ಹಸೀನಾ ಮಲ್ನಾಡ್
ಹೊಸ ದಾರಿ, ಗೊತ್ತಿರದ ಊರು, ಹೊತ್ತಲ್ಲದ ಹೊತ್ತು, ಅಪರಿಚಿತ ಮುಖಗಳು, ಅನುಮಾನದ ದೃಷ್ಟಿ, ಸಾದರ – ತಿರಸ್ಕಾರ, ದಿನಕ್ಕಿಷ್ಟು ಮನೆಗಳ ಲೆಕ್ಕ, ಕೈಕೊಡುವ ಸರ್ವರ್, ನೆಟ್‌ವರ್ಕ್ ಇಲ್ಲದ ಕೇರಿಗಳು, ಬೈಗುಳ, ಪ್ರೀತಿಯ ಕರೆ ಇವೆಲ್ಲದ ರೊಳಗೆ ಈ ವರ್ಷದ ಗಣತಿ ಕಾರ್ಯ ಕೊನೆಯ ಹಂತಕ್ಕೆ ಬಂದು ತಲುಪಿದೆ. ದಸರಾ ರಜೆಗೆ ಕತ್ತರಿ ಬಿದ್ದ ನೋವು ಶಿಕ್ಷಕರಿಗಾದರೆ, ಹೆಚ್ಚುವರಿ ರಜೆ ಮಕ್ಕಳಿಗೆ ಬೋನಸ್. ಪಾಠ ಮಾಡಲು ಪುಸ್ತಕ ಹಿಡಿಯುವ ಕೈಗಳು ಸಮೀಕ್ಷೆಯ ವರದಿಗಾಗಿ ಫೈಲ್ ಹಿಡಿದು ಓಣಿ, ಗಲ್ಲಿಗಳಲ್ಲಿ ತಿರುಗಿದಾಗ ದಕ್ಕುವಿಕೆಗೆ ಸಿಗುವ ಅನುಭವ ಮಾತ್ರ ದಿನದಿನವೂ ಹೊಸತು.
‘ನಿಮಗೆ ಸಮೀಕ್ಷೆ ಡ್ಯೂಟಿ ಬಂದಿದೆ ಮೇಡಂ. ಆದಷ್ಟು ಬೇಗ ಲಾಗಿನ್ ಆಗಿ’ ಮೇಲ್ವಿಚಾರಕರು ಕರೆ ಮಾಡಿ ಧಾವಂತದಲ್ಲಿ ವಿಷಯವನ್ನು ತಿಳಿಸಿದಾಗ ‘ಛೆ! ನನಗೂ ಬಂತಾ ಸಮೀಕ್ಷೆ ಕೆಲಸ’ ಎಂದುಕೊಳ್ಳುತ್ತಾ ಟಪಟಪನೆ ಲಾಗಿನ್ ಆದೆ. ನನಗೆ ಸಮೀಕ್ಷೆಗೆ ಸಿಕ್ಕ ಮನೆಗಳ ಸಂಖ್ಯೆ ೧೬೭ ಎಂದು ಸ್ಕ್ರೀನ್ ಮೇಲೆ ದೊಡ್ಡ ಫಾಂಟ್‌ನಲ್ಲಿ ಕಾಣಿಸಿಕೊಂಡಾಗ ದೀರ್ಘ ನಿಟ್ಟುಸಿರು ಬಿಡುತ್ತಾ ನಾನು ಪ್ರಾರ್ಥಿಸಿದ್ದು ‘ದೇವರೇ ನಾನು ಹೋಗುವ ಮನೆಗಳ ದಾರಿ ಸುಗಮವಾಗಿರಲಿ ಮತ್ತು ಆ ಮನೆಗಳಲ್ಲಿ ನಾಯಿಗಳು ಇಲ್ಲದೇ ಇರಲಿ. ಇದ್ದರೂ ಕಚ್ಚದಿರಲಿ’ ಎಂಬುದಷ್ಟೇ ಆಗಿತ್ತು. ಬಹುಶಃ ನನ್ನ ಪ್ರಾರ್ಥನೆ ದೇವರಿಗೆ ಕೇಳಿಸಿರಬೇಕು, ಹೋಗುವ ಯಾವ ಮನೆಗಳಲ್ಲೂ ನಾಯಿಗಳು ಇರದಂತೆ ರಕ್ಷಿಸಿ ದಾರಿಯನ್ನು ಸುಗಮವಾಗಿಸಿದ.
