Mysore
15
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕುಸಿದ ಮಣ್ಣಿಂದ ಎದ್ದು ಬಂದವರ ಬದುಕಿನ ಕಥೆಗಳು

ರಶ್ಮಿ ಕೋಟಿ 

ಕೇರಳದ ವಯನಾಡಿನ ಸಜನಾಳಿಗೆ ಬಹಳ ಕಾಲದಿಂದ ಒಂದು ಕನಸು ಇತ್ತು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ತನ್ನ ಪತಿ ನೌಫಲ್ ಮರಳಿ ಬಂದು ಮೇಪ್ಪಾಡಿಯಲ್ಲಿ ನೆಲೆಸಬೇಕು ಮತ್ತು ತನ್ನ ಹಾಗೂ ಮಕ್ಕಳ ಜೊತೆಗಿದ್ದು ಅಲ್ಲಿಯೇ ಒಂದು ಬೇಕರಿ ಆರಂಭಿಸಬೇಕು ಎಂದು.

ಇಂದು ನೌಫಲ್ ಕಲತ್ತಿಂಗಲ್ ತನ್ನ ಪತ್ನಿ ಸಜನಾಳ ಕನಸನ್ನು ನನಸಾಗಿಸಿದ್ದಾರೆ. ಆದರೆ ನೋವಿನ ಸಂಗತಿ ಎಂದರೆ ಆ ಸಂತೋಷವನ್ನು ಹಂಚಿಕೊಳ್ಳಲು, ಕಣ್ತುಂಬಿಕೊಳ್ಳಲು ಸಜನಾ ಅಥವಾ ಅವರ ಕುಟುಂಬದ ಯಾವ ಸದಸ್ಯರೂ ಇಲ್ಲ. ಹೆಂಡತಿ, ಮಕ್ಕಳು, ಪೋಷಕರು ಹಾಗೂ ಒಡಹುಟ್ಟಿದವರು ಸೇರಿದಂತೆ ಕುಟುಂಬದ ೧೧ ಮಂದಿ ಸದಸ್ಯರನ್ನು ಕಳೆದ ವರ್ಷ ಜುಲೈ ೩೦ರಂದು ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಕಳೆದುಕೊಂಡರು. ಆದರೂ ಕೆಲ ತಿಂಗಳಲ್ಲಿಯೇ ೪೩ ವರ್ಷದ ನೌಫಲ್ ಬದುಕನ್ನು ಪುನರ್‌ನಿರ್ಮಿಸಲು ನಿರ್ಧರಿಸಿದರು.

ತಮ್ಮ ಧೈರ್ಯ, ನಿರಂತರ ಶ್ರಮ ಹಾಗೂ ಸಮುದಾಯದ ಬೆಂಬಲದಿಂದ ಒಂದೊಂದೇ ಇಟ್ಟಿಗೆಯನ್ನು ಜೋಡಿಸುತ್ತಾ ಒಂದು ವರ್ಷದ ನಂತರ ನೆನಪಿನ ಚಿಹ್ನೆಯಾಗಿ ‘ಜುಲೈ ೩೦’ ಎಂಬ ಹೆಸರಿನಲ್ಲಿ ಹೊಸ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ. ‘ಜುಲೈ ೩೦’ ಎಂದರೆ ನೌಫಲ್ ಅವರ ಪಾಲಿಗೆ ದುಃಖದ ದಿನವಷ್ಟೇ ಅಲ್ಲ, ಪುನರ್‌ಜೀವನದ ಸಂಕೇತವೂ ಹೌದು. ತನ್ನಿಂದ ದೂರವಾದ ತನ್ನ ಕುಟುಂಬದವರಿಗೆ ನಮನ ಸಲ್ಲಿಸುವ ಪ್ರಯತ್ನವೂ ಹೌದು.

