Mysore
26
scattered clouds

Social Media

ಭಾನುವಾರ, 01 ಫೆಬ್ರವರಿ 2026
Light
Dark

ಕಣಗಾಲ್ ಪುಟ್ಟಣ್ಣನವರ ಕರುಣಾಜನಕ ಮನೆ

ಸಿರಿ ಮೈಸೂರು

ಬೆಳ್ಳಿಮೋಡ, ಗೆಜ್ಜೆಪೂಜೆ, ಎಡಕಲ್ಲು ಗುಡ್ಡದ ಮೇಲೆ, ಬಿಳಿ ಹೆಂಡ್ತಿ, ನಾಗರ ಹಾವು, ರಂಗನಾಯಕಿ, ಮಸಣದ ಹೂವು, ಶರಪಂಜರ… ಈ ಎಲ್ಲಾ ಹೆಸರುಗಳನ್ನು ಕೇಳುತ್ತಿದ್ದಂತೆ ಮನಸ್ಸು ಕನ್ನಡ ಚಿತ್ರರಂಗದ ಸುವರ್ಣಯುಗಕ್ಕೆ ತನ್ನಿಂತಾನೇ ಪ್ರಯಾಣಿಸುತ್ತದೆ. ಈ ಚಿತ್ರಗಳು ಆರೇಳು ದಶಕಗಳ ನಂತರವೂ ಚಿತ್ರರಸಿಕರ ಮನಸ್ಸಿನಲ್ಲಿ ಹಾಗೂ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿವೆ. ಇಷ್ಟೆಲ್ಲಾ ಹೇಳುತ್ತಿದ್ದಂತೆ ಮತ್ತೆ ಮನಸ್ಸಿಗೆ ಬರುವ ಇನ್ನೊಂದು ಸಂಗತಿ ಎಂದರೆ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಹಾಗೂ ಅತ್ಯಂತ ಪ್ರತಿಭಾವಂತ ನಿರ್ದೇಶಕರಲ್ಲಿ ಪ್ರಮುಖರಾದ ಪುಟ್ಟಣ್ಣ ಕಣಗಾಲ್ ಅವರ ಹೆಸರು. ಏಕೆಂದರೆ ಈ ಎಲ್ಲ ಚಲನಚಿತ್ರಗಳ ನಿರ್ದೇಶಕರು ಪುಟ್ಟಣ್ಣ ಕಣಗಾಲ್.

ಅಂಬರೀಶ್, ವಿಷ್ಣವರ್ಧನ್, ಆರತಿಯಂತಹ ಪ್ರತಿಭಾವಂತ ನಟ-ನಟಿಯರನ್ನು ಮುನ್ನೆಲೆಗೆ ತಂದ ಈ ನಿರ್ದೇಶಕ, ಹೆಸರೇ ಸೂಚಿಸುವಂತೆ ನಮ್ಮ ಮೈಸೂರಿನ ಪಿರಿಯಾಪಟ್ಟಣದ ಬಳಿಯ ಕಣಗಾಲ್ ಎಂಬ ಸಣ್ಣ ಊರಿನವರು.

ಬಾಲ್ಯವನ್ನೆಲ್ಲಾ ಕಣಗಾಲ್‌ನಲ್ಲೇ ಕಳೆದ ಪುಟ್ಟಣ್ಣ ನಂತರ ಹಕ್ಕಿ ಪಂಜರ ತೊರೆದು ಸ್ವಚ್ಛಂದವಾಗಿ ಹಾರುವಂತೆ ಬೇರೆ ಬೇರೆ ಮಹಾನಗರಗಳಿಗೆ ತೆರಳಿ ನಿರ್ದೇಶಕರಾದರು. ಹಾಗಿದ್ದರೆ ಇವರು ಬಾಲ್ಯ ಕಳೆದ ಕಣಗಾಲಿನ ಇವರ ಮನೆ ಈಗಹೇಗಿದೆ? ಈ ಪ್ರಶ್ನೆಗೆ ಇರುವ ಉತ್ತರ ಯಾರಿಗೂ ಅಷ್ಟು ಖುಷಿ ಕೊಡುವಂತಹದ್ದಲ್ಲ. ಏಕೆಂದರೆ ಈಗ ಈ ಮನೆ ಪಾಳುಬಿದ್ದ ಕಟ್ಟಡವಾಗಿದೆ. ಗಿಡಗಂಟಿಗಳು ಬೆಳೆದು, ಗೋಡೆಗಳೆಲ್ಲಾ ಕುಸಿದು ರಿಪೇರಿಗೂ ಯೋಗ್ಯವೋ ಇಲ್ಲವೋ ಎಂದು ಪುನರಾವಲೋಕನ ಮಾಡುವಂತಾಗಿದೆ.

