Mysore
17
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ನಾಗಮ್ಮ ಕಲಿತ ಜೀವನಪಾಠ

ಶುಭಮಂಗಳ ರಾಮಾಪುರ

ಕಂಕುಳಲ್ಲಿ ಎರಡು ವರ್ಷದ ಹೆಣ್ಮಗುವೊಂದನ್ನು ಎತ್ಕೊಂಡು, ಬಲಗೈಲಿ ಸುಮಾರು ನಾಲ್ಕು ವರ್ಷದ ಇನ್ನೊಂದು ಹೆಣ್ಮಗುವಿನ ಕೈಹಿಡಿದು ಇಪ್ಪತ್ತು ವರ್ಷದ ಯುವತಿಯೋರ್ವಳು ಶಾಲೆಯ ಕಡೆ ನಡೆದು ಬರುತ್ತಿದ್ದಳು. ಅವಳಿಗಿಂತ ನಾಲ್ಕೈದು ಹೆಜ್ಜೆ ಮುಂದೆ ಆರು ವರ್ಷದ ಮುದ್ದಾದ ಹುಡುಗಿ ಚಂದದ ಫ್ರಾಕೊಂದನ್ನು ತೊಟ್ಟು ಶಾಲಾ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹುಮ್ಮಸ್ಸಿನಿಂದ ಶಾಲಾ ಕಚೇರಿಯೆಡೆಗೆ ಧಾವಿಸುತ್ತಿದ್ದಳು. ತುಂಬಾ ವರ್ಷಗಳಿಂದ ಅದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯರಿಗೆ ಮಕ್ಕಳೊಡನೆ ಬಂದ ಯುವತಿಯನ್ನು ಕಂಡು ಆಶ್ಚರ್ಯವಾಯಿತು! ಏಕೆಂದರೆ, ಆರು ವರ್ಷಗಳ ಹಿಂದೆ, ಶಿಕ್ಷಕರೆಲ್ಲ ಸೇರಿಕೊಂಡು ಹದಿಮೂರನೆಯ ವರ್ಷಕ್ಕೆ ಮಗುವನ್ನು ಹಡೆದ ನನ್ನ ಕುರಿತು ಪೊಲೀಸರಿಗೆ ದೂರು ನೀಡಿಬಿಟ್ಟರೆ ಎಂದು ಹೆದರಿ ರಾತ್ರೋರಾತ್ರಿ ಪರಾರಿಯಾಗಿದ್ದ ಅದೇ ನಾಗಮ್ಮ ಪ್ರತ್ಯಕ್ಷವಾಗಿದ್ದಳು.

ಹನ್ನೆರಡು ವರ್ಷಗಳ ಹೆಣ್ಮಗಳನ್ನು ಮದುವೆಯಾದಾತ ಲೋಕದ ಅರಿವಿರದ ಬಾಲೆಯನ್ನು ತನ್ನ ಕಾಮದ ದಾಹ ತಣಿಸಲು ಕ್ರೂರವಾಗಿ ಬಳಸಿಕೊಂಡಿದ್ದ. ಜೊತೆಗೆ ಹಗಲಿರುಳ ವ್ಯತ್ಯಾಸ ತಿಳಿಯದಷ್ಟು ಕುಡಿತ. ಮೊದಲ ಮಗು ಹೆಣ್ಣಾಯಿತೆಂದು ಹೀಯಾಳಿಸಿದ್ದಲ್ಲದೆ, ಕೋಪಕ್ಕೆ ಕೆಲವು ತಿಂಗಳ ಕಾಲ ಕೂಸಿನ ಮುಖವನ್ನೂ ನೋಡಿರಲಿಲ್ಲ. ಆದರೆ ಆ ದಿನ ರಾತ್ರಿ ನಾಗಮ್ಮ ತನ್ನ ಎಳೆಗೂಸನ್ನು ಎದೆಗವುಚಿ ಕೊಂಡು ತಾಯಿ, ತಮ್ಮ, ತಂಗಿಯರೊಡನೆ ಅನಿವಾರ್ಯವಾಗಿ ಗಂಡನ ಮನೆಗೆ ಹೋಗಬೇಕಾಯ್ತು.