ಜುಲೈ ೨೯, ೨೦೨೪ರ ರಾತ್ರಿ ಚೂರಲ್‌ಮಲೆಯ ನಿವಾಸಿ ತೆರೇಸಾ ಎಂದಿನಂತೆ ತನ್ನ ಕುಟುಂಬದೊಂದಿಗೆ ಊಟ ಮಾಡಿ ನೆಮ್ಮದಿಯಿಂದ ನಿದ್ದೆಗೆ ಜರಿದ್ದಳು. ಅವರ ಸಂಸಾರದ ಏಕೈಕ ಆದಾಯದ ಮೂಲವಾಗಿದ್ದ ಆಕೆಯ ಗಂಡ ಆಗತಾನೇ ಗಲ್‌ನಿಂದ ಮರಳಿ ಬಂದಿದ್ದ. ತನ್ನ ಗಂಡ, ಎರಡು ಪುಟ್ಟ ಕಂದಮ್ಮಗಳು ಹಾಗೂ ಅತ್ತೆ-ಮಾವ ಇದು ಆಕೆಯ ಪ್ರಪಂಚವಾಗಿತ್ತು.

ಆದರೆ ಮರುದಿನ ಬೆಳಿಗ್ಗೆ ತೆರೇಸಾ ಒಂದು ಪರಿಹಾರ ಶಿಬಿರದಲ್ಲಿದ್ದಳು. ಆಕೆಯ ಮನೆ ಮಣ್ಣಿನಲ್ಲಿ ಹುದುಗಿ ಹೋಗಿತ್ತು, ಗಂಡ ಜೀವಂತ ಸಮಾಧಿಯಾಗಿದ್ದ. ಎರಡು ಪುಟ್ಟ ಕಂದಮ್ಮಗಳು ಹಾಗೂ ವಯಸ್ಸಾದ ಅತ್ತೆ-ಮಾವರೊಂದಿಗೆ ಆಕೆ ಬದುಕುಳಿದ್ದಳು. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತದಿಂದ ಆಕೆಯ ಜೀವನ ಬುಡಮೇಲಾಗಿತ್ತು. ಮಧ್ಯರಾತ್ರಿಯಲ್ಲಿ ಕೇಳಿಬಂದ ಭಯಂಕರ ಶಬ್ದಕ್ಕೆ ಬೆಚ್ಚಿಬಿದ್ದು ಏನಾಗುತ್ತಿದೆಯೆಂದು ನೋಡಲು ಮನೆಯ ಹೊರಗೆ ಹೋದ ತೆರೇಸಾಳ ಗಂಡ ಕುಸಿಯುತ್ತಿದ್ದ ಭೂಮಿಯೊಡನೆ ತಾನೂ ಕೊಚ್ಚಿಹೋಗಿದ್ದ. ಆ ಭಯಾನಕ ರಾತ್ರಿ ತೆರೇಸಾಳ ಬದುಕನ್ನೇ ಬದಲಾಯಿಸಿತ್ತು. ಆದರೂ ತೆರೇಸಾ ಕುಗ್ಗಲಿಲ್ಲ. ತನ್ನೊಂದಿಗೆ ಬದುಕುಳಿದವರಿಗಾಗಿ ತನ್ನ ದುಃಖವನ್ನು ಮೀರಿ ಜೀವಿಸುವ ಧೈರ್ಯ ಮಾಡಿದಳು. ಇಂದು ಆಕೆ ಜಿಲ್ಲಾಡಳಿತದ ಸಹಾಯದಿಂದ ಹೊಲಿಗೆ ಯಂತ್ರವನ್ನು ಪಡೆದುಕೊಂಡು ಬಟ್ಟೆಯನ್ನು ಹೊಲಿಯುತ್ತಾ, ಅದರೊಂದಿಗೆ ಮಳೆಗಾಲ ಆರಂಭವಾಗಿರುವುದರಿಂದ ಛತ್ರಿಗಳನ್ನು ಮಾರುತ್ತಾ ಬದುಕು ಕಟ್ಟಿಕೊಂಡಿದ್ದಾಳೆ.

