ಶೇಷಾದ್ರಿ ಗಂಜೂರು
ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ. ಭವ್ಯ ಆದರ್ಶಗಳ ಮೇಲೆ ಕಟ್ಟಿದ ನಗರ. ಅದರ ಹೃದಯ ಭಾಗದಲ್ಲಿ ನ್ಯಾಷನಲ್ ಮಾಲ್ ಎಂದು ಕರೆಯುವ ೩೦೦ ಎಕರೆಗೂ ಮೀರಿದ ಹುಲ್ಲು ಹಾಸು ಇದೆ. ಅದರ ಬಗಲಲ್ಲೇ ಅಮೆರಿಕದ ಅಧ್ಯಕ್ಷರ ಶ್ವೇತಭವನ. ಆ ಹಾಸಿನ ಪಶ್ಚಿಮ ತುದಿಯಲ್ಲಿ, ಅಮೆರಿಕನ್ ಇತಿಹಾಸ ಮತ್ತು ಮೌಲ್ಯಗಳ ಸಂಕೇತವಾಗಿ ನಿರ್ಮಿಸಿದ ಬೃಹತ್ ಸ್ಮಾರಕ. ಅದರೊಳಗೆ, ಅಮೆರಿಕದ ಹದಿನಾರನೆಯ ಅಧ್ಯಕ್ಷ ಅಬ್ರಹಾಂ ಲಿಂಕನ್ ಅಮೃತ ಶಿಲೆಯ ಬೃಹತ್ ಪ್ರತಿಮೆಯ ರೂಪದಲ್ಲಿ ವಿರಾಜಮಾನನಾಗಿದ್ದಾನೆ. ಜನಾಂಗೀಯತೆ ಮತ್ತು ಗುಲಾಮಗಿರಿ ವ್ಯವಸ್ಥೆ ಅಮೆರಿಕದ ಹುಟ್ಟಿನಿಂದಲೇ ಬಂದಂತಹ ಪಾಪಗಳು. ತನ್ನ ದೇಶ-ಸಮಾಜದೊಳಗಿನ ಇಂತಹ ಹುಳುಕುಗಳನ್ನು ಎದುರಿಸಲು ಅಂತರ್ಯುದ್ಧವನ್ನೇ ಮಾಡಿ ಗೆದ್ದು, ನಂತರ ತನ್ನ ಪ್ರಾಣವನ್ನೇ ಬಲಿ ಕೊಟ್ಟವನು ಲಿಂಕನ್. ಅವನು ತನ್ನ ಸ್ಮಾರಕದಿಂದ ಪೂರ್ವಕ್ಕೆ ಮುಖ ಮಾಡಿ ಅಮೆರಿಕದ ಸಂಸತ್ ಭವನದೆಡೆಗೆ ದಿಟ್ಟಿಸಿ ನೋಡುತ್ತಿದ್ದಾನೆ. ಅವನ ಮುಖದ ಮೇಲೆ ಮುಂಜಾವದ ಸೂರ್ಯನ ಹೊಂಗಿರಣಗಳು ಮುಟ್ಟುತ್ತಿರುವಂತೆಯೆ, ಅವನ ಸ್ಮಾರಕದ ಬಗಲಲ್ಲೇ ಇನ್ನೊಂದು ದೃಶ್ಯ ತೆರೆದುಕೊಳ್ಳುತ್ತದೆ. ಮಕಮಲ್ಲಿನಂತಹ ಹುಲ್ಲು ಹಾಸಿನ ಮೇಲೆ ಕೃಶಕಾಯದ ಬತ್ತಿದ ಕಂಗಳಿನ ಆಫ್ರಿಕನ್ ಅಮೆರಿಕನ್ ವೃದ್ಧನೊಬ್ಬ ನಿಸ್ಸಹಾಯಕನಾಗಿ ನಿಂತಿದ್ದಾನೆ. ಅವನ ಸಮಸ್ತ ಆಸ್ತಿಯೂ ಅವನ ಬಗಲಲ್ಲೇ ಇರುವ ತಳ್ಳು-ಗಾಡಿಯಲ್ಲಿ ತುಂಬಿವೆ. ಶಸ್ತ್ರಸಜ್ಜಿತ ಪೊಲೀಸರು, ಸರ್ಕಾರಿ ನೌಕರರು ಅವನ ಸೂರನ್ನು ವ್ಯವಸ್ಥಿತವಾಗಿ ಕೆಡವುತ್ತಿದ್ದಾರೆ; ಕೆಡವಲದು ಮಹಾ ದೊಡ್ಡ ಗೋಡೆಯೇನಲ್ಲ; ತೇಪೆ ಹಚ್ಚಿದ ತೆಳು ಪ್ಲಾಸ್ಟಿಕ್ ಶೀಟಿನಿಂದ ಅವನೇ ನಿರ್ಮಿಸಿಕೊಂಡ ಟೆಂಟ್ ಅದು. ಅವನ ಹೆಸರು ಮೈಕೇಲ್. ಮೈಕೇಲ್ ಕಳ್ಳ-ಕಾಕನಲ್ಲ.
