ಸೂರ್ಯಪುತ್ರ
ಹೆಗ್ಗಡದೇವನಕೋಟೆ ಎಲಚಿಕಟ್ಟೆ ಹಾಡಿಯ ಬೆಟ್ಟಕುರುಬರ ಪುಟ್ಟಮ್ಮನ ಕುಟುಂಬ ಬಹಳ ಹಿಂದಿನಿಂದಲೂ ಕಾಡನ್ನೇ ನೆಚ್ಚಿ ಬದುಕಿದವರು. ಕಾಡಿನಲ್ಲೇ ಹುಟ್ಟಿ ಬೆಳೆದ ಪುಟ್ಟಮ್ಮ ಕಾಡು ಮತ್ತು ನಾಡು ಎರಡರಸಾಂಗತ್ಯವನ್ನು ಅನುಭವಿಸಿದವರು. ಊರು ಮತ್ತು ಕಾನನ ಇವೆರಡರ ನಡುವೆ ಯಾವುದರ ಸಂಗ ಹೆಚ್ಚು ಸುಖ ಕೊಟ್ಟಿದೆ ಎಂದರೆ ಪುಟ್ಟಮ್ಮ ಅವರದ್ದು ‘ಕಾಡು ಮಲ್ಲಿಗೆ’ ನಗು. ‘ಊರೊಳಗೆ ಬಂದು ಎಷ್ಟು ಕಷ್ಟ ಪಟ್ಟು ಕೆಲ್ಸ ಮಾಡುದ್ರೂ ನಮ್ಮ ಮಕ್ಳಿಗೆ ಕಾಡಿನ ಸುಖ ಎಲ್ಲಿಂದ ಕೊಡೋಕಾಗತ್ತೆ ನಮ್ಗೆ ಸಿಕ್ಕ ಕಾಡಿನ ಸ್ವಾತಂತ್ರ್ಯ ಮಕ್ಳಿಗೆಲ್ಲಿದೆ ಹೊಟ್ಟೆಗೆ ಅನ್ನ ಇಲ್ದಿದ್ರೂ ಆಟ ಆಡ್ಕೊಂಡು ಖುಷಿಯಾಗಿದ್ವಿ ನಾವು ಸಣ್ಣೋರಿರ್ಬೇಕಾದ್ರೆ.
ಏನ್ಮಾಡದು ನಮ್ಮ ಮಕ್ಳಿಗೆ ಆ ಸ್ವಾತಂತ್ರ್ಯ ಉಳ್ಸಿ ಕೊಡಾಕೆ ಆಗಿಲ್ವಲ್ಲ, ಆ ಸುಖ ಈ ಪ್ಯಾಟೆ ಕೊಟ್ಬುಟ್ರೆ ಒಪ್ಕಾತೀನಿ. ಆಗಲ್ವಲ್ಲ, ಅದೇ ಬೇಜಾರು’ ಎನ್ನುತ್ತಾರೆ. “ಏನ್ ಪುಟ್ಟಮ್ಮಾ ಕಾಡುವ ಸುಖದ ಬಗ್ಗೆ ಇಷ್ಟೆಲ್ಲ ಹೇಳ್ತೀರಲ್ಲ, ನಿಮ್ಗೆ ಖುಷಿ ಕೊಟ್ಟಿರೋ ವಿಷಯಾನೂ ಹೇಳಿ” ಅಂದ್ರೆ “ಖುಷಿ! ಅದೆಲ್ಲಿದೆ ನಮ್ಗೆ ಬರೀ ನೋವು ಮಾತ್ರಾನೇ” ಎಂದಾಗ “ಇಷ್ಟು ವರ್ಷಗಳಲ್ಲಿ ಏನಾದ್ರೂ ಒಂದು ಘಟನೆ ಆದ್ರೂ ಇರ್ಬೇಕಲ್ವ ಪುಟ್ಟಮ್ಮ, ನಿಮ್ಗೆ ಖುಷಿ ಕೊಟ್ಟಂತದ್ದು” ಮತ್ತೆ ಮತ್ತೆ ಕೇಳಿದರೂ “ಏನೂ ಇಲ್ಲ ಬಿಡಿ” ಎಂದ ಪುಟ್ಟಮ್ಮ ಖುಷಿಗಿಂತಲೂ ಯಾಕೆ ಖುಷಿಯಾಗಿಲ್ಲ ಎನ್ನುವ ಸತ್ಯ ಬಿಚ್ಚಿದರು.
