ಹೌದು..ಕರಿಕಲ್ಲು ತೊಟ್ಟಿಯನ್ನು ಕಟ್ಟಿದ್ದೇ ಹೊರಗಿನಿಂದ ದಿನಸಿ, ದಾಸ್ತಾನುಗಳನ್ನು ತರಲು ಎನ್ನುತ್ತದೆ ಇತಿಹಾಸ. ಅದಕ್ಕೆ ಅಲ್ಲೇ ಏಕೆ ದ್ವಾರ ಕಟ್ಟಿದರು ಎಂಬುದಕ್ಕೆ ಎರಡು ಕಾರಣಗಳಿವೆ. ದೇವರಾಜ ಮಾರುಕಟ್ಟೆಗೆ ಹತ್ತಿರವಾಗುತ್ತದೆ ಎಂಬುದು ಒಂದು ಕಾರಣವಾದರೆ ಅಲ್ಲೇ ಇದ್ದ ಮೋತಿಖಾನೆ ಮತ್ತೊಂದು ಕಾರಣ.

ಮೈಸೂರು ಮಹಾನಗರಪಾಲಿಕೆ ಕಚೇರಿಯ ರಸ್ತೆಯಲ್ಲೇ (ಸಯ್ಯಾಜಿರಾವ್‌ ರಸ್ತೆ) ಸೀದಾ ನಡೆದು ಹೋದರೆ ಎಡಭಾಗಕ್ಕೆ ಬನುಮಯ್ಯ ಕಾಲೇಜು ಸಿಗುತ್ತದೆ. ಈಗ ಬನುಮಯ್ಯ ಕಾಲೇಜಿನ ಸ್ನಾತಕೋತ್ತರ ವಿಭಾಗವಾಗಿರುವ ಈ ಪಾರಂಪರಿಕ ಕಟ್ಟಡ ಆಗಿನ ಕಾಲದಲ್ಲಿ ಮೋತೀಖಾನೆಯಾಗಿತ್ತಂತೆʼ ಎನ್ನುತ್ತಾ ಕೈಯಲ್ಲಿದ್ದ ಎಳನೀರು ಬುರುಡೆಯಲ್ಲಿ ಒಂದು ಗುಟುಕು ಕುಡಿದು ಬಾಯಿ ಒರೆಸಿಕೊಂಡರು ಮಾಧವರಾಯರು.

ಅಂದಹಾಗೆ ಮಾಧವರಾಯರು ಮಾತಿಗೆ ಸಿಕ್ಕಿದ್ದು ಬನುಮಯ್ಯ ಕಾಲೇಜಿನ ಬಗಲಿಗಿರುವ ಜಗುಲಿಯೊಂದರಲ್ಲಿ. ʼಇಲ್ಲಿ ಮೋತೀಖಾನೆ ಯಾವ್ದು?ʼ ಎಂಬ ಪ್ರಶ್ನೆಗೆ ಬಹಳ ವಿವರವಾಗಿ ಉತ್ತರ ಕೊಟ್ಟ ಅವರ ಬತ್ತಳಿಕೆಯಲ್ಲಿ ಬಹಳಷ್ಟು ಆಸಕ್ತಿದಾಯಕ ಕಥೆಗಳಿದ್ದವು. ʼಮೋತಿಖಾನೆ ನಿರ್ಮಾಣವಾದದ್ದೇ ದಾಸ್ತಾನು ಹಾಗೂ ದಿನಸಿಗಳನ್ನು ಕೂಡಿಡಲು. ಅರಮನೆ ಎಂದ ಮಾತ್ರಕ್ಕೆ ಎಲ್ಲವನ್ನೂ ಒಳಗೇ ಇಟ್ಟುಕೊಳ್ಳೋಕೆ ಆಗತ್ಯೇ? ಅದಕ್ಕೆಂದೇ ಮೋತೀಖಾನೆ ಕಟ್ಟಿಸಿದ್ರು ನಮ್ಮ ರಾಜರು. ಅಲ್ಲಿಂದ ಸಾಮಾನು ಒಳತರಲು ಕರಿಕಲ್ಲು ತೊಟ್ಟಿ ನಿರ್ಮಾಣವಾಯ್ತು. ಅರಮನೆಗೆ ಅಗತ್ಯ ದಾಸ್ತಾನು ಬರುತ್ತಿದುದೇ ಇಲ್ಲಿಂದʼ ಎನ್ನುತ್ತಾ ಆಸಕ್ತಿದಾಯಕವಾಗಿ ಕಥೆ ಮುಂದುವರೆಸಿದರು ರಾಯರು.