ರೌಡಿಯೂ ಅಲ್ಲ. ಅವನ ಮೇಲೆ ಯಾವುದೇ ಆರೋಪವೂ ಇಲ್ಲ. ನಿಜಕ್ಕೂ ಅವನೊಬ್ಬ ‘ಸಮಸ್ಯೆ’ಯೇ ಆದರೇ, ಅದನ್ನೆದುರಿಸಲು ಯಾವುದೇ ಪೊಲೀಸ್ ಪಡೆಯೂ ಬೇಕಿಲ್ಲ. ಮೈಕೇಲ್ ಒಬ್ಬ ನಿವೃತ್ತ ಕಟ್ಟಡ ಕಾರ್ಮಿಕ. ನಿವೃತ್ತಿ ಹೊಂದಲು ಬೇಕಾದಷ್ಟು ಸಂಪಾದಿಸುವ ಮುನ್ನವೇ ಅವನ ದೇಹ ಕೈ-ಕೊಟ್ಟಿದ್ದರಿಂದ ತನ್ನೆಲ್ಲಾ ಆಸ್ತಿಯನ್ನೂ ತಳ್ಳು ಗಾಡಿಯೊಂದರಲ್ಲಿ ತುಂಬಿಸಿಕೊಂಡು ಲಿಂಕನ್ ಸ್ಮಾರಕದ ನೆರಳಿನಲ್ಲಿ ಟೆಂಟ್ ಹಾಕಿ ವಾಸ ಮಾಡುತ್ತಿರುವನು. ಅವನದೇನಾದರೂ ತಪ್ಪಿದ್ದರೆ, ಅದು ಒಂದೇ: ಸಾರ್ವಜನಿಕ ಸ್ಥಳ ಒಂದರಲ್ಲಿ, ಅಮೆರಿಕದ ಅಧ್ಯಕ್ಷ ಟ್ರಂಪ್‌ಗೂ ಕಾಣುವಂತೆ ಟೆಂಟ್ ಹಾಕಿಕೊಂಡು ಜೀವಿಸುತ್ತಿರುವುದು. ಆದರೆ, ಅವನೀಗ ಭವ್ಯ ಅಮೆರಿಕನ್ ವ್ಯವಸ್ಥೆಯ ಅಂದಕ್ಕಿಟ್ಟ ಕಪ್ಪು ಚುಕ್ಕೆ. ಅಲ್ಲಿನ ಸರ್ಕಾರ ನಿರ್ವಹಿಸಬೇಕಾದ ಒಂದು ಅಂಕಿ-ಅಂಶ. ಅಮೆರಿಕದ ಅಧ್ಯಕ್ಷ ಟ್ರಂಪ್‌ರವರಿಗೆ ಕಣ್ಣುಬೇನೆ ತಂದಿರುವ ತೊಲಗಿಸಲೇಬೇಕಾದ ಅಸಹ್ಯ.
