ಡಾ.ಶುಭಶ್ರೀ ಪ್ರಸಾದ್, ಮಂಡ್ಯ
ಶಾಲೆಯವರಿಗೆ ಕಾಲೇಜಿನವರಿಗೆ ಬೇಸಿಗೆ ರಜೆ ಉಂಟು, ಕ್ರಿಸ್ಮಸ್ ರಜೆ ಉಂಟು, ನವರಾತ್ರಿ ರಜೆ ಉಂಟು, ಕೋರ್ಟ್‌ನವರಿಗೆ ವಿಂಟರ್ ವೆಕೇಷನ್ ಅಂತ ಉಂಟು, ಆದರೆ ಬ್ಯಾಂಕ್‌ನವರಿಗೆ ಯಾವ ವೆಕೇಶನ್ನೂ ಇಲ್ಲಾರೀ… ಯಾವಾಗಲೂ ಬರಿ ಒಕೇಶನ್ ಅಂದ್ರೆ ಓಕಲ್. ಬಂದವರ ಜೊತೆ ಬರೀ ಮಾತಾಡಿ ಗಂಟಲು ಒಣಗಿಸಿಕೊಳ್ಳುವುದು. ಹೋಗ್ಲಿ, ನಾಲ್ಕನೇ ಮತ್ತು ಎರಡನೇ ಶನಿವಾರ ಮತ್ತು ಭಾನುವಾರ ನಮ್ ಕೆಲಸ ಏನಾದರೂ ಮಾಡಿಕೊಳ್ಳೋಣ ಅಂತ ಅಂದ್ರೆ ಅವತ್ತು ಎಲ್ಲಾ ಸರ್ಕಾರಿ ಕಚೇರಿಗಳಿಗೂ ರಜೆ. ಎಲ್‌ಐಸಿ ಅಂತೂ ಎಲ್ಲಾ ಶನಿವಾರವೂ, ಭಾನುವಾರವೂ.
ಹೀಗಿರುವಾಗ ನಮ್ ಕೆಲಸ ಮಾಡಿಕೊಳ್ಳುವುದು ಯಾವಾಗ?
ಅಷ್ಟೇ ಯಾಕಪ್ಪಾ ಅಂಗಡಿಗೆ ಹೋಗಿ ಮ್ಯಾಚಿಂಗ್ ಬ್ರೌಸ್ ಪೀಸ್ ತೆಗೆದುಕೊಳ್ಳೋಣ ಅಂದ್ರೆ ಅದಕ್ಕೂ ರಜೆಯನ್ನೇ ಕಾಯಬೇಕು. ಬ್ಯಾಂಕ್ ಕೆಲಸ ಮುಗಿಸಿ ರಾತ್ರಿ ಅಂಗಡಿಗೆ ಹೋದರೆ ಆಗೆಲ್ಲಾ ತೆಗೆದುಕೊಂಡ ಮ್ಯಾಚಿಂಗ್ ಬ್ರೌಸ್ ಪೀಸ್ ಹಗಲಲ್ಲಿ ನೋಡಿದಾಗ ಬೇರೆ ಬಣ್ಣ ಅನಿಸಿಬಿಟ್ಟಿದೆ. ಹಾಗಾಗಿ ಅದಕ್ಕೂ ಶನಿವಾರ, ಭಾನುವಾರವೇ ಮುಹೂರ್ತ.