ನನ್ನ ಸಮೀಕ್ಷೆಯ ಕ್ಷೇತ್ರಕ್ಕೆ ಮೊದಲ ಭೇಟಿ ನೀಡಿದಾಗ ಸಮೀಕ್ಷೆಯನ್ನು ಬಹಳ ಬೇಗ ಮುಗಿಸಬಹುದು ಎಂಬ ಧೈರ್ಯ ಬಂತು. ಕಾರಣ, ಅಲ್ಲಿ ತಲೆ ಎತ್ತಿ ನಿಂತಿದ್ದ ಅಪಾರ್ಟ್ಮೆಂಟ್‌ಗಳು ಹಾಗೂ ಪಕ್ಕದಲ್ಲಿ ತಲೆತಗ್ಗಿಸಿ ನಿಂತಿದ್ದ ಸಾಲು ಸಾಲು ಮನೆಗಳು. ಇದೊಂದು ಆನ್‌ಲೈನ್ ಸಮೀಕ್ಷೆ ಆಗಿದ್ದ ರಿಂದ ಮೊಬೈಲ್‌ನಲ್ಲಿ ಚಾರ್ಜ್ ಮತ್ತು ನೆಟ್‌ವರ್ಕ್ ಸಮಸ್ಯೆ ಇದ್ದರೆ ನಮ್ಮ ಸಮೀಕ್ಷಾ ಕಾರ್ಯವನ್ನು ಮಾಡಲು ಸಾಧ್ಯ ವಿರಲಿಲ್ಲ. ಆದ್ದರಿಂದ ಬಹಳ ಎಚ್ಚರಿಕೆವಹಿಸಿ ಒಂದೊಂದೇ ಮನೆಯ ಸಮೀಕ್ಷೆಯನ್ನು ಮಾಡುತ್ತಾ ಹೋದೆ.
ಒಂದು ಕುಟುಂಬದ ಸದಸ್ಯರಿಗೆ ಕೇಳಬೇಕಾಗಿದ್ದ ವೈಯಕ್ತಿಕ ಪ್ರಶ್ನೆಗಳು ೪೦ ಮತ್ತು ಇಡೀ ಕುಟುಂಬಕ್ಕೆ ಸಂಬಂಧಿಸಿದ ಪ್ರಶ್ನೆಗಳು ೨೦ ಆಗಿದ್ದು, ಅವರಿಗೆ ಪ್ರಶ್ನೆಗಳನ್ನು ಅರ್ಥೈಸಿ, ಅವರು ನೀಡುವ ಉತ್ತರಗಳನ್ನು ನಾವು ದಾಖಲಿಸಬೇಕಿತ್ತು. ಪ್ರಶ್ನೆಗಳು ಒಂದೇ ಆಗಿದ್ದರೂ ಮನೆಯಿಂದ ಮನೆಗೆ ಉತ್ತರಗಳು ಮಾತ್ರ ಬದಲಾಗುತ್ತಿದ್ದವು. ಒಂದು ಮನೆಯ ಕಥೆ, ವ್ಯಥೆ ಮತ್ತೊಂದು ಮನೆಗೆ ಕಾಲಿಡುವಾಗ ಬೇರೆಯದೇ ರೂಪ ಪಡೆದುಕೊಳ್ಳುತ್ತಿತ್ತು.
‘ವೈವಾಹಿಕ ಸ್ಥಾನಮಾನ’ ಎಂಬ ಸಮೀಕ್ಷೆ ಕಾಲಂ ೧೭ರಲ್ಲಿ ಬರುವ ಪ್ರಶ್ನೆಗೆ ಒಂದು ಮನೆಯಲ್ಲಿ ಸಿಕ್ಕ ಉತ್ತರ, ‘ಮದುವೆ ಆಗಿತ್ತು ಮೇಡಂ. ನನ್ನ ದೊಡ್ಡ ಮಗನಿಗೆ ಆರು ವರ್ಷವಾಗುವಾಗ ಅವರು ತೀರಿಕೊಂಡ್ರು. ಮೂರು ಮಕ್ಕಳನ್ನು ಹಿಡಿದುಕೊಂಡು ನಾನು ತಂದೆಯ ಮನೆಗೆ ಬಂದೆ. ತಂದೆಗೆ ನನ್ನ ಮೇಲೆ ತುಂಬಾ ಪ್ರೀತಿ. ನಾನು ಬಂದು ಒಂದೆರಡು ವರ್ಷದಲ್ಲೇ ತಂದೆಯೂ ತೀರಿಕೊಂಡರು. ನಾನು ಸಂಪೂರ್ಣ ಅನಾಥಳಾದೆ’… ಹೇಳುತ್ತಿದ್ದವಳು ಕೂಡಲೇಮೌನಕ್ಕೆ ಜಾರಿ ಹೋದಳು. ಇನ್ನೊಂದು ಮನೆಯಲ್ಲಿ ಅದೇ ಪ್ರಶ್ನೆಗೆ ಸಿಕ್ಕ ಉತ್ತರ, ‘ದೂರದ ಊರಿಗೆ ನನ್ನನ್ನು ಮದುವೆ ಮಾಡಿಕೊಟ್ಟರು. ಕುಡುಕ ಗಂಡನ ಉಪಟಳ ಸಹಿಸಲಾರದೆ ಒಂದು ದಿನ ಬೆಳ್ಳಂಬೆಳಿಗ್ಗೆ ಉಟ್ಟ ಬಟ್ಟೆಯಲ್ಲೇ ಮಗುವನ್ನು ಎತ್ತಿಕೊಂಡು ಬಸ್ಸು ಹಿಡಿದು ತಾಯಿ ಮನೆಗೆ ಬಂದವಳು, ಮತ್ತೆಂದೂ ಹೋಗಲೇ ಇಲ್ಲ ಮೇಡಂ. ದೂರದ ಊರಿಗೆ ಗೊತ್ತು ಗುರಿ ಇಲ್ಲದೆ ಮದುವೆ ಮಾಡುವುದಕ್ಕಿಂತ ನನ್ನನ್ನು ನೀರಿಗೆ ಹಾಕಿದ್ರೂ…’ ಮಾತು ಅರ್ಧಕ್ಕೆ ನಿಲ್ಲಿಸಿ ಅತ್ತವಳ ಕಣ್ಣೀರು ನಿಲ್ಲಲಿಲ್ಲ.
ಇದೊಂದು ಉದಾಹರಣೆಯಷ್ಟೆ. ಇಂತಹ ಸಾಮಾನ್ಯ ಪ್ರಶ್ನೆಯೊಂದಕ್ಕೆ ಸಿಕ್ಕ ಭಿನ್ನ ಉತ್ತರಗಳಿಂದ ಕರ್ತವ್ಯದ ಮೇರೆಗೆ ಸಮೀಕ್ಷೆಗೆಂದು ಹೋಗಿದ್ದವಳು ಮನುಷ್ಯಳಾಗಿ ಮನೆಯಿಂದ ಹೊರಬರುತ್ತಿದ್ದೆ. ಬದುಕಿನ ಸಂಕಟದ ವಿಕಿರಣಗಳು ನಾಲ್ಕು ಗೋಡೆಗಳನ್ನು ಸೀಳಿ ಹೊರಬಾರದಂತೆ ಜಾಗ್ರತೆ ವಹಿಸುತ್ತಾ ಪ್ರಪಂಚದ ಮುಂದೆ ನಗುವಿನ ಮುಖವಾಡ ಧರಿಸಿ ನಾಟಕವಾಡುವ ಕಲೆಯನ್ನು ಈ ಸಮಾಜದಲ್ಲಿ ಕೆಲವರು ಎಷ್ಟು ಚೆನ್ನಾಗಿ ಸಿದ್ಧಿಸಿಕೊಂಡಿದ್ದಾರೆ ಹಾಗೂ ಅದಕ್ಕೆ ಜಾತಿ, ಮತ, ಧರ್ಮಗಳ ವ್ಯತ್ಯಾಸವಿಲ್ಲ ಎಂಬುದು ಸಮೀಕ್ಷೆಯ ಒಂದೆರೆಡು ದಿನಗಳಲ್ಲೇ ನನಗೆ ಗೊತ್ತಾಗಿತ್ತು.
ಬಿಸಿಲಿನಲ್ಲಿ ಹೋದ ನನ್ನನ್ನು ನೋಡಿ ಮರುಗಿ ಊಟದ ಹೊತ್ತಿಗೆ ಹೋದಾಗ ‘ಊಟ ಆಯ್ತಾ’ ಎಂದು ಕೇಳಿ, ‘ಆಗಿಲ್ಲ’ ಎಂದ ಕೂಡಲೇ ಅನ್ನ ಸಾರನ್ನು ಬಡಿಸಿ ನನ್ನೆದುರು ತಂದಿಟ್ಟವರನ್ನು, ಮುಸ್ಸಂಜೆ ಹೊತ್ತಿನಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದವರನ್ನು ನೋಡಿದಾಗ ಮಾನವೀಯತೆ ಇನ್ನೂ ಬದುಕಿದೆ ಎಂದು ಅನ್ನಿಸಿದ್ದಿದೆ. ಇದೊಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಗಿದ್ದು, ಪ್ರತೀ ಕುಟುಂಬದ ಶೈಕ್ಷಣಿಕ ಮಾಹಿತಿಯನ್ನು ಪಡೆಯುವಾಗ ಕೆಲವೊಮ್ಮೆ ಒಂದೇ ಮನೆಯಲ್ಲಿ ಮೂರು ತಲೆಮಾರುಗಳ ಬಗ್ಗೆ ಮಾಹಿತಿ ತುಂಬಿಸಬೇಕಾಗಿ ಬರುತ್ತಿದ್ದುದು, ತಲೆಮಾರಿನಿಂದ ತಲೆಮಾರಿಗೆ ಶೈಕ್ಷಣಿಕ ವ್ಯಾಪ್ತಿ ವಿಸ್ತಾರವಾಗುತ್ತ ಹೋಗಿರುವುದು ಸಮೀಕ್ಷೆಯಲ್ಲಿ ನಾನು ಗಮನಿಸಿದ ಮುಖ್ಯ ಅಂಶ.
