ಮಹಾದೇವ ಶಂಕನಪುರ
ನಾನಾಗ ಇನ್ನು ಚಿಕ್ಕವನು. ನಮ್ಮೂರ ಕಡೆ ತುಂಬಾ ಜನ ಕಥೆ ಓದುವ ತಂಬೂರಿಯವರು, ನೀಲಗಾರರು ಭಿಕ್ಷಾ ಸಾರುತ್ತ ಬರುತ್ತಿದ್ದರು. ಮಳವಳ್ಳಿ ಗುರುಬಸವಯ್ಯ, ರಾಚಯ್ಯ, ಕಾರಾಪುರದ ಪುಟ್ಟಮಾದಯ್ಯ, ಇದ್ವಾಂಡಿ ಅಟ್ಟಲ ಮಾದಯ್ಯ, ಮೋಳೆ ರಾಚಯ್ಯ ಮುಂತಾದವರು.
ನಾವು ಹುಡುಗರು ಕಥೆ ಕೇಳುತ್ತ ಅವರ ಹಿಂದೆ ಹಿಂದೆ ಮನೆ ಮನೆಗೂ ಹೋಗುತ್ತಿದ್ದೆವು. ಆಗಲೇ ನಮಗೆ ಸಿದ್ದಪ್ಪಾಜಿ ಪವಾಡದ ಕಥೆಗಳು ಬಾಯಿ ಪಾಠವಾಗಿದ್ದು. ನಮಗೆ ರಾಮಾಯಣ, ಮಹಾಭಾರತ ಕಿವಿಗೆ ಬೀಳೋಕು ಮುಂಚೆ, ಮಂಟೇಸ್ವಾಮಿ ಕಾವ್ಯ ಮೈದುಂಬಿಕೊಂಡಿತ್ತು. ಹಲಗೂರು ಪಂಚಾಳರು ಒಡ್ಡಿದ ಪವಾಡಗಳನ್ನು ಗೆದ್ದು ಕಬ್ಬಿಣ ಭಿಕ್ಷಾ ತಂದು, ತನ್ನ ಗುರು ಮಂಟೇಸ್ವಾಮಿಗೆ ಮಠ ಮನೆ ಕಟ್ಟಿ ಮಾತು ಉಳಿಸಿಕೊಂಡ ಸಿದ್ದಪ್ಪಾಜಿ ನಮಗೆ ದೊಡ್ಡ ಆದರ್ಶ ಶಿಶು ಮಗನಾಗಿ ಉಳಿದ. ಚಿಕ್ಕಲ್ಲೂರು ಕ್ಷೇತ್ರವೂ ಸೂರ್ತಿಯ ನೆಲೆಯಾಗಿ ಕಂಡಿತು.
ಚಿಕ್ಕಲ್ಲೂರು ಜಾತ್ರೆ ಮಂಟೇಸ್ವಾಮಿ ಒಕ್ಕಲಿನವರಾದ ನಮಗೆ ಮಕ್ಕಾ, ಮದೀನಾ ಯಾತ್ರೆ ಇದ್ದಂತೆ. ತಪ್ಪದೆ ವರ್ಷಕೊಮ್ಮೆ ಜಾತ್ರೆ ನೋಡಲೇಬೇಕು. ಊರಲ್ಲೂ ಶ್ರೀ ಸಿದ್ದಪ್ಪಾಜಿ ದೇವಸ್ಥಾನವಿತ್ತು. ಕುರುಬನಕಟ್ಟೆ ಕಂಡಾಯಗಳ ಮಾದರಿಯಲ್ಲೆ ನಮ್ಮೂರಲ್ಲೂ ಚಿಕ್ಕ ಕಂಡಾಯ, ದೊಡ್ಡ ಕಂಡಾಯ ಇದ್ದವು. ಹೆಚ್ಚು ಕಡಿಮೆ ಮನೆ ಮನೆಗೂ ನೀಲಗಾರರು ಇದ್ದರು. ಹಾಗಾಗಿ ಊರಿಗೆ ಊರೇ ಜಾತ್ರೆಗೆ ಹೋಗುವುದು ರೂಢಿ. ಜಾತ್ರೆ ಎಂದರೆ ನಮಗೆ ಖುಷಿ, ಶರಬತ್ತು, ಜಿಲೇಬಿ, ರೊಯ್ಯ ರೊಯ್ಯ ಆಟ ಸಾಮಾನು, ಪಂಕ್ತಿ ಸೇವೆ ಬಾಡೂಟ, ಬಗೆ ಬಗೆಯ ನೋಟ ನೋಡುವ ಸೆಳೆತ.