ಇದು ತೆರೇಸಾ ಒಬ್ಬಳ ಕತೆಯಲ್ಲ, ಆಕೆಯಂತೆಯೇ ನೂರಾರು ಜನ ನಿರಾಶ್ರಿತರಾದರು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡರು, ಮಕ್ಕಳು ಅನಾಥವಾದವು, ವಯಸ್ಸಾದ ತಂದೆ-ತಾಯಿಗಳು ಆಸರೆ ಇಲ್ಲದಂತಾದರು. ಆದರೂ ಬದುಕುಳಿದವರು ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಅಸಾಮಾನ್ಯ ಧೈರ್ಯವನ್ನು ತೋರಿಸುತ್ತಿದ್ದಾರೆ. ಕುಸಿದ ಮಣ್ಣಿನ ತಳಪಾಯದಿಂದ ಮತ್ತೆ ಮೇಲಕ್ಕೆ ಬಂದು ಕಂಬನಿಯ ನಡುವೆಯೂ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ವಯನಾಡಿನ ಮೇಪ್ಪಾಡಿ ಪಂಚಾಯತ್ ವ್ಯಾಪ್ತಿಯ ಅಚ್ಚ ಹಸಿರಿನ, ಶಾಂತವಾದ ಪ್ರಕೃತಿಯಿಂದ ಕೂಡಿದ ಚೂರಲ್ಮಲ, ವೆಲ್ಲಾರಿಮಲ ಹಾಗೂ ಮುಂಡಕ್ಕೈ ಗ್ರಾಮಗಳು ಜುಲೈ ೩೦, ೨೦೨೪ ರ ನಡುರಾತ್ರಿ ನಿದ್ರೆಯಲ್ಲಿ ದ್ದಾಗಲೇ ಮಣ್ಣಿನಲ್ಲಿ ಹುದುಗಿಹೋದವು. ೨೦೦ ಮಿಮೀಗೂ ಅಧಿಕವಾಗಿ ಭೋರ್ಗರೆದ ಮಳೆಯಿಂದಾಗಿ ಕುಸಿದ ಬೆಟ್ಟಗಳು, ಉರುಳಿದ ಬಂಡೆಗಳು, ನೀರಿನ ಪ್ರವಾಹ ಎಲ್ಲವೂ ಸೇರಿ ನೂರಾರು ಮನೆಗಳನ್ನು ಕ್ಷಣಾರ್ಧದಲ್ಲಿ ನಾಶ ಮಾಡಿದವು. ಅನೇಕ ಜೀವಗಳು ನೀರಿನೊಂದಿಗೆ ಕೊಚ್ಚಿಹೋದರೆ ಎಷ್ಟೋ ಜೀವಗಳು ಮಣ್ಣಿನಡಿಯಲ್ಲಿ ಹುದುಗಿ ಹೋದವು. ಸಾವಿರಾರು ಕುಟುಂಬಗಳು ನಿರಾಶ್ರಿತವಾದವು. ಮನೆಗಳು, ತೋಟಗಳು, ಪಾಠಶಾಲೆಗಳೆಲ್ಲಾ ಅಲ್ಲಿ ಇದ್ದವೆಂಬ ಕುರುಹೂ ಇಲ್ಲದಂತೆ ಕಣ್ಮರೆಯಾದವು – ಕೇವಲ ಒಂದು ರಾತ್ರಿಯಲ್ಲಿ.