ಈ ದೃಶ್ಯ ಅಮೆರಿಕದ ರಾಜಧಾನಿಯಲ್ಲಿ ಮತ್ತೆ-ಮತ್ತೆ ಕಾಣುತ್ತದೆ. ಸಂಪದ್ಭರಿತ ದೇಶವೊಂದರ ನಾಯಕ ಅಲ್ಲಿನ ನಿರ್ಗತಿಕರ ಬಿಕ್ಕಟ್ಟನ್ನು ಹೇಗೆ ನಿವಾರಿಸುತ್ತಾನೆ ಎಂಬುದರ ನಗ್ನ ಪ್ರದರ್ಶನ ಅದು. ಅಮೆರಿಕ ಸರ್ಕಾರದ ಅಂಕಿ-ಅಂಶಗಳೇ ಹೇಳುವಂತೆ ಇತ್ತೀಚಿನ ವರ್ಷಗಳಲ್ಲಿ, ವಾಷಿಂಗ್ಟನ್ ಡಿ.ಸಿ. ಸೇರಿದಂತೆ ಇಡೀ ಅಮೆರಿಕದಾದ್ಯಂತ ಕ್ರಿಮಿನಲ್ ಅಪರಾಧಗಳ ಸಂಖ್ಯೆ ಇಳಿ ಮುಖವಾಗಿದೆ. ಆದರೆ, ‘ಸಾರ್ವಜನಿಕ ಸುರಕ್ಷತೆಯ ತುರ್ತುಸ್ಥಿತಿ’ ಘೋಷಿಸಿರುವ ಟ್ರಂಪ್ ಸರ್ಕಾರ, ‘ಕಾನೂನು ಸುವ್ಯವಸ್ಥೆ ಮತ್ತು ಸ್ವಚ್ಛತಾ ಅಭಿಯಾನ’ದ ಹೆಸರಿನಲ್ಲಿ ಶ್ವೇತ ಭವನದ ಸುತ್ತಮುತ್ತಲಿಂದ ನಿರ್ಗತಿಕರನ್ನು ತೊಲಗಿಸುವುದನ್ನೇ ತನ್ನ ಆದ್ಯತೆಯಾಗಿಸಿಕೊಂಡಿದೆ. ಇದಕ್ಕಾಗಿ, ರಾಜಧಾನಿಯ ಸ್ಥಳೀಯ ಪೊಲೀಸ್ ಪಡೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಟ್ರಂಪ್ ಮಹಾಶಯರು, ಕೇಂದ್ರೀಯ ಪಡೆ ಮತ್ತು ಮಿಲಿಟರಿಯನ್ನೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿಸಿ ಮೈಕೇಲ್ ಅಂತಹ ನಿರ್ಗತಿಕರನ್ನು ರಾಜಧಾನಿಯ ಅಮೆರಿಕನ್ ಭವ್ಯತೆಯಿಂದ ಹೊರಗಟ್ಟುವ ಆಶ್ವಾಸನೆಯನ್ನು ಅಮೆರಿಕನ್ನರಿಗೆ ನೀಡಿದ್ದಾರೆ. ಟ್ರಂಪ್ ನೀತಿಯ ಪ್ರಕಾರ, ಈ ನಿರ್ಗತಿಕರ ಬಿಕ್ಕಟ್ಟು, ಅಮೆರಿಕನ್-ಡ್ರೀಮ್ ಎಂಬ ಆಶಾವಾದ ಇಂದು ಎಷ್ಟೋ ಮಂದಿಗೆ ಬಡತನದ ಬೇಗುದಿಯಾಗಿ ಬದಲಾಗಿರುವ ವಾಸ್ತವವಲ್ಲ. ಬದಲಿಗೆ, ಅದು ಪೊಲೀಸ್ ಬಲದಿಂದಲೇ ನಿಗ್ರಹಿಸಬಲ್ಲ ‘ಸಾರ್ವಜನಿಕ ಸುರಕ್ಷತೆಯ ಸಮಸ್ಯೆ’. ಈ ಬಿಕ್ಕಟ್ಟನ್ನು ನಿವಾರಿಸಲು ಹಿಂದಿನ ಸರ್ಕಾರಗಳು ತಮ್ಮ ಯೋಜನೆಗಳಲ್ಲಿ ಬಡ ಅಮೆರಿಕನ್ನರಿಗೆ ಸ್ವಗೃಹ-ವಸತಿ ಒದಗಿಸುವುದನ್ನೇ ಗುರಿಯಾಗಿರಿಸಿಕೊಂಡಿದ್ದರೆ, ಟ್ರಂಪ್ ಸರ್ಕಾರ ಮಾತ್ರ ಸಾರ್ವಜನಿಕ ಸ್ಥಳಗಳಿಂದ ನಿರ್ಗತಿಕರನ್ನು ಪೊಲೀಸ್ ವ್ಯವಸ್ಥೆಯ ಮೂಲಕ ತೊಲಗಿಸುವುದನ್ನೇ ತನ್ನ ಗುರಿಯಾಗಿಸಿಕೊಂಡಿದೆ.