ಯಾರಾದರೂ ಫಂಕ್ಷನ್‌ಗೆ ಕರೆದರೆ ‘ಅಯ್ಯೋ ರಜೆ ಇಲ್ಲಪ್ಪ; ಶನಿವಾರನೋ ಭಾನುವಾರವೋ ಆದರೆ ಬರಬಹುದಿತ್ತು’ ಎನ್ನುವ ಒಗ್ಗರಣೆ ಹಾಕುವುದು ನನ್ ಹಣೆಬರಹ ಅಂತ ಎಲ್ಲರಿಗೂ ಗೊತ್ತಾಗಿದೆ. ಬೇರೆ ದಿನ ಎಂದರೆ ಕರೆಯುವುದಿಲ್ಲ ಬಿಡಿ. ಅದೇ ರಜೆಯ ದಿನ ಕಾರ್ಯಕ್ರಮಗಳಾದರೆ ಛೇ ಸಿಗುವುದು ಒಂದು ದಿನ, ಎರಡು ದಿನ ರಜೆ. ಇವತ್ತಾದ್ರೂ ನಿಧಾನಕ್ಕೆ ತಿಂಡಿ ಮಾಡಿ ಒಂದು ರೌಂಡ್ ತೂಕಡಿಸಿ ಮಧ್ಯಾಹ್ನವೇ ಅಡುಗೆ ಮಾಡಿ ಊಟ ಮಾಡಿ ತಿರುಗಿ ಮಲಗುವುದೋ, ಟಿವಿ ನೋಡುವುದೋ ಅಥವಾ ಹರಟೆ ಹೊಡೆಯುತ್ತಾ ಕಾಲ ಕಳೆಯೋಣ ಎಂದುಕೊಂಡಿದ್ದರೆ ಇವತ್ತೂ ಈ ಫಂಕ್ಷನ್ನಾ? ಎನ್ನುವ ದೊಡ್ಡ ಒಗ್ಗರಣೆ.
ಇರಲಿ ಹೇಗೋ ಒಂದು ತಿಂಗಳ ರಜೆ ಹಾಕಬೇಕೆಂದು ಮೂರು ತಿಂಗಳಿನಿಂದ ಪ್ಲಾನ್ ಮಾಡಿದ್ದಾಯ್ತು. ಬೇಸಿಗೆಯಾಗಿದ್ದರೆ ಹಪ್ಪಳ, ಸಂಡಿಗೆ ಪ್ಲಾನ್ ಅರಳುತ್ತಿತ್ತು. ಈಗ ಎಷ್ಟೇ ಆಗಲಿ ಮಳೆಯ ಕಾಲ. ಮನೆಯಲ್ಲಿ ಒಂದು ತಿಂಗಳಿದ್ದರೆ ವಾರಕ್ಕೆ ಎರಡು ಮೂರು ಬಾರಿ ಬಿಸಿ ಬಿಸಿ ಬಜ್ಜಿ, ಬೋಂಡ, ಪಕೋಡಗಳನ್ನು ಮಾಡಿ ತಿನ್ನಬಹುದು ಎನ್ನುವ ಕನಸು ಗರಿಗೆದರಿತು.
ಇನ್ನೆರಡು ತಿಂಗಳಲ್ಲಿ ಹೊರಬರಲಿರುವ ಪುಸ್ತಕಕ್ಕೆ ಅರ್ಧ ಭಾಗವಾದರೂ ಬರೆದುಬಿಟ್ಟರೆ ದಿನನಿತ್ಯದ ಜಂಜಾಟದಲ್ಲಿ ಅದಕ್ಕೆ ಸಮಯ ಕೊಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ಎನ್ನುವ ದೂರಾಲೋಚನೆ ಒಂದು ಕಡೆ. ಹೀಗೆ ತೇಲಿತು ರಜೆಯ ಕನಸಿನ ದೋಣಿ.
ಎಷ್ಟೆಲ್ಲಾ ಕನಸುಗಳನ್ನು ಕಂಡರೂ ಅವೆಲ್ಲಾ ನಿಜ ಆಗುತ್ತದೆಯೋ ಇಲ್ಲವೋ ಅನ್ನೋದೇ ನನಗೆ ಯಾವತ್ತಿನ ಡೌಟೋ ಡೌಟು.