ನನಗೆ ಸಿಕ್ಕ ಕೆಲವು ಮನೆಗಳಲ್ಲಿ ವಿಧವೆಯರಿದ್ದು, ಮನೆಯ ಎಲ್ಲಾ ಆಗುಹೋಗುಗಳಿಗೆ ಜವಾಬ್ದಾರರಾಗಿ, ಮಕ್ಕಳನ್ನು ಶೈಕ್ಷಣಿಕವಾಗಿ ಸಬಲರನ್ನಾಗಿ ಮಾಡಿರುವುದರ ಜೊತೆಗೆ ಸಾಮಾಜಿಕ ವಿಷಯಗಳಲ್ಲಿ mbZಠಿಛಿ ಆಗಿರುವುದು ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿತ್ತು.
ತಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರದ ಸೌಲಭ್ಯಗಳನ್ನು ಅವಲಂಬಿಸಿದ ಕುಟುಂಬಗಳು ಒಂದೆಡೆಯಾದರೆ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿದ್ದರೂ ವಂಚಿತರಾದ ಬಹಳಷ್ಟು ಕುಟುಂಬಗಳ ಬಡತನ ಕಂಡಾಗ ಅವಕಾಶ ಉಳ್ಳವರ ಪಾಲೆನ್ನುವ ಮಾತು ಸತ್ಯವೆನಿಸಿತು. ಕುಟುಂಬದ ಸಾಮಾಜಿಕ ಸ್ಥಿತಿಗತಿ ಅಳೆಯಲು ನಮಗೆ ಒದಗಿಸಲಾದ ಪ್ರಶ್ನಾವಳಿಗಳೇ ಮಾಪಕಗಳಾಗಿದ್ದರಿಂದ ಹಾಗೂ ಆ ಪ್ರಶ್ನೆಗೆ ‘ಮನೆಯವರು ನೀಡಿದ ಉತ್ತರ’ವನ್ನೇ ದಾಖಲಿಸಬೇಕಾಗಿದ್ದುದರಿಂದ ನಮ್ಮ ಕೆಲಸವನ್ನು ನ್ಯಾಯಯುತವಾಗಿ ಮಾಡಿ ಸಮೀಕ್ಷಾ ಕೆಲಸವನ್ನು ಮುಗಿಸಿದೆಯೆಂಬ ತೃಪ್ತಿ ಒಂದು ಕಡೆಯಾದರೆ, ಮನುಷ್ಯನ ಮುಖ ಹಾಗೂ ಮುಖವಾಡಗಳ ನಡುವಿನ ಅಂತರವನ್ನು ತಿಳಿದುಕೊಳ್ಳುವ ಪಾಠವನ್ನು ಶಿಕ್ಷಕರಿಗೆ ಮತ್ತೊಮ್ಮೆ ಸಮೀಕ್ಷೆಯೆಂಬ ಕ್ಲಾಸ್ ರೂಮ್ ಕಲಿಸಿಕೊಟ್ಟಿತು.
” ಪ್ರಪಂಚದ ಮುಂದೆ ನಗುವಿನ ಮುಖವಾಡ ಧರಿಸಿ ನಾಟಕವಾಡುವ ಕಲೆಯನ್ನು ಈ ಸಮಾಜದಲ್ಲಿ ಕೆಲವರು ಎಷ್ಟು ಚೆನ್ನಾಗಿ ಸಿದ್ಧಿಸಿಕೊಂಡಿದ್ದಾರೆ ಹಾಗೂ ಅದಕ್ಕೆ ಜಾತಿ, ಮತ, ಧರ್ಮಗಳ ವ್ಯತ್ಯಾಸವಿಲ್ಲ ಎಂಬುದು ಸಮೀಕ್ಷೆಯ ಒಂದೆರೆಡು ದಿನಗಳಲ್ಲೇ ನನಗೆ ಗೊತ್ತಾಗಿತ್ತು…”