ಚಿಕ್ಕಲ್ಲೂರು ಗದ್ದಿಗೆ ಪಕ್ಕ ಬಲಕ್ಕೆ ಹುಣಸೆ ಮರದ ಬುಡದಲ್ಲಿ ನಮ್ಮ ಬಿಡದಿ ಇತ್ತು. ಮೊದಲಿನ ದಿನ ರಾತ್ರಿ ಹೊತ್ತಿಗೆ ಅಲ್ಲಿಗೆ ತಲುಪಿ ಊರವರೆಲ್ಲ ಜಾಗ ಹಿಡಿದಿರುತ್ತಿದ್ದರು. ಬೊಪ್ಪಣಪುರದ ಸ್ವಾಮಿಗಳು ತಡರಾತ್ರಿ ಚಂದ್ರಮಂಡಲ ಹಚ್ಚುವ ಮೊದಲು ನಾವು ಮೀಸಲು ಬಿಡಬೇಕು. ಊರಿಂದ ಬಂದಿದ್ದ ಎಲ್ಲರೂ ವೃತ್ತಾಕಾರದಲ್ಲಿ ಪಂಕ್ತಿ ಕೂತು ತಂದಿದ್ದ ಹುಳಿ ಅನ್ನ, ಕೊರಬಾಡು ಗೊಜ್ಜಿನ ಬುತ್ತಿ ಬಿಚ್ಚಿ ಊಟ ಮಾಡುತ್ತಿದ್ದೆವು. ಅದಕ್ಕೂ ಮೊದಲು ಎಲ್ಲರ ಬುತ್ತಿಯಿಂದ ಮೀಸಲು ಸಂಗ್ರಹಿಸಿ ಕಂಡಾಯ, ಬೆತ್ತಗಳಿಗೆ ಎಡೆ ಅರ್ಪಿಸಿ ಮಂಗಳಾರತಿ ಬೆಳಗುತ್ತಿದ್ದರು. ಜಾತ್ರೆ ಪೂಜೆ ಎಂದರೆ ನನ್ನವ್ವ ತುಂಬಾ ಕಟ್ಟುನಿಟ್ಟು. ಗದ್ದಿಗೆಗೆ ಹೋಗಿ ಹಣ್ಣು-ಕಾಯಿ ಮಾಡಿಸಿ, ಹಣೆಗೆ ಕಪ್ಪು -ಧೂಳ್ತ ಇಕ್ಕಿ, ಧೂಪ ಹಾಕಿದ ಮೇಲೆ ತಿನ್ನಲು ಬಾಳೆ ಹಣ್ಣು ಪ್ರಸಾದ ಕೊಡುತ್ತಿದ್ದಳು. ಹೀಗೆ ಪೂಜೆಗೆ ಹೋದಾಗ ಅವ್ವ ನನಗೆ ಗುಡಿಯೊಳಗಿನ ಗದ್ದಿಗೆ, ಕಂಡಾಯಗಳನ್ನು ತೋರಿಸಿದ್ದಳು. ಎಣ್ಣೆ ದೀಪದ ಮಂದ ಬೆಳಕಿನಲ್ಲಿ ನೋಡಿದ ನೆನಪು. ಕಂಡಾಯಕ್ಕೆ ಎರಡು ಕಡೆಯಿಂದ ಸರಪಳಿ ಹಾಕಿದ್ದರು. ಗದ್ದಿಗೆ ಕೆಳಗೆ ಮುಳ್ಳು ಪಾದುಕೆ, ಗಂಡು ಗತ್ರಿ ಇದ್ದವು. ಅಮಾವಾಸ್ಯೆ, ಹುಣ್ಣಿಮೆಗೆ ಸ್ವಾಮಿ ಕಂಡಾಯದ ಮೈದುಂಬುತ್ತಾರಂತೆ. ಆಗ ಕಂಡಾಯ ಸುಮ್ಮಸುಮ್ಮನೆ ಕುಣಿಯುತ್ತದಂತೆ, ಗಂಡು ಗತ್ರಿಲಿ ಆಗ ಅವರು ಪವಾಡ ಮಾಡುತ್ತಾರಂತೆ. ಅದಕ್ಕೆ ಆ ಕಂಡಾಯವನ್ನು ಸರಪಳಿಯಲ್ಲಿ ಕಟ್ಟಿದ್ದಾರೆ. ಗಂಡು ಗತ್ರಿ ಇಟ್ಟಿದ್ದಾರೆ ಅಂತ ಅವ್ವ ಹೇಳಿದ ನೆನಪು.