ಕಾರಣ ಏನೇ ಇರಲಿ ಮತ್ತು ಅವು ಫುಟ್‌ಪಾತೇ ಇರಲಿ ಅಥವಾ ಉದ್ಯಾನ – ರಾಷ್ಟ್ರೀಯ ಸ್ಮಾರಕಗಳೇ ಇರಲಿ, ಸಾರ್ವಜನಿಕ ಸ್ಥಳಗಳಲ್ಲಿ ಜನರು ಟೆಂಟ್ ಹಾಕಿ ಜೀವನ ಸಾಗಿಸುವುದು ಪರಿಹರಿಸಬೇಕಾದ ಸಮಸ್ಯೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಆದರೆ, ಅದನ್ನು ಕೇವಲ ಕಾನೂನು ಸುವ್ಯವಸ್ಥೆಯ ದುರ್ಬೀನಿನ ಮೂಲಕ ನೋಡಿದರೆ, ನಿರ್ಗತಿಕತೆಯ ಹಿಂದಿನ ಕಾರಣಗಳು ತಿಳಿಯುವುದಿಲ್ಲ. ವಾಷಿಂಗ್ಟನ್ ಡಿ.ಸಿ., ೨೫೦ ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಗಳಿಸಿದ ನಂತರ ಅಮೆರಿಕನ್ನರು ನಿರ್ಮಿಸಿಕೊಂಡ ರಾಜಧಾನಿ. ಆ ನಿರ್ಮಾಣದಲ್ಲಿ, ಲೆಕ್ಕವಿಲ್ಲದಷ್ಟು ಮಂದಿ ಆಫ್ರಿಕನ್ ಅಮೆರಿಕನ್ನರ ಬೆವರು, ನೆತ್ತರು, ಕಣ್ಣೀರೂ ಬೆರೆತಿದೆ; ಗುಲಾಮಗಿರಿ ಇನ್ನೂ ನ್ಯಾಯಬದ್ಧವಾಗಿದ್ದ ಆ ಕಾಲದಲ್ಲಿ ಬ್ರಿಟಿಷರಿಂದ ದೊರೆತ ಸ್ವಾತಂತ್ರ್ಯ ಆಫ್ರಿಕನ್ ಅಮೆರಿಕನ್ನರಿಗೆ ದೊರೆಯಲಿಲ್ಲ. ಆದರೆ, ಗುಲಾಮಗಿರಿಯ ನಿಷೇಧವಾದಾಗ ಇಡೀ ಅಮೆರಿಕದಲ್ಲಿ ಮೊದಲ ಬಾರಿಗೆ ಅದು ಜಾರಿಗೆ ಬಂದಿದ್ದು ವಾಷಿಂಗ್ಟನ್ ಡಿ.ಸಿ.ಯಲ್ಲೇ. ನಂತರದ ದಶಕಗಳಲ್ಲೂ ಅದು ಗುಲಾಮಗಿರಿಯಿಂದ ಬಿಡುಗಡೆಗೊಂಡವರ ಆಶ್ರಯ ತಾಣವಾಗಿ ಬೆಳೆದಿದೆ. ಹೀಗಾಗಿ, ಆ ನಗರ ಆಫ್ರಿಕನ್ ಅಮೆರಿಕನ್ನರನ್ನು ಆಕರ್ಷಿಸುತ್ತಲೇ ಬಂದಿದೆ. ಈ ಆಕರ್ಷಣೆ ಎಷ್ಟರ ಮಟ್ಟಿಗೆ ಇತ್ತೆಂದರೆ, ೧೯೭೦ರ ದಶಕದಲ್ಲಿ, ಇಡೀ ನಗರದ ಜನಸಂಖ್ಯೆಯ ಶೇ.೭೦ಕ್ಕೂ ಅಧಿಕ ಮಂದಿ ಆಫ್ರಿಕನ್ ಅಮೆರಿಕನ್ನರೇ ಆಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅದು ಹೆಚ್ಚು ಸಂಪನ್ನವಾದಂತೆ, ಇತರರನ್ನೂ ಅದು ಆಕರ್ಷಿಸುತ್ತಿದೆ.
