ಮೋಹಿತ್ ಎಸ್ ಗೌಡ
ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ ಬರೆಯಿರಿ’ ಎಂಬ ಮುಖ್ಯ ಪ್ರಶ್ನೆಗಳು ಅತಿ ಸುಲಭದ ಪ್ರಶ್ನೆಗಳಾಗಿರುತ್ತಿದ್ದವು. ‘ಗಂಡು’ ಪದದ ವಿರುದ್ಧ ಪದ ‘ಹೆಣ್ಣು’ ಅಥವಾ ಗಂಡಿನ ಲಿಂಗ ಬದಲಿಸಿದರೆ ಹೆಣ್ಣು. ಸುಲಭವಾಗಿ ಮಾರ್ಕು ದಕ್ಕಿಸಿ ಕೊಡುವ ಆ ಪ್ರಶ್ನೆ ಬಂದರೆ ಅತೀವ ಖುಷಿಯಾಗುತ್ತಿತ್ತು. ಮನೆಗೆ ಒಮ್ಮೆ ಭಿಕ್ಷೆಗೆ ಬರುತ್ತಿದ್ದ ಸೀರೆಯುಟ್ಟ ಅವರನ್ನು ನೋಡಿ ನಾವು ನಕ್ಕರೆ ‘ಹಂಗೆಲ್ಲಾ ಅಣಕಸ್ಯಾಡಬಾರದಪ್ಪಿ! ಅವ್ರು ಗಂಡು ಜೋಗಮ್ಮ ಅದಾರ. ನೀ ಹಂಗ ಅಣಕಸ್ಯಾಡಿದರೆ ಅವ್ರು ಶಾಪ ಕೊಟ್ಟುಬಿಡ್ತಾರೆ. ’ ಎಂದು ಅಮ್ಮ ಎಚ್ಚರಿಸುತ್ತಿದ್ದಳು. ನಾನು ಗಂಡು ಹೆಣ್ಣಿಗಿಂತ ಭಿನ್ನವಾಗಿ ಇರುವವರನ್ನು ನೋಡಿದ್ದು ಆಗಲೇ. ಅಮ್ಮ ಭಿಕ್ಷೆ ಹಾಕಿ ಗಂಡು ಜೋಗಮ್ಮರಿಂದ ನನಗೆ ಆಶೀರ್ವಾದ ಮಾಡಿಸಿದ್ದರು ಎನ್ನುವುದೀಗ ಅಸ್ಪಷ್ಟ ನೆನಪು.
ಏಳನೇ ತರಗತಿಯವರೆಗೂ ಜನಪ್ರಿಯ ಸಿನಿಮಾಗಳಲ್ಲಿ ಹೂವು ಹೂವು ತಾಕಿದರೆ, ತುಟಿಗೆ ತುಟಿ ಮುತ್ತಿಕ್ಕಿದರೆ ಮಕ್ಕಳಾಗುತ್ತವೆ ಎಂದು ನಂಬಿ ಕೊಂಡಿದ್ದೆವು. ಸಿನಿಮಾದ ಮತ್ತು ದೈನಿಕದ ಲೋಕದಲ್ಲಿ ಗಂಡು ಹೆಣ್ಣಿನ ನಡುವಿನ ಪ್ರೇಮದಯುಗಳ ಗೀತೆಗಳನ್ನು ವಿಜೃಂಭಿಸಲಾಗುತ್ತಿತ್ತು. ಹುಡುಗ ಹುಡುಗ ಅಥವಾ ಹುಡುಗಿ ಹುಡುಗಿಯರ ಪ್ರೇಮಕಥೆಗಳು ಇರಲೇ ಇಲ್ಲ. ಗಂಡು ಹೆಣ್ಣು ಎಂಬ ಗೆರೆ ಕೊರೆದ ಅಚ್ಚಿನಲ್ಲಿ ಕೂರದವರನ್ನು ಹೆಣ್ಣಾಡಂಗಿ ಎಂದೋ ಅಥವಾ ಗಂಡು ಬೀರಿ ಎಂದೋ ಆಡಿಕೊಳ್ಳುತ್ತಿದ್ದರು. ಸಿನಿಮಾದಲ್ಲಂತೂ ಅದು ಹಾಸ್ಯಕ್ಕೆ, ಹೀಗಳಿಕೆಗೆ ಮಾತ್ರ ಸೀಮಿತವಾಗಿತ್ತು. ಇದೆಲ್ಲದರ ಹೊರತಾಗಿ ಮನಸ್ಸು ಹುಡುಗರ ಕಡೆಗೆ ಆಕರ್ಷಣೆಯಾಗುತ್ತಿತ್ತು. ಬಯಸುವ ಹುಡುಗನ ಜೊತೆ ಸಮಯ ಕಳೆಯಬೇಕೆಂದು ಹಾತೊರೆಯುತ್ತಿತ್ತು. ಶಾಲೆ ಬಿಟ್ಟ ಮೇಲೆ ಹೆಗಲ ಮೇಲೆ ಕೈ ಹಾಕಿ ಒಮ್ಮೊಮ್ಮೆ ಕೈಕೈ ಹಿಡಿದು ಮನೆಯವರೆಗೂ ನಡೆದುಕೊಂಡು ಹೋಗಬೇಕೆನಿಸುತ್ತಿತ್ತು. ಕಿವಿ ಬಿಸಿಯಾಗುತ್ತಿತ್ತು. ಹೊಟ್ಟೆಯೊಳಗೆ ಅದೇನೋ ಚಿಟ್ಟೆ ಓಡಾಡಿದ ತಳಮಳ. ನಾನು ಮೆಚ್ಚಿದ ಹುಡುಗನ ಹತ್ತಿರವೇ ಇರಬೇಕು ಎಂದು ಮನಸ್ಸು ಹಾತೊರೆಯುತ್ತಿತ್ತು.