ಅಧಿಕೃತ ಸರ್ಕಾರಿ ಮಾಹಿತಿಯ ಪ್ರಕಾರ ಈ ದುರಂತದಲ್ಲಿ ೨೯೮ಕ್ಕೂ ಹೆಚ್ಚು ಜನರು ಸಾವಿಗೀಡಾದರೆ, ೩೯೭ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ೧,೫೫೫ ಮನೆಗಳು ಸಂಪೂರ್ಣವಾಗಿ ನಾಶವಾದರೆ, ೨೪೨ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೊಂಡವೆಂದು ವರದಿಯಾಗಿದೆ. ಸುಮಾರು ೩೧೦ ಹೆಕ್ಟೇರ್ ಕೃಷಿ ಭೂಮಿ ಹಾಳಾದ ಕಾರಣ, ಅಲ್ಲಿ ದುಡಿಯುತ್ತಿದ್ದ ನೂರಾರು ಕಾರ್ಮಿಕ ಕುಟುಂಬಗಳಿಗೆ ಇಂದಿಗೂ ಬದುಕು ಕಟ್ಟುವುದು ಸವಾಲಾಗಿದೆ. ಪ್ರಕೃತಿಯ ವಿಕೋಪಕ್ಕೆ ಸಿಕ್ಕಿಬಿದ್ದ ಈ ಗ್ರಾಮಗಳು ಇಂದು ಕೇವಲ ಅವಶೇಷಗಳಾಗಿ ಉಳಿದುಕೊಂಡಿವೆ.

ಇಂದು ಚೂರಲ್ಮಲಾದಲ್ಲಿ ಸ್ಮಶಾನ ಮೌನ ಆವರಿಸಿದೆ. ಈ ಸ್ಥಳದಲ್ಲಿ ಹಸಿರಿನೊಂದಿಗೆ ನಳನಳಿಸುತ್ತಿದ್ದ ಬದುಕುಗಳು ಕಣ್ಮರೆಯಾಗಿವೆ. ಮನೆಗಳ ಅಡಿಪಾಯವೂ ಕಾಣದಷ್ಟು ನಾಶವಾಗಿವೆ. ಸೇನೆಯಿಂದ ಸಂಪರ್ಕ ಕಲ್ಪಿಸಲು ನಿರ್ಮಿಸಲಾದ ಬೇಲಿ ಸೇತುವೆ ಕೂಡಾ ಈಗ ಅಸ್ಥಿರವಾಗಿದೆ. ಇನ್ನುಮುಂದೆ ಈ ಜಗ ವಾಸಿಸಲು ಯೋಗ್ಯವಲ್ಲವೆಂದು ಘೋಷಣೆ ಮಾಡಿದೆ. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ನಿಡುಂಬಾಲ ಎಸ್ಟೇಟ್ ಹಾಗೂ ಎಲ್‌ಸ್ಟೋನ್‌ಗಳಲ್ಲಿ ಭೂಮಿಯನ್ನು ಗುರುತಿಸಿದ್ದು, ಅಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಕೇರಳ ಸರ್ಕಾರ ಮುಂದಾಗಿದೆ. ಈಗ ಭೂ ಕುಸಿತ ಸಂಭವಿಸಿದ ಜಾಗಗಳು ‘ಡಿಸಾಸ್ಟರ್ ಟೂರಿಸಂ’ ತಾಣಗಳಾಗಿ ಮಾರ್ಪಟ್ಟಿದೆ. ಜನರು ಬಂದು ಮಣ್ಣಿನಡಿಯಲ್ಲಿ ಹೂತು ಹೋಗಿರುವ ಕಟ್ಟಡಗಳನ್ನು, ದೊಡ್ಡ ದೊಡ್ಡ ಬಂಡೆಗಳನ್ನು ನೋಡಿ ಪ್ರಕೃತಿಯ ಕ್ರೌರ್ಯಕ್ಕೆ ಗುರಿಯಾದವರನ್ನು ನೆನೆದು ಮರುಗುತ್ತಿದ್ದಾರೆ.

ಹ್ಯಾರಿಸನ್ ಟೀ ಎಸ್ಟೇಟ್‌ನ ಸಮಾಧಿ ಸ್ಥಳದಲ್ಲಿ ಅನೇಕ ಸಮಾಧಿಗಳಿಗೆ ‘ಎನ್ ೧೮’ ‘ಎನ್ ೨೨೪’ ಅಂಕಿಗಳನ್ನು ಹಾಕಲಾಗಿದೆ. ಇವುಗಳು ಇನ್ನೂ ಅನಾಮಧೇಯ ಶವಗಳಾಗಿ ಉಳಿದಿರುವವರ ಸಮಾಧಿಗಳು.