ಇಂದು ಆ ನಗರದ ಒಟ್ಟು ಜನಸಂಖ್ಯೆ ಸುಮಾರು ಏಳು ಲಕ್ಷ. ಅವರಲ್ಲಿ ಸುಮಾರು ಶೇ.೪೫ ಮಂದಿ ಆಫ್ರಿಕನ್ ಅಮೆರಿಕನ್ನರು. ಹಲವು ವರದಿಗಳ ಪ್ರಕಾರ, ವಾಷಿಂಗ್ಟನ್ ಡಿ.ಸಿ.ಯಲ್ಲಿ ಇಂದು ಸುಮಾರು ೫,೦೦೦ ಮಂದಿ ನಿರ್ಗತಿಕರಿದ್ದಾರೆ. ಅವರಲ್ಲಿ ಶೇ.೮೫ ಮಂದಿ ಆಫ್ರಿಕನ್ ಅಮೆರಿಕನ್ನರು.
ನಿರ್ಗತಿಕರಲ್ಲಿ ಹೆಚ್ಚಿನವರು ಆಫ್ರಿಕನ್ ಅಮೆರಿಕನ್ನರೇ ಆಗಿರುವುದಕ್ಕೆ ಕಾರಣಗಳೂ ಇವೆ. ಜನಾಂಗವಾದವನ್ನು ಸರ್ಕಾರ ನಿಷೇಧಿಸಿದ್ದರೂ, ಅಮೆರಿಕನ್ ವ್ಯವಸ್ಥೆಯಲ್ಲಿ ಅದನ್ನು ಇನ್ನೂ ಬೇರು ಸಮೇತ ಕಿತ್ತೊಗೆಯಲಾಗಿಲ್ಲ. ಹೊರಗಿನವರನ್ನು ತನ್ನೊಳಗಿನವರನ್ನಾಗಿಸುತ್ತಲೇ ಬೆಳೆದು ಬಲಾಢ್ಯವಾಗಿರುವ ಅಮೆರಿಕ, ಶತಮಾನಗಳಿಂದ ತನ್ನೊಳಗೇ ಇರುವ ಆಫ್ರಿಕನ್ ಸಂಜಾತರಿಗೆ ಬೆಳೆಯಲು ಸಮಾನ ಅವಕಾಶ ಒದಗಿಸುವಲ್ಲಿ ವಿಫಲವಾಗಿದೆ. ಇದಲ್ಲದೇ, ಇತ್ತೀಚಿನ ವರ್ಷಗಳಲ್ಲಿ ವಾಷಿಂಗ್ಟನ್ ಡಿ.ಸಿ. ಸಂಪದ್ಭರಿತ ನಗರವಾಗಿ ಬೆಳೆದಂತೆ, ಆ ಬೆಳವಣಿಗೆಯೇ ಅಲ್ಲಿನ ಬಡ ಆಫ್ರಿಕನ್ ಅಮೆರಿಕನ್ನರಿಗೆ ಮಾರಕವಾಗಿದೆ. ಉದಾಹರಣೆಗೆ, ಅಲ್ಲಿನ ಮನೆಗಳ ಬಾಡಿಗೆ ಅಮೆರಿಕನ್ ರಾಷ್ಟ್ರೀಯ ಸರಾಸರಿಗಿಂತ ಶೇ.೪೦ ಜಾಸ್ತಿ. ಇದು ಹಲವರನ್ನು ‘ಕೆಲಸ ಕಳೆದುಕೊಂಡರೆ ಬೀದಿಯೇ ಗತಿ’ ಎಂಬಂತಹ ಸ್ಥಿತಿಗೆ ತಂದಿದೆ. ಅದಲ್ಲದೆ, ಬಡತನದ ಜೊತೆಗೇ, ನಿರ್ಗತಿಕತನದ ಪ್ರಮುಖ ಕಾರಣಗಳಾದ ಮಾದಕ ವ್ಯಸನ, ದೈಹಿಕ-ಮಾನಸಿಕ ಕಾಯಿಲೆ ಇತ್ಯಾದಿಗಳೂ ಆಫ್ರಿಕನ್ ಅಮೆರಿಕನ್ ಸಮಾಜವನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿವೆ.