ಒಂದೆರಡು ತಿಂಗಳು ಮಗಳ ಮನೆಯಲ್ಲಿಯೇ ಕಳೆದ ನಾಗಮ್ಮನ ತಾಯಿ ಕೂಸನ್ನು ನೋಡಿಕೊಳ್ಳಲು ತನ್ನ ಇನ್ನೋರ್ವ ಮಗಳನ್ನು ಬಿಟ್ಟು, ತನ್ನೂರಿಗೆ ಬಂದಿದ್ದಳು. ಶೌಚಾಲಯ ತೊಳೆಯುವ ಕೆಲಸಕ್ಕೆ ಮತ್ತೆ ಸೇರಿದಳು. ರಾತ್ರಿಯಾದಂತೆ ಮದ್ಯಪಾನ, ಧೂಮಪಾನ ಮಾಡಿ ಮಲಗಿಬಿಡುತ್ತಿದ್ದಳು. ಪರಿಚಿತರ ಸಲಹೆಯಂತೆ ಮಗನನ್ನು ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿಸಿಬಿಟ್ಟಳು. ಆ ಹುಡುಗನೂ ಅಡ್ಡದಾರಿ ಹಿಡಿದು ಊರಿಗೆ ಹಿಂತಿರುಗಲೇ ಇಲ್ಲ.

ಇತ್ತ ನಾಗಮ್ಮ ಎರಡೇ ವರ್ಷಕ್ಕೆ ಮತ್ತೊಂದು ಹೆಣ್ಮಗುವಿಗೆ ಜನ್ಮ ನೀಡಿದಳು. ಮತ್ತೆ ಹೆಣ್ಣಾಯಿತೆಂದು ಸಿಟ್ಟಾದ ಪತಿ ನಾಗಮ್ಮಳಿಗೆ ಅನೇಕ ರೀತಿಯ ಚಿತ್ರಹಿಂಸೆ ಕೊಡತೊಡಗಿದ. ನಾಗಮ್ಮ ಒಂದೆರಡು ವರ್ಷಗಳು ಕೂಲಿಗೆಲಸ ಮಾಡಿ ಮನೆಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಒಂದು ದಿನ ಗಂಡ ಇದ್ದಕ್ಕಿದ್ದಂತೆ ಗರ್ಭಿಣಿಯಾಗಿದ್ದ ಹೆಂಡತಿ ಮಕ್ಕಳನ್ನು ಬಿಟ್ಟು ಪರಾರಿಯಾದ. ದೂರದೂರಿನಲ್ಲಿ ಗಂಡನ ಆಶ್ರಯವಿಲ್ಲದೆ ಬದುಕುವುದು ಹೇಗೆ ಎಂದು ಕಂಗಾಲಾಗಿ, ತವರಿಗೆ ಬಂದುಬಿಡೋಣವೆಂದು ನಿರ್ಧರಿಸಿ ತಾಯಿ ಮನೆಗೆ ಬಂದರೆ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ನಾಗಮ್ಮನ ತಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಳು. ಚಿಕ್ಕಮಕ್ಕಳ ಪೋಷಣೆ ಒಂದೆಡೆಯಾದರೆ ರೋಗದಿಂದ ನರಳುತ್ತಿರುವ ತಾಯಿ ಮತ್ತೊಂದೆಡೆ. ಹೊಟ್ಟೆ ಹೊತ್ತುಕೊಂಡೇ ಕೂಲಿಕೆಲಸ ಮಾಡಿ ಮನೆಯನ್ನು ಪೊರೆಯುತ್ತಿದ್ದ ನಾಗಮ್ಮ ಈ ನಡುವೆ ಮೂರನೇ ಮಗುವಿಗೆ ಜನ್ಮ ನೀಡಿದಳು. ಅದು ಹೆಣ್ಣುಮಗು! ಆಗಾಗ ತಾಯಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಳು. ಯಾರದೋ ಕೈ-ಕಾಲು ಹಿಡಿದು ಕಚೇರಿಯೊಂದರಲ್ಲಿ ಸ್ವೀಪರ್ ಕೆಲಸಕ್ಕೆ ಸೇರಿಕೊಂಡ ನಾಗಮ್ಮ ಜವಾಬ್ದಾರಿಯಿಂದ ತನ್ನ ತಾಯಿ, ತಂಗಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಸಲಹುತ್ತಿದ್ದಾಳೆ.