‘ಇದು ಪುಟ್ಟಣ್ಣನವರು ಬಾಲ್ಯದಲ್ಲಿ ವಾಸವಾಗಿದ್ದ ಮನೆ. ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಅವರು ಈ ಜಾಗ ಬಿಟ್ಟು ಹೊರಟುಬಿಟ್ಟರು. ಆನಂತರ ಅವರ ತಂದೆ, ತಾಯಿ, ತಮ್ಮ ಇಲ್ಲಿದ್ದರು. ಅವರ ತಂದೆ ಕಾಲವಾದ ಮೇಲೆ ತಾಯಿ ಹಾಗೂ ತಮ್ಮ, ತಾಯಿ ಕಾಲವಾದ ಮೇಲೆ ತಮ್ಮ… ಹೀಗೆ ಇನ್ನೂ ಹಲವು ವರ್ಷಗಳ ಕಾಲ ಇಲ್ಲಿ ಜನರ ವಾಸ ಇತ್ತು. ಆನಂತರ ಇಲ್ಲಿಗೆ ಯಾರೂ ಬರಲಿಲ್ಲ. ಯಾವುದಾದರೂ ಸಭೆ, ಸಮಾರಂಭ ಇದ್ದರೆ ಆಗಾಗ ಅವರ ಕುಟುಂಬದವರು ಈ ಊರಿಗೆ ಬರುತ್ತಾರೆ. ಆದರೆ ಈ ಮನೆಗೆ ಯಾರೂ ಬರುವುದಿಲ್ಲ. ಅವರ ಮಗ ರಾಮು ಕೆಲ ವರ್ಷ ಗಳ ಕಾಲ ಆಗಾಗ ಇಲ್ಲಿ ಬಂದು ಹೋಗುತ್ತಿದ್ದರಷ್ಟೇ. ಯಾರ‍್ಯಾರೋ ಬಂದು ವಿಡಿಯೋ, ಸುದ್ದಿ ಮಾಡಿಕೊಂಡು ಹೋಗಿದ್ದಾರೆ. ನಾನೇ ಎಲ್ಲರೊಂದಿಗೂ ಮಾತನಾಡಿದ್ದೇನೆ. ಆದರೆ ಈ ಮನೆಗೆ ಮಾತ್ರ ಕಾಯಕಲ್ಪ ಸಿಗುವ ಯಾವ ಮುನ್ಸೂಚನೆಯೂ ಇಲ್ಲ? ಎಂದು ಮಾತನಾಡುತ್ತಾರೆ ಇಲ್ಲಿನ ನಿವಾಸಿಗಳು ಹಾಗೂಪುಟ್ಟಣ್ಣ ಕಣಗಾಲ್ ಅವರ ಮನೆಯ ಎದುರಿನ ವಾಸಿ ಮಂಜುನಾಥ ಶಾಸ್ತ್ರಿಯವರು.