ಇಂತಹ ಕ್ಲಿಷ್ಟ-ಸಂಕೀರ್ಣ ಕಾರಣಗಳಿಂದ ಉಂಟಾಗಿರುವ ಬಿಕ್ಕಟ್ಟನ್ನು ಬುಡ ಸಮೇತ ನಿವಾರಿಸಲು ಟ್ರಂಪ್ ಸರ್ಕಾರಕ್ಕೆ ಯಾವುದೇ ಆಸ್ಥೆ ಇಲ್ಲ. ಅವರಿಗೆ ಬೇಕಿರುವುದು ಅಮೆರಿಕದ ಹುಳುಕುಗಳನ್ನು ಮುಚ್ಚಿಡುವ ಥಳುಕು-ಬಳುಕು ಅಷ್ಟೇ. ಇಷ್ಟಕ್ಕೂ, ಬಹುಪಾಲು ಮಂದಿ ಆಫ್ರಿಕನ್ ಅಮೆರಿಕನ್ನರು ಟ್ರಂಪ್ ಮತ್ತು ಆತನ ರಿಪಬ್ಲಿಕನ್ ಪಕ್ಷವನ್ನು ವಿರೋಧಿಸುತ್ತಾರೆ. ಕಳೆದ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ, ವಾಷಿಂಗ್ಟನ್ ಡಿ.ಸಿ.ನಗರದಲ್ಲಿ ಶೇ.೯೫ ಮಂದಿ ಮತದಾರರು ಟ್ರಂಪ್ ವಿರುದ್ಧ ಮತ ಚಲಾಯಿಸಿದರು. ಅದೂ ಅಲ್ಲದೆ, ರಾಜಕೀಯಕ್ಕೆ ಇಳಿಯುವ ಮುನ್ನವೇ, ಆಫ್ರಿಕನ್ ಅಮೆರಿಕನ್ನರ ವಿರುದ್ಧ ತಾರತಮ್ಯ ತೋರಿರುವ ಇತಿಹಾಸ ಸಹ ಟ್ರಂಪ್‌ಗೆ ಇದೆ. ಹೀಗಿರುವಾಗ, ಪೊಲೀಸ್ ಕಾರ್ಯಾಚರಣೆ ಬಿಟ್ಟು ತನ್ನ ವಿರೋಽಗಳ ಬಗೆಗೆ ಸೇಡಿನ ಮನೋಭಾವ ಹೊಂದಿರುವ ಟ್ರಂಪ್ ರಿಂದ ಇನ್ನೇನನ್ನು ತಾನೆ ನಿರೀಕ್ಷಿಸಬಹುದು?