ಇಬ್ಬರು ಹೆಣ್ಣುಮಕ್ಕಳಿದ್ದ ಸರ್ಕಾರಿ ನೌಕರನೋರ್ವನ ಹೆಂಡತಿ ಮೂರನೇ ಬಾರಿ ಗರ್ಭಿಣಿಯಾದಾಗ, ಹೆದರಿದ ನೌಕರ ಮಗುವನ್ನು ತೆಗೆಸಿಬಿಡುವಂತೆ ಕೇಳಿಕೊಂಡನಂತೆ. ಗಂಡಾಗುತ್ತದೆಂಬ ಆಶಾಭಾವನೆಯಲ್ಲಿದ್ದ ಹೆಂಡತಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮಕೊಟ್ಟಾಗ, ಅಯ್ಯೋ ರಾಮ! ಎಂದು ತಲೆಮೇಲೆ ಕೈಯಿಟ್ಟು ಕುಳಿತನಂತೆ ಸರ್ಕಾರಿ ನೌಕರ. ಇದನ್ನು ಹೇಳಿಕೊಂಡು ಅಪಹಾಸ್ಯ ಮಾಡುತ್ತಾ ನಗುತ್ತಿದ್ದ ಶಿಕ್ಷಕರು ನಾಗಮ್ಮನ ಪರಿಸ್ಥಿತಿ ಕಂಡು ಮರುಗಿದರು.

‘ಜೀವನ ನನಗೆ ದೊಡ್ಡ ಪಾಠವನ್ನೇ ಕಲಿಸಿದೆ, ಅಂದು ನಾನು ಶಾಲೆ ಬಿಟ್ಟು ಮದುವೆಯಾಗದೆ ಚೆನ್ನಾಗಿ ಓದಿದ್ದರೆ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೂ ನಾನು ಹೆದರುವುದಿಲ್ಲ, ನಾನು ಓದದಿದ್ದರೆ ಏನಾಯ್ತು? ನನ್ನ ಮೂವರೂ ಹೆಣ್ಮಕ್ಕಳನ್ನು ಚೆನ್ನಾಗಿ ಓದಿಸ್ತೀನಿ, ಕಷ್ಟಪಟ್ಟು ದುಡಿದು ಮಕ್ಕಳನ್ನು ಶಾಲೆಗೆ ಸೇರಿಸ್ತೀನಿ’ ಅಂತ ಹೇಳಿದ ನಾಗಮ್ಮನ ಮಾತು ಕೇಳಿದ ಶಿಕ್ಷಕರೂ ಸರ್ಕಾರದಿಂದ ಹಾಲು, ಬಿಸಿಯೂಟ, ಬಟ್ಟೆ, ಶೂ, ಪುಸ್ತಕ, ವಿದ್ಯಾರ್ಥಿವೇತನ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಉಚಿತವಾಗಿ ಶಿಕ್ಷಣವನ್ನು ನೀಡುತ್ತಿರುವ ಬಗ್ಗೆ ಮಾಹಿತಿ ಕೊಟ್ಟು ನಾಗಮ್ಮಳಿಗೆ ಧೈರ್ಯ ಹೇಳಿದರು.

‘ಹೆದರಬೇಡ, ನಿನ್ನ ಮಕ್ಕಳನ್ನು ಚೆನ್ನಾಗಿ ಓದಿಸು. ಯಾವುದೇ ಸಹಾಯ ಬೇಕಿದ್ದರೂ ನಮ್ಮನ್ನು ಕೇಳು’ ಎಂಬ ಭರವಸೆ ಕೊಟ್ಟರು. ಆರು ವರ್ಷದ ಮಗಳು ವರ್ಷಿತಾಳನ್ನು ಆಂಗ್ಲ ಮಾಧ್ಯಮದ ಒಂದನೇ ತರಗತಿಗೆ ದಾಖಲು ಮಾಡಿದವಳು, ಅದೇ ವರ್ಷ ಆರಂಭವಾಗಿದ್ದ ಎಲ್.ಕೆ.ಜಿ. ಗೆ ತನ್ನ ಎರಡನೇ ಮಗಳು ಹರ್ಷಿತಾಳನ್ನೂ ದಾಖಲು ಮಾಡಿಬಿಟ್ಟಳು. ತನ್ನ ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಾರೆಂಬ ಖುಷಿ ಒಂದೆಡೆಯಾದರೆ, ಜೀವನದಲ್ಲಿ ಗೆಲ್ಲಲೇಬೇಕೆಂಬ ಛಲ ನಾಗಮ್ಮನ ಕಣ್ಣಲ್ಲಿ ಅಂದು ಕಾಣುತ್ತಿತ್ತು.

” ತನ್ನ ಮಕ್ಕಳು ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಾರೆಂಬ ಖುಷಿ ಒಂದೆಡೆಯಾದರೆ, ಜೀವನದಲ್ಲಿ ಗೆಲ್ಲಲೇಬೇಕೆಂಬ ಛಲ ನಾಗಮ್ಮನ ಕಣ್ಣಲ್ಲಿ ಅಂದು ಕಾಣುತ್ತಿತ್ತು.”

Tags:
error: Content is protected !!