ಮಂಜುನಾಥ ಶಾಸ್ತ್ರಿಯವರು ಚಿಕ್ಕ ವಯಸ್ಸಿನವರಿದ್ದಾಗ ಪುಟ್ಟಣ್ಣ ಕಣಗಾಲ್‌ರನ್ನು ಹತ್ತಿರದಿಂದ ನೋಡಿದ್ದವರು. ಅವರು ಹೇಳುವ ಪ್ರಕಾರ ಅವರ ಮನೆಯವರೂ ಯಾರೂ ಚಿತ್ರರಂಗದಲ್ಲಿರದ ಕಾರಣ, ಯಾರಿಗೂ ಅವರ ಹುಟ್ಟೂರು ಹಾಗೂ ಮನೆಯ ಚಿಂತಾಜನಕ ಸ್ಥಿತಿಯ ಬಗ್ಗೆ ತಿಳಿದಿರದ ಕಾರಣ ಈ ಮನೆ ಜೀರ್ಣೋದ್ಧಾರದ ಕೆಲಸ ಇನ್ನೂ ನಡೆದಿಲ್ಲ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ತನ್ನ ಪ್ರತಿಭೆಯ ಮೂಲಕ ಆಳಿದ, ವಿಷ್ಣುವರ್ಧನ್ ಹಾಗೂ ಅಂಬರೀಶ್ ರಂತಹ ತಾರೆಯರನ್ನು ಚಿತ್ರರಂಗಕ್ಕೆ ನೀಡಿದ ಈ ಮಹಾನ್ ವ್ಯಕ್ತಿತ್ವ ಹಾಗೂ ಅವರ ಬದುಕು, ನಡೆದುಬಂದ ಹಾದಿ ಅದೆಷ್ಟು ಬೇಗ ಜನಮಾನಸದಿಂದ ಮರೆಯಾಗಿಬಿಟ್ಟಿದೆ ಎಂಬುದನ್ನು ನೆನಪು ಮಾಡಿಕೊಂಡರೆ ಜನಪ್ರಿಯತೆ ಎಂಬುದು ಅದೆಷ್ಟು ಕ್ಷಣಿಕ ಎಂಬ ಸಂಗತಿ ಅರಿವಿಗೆ ಬರುತ್ತದೆ.