***
ತನ್ನೊಳಗಿನ ಕಹಿ ಸತ್ಯಗಳನ್ನು ಮುಚ್ಚಿಡುವುದು ಕೇವಲ ಟ್ರಂಪ್ ಒಬ್ಬರ ತಂತ್ರವಲ್ಲ. ಅಥವಾ ಅದು ಅಮೆರಿಕಕ್ಕೆ ಮಾತ್ರ ಸೀಮಿತವಾದುದೂ ಅಲ್ಲ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಇಂತಹ ಹಲವಾರು ಉದಾಹರಣೆಗಳು ಕಾಣಸಿಗುತ್ತವೆ. ಅಮೆರಿಕದ ಕಟ್ಟಾ ವಿರೋಧಿಯಾಗಿದ್ದ ಸೋವಿಯತ್ ರಷ್ಯದ ಕಮ್ಯೂನಿಸ್ಟರೂ ಇಂತಹದನ್ನು ಮಾಡಿದ್ದಾರೆ. ಇಂದು ಅಮೆರಿಕಕ್ಕೆ ಸಡ್ಡು ಹೊಡೆಯುತ್ತಿರುವ ಚೈನಾ ಸಹ ಹಲವು ಬಾರಿ ಇಂತಹ ಕೃತ್ಯಗಳನ್ನು ಎಸಗಿದೆ. ಕೆಲ ವರ್ಷಗಳ ಹಿಂದೆ, ಇದೇ ಟ್ರಂಪ್ ಭೇಟಿಯ ಸಂದರ್ಭದಲ್ಲಿ, ಅಹ್ಮದಾಬಾದಿನ ಸ್ಲಂ ಒಂದನ್ನು ‘ಸೆಕ್ಯೂರಿಟಿ’ ನೆಪದಲ್ಲಿ ತರಾತುರಿಯಾಗಿ ಗೋಡೆಯೊಂದರ ಹಿಂದೆ ಮರೆ ಮಾಡಿದ್ದು ಭಾರತದಲ್ಲೇ ನಡೆದಿದೆ. ಇವೆಲ್ಲಾ ಹೇಳುವುದು ಒಂದೇ: ತೋರ್ಪಡಿಕೆಯ ಅಂದಕ್ಕಾಗಿ ಮಾನವೀಯ ವೆಚ್ಚಕ್ಕೆ ಎಲ್ಲರೂ ಸಿದ್ಧ.
ವಾಷಿಂಗ್ಟನ್ ಡಿ.ಸಿ.ಯಲ್ಲಿನ ನ್ಯಾಷನಲ್ ಮಾಲ್ ಅಮೆರಿಕದ ಭವ್ಯತೆಯ ಸಂಕೇತವಾದರೆ, ಅದರ ಮಕಮಲ್ ಹುಲ್ಲು ಹಾಸಿನ ಮೇಲೆ ಕಾಣುತ್ತಿದ್ದ ಮೈಕೇಲನ ತೇಪೆ ಹಚ್ಚಿದ ಪ್ಲಾಸ್ಟಿಕ್ ಶೀಟಿನ ಟೆಂಟು, ಅಮೆರಿಕನ್ ವ್ಯವಸ್ಥೆಯ ವೈಫಲ್ಯದ ಸಂಕೇತ. ಹುಲ್ಲು ಹಾಸಿನ ಮೇಲೆ ಎಲ್ಲರಿಗೂ ಕಾಣುತ್ತಿದ್ದ ಅವನನ್ನು ಹಿಡಿದು ಚಾಪೆಯ ಕೆಳಗೆ ತಳ್ಳಿ ತಾನೇನೋ ಸಾಧನೆ ಮಾಡಿದಂತೆ ಟ್ರಂಪ್ ಇಂದು ಬೀಗಬಹುದು. ಆದರೆ, ಲಿಂಕನ್ ಒಮ್ಮೆ ಹೇಳಿದಂತೆ: “ಇಂದು ನುಣುಚಿಕೊಂಡ ಮಾತ್ರಕ್ಕೆ ನಾಳಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ”
” ಹೊರಗಿನವರನ್ನು ತನ್ನೊಳಗಿನವರನ್ನಾಗಿಸುತ್ತಲೇ ಬೆಳೆದು ಬಲಾಢ್ಯವಾಗಿರುವ ಅಮೆರಿಕ, ಶತಮಾನಗಳಿಂದ ತನ್ನೊಳಗೇ ಇರುವ ಆಫ್ರಿಕನ್ ಸಂಜಾತರಿಗೆ ಬೆಳೆಯಲು ಸಮಾನ ಅವಕಾಶ ಒದಗಿಸುವಲ್ಲಿ ವಿಫಲವಾಗಿದೆ.”