ಒಂದು ತಿಂಗಳ ರಜೆ ಎಂದು ತಿಳಿದ ಕೂಡಲೇ ಎಲ್ಲ ಸಿಬ್ಬಂದಿಗಳ ಕಣ್ಣು ಕಿರಿದಾಗಿದ್ದೇನೋ ನಿಜ. ಆದರೆ ಮತ್ತೆ ಅವರೇ ‘ಇರಲಿ ಬಿಡಿ ಮೇಡಂ, ರೆಸ್ಟ್ ಆಯಿತು’ ಎಂದದ್ದೂ ಉಂಟು. ತಿಂಗಳ ರಜೆಯೆಂದ ಮೇಲೆ ಬ್ಯಾಂಕಿನಲ್ಲಿ ನನ್ನ ಪಾಲಿನ ಅಳಿದುಳಿದ ಕೆಲಸಗಳ ಹಸ್ತಾಂತರ ಆಗಬೇಕಿತ್ತು.
ಅದು ಅಧಿಕಾರ ಹಸ್ತಾಂತರದಂಥ ಸಂಭ್ರಮಾಚರಣೆ ಅಲ್ಲ, ಕೇವಲ ಕೆಲಸದ ಹಸ್ತಾಂತರ!
ಒಂದು ಕ್ಷಣವಂತೂ ನನ್ನ ಸಾಮಗ್ರಿಗಳನ್ನೆಲ್ಲ ಕೊಡುವಾಗ ಮನೆಮಗಳನ್ನು ಅತ್ತೆ ಮನೆಗೆ ಹೆಣ್ಣೂಪ್ಪಿಸುವಾಗ ಆಗುವ ಅನುಭವವೇ ಆಗಿಬಿಟ್ಟಿತ್ತೆಂದರೆ ನಗಬಾರದು ನೀವು.
ಒಂದು ತಿಂಗಳ ರಜೆ ಎಂಬ ಆ ಹಕ್ಕಿಗೆ ರೆಕ್ಕೆ ಬಂದ ಅನುಭವವೇ ವಿಶೇಷ ಕೆ.ಎಸ್.ನ. ಅವರ ಮೊದಲ ದಿನ ಮೌನ ಆಳುವೆ ತುಟಿಗೆ ಬಂದಂತೆ’ ಹಾಡು ಗುನುಗಲೇ?
ನನ್ನ ಗೆಳತಿಯ ಅಣ್ಣನ ಮಗಳ ಮದುವೆಗೆಂದು ಬೆಂಗಳೂರಿಗೆ ಸೀರೆ ಶಾಪಿಂಗಿಗೆ ಹೋದೆವು. ರಜೆಯ ಮೊದಲ ದಿನವೇ ನಮ್ಮ ಜಂಬೂ ಸವಾರಿ. ಬೆಂಗಳೂರೆಲ್ಲ ಸುತ್ತಿ, ಅಲ್ಲಿ ತಿಂಡಿ – ಇಲ್ಲಿ ಊಟ ಮಾಡಿ, ಗೆಳತಿಯರು ಲಲ್ಲೆ ಹೊಡೆದು, ಅಲ್ಲಿ ಇಲ್ಲಿ ಸೀರೆ ಅಂಗಡಿ ಹುಡುಕಾಡಿ ಕೊಂಡುಕೊಂಡು ರಾತ್ರಿ ವಾಪಸ್ ಮನೆಗೆ ಬಂದೆ. ಮೊದಲ ದಿನ ಕಥಮ್.
ರಜೆ ಬಂದಿದೆ ಎಂಬುದು ಹೆಸರಿಗಷ್ಟೇ. ಗ್ರಾಹಕರು ಸಹೋದ್ಯೋಗಿಗಳ ಕರೆಯಲ್ಲೇ ಎರಡು ದಿನಗಳು ಮುಳುಗಿ ಹೋದವು. ‘ಹೇಗೂ ರಜೆಯಲ್ಲಿದ್ದೀರಲ್ಲಾ ನಾವು ಕರಿಘಟ್ಟದ ದೇವರಿಗೆ ಅಭಿಷೇಕ ಇಟ್ಟುಕೊಂಡಿದ್ದೇವೆ ಬನ್ನಿ’ ಎಂದು ಎದುರು ಮನೆಯವರು ಕರೆದಿದ್ದೇ ತಡ ಪುಸಕ್ಕೆಂದು ಅವರೊಡನೆ ಹಾರಿ ಹೋದೆ. ನನ್ನದೊಂದು ಪುಸ್ತಕವನ್ನ ಇಂಗ್ಲಿಷಿಗೆ ಭಾಷಾಂತರಿಸಿದರೆ ಹೇಗೆ ಎಂಬ ಆಲೋಚನೆಯಿಂದಾಗಿ ಮೂರು ದಿನಗಳ ರಜೆ ಮೈಸೂರಿನಲ್ಲಿ ನನ್ನ ಗುರುಗಳ ಮನೆಯಲ್ಲಿ ಕರಗಿ ಹೋಯಿತು.