ಅವರು ಅಸುನೀಗಿದ ಕೆಲ ವರ್ಷಗಳವರೆಗೂ ಇಂತಹ ಅದ್ಭುತ ನಿರ್ದೇಶಕ ನಮ್ಮನ್ನು ಬಿಟ್ಟು ಅಗಲಿದರಲ್ಲಾ ಎಂದು ಎಲ್ಲರೂ ದುಃಖಪಟ್ಟರು. ೧೯೮೫ರಲ್ಲಿ ಇಹಲೋಕ ತ್ಯಜಿಸಿದ ಕಣಗಾಲ್ ಅವರನ್ನು ಆನಂತರ ನೆನಪಿಸಿಕೊಂಡವರು ಬಹಳ ಕಡಿಮೆಎಂದರೆ ತಪ್ಪಾಗಲಾರದು. ಚಿತ್ರರಂಗ ದಲ್ಲಿ ಹೆಸರು ಮಾಡಿದ, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ ಹಲವಾರು ನಟ-ನಟಿಯರು ಹಾಗೂ ನಿರ್ದೇಶಕರ ಗುರುತಾಗಿ ಈಗಲೂ ಹಲವಾರು ಸ್ಮಾರಕಗಳಿವೆ. ಆದರೆ ಇವರ ಗುರುತಾಗಿ ಮಾತ್ರ ಏನೂ ಇಲ್ಲ. ಇವರ ಮಗ ರಾಮು ಬೆಂಗಳೂರಿನಲ್ಲಿ ಕೆಲಕಾಲ ಕಣಗಾಲ್ ನೃತ್ಯಶಾಲೆ ನಡೆಸುತ್ತಿದ್ದರು ಎಂಬ ಮಾಹಿತಿ ಇದ್ದರೂ, ಇವರ ಕುಟುಂಬದ ಮತ್ಯಾರೂ ಚಿತ್ರರಂಗದಲ್ಲಾಗಲಿ, ಸಾರ್ವಜನಿಕ ಜೀವನದಲ್ಲಾಗಲಿ ಗುರುತಿಸಿಕೊಂಡವರಲ್ಲ. ಅಲ್ಲದೆ ಸಾಮಾನ್ಯವಾಗಿ ನಟರಿಗೆ ಇರುವಷ್ಟು ದೊಡ್ಡ ಅಭಿಮಾನಿ ಬಳಗ ನಿರ್ದೇಶಕರಿಗೆ ಅಥವಾ ತೆರೆ ಹಿಂದೆ ಕೆಲಸ ಮಾಡುವವರಿಗೆ ಆಗ ಇರುತ್ತಿರಲಿಲ್ಲ. ಇದೇ ಕಾರಣಕ್ಕೋ ಏನೂ ಕನಿಷ್ಠಪಕ್ಷ ಇವರ ಮನೆಗೂ ಜೀರ್ಣೋದ್ಧಾರದ ಭಾಗ್ಯ ದೊರೆತಿಲ್ಲ. ಇದನ್ನು ಸ್ಮಾರಕ ಮಾಡುವ ಯೋಜನೆ ಕೆಲಕಾಲ ಮುನ್ನೆಲೆಗೆ ಬಂದಿತ್ತಾದರೂ, ಈ ನಿಟ್ಟಿನಲ್ಲಿ ಯಾವ ಕೆಲಸವೂನಡೆದಿಲ್ಲ; ನಡೆಯುವ ಮುನ್ಸೂಚನೆಯೂ ಕಾಣುತ್ತಿಲ್ಲ. ಬಾನಿನಲ್ಲಿ ಸಾವಿರಾರು ವರ್ಷಗಳ ಕಾಲ ಮಿನುಗುವ ತಾರೆಗೂ ಒಂದು ದಿನ ಅಂತ್ಯ ಬಂದೇ ಬರುತ್ತದೆ. ಇದೇ ರೀತಿ ಕನ್ನಡ ಚಿತ್ರರಂಗದಲ್ಲೂ ಒಂದು ಕಾಲದಲ್ಲಿ ನಕ್ಷತ್ರದಂತೆ ಮಿನುಗಿದ ಪುಟ್ಟಣ್ಣ ಕಣಗಾಲ್ ಅವರ ಮನೆಯೂ ಅವರ ಅಸ್ತಿತ್ವದಂತೆಯೇ ಬಿಕ್ಕಟ್ಟಿನಲ್ಲಿದೆ. ಇದನ್ನು ಸ್ಮಾರಕ ಮಾಡುವುದು ದೂರದ ಮಾತು. ಅದಕ್ಕೂ ಮುನ್ನ ಯಾರಾದರೂ ರಿಪೇರಿ ಮಾಡಿಸಿದರೆ ಸಾಕು ಎಂಬಂತಿದೆ ಪರಿಸ್ಥಿತಿ. ಕಣಗಾಲ್‌ಗೆ ಬರುವ ಅದೆಷ್ಟೋ ಜನರಿಗೆ ಇವರ ಮನೆ ಇಲ್ಲೇ ಇದೆ ಎಂಬ ಅರಿವೂ ಇಲ್ಲ. ಇದನ್ನು ನೋಡಿದರೆ ಇದು ಅಂತಹ ಮಹಾನ್ ವ್ಯಕ್ತಿಯ ಮನೆ ಎಂದು ಭಾಸವಾಗುವುದೂ ಇಲ್ಲ. ಒಂದೆಡೆ ಇದು ಸಮಾಜದ ಸಾಮೂಹಿಕ ದಿವ್ಯನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತೆ ಭಾಸವಾದರೆ ಇನ್ನೊಂದೆಡೆ ಕಾಲ ಅದೆಷ್ಟು ಬೇಗ ಎಲ್ಲರಿಗೂ ಎಲ್ಲವನ್ನೂ ಮರೆಸಿಬಿಡುತ್ತದೆ ಎಂಬುದಕ್ಕೆ ನಿದರ್ಶನವಾಗಿದೆ. ಕಣಗಾಲ್ ಅವರ ಮನೆಗೆ ಎಂದಾದರೂ ಜೀರ್ಣೋದ್ಧಾರದಭಾಗ್ಯ ಬಂದಲ್ಲಿ ಆ ದಿನ ಅವರು ಕನ್ನಡ ಚಿತ್ರರಂಗಕ್ಕೆ ನೀಡಿ ಹೋದ ಅಮೂಲ್ಯ ಕೊಡುಗೆಗಳಿಗೆ ಸಮಾಜ ಕೊಂಚ ಮಟ್ಟಿಗಾದರೂ ಕೃತಜ್ಞತೆ ತೋರಿಸಿದಂತಾಗುತ್ತದೆ

” ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ದಲ್ಲಿ ನಕ್ಷತ್ರದಂತೆ ಮಿನುಗಿದ ಪುಟ್ಟಣ್ಣ ಕಣಗಾಲ್ ಅವರ ಮನೆಯೂ ಅವರ ಅಸ್ತಿತ್ವದಂತೆಯೇ ಬಿಕ್ಕಟ್ಟಿನಲ್ಲಿದೆ. ಇದನ್ನು ಸ್ಮಾರಕಮಾಡುವುದು ದೂರದ ಮಾತು. ಅದಕ್ಕೂ ಮುನ್ನ ಯಾರಾದರೂ ರಿಪೇರಿ ಮಾಡಿಸಿದರೆ ಸಾಕು ಎಂಬಂತಿದೆ ಪರಿಸ್ಥಿತಿ.”

 

 

Tags:
error: Content is protected !!