ಭೂಕುಸಿತಕ್ಕೆ ಸಿಲುಕಿದ ಎಷ್ಟೋ ಜನರ ದೇಹ ನೀರಿನ ಪ್ರವಾಹದಲ್ಲಿ ೫೦ ಕಿ.ಮೀ.ಗಳಷ್ಟು ದೂರ ಕೊಚ್ಚಿ ಹೋಗಿ ಚಲಿಯಾರ್ ನದಿಯಲ್ಲಿ ಪತ್ತೆಯಾದವು. ಗುರುತಿಸಲು ಸಾಧ್ಯವಾಗದ ಶವಗಳ ಡಿಎನ್‌ಎ ಪರೀಕ್ಷೆ ಮಾಡಿ ಅವರ ಗುರುತು ಸಿಕ್ಕ ನಂತರ ಸಮಾಧಿಗೆ ಹೆಸರಿನ ಪಟ್ಟಿ ಅಳವಡಿಸಲಾಯಿತು. ಇಂದು ಈ ಸಮಾಧಿ ಸ್ಥಳವು ಚೂರಲ್ಮಲಾ ಹಾಗೂ ಮುಂಡಕ್ಕೈಯ ಜನರ ಜೀವಿತ ಕಾಲದ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಸಾವಿಗೀಡಾದ ವಿವಿಧ ಧರ್ಮಗಳ ಜನರು ಪಕ್ಕಪಕ್ಕದ ಸಮಾಧಿಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಸಮಾಧಿಗಳಿಗೆ ಬದುಕುಳಿದಿರುವ ಅವರ ಪ್ರೀತಿಪಾತ್ರರು ಭೇಟಿ ನೀಡಿ ಬದುಕಿದ್ದಾಗ ಅವರು ಇಷ್ಟಪಡುತ್ತಿದ್ದ ವಸ್ತುಗಳನ್ನು ಅಲ್ಲಿ ಇಟ್ಟು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಹಾಗೆ ಮೂರು ಪುಟ್ಟ ಮಕ್ಕಳ ಸಮಾಽಯ ಮೇಲಿದ್ದ ಚಾಕೊಲೇಟ್, ಹುಟ್ಟು ಹಬ್ಬದ ಟೋಪಿ, ಆಟಿಕೆಗಳು ನೋಡುಗರ ಮನಕಲುಕದಿರಲು ಸಾಧ್ಯವೇ ಇಲ್ಲ.

ಬದುಕುಳಿದವರಲ್ಲಿ ಬಹುಪಾಲು ಜನರು ಇಂದು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. “ಎಲ್ಲವನ್ನೂ ಕಳೆದುಕೊಂಡೆವು” ಇದು ಅವರ ಮನಮಿಡಿಯುವ ಮಾತು. ಅವರೆಲ್ಲರ ಸ್ಮೃತಿಪಟಲದಲ್ಲಿ ಬೆಟ್ಟಗಳು ಕುಸಿಯುತ್ತಿರುವ ಭೀಕರ ಶಬ್ದ … ಭಯದ ಚೀರಾಟ… ನೋವಿನ ಆಕ್ರಂದನ… ನಂತರದ ನಿಶ್ಶಬ್ದತೆ… ಅವಶೇಷಗಳಡಿ ಆತ್ಮೀಯರನ್ನು ಹುಡುಕಿದ ಭಯಾನಕ ದಿನಗಳು… ಎಲ್ಲವೂ ಇನ್ನೂ ಹಸಿರಾಗಿವೆ. ಮನಕಲಕುವ ಕಥೆಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. ಕುಟುಂಬದವರನ್ನು ಕಳೆದುಕೊಂಡ ನೋವು, ನೆಲೆಯನ್ನು ಕಳೆದುಕೊಂಡ ಆಘಾತ, ನಿರ್ಗತಿಕತೆ, ದುಃಖ, ಭೀತಿ ಮತ್ತು ಕರುಣೆಯ ಕಥೆಗಳು. ದುರಂತದ ರಾತ್ರಿಯ ನಂತರ, ಎಲ್ಲವೂ ಶೂನ್ಯವಾಗಿದೆ. ಆದರೆ ಬದುಕನ್ನು ಸಾಗಿಸುವ ಹೋರಾಟ ಮುಂದುವರಿದಿದೆ