ಹೇಗೂ ರಜೆಯಲ್ಲಿ ಇದ್ದೀನಲ್ಲಾ ಎರಡು ತಿಂಗಳ ಹಿಂದೆ ತರಿಸಿದ ಬುಕ್ ಸೆಲ್ಸ್‌ಗೆ ನನ್ನ ಪುಸ್ತಕಗಳನ್ನೆಲ್ಲ ಜೋಡಿಸಿ ಬಿಟ್ಟರೆ ಮುಂದೆ ಓದುವುದು ಸುಲಭವಾದೀತು ಎಂಬ ಆಲೋಚನೆ ಬಂದದ್ದೇ ತಡ, ನಾಲ್ಕು ದಿನ ಪುಸ್ತಕ ಜೋಡಿಸುವುದರಲ್ಲಿ ಮುಳುಗಿ ಹೋದೆ. ಸಾವಿರಾರು ಪುಸ್ತಕಗಳಲ್ಲಿ ಕೆಲವನ್ನು ಕಾಲೇಜಿಗೆ ಕೊಟ್ಟು, ಕೆಲವನ್ನು ಹಳ್ಳಿಯ ಸರ್ಕಾರಿ ಶಾಲೆಗೆ ಕೊಟ್ಟಿದ್ದಾಯಿತು. ಕಥೆ, ಕವನ, ಕಾದಂಬರಿ, ವ್ಯಕ್ತಿ ಪರಿಚಯ, ವಿಮರ್ಶೆ, ಪ್ರಬಂಧ, ಕನ್ನಡ ಸಾಹಿತ್ಯ ಚರಿತ್ರೆ – ಅಯ್ಯೋ ಅಯ್ಯೋ ಅಯ್ಯೋ ಜೋಡಿಸುವುದರಲ್ಲಿ ಕೈ-ಕಾಲು, ಬೆನ್ನು ಬಿದ್ದುಹೋದವು. ಅಲ್ಲಿಗೆ ನಾಲ್ಕು ದಿನದ ನಾಟಕ
ಮುಗಿಯಿತು.
ಇಷ್ಟಕ್ಕೆ ಈ ಕೆಲಸ ನಿಂತಿದೆ. ಹೀಗೂ ಈ ಸಾರ್ಟಿಂಗ್ ಕೆಲಸ ಶುರು ಮಾಡಿದ್ದೇನೆ. ನಕಲಿ ಆಭರಣಗಳನ್ನೆಲ್ಲ ಜೋಡಿಸುವುದರಲ್ಲಿ ಮತ್ತೊಂದು ದಿನ ಕಳೆದೆ. ಹೇಗೂ ಕೈ ಹಾಕಿದ್ದೇನೆ ಒಂದು ರಾಶಿ ಪೇಪರ್‌ಗಳು ಹಾರಾಡುತ್ತಿವೆ, ಇಲ್ಲವೇ ಎಲ್ಲೋ ಒಂದು ಮೂಲೆಯಲ್ಲಿ ಮುದುರಿ ಕುಳಿತಿವೆ. ಅದನ್ನೆಲ್ಲ ಸರಿಯಾಗಿ ಜೋಡಿಸಿ ಬಿಟ್ಟರೆ ಹೇಗೆ ಅನಿಸಿ ಬ್ಯಾಂಕಿನ ಪತ್ರ ವ್ಯವಹಾರ ಒಂದು ಕಡೆ, ಸಾಹಿತ್ಯದ್ದೊಂದು ಕಡೆ, ಸಾಂಸ್ಕೃತಿಕ ಕಾರ್ಯಕ್ರಮತ್ತೊಂದು ಕಡೆ, ಮನೆ ಪತ್ರಗಳೊಂದು ಕಡೆ, ವಿಮೆಯ ಪತ್ರಗಳೊಂದು ಕಡೆ, ಆರೋಗ್ಯದ ಪತ್ರಗಳು ಒಂದು ಕಡೆ, ಸಾಲದ ಪತ್ರಗಳೊಂದು ಕಡೆ – ಹೀಗೆ ವಿಂಗಡಣೆ ಮಾಡುತ್ತಾ ಮಾಡುತ್ತಾ ನಮ್ಮ ಇಡೀ ಹಾಲ್ ತುಂಬಾ ಪತ್ರಗಳು ಹಾರಾಡಿದವು. ಅಪ್ಪಿತಪ್ಪಿ ಯಾರಾದರೂ ಆ ಸಮಯದಲ್ಲಿ ನಮ್ಮ ಮನೆಗೆ ಬಂದಿದ್ದರೆ ಕೆರೆ – ದಡ ಆಟವನ್ನು ನೆಲ ಮತ್ತು ಪೇಪರ್‌ಗಳ ಮಧ್ಯೆ ಆಡಬಹುದಿತ್ತು. ಅವನ್ನು ಒಂದು ಕಡೆ ಇಡಬೇಕೆಂದರೆ ಫೈಲ್‌ಗಳು ಬೇಕಲ್ಲವೇ?
ಪೇಪರ್‌ಗಳ ಮೇಲೆ ಹಾರಿಹೋಗದ ಹಾಗೆ ಭಾರ ಹೇರಿಟ್ಟು ಗಾಡಿ ತೆಗೆದುಕೊಂಡು ಅಂಗಡಿಗೆ ಓಡಿ ಒಂದಷ್ಟು ಫೈಲ್‌ಗಳನ್ನು ತಂದು ಜೋಡಿಸಿ ಇಡುವಷ್ಟರಲ್ಲಿ ಎರಡು ದಿನ ಅದು ಹೇಗೆ ಕಳೆದುಹೋಯಿತೋ ನಾ ಕಾಣೆ. ‘ಹೇಗೂ ನೀವು ರಜೆಯಲ್ಲಿದ್ದೀರಲ್ಲಾ ಇದೊಂದು ಕಾರ್ಯಕ್ರಮ ನಡೆಸಿಕೊಡಿ’ ಎಂದು ಯಾವುದೋ ಸಾಹಿತ್ಯ ಸಂಘದವರು ಕೇಳಿದ್ದರಿಂದ ಒಂದು ಗಂಟೆಯ ಆ ಭಾಷಣಕ್ಕೆ ಎರಡು ದಿನ ತಯಾರಿ… ಹೋಯ್ತು ಎರಡು ದಿನ. ‘ಮೇಡಂ ಹೇಗೂ ನೀವು ರಜೆಯಲ್ಲಿದ್ದೀರಲ್ಲಾ ನಮ್ಮ ಬ್ಯಾಂಕಿಗೂ ಬನ್ನಿ ನಮ್ಮ ಹೆಣ್ಣು ಮಕ್ಕಳಿಗೂ ನಿಮ್ಮ ಅನುಭವ ಹೇಳಿ’ ಅವರು ಅದರಿಂದ ಸ್ಫೂರ್ತಿ ಪಡೆಯಲಿ’ ಎಂದು ಗೆಳತಿ ಒಬ್ಬರು ಹೇಳಿದ್ದರಿಂದ ಅಲ್ಲಿ ಒಂದು ಗಂಟೆಯ ಭಾಷಣದ ತಯಾರಿಕೆಗೆ ಮತ್ತೆರಡು ದಿನ ಗಾಳಿಗೆ ತೂರಿದ ತರಗೆಲೆಯಂತೆ ಹಾರಿ ಹೋಯಿತು.