ನಾನಾಗ ಹೈಸ್ಕೂಲಿನಲ್ಲಿದ್ದೆ. ರಾತ್ರಿ ಒಂಬತ್ತರ ನಂತರ ಲೋಕಲ್ ಚಾನೆಲ್ಲಿನಲ್ಲಿ ‘ಆಶಿಕ್ ಬನಾಯ ಆಪನೇ’ ತರದ ಹಸಿಬಿಸಿ ದೃಶ್ಯವಿರುವ ಹಾಡುಗಳನ್ನು ಹಾಕುತ್ತಿದ್ದರು. ರಿಮೋಟಿನಿಂದ ಚಾನೆಲ್ ಬದಲಿಸುವ ಉಪಾಯ ತಂತ್ರದಲ್ಲೇ ಆ ಹಸಿಬಿಸಿ ದೃಶ್ಯವನ್ನು ನೋಡಿಕೊಂಡುಬಿಡುತ್ತಿದ್ದೆ. ಆ ಹಾಡು ನೋಡುವಾಗ ನನ್ನ ಮನಸ್ಸು ಮಾತ್ರ ಇಮ್ರಾನ್ ಹಶ್ಮಿಯ ದೇಹದ ಕಡೆಗೆ ವಾಲುತ್ತಿತ್ತು. ನಾನು ಆ ಹಾಡಿನಲ್ಲಿರುವ ತನುಶ್ರೀ ದತ್ತಾಳ ಜಾಗದಲ್ಲಿ ಇದ್ದೀನೇನೋ ಎನಿಸುತ್ತಿತ್ತು. ಪತ್ರಿಕೆ ಮ್ಯಾಗಝಿನ್ ಮಾರುವ ಅಂಗಡಿಯಿಂದ ದುಡ್ಡು ಕೂಡಿಕ್ಕಿ ತರುತ್ತಿದ್ದ ಶೃಂಗಾರ ಪುಸ್ತಕಗಳನ್ನು ಓದುವಾಗಲೂ ಕಣ್ಣು ಅಲ್ಲಿನ ಚಿತ್ರಗಳಲ್ಲಿರುವ ಗಂಡಿನ ಆಕೃತಿಯ ಕಡೆಗೇ ಸೆಳೆಯುತ್ತಿತ್ತು. ಒಮ್ಮೊಮ್ಮೆ ಮೂಗಿನಿಂದ ಮಾತನಾಡುವ, ನಡಿಗೆಯಲ್ಲಿ ಆಗಾಗ ನುಸುಳುತ್ತಿದ್ದ ವಯ್ಯಾರ ಕಂಡು ಮೇಷ್ಟ್ರು ಹೆಣ್ಣಾಡಂಗಿ ಅಂತೇನೋ ರೇಗಿಸುತ್ತಿದ್ದರು. ಆಗೆಲ್ಲ ನನ್ನಲ್ಲಿ ಏನೋ ಸರಿ ಯಿಲ್ಲ ಎನಿಸಿ ಖಿನ್ನನಾಗುತ್ತಿದ್ದೆ. ಈ ಸಮಲೈಂಗಿಕ ಸಂಬಂಧವೆಲ್ಲಾ ಒಂದು ಫೇಜ್ಹ್ ಅಥವಾ ಇದೊಂದು ಹಂತ ಅಷ್ಟೇ ಎಂದು ಕೆಲವು ಜನರು ಹೇಳುತ್ತಿದ್ದರು. ಇದೆಲ್ಲಾ ಒಂದು ಹಂತವಷ್ಟೇ ಆಗಿದ್ದಿದ್ದರೆ ಮನಸ್ಸು ಹುಡುಗಿಯರ ಕಡೆಗೂ ಲೈಂಗಿಕವಾಗಿ ಆಕರ್ಷಿತವಾಗಬೇಕಿತ್ತು. ಅದು ಇಲ್ಲಿಯವರೆಗೂ ಆಗಿಲ್ಲ. ಹಾಗಿದ್ದರೆ ಇದು ಹಂತ ಅಲ್ಲ ಎಂದು ಕ್ರಮೇಣವಾಗಿ ಅರ್ಥವಾಯಿತು. ಮನಸ್ಸು ತೀವ್ರವಾಗಿ ಬಯಸುವುದನ್ನು ಅದೇನೇ ಕಟ್ಟಳೆಗಳಿರಲಿ ಅದೆಲ್ಲದರ ನಡುವೆ ಒಮ್ಮೊಮ್ಮೆ ಅವೆಲ್ಲವನ್ನು ಮೀರಿ ಮನುಷ್ಯರು ಅದನ್ನು ದಕ್ಕಿಸಿಕೊಳ್ಳುತ್ತಾರೆ. ಅದರ ದಾರಿಗಳ ಹುಡುಕುತ್ತಾರೆ. ಈ ಮೋಹ, ಈ ಬಯಕೆ ಮತ್ತು ಇದು ಹೀಗೆಯೇ ಯಾಕೆ? ನನ್ನೊಳಗೆ ಏನಾದರೂ ಐಬಿದೆಯೇ ಎಂದು ಚಿಂತೆಯಾಗುತ್ತಿತ್ತು.