” ಕಳೆದ ವರ್ಷ ಜುಲೈ ೩೦ ರಂದು ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ತಮ್ಮ ಪತ್ನಿ, ಮಕ್ಕಳೊಂದಿಗೆ ಕುಟುಂಬದ ೧೧ ಮಂದಿ ಸದಸ್ಯರನ್ನು ಕಳೆದುಕೊಂಡ ನೌಫಲ್ ಕಲತ್ತಿಂಗಲ್ ತಮ್ಮ ಪತ್ನಿಯ ಕನಸನ್ನು ನನಸಾಗಿಸಲು ‘ಜುಲೈ ೩೦’ ಎಂಬ ಹೆಸರಿನಲ್ಲಿ ಸ್ಥಾಪಿಸಿರುವ ಹೊಸ ರೆಸ್ಟೋರೆಂಟ್. ‘ಜುಲೈ ೩೦’ ಎಂದರೆ ನೌಫಲ್ ಅವರ ಪಾಲಿಗೆ ದುಃಖದ ದಿನವಷ್ಟೇ ಅಲ್ಲ, ಪುನರಜ್ಜೀವನದ ಸಂಕೇತವೂ ಹೌದು.”

” ಇದು ಕಂಬನಿಯ ನಡುವೆಯೇ ತಂದುಕೊಂಡ ಧೈರ್ಯದ ಕಥೆ. ಕಳೆದ ವರುಷ ಜುಲೈ ೩೦ರಂದು ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭೀಕರವಾದುದು. ಅದರಲ್ಲಿ ನೂರಾರು ಜನರು ಕುಸಿದ ಗುಡ್ಡಗಳೊಂದಿಗೆ ಜೀವಂತ ಸಮಾಧಿಯಾದರೆ, ಮತ್ತಷ್ಟು ಮಂದಿ ಹರಿದ ಪ್ರವಾಹದಲ್ಲಿ ಕೊಚ್ಚಿ ಹೋದರು. ಅಂದು ಅರ್ಧರಾತ್ರಿಯಲ್ಲಿ ಬಂದೆರಗಿದ ವಿಪತ್ತಿನಿಂದ ಪಾರಾದವರ ಕಣ್ಣುಗಳಲ್ಲಿ ದುಃಖ ಶಾಶ್ವತವಾಗಿ ಉಳಿದಿದೆ. ಅವರೆಲ್ಲರ ಬದುಕು ಒಂದೊಂದು ಕತೆಯನ್ನು ಸಾರುತ್ತಿದೆ. ನೋವಿನ ಕಥೆ, ಅಸಹಾಯಕತೆಯ ಕಥೆ, ಅದೆಲ್ಲಕ್ಕಿಂತ ಹೆಚ್ಚಾಗಿ ಧೈರ್ಯದಿಂದ ಬದುಕಲು ಸಿದ್ಧರಾದವರ ಕಥೆ. ಒಂದು ವರ್ಷ ಕಳೆದರೂ ಭೂ ಕುಸಿತದ ಶಬ್ದ ಇನ್ನೂ ರಿಂಗಣಿಸುತ್ತಿದೆ. ಆದರೆ ಜೊತೆಗೆ ಪಾರಾದವರ ಧೈರ್ಯ ಮತ್ತು ಆಶಾವಾದವೂ…”

Tags:
error: Content is protected !!