“ನೋಡಿ ನಮ್ಮ ತಾತ ಮುತ್ತಾತಂದ್ರು ನೆಟ್ಟ ಸಾಗ್ವಾನಿ ಸಸಿಗಳು ಈಗ ಕೋಟಿ ಕೋಟಿ ಕೊಟ್ರೂ ತೆಕೋಳೋಕೆ ಆಗಲ್ಲ. ಆ ಗಾತ್ರದ ಮರಗಳನ್ನ ನಮ್ಮಿಂದ ಕಿತ್ಕೊಂಡ್ರು. ಔಷಧಿಗೆ ನಾರಿಲ್ಲ, ಬೇರಿಲ್ಲ. ಇದ್ಯಾವ ಖುಷಿ ಕೊಡತ್ತೆ ಹೇಳಿ. ಏನೇ ಬಂದ್ರೂ ಆಸ್ಪತ್ರೆಗೆ ಹೋಗ್ಬೇಕು, ಮದ್ದು ತಕೊಂಡು ಬರ್ಬೇಕು, ಆ ಕಾಲ್ದಲ್ಲಿ ಯಾವ್ ಆಸ್ಪತ್ರೆ ಸೊಪ್ಪು ತೆಗೋಬಂದು ಔಷ್ದಿ ಕೊಡು, ಚಕ್ಕೆ ಅರ್ದು ಎಸರು ತೆಗ್ದು ಕೊಡು ಅಂತ ಬದುಕ್ದೋರು, ಈಗ ಏನೇ ಆದ್ರೂ ಆಸ್ಪತ್ರೆಗೆ ನಡಿ ಅನ್ನೋದಾಗಿದೆ. ಮಕ್ಳು ಓದ್ತಾವ್ರೆ, ವಿದ್ಯಾಭ್ಯಾಸ ಮಾಡ್ಕಾತಾರೆ. ಆದ್ರೆ ನಮ್ಮ ಕಾಡಿನ ಸಂಪ್ರದಾಯದ ಖುಷಿ ನಮ್ಗಿಲ್ಲ. ಯಾವ್ತ್ಯ್ದು ಕಷ್ಟಗಳು ಬಂದ್ರೂವೇ, ಕಾಯಿಲೆ ಬಂದ್ರೂವೆ ಕಾಡಿಗೆ ಓಡ್ತಿದ್ದ ನಮ್ ಬದ್ಕು ಈಗ ನಾಡಿಗೆ ಓಡೋ ತರ ಆಗಿದ್ದು ಯಾವ್ ಖುಷಿ ಹೇಳಿ!” ಎಂದ ಪುಟ್ಟಮ್ಮರ ಮಾತು ವಾಸ್ತವದ ತಲೆಯ ಮೇಲೆ ಮೊಟಕಿದ ಹಾಗೆ ಕೇಳಿಸುತ್ತಿತ್ತು.
“ಯಾಕ್ ಪುಟ್ಟಮ್ಮಾ ಬರೀ ನೋವು, ದುಃಖ ಅಂತೀರಲ್ಲ. ನಮ್ಗಿಂತ ಕಷ್ಟದಲ್ಲಿರೋರನ್ನ ಒಂದ್ಸಲ ನೋಡಿದ್ರೆ ನಮ್ದೇನೂ ಅಲ್ಲ ಅನ್ಸುತ್ತಂತೆ, ನಿಮ್ಗೆ ಹಂಗೆ ಅನ್ಸೇ ಇಲ್ವಾ?” ಎಂದು ಕೇಳಿದ್ರೆ ದಕ್ಷಿಣ ಭಾರತದ ಹೆಗ್ಗಡ ದೇವನಕೋಟೆಯ ಆದಿವಾಸಿ ಹೆಣ್ಮಗ್ಳು ಪುಟ್ಟಮ್ಮ, ಪೂರ್ವ ಭಾರತದ ಜಾರ್ಖಂಡ್ ಆದಿವಾಸಿಗಳನ್ನು ಭೇಟಿಯಾದ ಸಂದರ್ಭ ನೆನಪಿಸಿಕೊಳ್ಳುತ್ತಾರೆ.