ಮಧ್ಯರಾತ್ರಿ ಸಮೀಪಿಸುವ ಹೊತ್ತಿಗೆ ಬೊಪ್ಪಣಪುರದ ಸ್ವಾಮಿಗಳು ಗದ್ದಿಗೆಗೆ ಆಗಮಿಸುತ್ತಿದ್ದರು. ಮೈಸೂರು ಅರಸರ ಮಾದರಿಯ ಪೇಟ, ಉದ್ದನೆ ಬಿಳಿಯ ನಿಲುವಂಗಿ ಕೋಟು, ಹಸಿರು ಪಟ್ಟೆ ವಸ್ತ್ರ ಧರಿಸಿ ಮಠದ ಛತ್ರಿ, ಚಾಮರ, ಕೊಂಬು, ಕಹಳೆ, ಸತ್ತಿಗೆ, ಸೂರಿಪಾನಿ ಸಹಿತ ಮುಂದೆ ಮಠದ ಬಸವನ ಬಿಟ್ಟುಕೊಂಡು ಹಿಂದೆ ಕುರುಬನಕಟ್ಟೆ ಲಿಂಗಯ್ಯ, ಚೆನ್ನಯ್ಯ ಕಂಡಾಯಗಳು, ಬೆತ್ತ, ಜಾಗಟೆ, ಜೋಳಿಗೆ ಹಿಡಿದು ನಾದ ಗೈಯುತ್ತ ಬರುವ ನೀಲಗಾರರ ಉನ್ಮಾದದ ದಂಡು. ಪೂಜೆ ನಂತರ ಗದ್ದಿಗೆ ಮುಂದೆ ಚಂದ್ರ ಮಂಡಲ ಎಂಬ ಬಿದಿರಿನ ಪರಂಜ್ಯೋತಿ ಆಕೃತಿಗೂ ಪೂಜೆ ಸಲ್ಲಿಸಿ, ಮಂಗಳಾರತಿ ಬೆಳಗಿ ಅಗ್ನಿಸ್ಪರ್ಶ ಮಾಡಿ ಚಂದ್ರ ಮಂಡಲ ನೆರವೇರಿಸುತ್ತಿದ್ದರು. ಅಪ್ಪ ಹೆಗಲ ಮೇಲೆ ಕೂರಿಸಿಕೊಂಡು ಚಂದ್ರ ಮಂಡಲ ತೋರಿಸುತ್ತಿದ್ದ. ಮೀಸಲಿಟ್ಟಿದ್ದ ರಾಗಿ ಕಾಳು, ಚಿಟ್ಟಳ್ಳು, ತಪ್ಪು ಕಾಣಿಕೆ ಕಾಸನ್ನು ನನ್ನ ಕೈಯಿಂದ ಚಂದ್ರಮಂಡಲಕ್ಕೆ ಎಸೆಯಲು ಕೊಟ್ಟಿದ್ದ ನೆನಪು.
ಚಿಕ್ಕಲ್ಲೂರು ಮಾರ್ಗ ಮಧ್ಯೆ ಮೊಳಗನಕಟ್ಟೆ ಯಲ್ಲಿ ಹಜಾರತ್ ತುರಾಬ್ ಶಾಖಾದ್ರಿ ದರ್ಗಾ ಇದೆ. ಈ ಸೂಫಿ ಸಂತ ಸಿದ್ದಪ್ಪಾಜಿ ಸಹವರ್ತಿಯ ಸಮಕಾಲೀನನು. ಹಿಂದೆ ಜಾತ್ರೆ ನಡೆಸಲು ಹೋಗುತ್ತಿದ್ದ ಬೊಪ್ಪಣ ಪುರ ಸ್ವಾಮಿಗಳು ಈ ದರ್ಗಕ್ಕೂ ಹೋಗಿ ಪೂಜೆ ಸಲ್ಲಿಸಿ, ನಂತರ ಚಿಕ್ಕಲ್ಲೂರಿಗೆ ತೆರಳುತ್ತಿದ್ದರು ಎಂಬ ಮಾಹಿತಿ ಇದೆ. ಪ್ರಸ್ತುತ ಬೊಪ್ಪೇಗೌಡನಪುರ ಮಂಟೇ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ಜಾತ್ರೆಯ ಎಲ್ಲ ಆಚರಣೆಯನ್ನು ನಡೆಸುತ್ತಾರೆ. ಈಗ ಚಿಕ್ಕಲ್ಲೂರು ಜಾತ್ರೆಯ ಸ್ವರೂಪ ಬದಲಾಗುತ್ತಿದೆ. ಚಂದ್ರ ಮಂಡಲ ಗದ್ದಿಗೆ ಮುಂದಿನ ಎತ್ತರದ ಕಟ್ಟೆಯ ಮೇಲೆ ಜರುಗುತ್ತದೆ. ಪ್ರಾಣಿ ಬಲಿ ನಿಷೇಧ ಕಾಯ್ದೆ ನೆಪದಲ್ಲಿ ಈ ಪರಂಪರೆ ಅಡ್ಡಿ ಆತಂಕದ ಸುಳಿಯಲ್ಲಿದೆ. ಈ ಪರಂಪರೆಯ ಒಕ್ಕಲಿನ ಜನ ನಾಡಿನ ಸಾಂಸ್ಕ ತಿಕ ಸಾಹಿತ್ಯ ಮತ್ತು ಸಾಮಾಜಿಕ ವೆಲ್ ವಿಶರ್ಸ್ ಎಲ್ಲರೂ ಸಂಘ ಟಿತರಾಗಿ ಈ ಪರಂಪರೆ ಉಳಿ ವಿಗೆ ಬೆನ್ನೆಲು ಬಾಗಬೇಕಾಗಿದೆ.