ಆದರೆ ನಾನಿರುವ ಹಳ್ಳಿಯಲ್ಲಿ ಕಂಪ್ಯೂಟರು, ಫೋನುಗಳು, ಇಂಟರ್ನೆಟ್ ಮತ್ತು ಆ ಸಂಪನ್ಮೂಲಗಳ ಕೊರತೆ ಇತ್ತು. ಪೇಟೆಗೆ ಓದಲು ನೌಕರಿ ಮಾಡಲು ಬಂದಾಗ ಟಿಂಡರ್, ಆರ್ಕುಟ್ ಇನ್ನು ಮುಂತಾದ ಹಲವಾರು ಡೇಟಿಂಗ್ ಆಪ್ ಗಳಲ್ಲಿ ನಮ್ಮ ಭಾವದ್ದೇ ಜನರನ್ನು ಭೇಟಿಯಾದಾಗ ಪ್ರೀತಿಗೆ, ಮೋಹಕ್ಕೆ, ಬಯಕೆಗೆ ಲಿಂಗತ್ವದ ಹಂಗಿಲ್ಲ ಎಂದು ತಿಳಿಯಿತು. ಪ್ರೀತಿಯ ಔಟ್ಕಮ್ ಕಡೆಗೂ ಮಕ್ಕಳಾಗುವುದರಲ್ಲೇ ಕೊನೆಯಾಗಬೇಕಿಲ್ಲ. ಸಮಲೈಂಗಿಕ ಸಮುದಾಯ ದತ್ತು ತೆಗೆದುಕೊಳ್ಳುವ ಕನಸು ಕಟ್ಟಬಹುದು ಎಂದು ಅರಿತುಕೊಂಡೆ. ಸೆಕ್ಷನ್ ೩೭೭ ತೀರ್ಪು ನಾವು ಈ ದೇಶದಲ್ಲಿ ಕ್ರಿಮಿ ನಲ್ಲುಗಳಲ್ಲ ಎಂದು ತೀರ್ಪಿತ್ತು ಒಳಗೆ ಸುಳಿದು ಮರೆಯಾಗುವ ಭಯವನ್ನು ಕಡಿಮೆ ಮಾಡಿತು. ಈ ಮೊದಲು ಪೇಟೆಗಳು ಮತ್ತು ಹಳ್ಳಿಗಳ ನಡುವೆ ಒಂದು ಅಂತರವಿತ್ತು. ಅದೀಗ ಮಸುಕು ಮಸುಕಾಗುತ್ತಿದೆ. ಪೇಟೆಯ ಮುಕ್ತತೆ ನಮ್ಮ ಬಾಗಿಲಿಗೆ ಬಂದಿದೆ ಎನ್ನುವುದೇ ಹಳ್ಳಿಗಳಲ್ಲಿ ಒಂದು ಹೊಸ ತಲ್ಲಣ ಸೃಷ್ಟಿಸುತ್ತಿದೆ. ಈ ಭಯ ಎಲ್ಲಿಂದ ಬರುತ್ತಿದೆ ಮತ್ತು ಯಾಕಾಗಿ ಬರುತ್ತಿದೆ ಎನ್ನುವುದು ನಮ್ಮ ಮುಂದೆ ನಾವು ಹಾಕಿಕೊಳ್ಳ ಬೇಕಾದ ಪ್ರಶ್ನೆ ಎನಿಸುತ್ತಿದೆ.
andolanahadupadu@gmail.com