ಈ ನಡುವೆ ಕುಟುಂಬದ ಒಂದೆರಡು ಕಾರ್ಯಕ್ರಮ ಗಳು, ಗೆಳತಿಯ ಮನೆಯ ಮದುವೆ ಕಾರ್ಯಕ್ರಮ, ಅದೂ ದೂರದೂರಿನಲ್ಲಿ. ಹಾಗಾಗಿ ಅರ್ಧ ದಿನದ ಪ್ರಯಾಣ. ಇವುಗಳಿಗೆ ನಾಲ್ಕು ದಿನ ಎಗರಿ ಹೋಯಿತು. ಈ ನಡುವೆಲ್ಲಾ ನನಗೆ ಒಂದೇ ತಳಮಳ; ಇನ್ನೆರಡು ತಿಂಗಳಿನಲ್ಲಿ ತರಬೇಕಾದ ಪುಸ್ತಕಕ್ಕೆ ಎಂದು ಕಡೆಯ ಪಕ್ಷ ಐದು ದಿನವನ್ನಾದರೂ ಕೊಡಬೇಡವೇ? ಮುಖ್ಯವಾಗಿ ಅದಕ್ಕೆಂದೇ ರಜೆ ಹಾಕಿದ್ದು, ನಾನು ರಜೆ ಹಾಕುವ ಮುನ್ನ ಏನೇನೋ ಕನಸು ಕಂಡಿದ್ದೆ. ಹೊಸತೊಂದು ಪುಸ್ತಕವನ್ನೇ ಒಂದು ತಿಂಗಳೊಳಗೆ ಬರೆದುಬಿಡುತ್ತೇನೆ ಎಂಬ ಭ್ರಮೆಯೂ ಇತ್ತು. ಬರೆಯುವುದಿರಲಿ, ಈಗಾಗಲೇ ಬರೆದ ಲೇಖನಗಳನ್ನು ಸರಿಯಾಗಿ ವಿಂಗಡಿಸಿ ಒಂದೆಡೆ ಜೋಡಿಸಿ ಒಳ್ಳೆಯ ಹೆಸರು ಕೊಟ್ಟು ಅದನ್ನು ಪುಸ್ತಕ ಮಾಡುವ ಕೆಲಸವೂ ಪೂರ್ಣವಾಗಲಿಲ್ಲ. ಅಪರೂಪಕ್ಕೆ ನೀವು ಮನೆಯಲ್ಲಿದ್ದೀರಿ ಎಂದು ನನ್ನನ್ನು ಅವರ ಮನೆಗೆ ಕರೆಯುವುದು, ನಮ್ಮ ಮನೆಗೆ ಅವರಿವರು ಬರುವುದು- ಹೀಗೆ ಒಂದೆರಡು ದಿನಗಳು ಕಳೆದೇ ಹೋದವು.
“ಅವರಿಲ್ಲದೂಟ ಸೇರುತ್ತೇ’ ಅಂತನ್ನುವ ಒಂದು ಉಪಕಥೆ ನೆನಪಿಗೆ ಬರುತ್ತಿದೆ. ಗಂಡ ಮನೆಯಲ್ಲಿ ಇಲ್ಲ ಎಂದು ವಿಶೇಷ ಅಡುಗೆ ಏನೂ ಮಾಡು ವುದಿಲ್ಲ, ಊಟ ಗಂಟಲಲ್ಲಿ ಇಳಿಯುವುದಿಲ್ಲ ಎಂದು ಹೇಳುವ ಪತ್ನಿ ಹೆಸರು ಬೇಳೆ ನೆನೆ ಹಾಕಿದ್ದು ಇತ್ತು ಎಂದು ಒಂದಿಷ್ಟು ಕೋಸಂಬರಿ, ಒಂದಿಷ್ಟು ಆಂಬೊಡೆ, ಒಂದಿಷ್ಟು ಪಾಯಸ ಮಾಡಿ, ‘ಅಯ್ಯೋ ಅವರಿಲ್ಲದೂಟ ಸೇರು ತೇ’ ಅಂತ ಡೈಲಾಗ್ ಬಿಡುವ ಹಾಗೆ ಹೇಗೂ ರಜೆಯಲ್ಲಿ ಇದ್ದೀನಲ್ಲಾ… ಹೇಗೂ ರಜೆಯಲ್ಲಿ ಇದ್ದೀನಲ್ಲಾ… ಎಂದು ಒಂದರ ಹಿಂದೊಂದು ಹೊಸ ಹೊಸ ಕೆಲಸವನ್ನು ಮೈಗೆ ಅಂಟಿಸಿಕೊಂಡು ನಾ ಪರದಾಡಿದ ಪರಿ
ನಗೆಪಾಟಲೇ.