ʼಆಗಿನ ಕಾಲದಲ್ಲಿ ಕುಂಚಟಿಗರ ಸಮುದಾಯ ಧರ್ಮಪ್ರಕಾಶ ಡಿ.ಬನುಮಯ್ಯ ಅವರದ್ದು ದೊಡ್ಡ ಹೆಸರು. ಸಾಮಾನ್ಯ ಕುಟುಂಬದಿಂದ ಬಂದರೂ ಎಲ್ಲರಿಗೂ ಶಿಕ್ಷಣ ನೀಡೋಕೆ ಶ್ರಮಿಸಿದ ಅವರ ಕೆಲಸಕ್ಕೆ ಅರಸರು ನೀಡಿದ ಉಡುಗೊರೆಯೇ ಮೋತೀಖಾನೆಯ ಕಟ್ಟಡ. ರಸ್ತೆಯ ಒಂದು ಬದಿಯಲ್ಲಿ ಬನುಮಯ್ಯನವರೇ ಕಟ್ಟಡ ಕಟ್ಟಿಸಿದರೆ ಇನ್ನೊಂದು ಬದಿಯಲ್ಲಿದ್ದ ಕಟ್ಟಡವನ್ನು ಅರಸರು ನೀಡಿದರು. ಕೆಲಕಾಲ ಅಲ್ಲಿ ಶಿಕ್ಷಣ ಸಂಸ್ಥೆ ನಡೆಯಿತು. ಆನಂತರ ಬನುಮಯ್ಯ ಟ್ರಸ್ಟ್‌ ವತಿಯಿಂದ ಆ ಕಟ್ಟಡವನ್ನು ಜನತಾ ಬಜಾ಼ರ್‌ಗೆ ಬಾಡಿಗೆಗೆ ನೀಡಲಾಗಿತ್ತು. ಅದೆಲ್ಲಾ ಆದಮೇಲೆ ಕೆಲ ವರ್ಷಗಳ ಹಿಂದೆ ಶೈಕ್ಷಣಿಕ ಉಪಯೋಗಕ್ಕೆಂದು ಆ ಜಾಗವನ್ನು ಮರಳಿ ಪಡೆದು ಈಗ ಅಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗವನ್ನು ನಡೆಸುತ್ತಿದ್ದಾರೆʼ ಕಥೆ ಮುಗಿಸಿ ಉಳಿದಿದ್ದ ಎಳನೀರನ್ನೆಲ್ಲಾ ಒಂದೇ ಗುಟುಕಿಗೆ ಕುಡಿದು ಮುಗಿಸಿದರು ಮಾಧವ ರಾಯರು.

ಎಲ್ಲಿಯ ಮೋತೀಖಾನೆ, ಎಲ್ಲಿಯ ಅರಸರು, ಎಲ್ಲಿಯ ಬನುಮಯ್ಯನವರು, ಎಲ್ಲಿಯ ಕರಿಕಲ್ಲು ತೊಟ್ಟಿ, ಎಲ್ಲಿಯ ಬನುಮಯ್ಯ ಕಾಲೇಜು? ಅಬ್ಬಬ್ಬಾ! ಮೈಸೂರೆಂಬ ಪುಟ್ಟ ಸ್ವರ್ಗದಲ್ಲಿ ಒಂದೊಂದು ಮೂಲೆಯೂ ಒಂದೊಂದು ಕಥೆ ಹೇಳುತ್ತದೆ. ಅವುಗಳು ಕಥೆ ಹೇಳುತ್ತದೆ ಎಂಬುದಕ್ಕಿಂತ ಹೆಚ್ಚಾಗಿ ಕಾಲಗರ್ಭದಲ್ಲಿ ಉದುಗಿಹೋಗಿರುವ ಇಂತಹ ಕಥೆಗಳನ್ನು ಹೇಳಲು ಆಗಿನ ಕಾಲದ ಅದೆಷ್ಟೋ ಹಿರಿತಲೆಗಳು ಸಿಗುತ್ತವೆ. ಅವರು ಹೇಳುವ ಅಚ್ಚರಿಯ ಕಥೆಗಳನ್ನೆಲ್ಲಾ ಕೇಳಿ ಅರ್ಥಮಾಡಿಕೊಳ್ಳುವ ಮನಸ್ಸು ಬೇಕಷ್ಟೇ. ಅಷ್ಟು ಕಥೆ ಹೇಳಿದ ಮಾಧವರಾಯರಿಗೆ ಬಿಸಿಲಿನ ಬೇಗೆ ಹೆಚ್ಚಾದಂತಿತ್ತು. ʼಆಯ್ತು ತಾಯಿ…ನಾನು ಮನೆಗೆ ಹೋರಡ್ತೇನೆ. ನೀನೇನು ಓದ್ತಿದೀಯ?ʼ ಎಂದು ಕೇಳಿದ ರಾಯರಿಗೆ ʼಓದಿದ್ದು ಆಗಿದೆ. ಸದ್ಯಕ್ಕೆ ಕೆಲ್ಸ ಮಾಡ್ತಿದ್ದೀನಿʼ ಅಂದೆ. ʼಒಳ್ಳೇದಾಗ್ಲಿ. ಸಣ್ಣ ಹುಡುಗಿ ಕಾಣ್ತೀಯ. ಕೇಳೋ ಆಸಕ್ತಿ ಹಿಂಗೇ ಇರ್ಬೇಕು ನೋಡುʼ ಎನ್ನುತ್ತಾ ರಾಯರು ಕಣ್ಮರೆಯಾದರು.

 

 

 

 

 

 

sirimysuru18@gmail.com