“ನಾ ರೈಲಲ್ಲಿ ಕೂತ್ಕಂಡಿದ್ದು ಅದೇ ಮೊದಲ್ನೇ ಸರ್ತಿ. ಇಪ್ಪತ್ತು ಇಪ್ಪತ್ತೈದು ಹೆಣ್ಮಕ್ಳ ಗುಂಪನ್ನ ಪ್ರವಾಸ ಕರ್ಕೊಂಡು ಹೋಗ್ತೀವಿ ಅಂತ ವಿವೇಕಾನಂದ ಸಂಸ್ಥೆ ಮುಂದೆ ಬಂತಾ! ನಮ್ ತಾವ ಕಾಸಿಲ್ಲ, ಏನೂ ಇಲ್ಲ. ಹೆಂಗೆ ಹೋಗೋದು” ಅಂತಂದ್ರೆ ನಮ್ ಆಧಾರು ತೆಕಂಡು ಎಲ್ಲಾ ವ್ಯವಸ್ಥೆ ಮಾಡುದ್ರು. ಪ್ರವಾಸಕ್ಕೆ ಅಂತ ಜಾರ್ಖಂಡು ತಿರ್ಗುದ್ದೂ ಆಯ್ತು. ಅದೊಂದಿನ ಜೀಪಲ್ಲಿ ಕೂರುಸ್ಬಿಟ್ಟು “ಪುಟ್ಟಮ್ಮಾ ಇಲ್ಲಿನ ಆದಿವಾಸೀನ ನೋಡಕೆ ಕಾಡಿಗೋಗಾಣ” ಅಂತಂದ್ರಾ! “ಯೇ ಬುಡಿ, ಇಲ್ಲಿನ ಆದಿವಾಸಿಗ್ಳು ನಮ್ಗಿಂತ ಚೆನಾಗಿರ್ತವ್ರೆ” ಅಂದ್ಕಂಡ್ರೆ ಹಂಗಿರ್ಲಿಲ್ಲ. ಬದ್ಕು ಹಸನಾಗಿರತ್ತೆ ಅಂದ್ಕಂಡಿದ್ದೆ. ಆದ್ರೆ ಅಲ್ಲಿ ಅವ್ರ ಸ್ಥಿತಿ ನೋಡಿ ಕಣ್ಣಲ್ಲಿ ನೀರು ಬಂತು ಸಾಮಿ.
ನಿಜ ಹೇಳ್ತೀನಿ ಐದು ವರ್ಷದ್ ಮಕ್ಳು, ಎರ್ಡು ವರ್ಷದ ಮಕ್ಳು ಪೂರ್ತಿ ಹುಟ್ಟುಡುಗೆಲಿ, ನಿರ್ವಾಣ ಸ್ಥಿತಿ! ನಮ್ ಅಜ್ಜೀರು, ತಾಯಿಗಳು ಕಾಡಲ್ಲಿ ಸಿಗೋ ಕಾಡು ಗೆಣ್ಸು, ಕಾಡುಜೇನು ತಿಂದ್ಕಂಡು ಉಂಡ್ಕಂಡು ಮರದ ಗೆಡ್ಡೇಲಿ ಕುತ್ಕಂಡು ಆರಾಮಾಗವ್ರೆ. ಆದ್ರೆ ಪಾಪ ಅಲ್ಲಿನ ಅಜ್ಜೀರಿಗೆ ಏನೂ ಇಲ್ಲ. ಸುಮ್ನೆ ಗುಂಪು ಗುಂಪಾಗಿ ಕುತ್ಕಂಡಿದ್ರು. ಇರಾಕೆ ಚಿಕ್ ಚಿಕ್ದು ಹುಲ್ಲಿನ ಮನೆಗೊಳು ಏನೂ ಇಲ್ಲ. ಅವನ್ನ ನೋಡಿ ಅಯ್ಯೋ ನಮ್ ಆದಿವಾಸಿಗಳ್ದೇ ಕಷ್ಟ ಅಂದ್ಕಂಡ್ರೆ ಇದಪ್ಪಾ ನಿಜ್ವಾದ ಆದಿವಾಸಿಗ್ಳ ಕಷ್ಟ ಅನ್ಸಿಬಿಡ್ತು. ಏನಿಲ್ಲ, ಮಾಡ್ಕಂಡು ತಿನ್ನಾಕೆ ಭೂಮಿನಾದ್ರೂ ಇದ್ಯಾ? ಅದೂ ಇಲ್ಲ. ಅಲ್ಲಿಂದ ನಮ್ಮುನ್ನ ಕರ್ಕೊಂಡು ಹೋಗಿದ್ದ ವಿವೇಕಾನಂದ ಸಂಸ್ಥೆಯವ್ತ್ಯ್ರು ಇನ್ನೊಂದು ಕಡೆಗೆ ಕರ್ಕೊಂಡು ಹೋದ್ರು. ಅಲ್ಲಿ ಆದಿವಾಸಿಗಳ ಸ್ಥಿತಿ ಪರ್ವಾಗಿಲ್ಲ ಅನುಸ್ತು. ಮಕ್ಳಿಗೆ ಶಿಶುವಿಹಾರ ಇತ್ತು. ಪುಟ್ಟ ಹೊಲಗಳಲ್ಲಿ ತರಕಾರಿ ಬೆಳ್ಸಿ ಪೇಟೆಗೆ ತಕೊಂಡು ಹೋಗಿ ಮಾರ್ತಿದ್ರು. ಇವ್ರ ಜೀವ್ನ ನೋಡ್ಬಿಟ್ಟು ಖುಷಿಯಾಗಿ, ‘ಆ ಕಾಡ್ನಲ್ಲಿ ಇರೋರಿಗೂ ಇಂತ ಬದ್ಕು ಸಿಗ್ಬೇಕು ಸಾಮಿ’ ಅಂತ ಕೇಳ್ಕಂಡೆ. ಆ ಅನುಭವ ಇದ್ಯಲ, ಬೇರೆ ಬೇರೆ ಕಡೆ ಇರೋ ನಮ್ ಆದಿವಾಸಿಗಳ ಬದ್ಕು ಹಿಂಗೂ ಇದ್ಯಲ ಅನ್ಸಿಬಿಟ್ಟು ಬೇಜಾರನುಸ್ತು. ಇದ್ಕೆ ಅಲುವ್ರಾ ನಮ್ ಕಷ್ಟಾ ಮಾತ್ರ ದೊಡ್ದು ಅಂತಂದ್ಕಾಬಾರ್ದು ಅನ್ನಾದು” ಪುಟ್ಟಮ್ಮರ ಮುಖದ ಸಮ್ಮಿಶ್ರ ಭಾವದ ಹಿಂದೆ ಖುಷಿಯ ಅಪೂರ್ಣ ವ್ಯಾಖ್ಯಾನ!
“ಮಕ್ಳು ಓದ್ತಾವ್ರೆ, ವಿದ್ಯಾಭ್ಯಾಸ ಮಾಡ್ಕಾತಾರೆ. ಆದ್ರೆ ನಮ್ಮ ಕಾಡಿನ ಸಂಪ್ರದಾಯದ ಖುಷಿ ನಮ್ಗಿಲ್ಲ. ಯಾವ್ತ್ಯ್ದು ಕಷ್ಟಗಳು ಬಂದ್ರೂವೇ, ಕಾಯಿಲೆ ಬಂದ್ರೂವೆ ಕಾಡಿಗೆ ಓಡ್ತಿದ್ದ ನಮ್ ಬದ್ಕು ಈಗ ನಾಡಿಗೆ ಓಡೋ ತರ ಆಗಿದ್ದು ಯಾವ್ ಖುಷಿ ಹೇಳಿ”