ಗೆಳತಿಯರೋ, ನೆಂಟರಿಷ್ಟರೋ, ಸಹೋದ್ಯೋಗಿಗಳೋ ಫೋನ್ ಮಾಡಿದಾಗ ‘ಅಬ್ಬಾ ನಿಮಗೇನು ಒಂದು ತಿಂಗಳು ಮಜವೋ ಮಜಾ, ಆರಾಮವಾಗಿ ತಿಂದು ನಿದ್ದೆ ಮಾಡಿ ಮಸ್ತಾಗಿ ಕಳೆಯುತ್ತಿದ್ದೀರಿ’ ಎನ್ನುವ ಮಾತು ಬೇರೆ. ಅವರೆಲ್ಲಾ ನಾನು ತಿಂದುಂಡು ಒಂದು ತಿಂಗಳೊಳಗೆ 5 ಕೆಜಿ ಹೆಚ್ಚಾಗಿ ಬ್ಯಾಂಕಿಗೆ ಬರುತ್ತೇನೆ ಎಂದು ಕಲ್ಪಿಸಿಕೊಳ್ಳುತ್ತಿರಬಹುದು.
ನಾನಿಲ್ಲಿ ಮುಗಿಯದ ಕೆಲಸಗಳ ನಡುವೆ ಕಳೆದು ಹೋಗಿ ಒಂದು ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ. ಹೀಗೆಂದರೆ ಯಾರಾದರೂ ಬಾಯಿ ಬಡಿದುಕೊಂಡು ನಕ್ಕಾರು ಅಲ್ವೇ?
ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಮ್ಮು? ಅನ್ನೋ ಹಾಡಿನ ತರ ಈ ತಳಮಳವನ್ನು ಯಾರಿಗೆ ಹೇಳಲಿ? ಇನ್ನುಳಿದಿರುವುದು ಆರೇ ದಿನ ರಜೆ, ಆರು ದಿನದಲ್ಲಿ 60 ಕೆಲಸಗಳ ಗುಡ್ಡೆ ನನ್ನ ಕಣ್ಣು ಮುಂದೆ ಇದೆ. ಆದರೆ ಮಾಡಬೇಕು ಎಂದುಕೊಂಡಿರುವ ಕೆಲಸ ಆಗುತ್ತಿಲ್ಲವಲ್ಲಾ ಎನ್ನುವ ಹೊಟ್ಟೆ ಒಳಗಿನ ಸಂಕಟ ವನ್ನು ಯಾರಲ್ಲಿ ಹೇಳಲಿ?
ಎಲ್ಲಕ್ಕಿಂತ ಬಹು ಮುಖ್ಯವಾಗಿ ಪ್ರತಿ ವರ್ಷ ನ್ಯೂ ಇಯರ್ ರೆಸೊಲ್ಯೂಷನ್ ಎಂದುಕೊಳ್ಳುವ ವಾಕಿಂಗ್ ಎನ್ನುವ ಮಾಯಾಂಗನೆಯನ್ನು ಒಂದು ತಿಂಗಳಾದರೂ ಒಲಿಸಿಕೊಂಡೇ ತೀರಬೇಕು ಎನ್ನುವ ಸಂಕಲ್ಪವೂ ಸಂಕಲ್ಪವಾ ಗಿಯೇ ಉಳಿಯಿತು. ನಿತ್ಯ ಒಂದಿಲ್ಲೊಂದು ಕಾರಣ ಸಿಗುತ್ತಲೇ ಹೋಯಿತು.
shubhashreeprasadmandya@gmail.com





