• ಸಿರಿ ಮೈಸೂರು
ಅದೊಂದು ಮಾಮೂಲಿ ಮಧ್ಯಾಹ್ನ. ಆ ದಿನ ನಾನು ಮೇಲುಕೋಟೆಯಲ್ಲಿದ್ದೆ. ಚೆಂದದ ದೇವಸ್ಥಾನ ಹಾಗೂ ರಾಯಗೋಪುರ, ಆದರದಿಂದ ಮಾತನಾಡುವ ಜನರು, ಎಲ್ಲಕ್ಕೂ ಮಿಗಿಲಾಗಿ ಮಂಡ್ಯ ನನ್ನ ತಂದೆಯ ಊರು. ಈ ಕಾರಣಗಳಿಗಾಗಿ ಮೇಲುಕೋಟೆಗೆ ಆಗಿಂದಾಗ್ಗೆ ಹೋಗಿ ಬರುವ ಅಭ್ಯಾಸ. ಮೈಸೂರಿನಿಂದ ಹೊರಟರೆ ಕೆಲವೇ ಸಮಯಕ್ಕೆ ಮೇಲುಕೋಟೆ ತಲುಪುತ್ತೇವೆ. ಆ ದಿನ ಬೆಳಿಗ್ಗೆಯೇ ದೇವಸ್ಥಾನ ತಲುಪಿ ದರ್ಶನ ಮುಗಿಸಿ ಪುಳಿಯೋಗರೆ ಸವಿದು ಊರಿನಲ್ಲಿ ಅಡ್ಡಾಡುವ ಕಾರ್ಯ ಮಾಡುತ್ತಿದ್ದೆ. ಆಗ ಕಣ್ಣಿಗೆ ಬಿದ್ದಿದ್ದು ಈ ಅಂದದ ಹಳೆಯ ಮನೆ.
ಕಮಾನಿನ ಆಕಾರದ ಬೃಹತ್ ಮರದ ಬಾಗಿಲುಳ್ಳ ಮನೆ. ಇಟ್ಟಿಗೆ ಬಣ್ಣದ ಗೋಡೆಗಳ ಮೇಲೆ ಬಿಳಿ ಗೆರೆಗಳ ಸರಳ ಚಿತ್ತಾರ. ಪಕ್ಕದಲ್ಲೇ ಇದ್ದ ಕಿಟಕಿಗೆ ಮೆರುಗು ನೀಡುತ್ತಿದ್ದ ಸೀಳಿನಾಕಾರದ ಸರಳುಗಳು, ಆಹಾ! ಆ ಮನೆ ನೋಡಿದರೆ ಒಮ್ಮೆಲೇ ಐವತ್ತು ವರ್ಷಗಳಷ್ಟು ಹಿಂದೆ ಹೋದ ಭಾವನೆ ಬರುತ್ತಿತ್ತು. ಆದರೆ ಇಷ್ಟು ಚೆಂದದ ಮನೆಯ ಪರಿಸ್ಥಿತಿ ಮಾತ್ರ ಬಹಳ ಬೇಸರ ತರಿಸುವಂತಿತ್ತು. ದೂಳು, ಸ್ವಚ್ಛತೆ ಕಾಣದ ಅಂಗಳ, ಬಣ್ಣ ಮಾಸಿದ ಗೋಡೆಗಳು… ಹೀಗೆ ಎಲ್ಲವೂ ವ್ಯಾಕುಲ. ಈ ಮಧ್ಯೆ ನನ್ನ ಗಮನ ಸೆಳೆದದ್ದು ಮನೆಯ ಮೇಲಿದ್ದ ಹೆಸರು. ಕಪ್ಪು ಕಲ್ಲಿನ ಮೇಲೆ ಬಿಳಿ ಬಣ್ಣದಲ್ಲಿ ‘ಅರ್ಪಣ’ ಎಂಬ ಸುಂದರವಾದ ಹೆಸರು ಕಾಣಿಸಿತು. ಅದರ ಕೆಳಗೆ ಅಷ್ಟೇ ಸರಳವಾಗಿ ‘ಖಾದ್ರಿ ಶಾಮಣ್ಣ’ ಎಂದು ಬರೆದಿತ್ತು. ‘ಅರೇ! ಅದೆಲ್ಲೋ ಹೆಸರು ಕೇಳಿದಂತಿದೆಯಲ್ಲ! ಖಾದ್ರಿ ಶಾಮಣ್ಣ ಎಂದರೆ ಯಾರು?’ ಎಂದು ಯೋಚಿಸುತ್ತಿದ್ದಂತೆ ಅಂತರ್ಜಾಲ ಜಾಲಾಡಿದರೆ ಅದು ಕನ್ನಡದ ಖ್ಯಾತ ಸಂಪಾದಕ, ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ಅವರು ಹುಟ್ಟಿದ ಮನೆ.
ಖಾದ್ರಿ ಶಾಮಣ್ಣ ಅವರದ್ದು ಅವಿಸ್ಮರಣೀಯ ವ್ಯಕ್ತಿತ್ವ. ಮೇಲುಕೋಟೆಯಲ್ಲೇ ಹುಟ್ಟಿ, ಬೆಳೆದು ಪ್ರಾಥಮಿಕ ಶಿಕ್ಷಣವನ್ನು ಪಡೆದ ಅವರು, ನಂತರ ಬಂದದ್ದು ಮೈಸೂರಿಗೆ ಕನ್ನಡ ಹಾಗೂ ಸಂಸ್ಕೃತ ಭಾಷೆಗಳ ಮೇಲೆ ಅಪರಿಮಿತ ಹಿಡಿತ ಹೊಂದಿದ್ದ ಅವರು ಓದಿನ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಬಹಳ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮೊದಲಿನಿಂದಲೂ ಬಹಳಷ್ಟು ಆಂಗ್ಲ ಹಾಗೂ ಕನ್ನಡ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಿದ್ದ ಶಾಮಣ್ಣರು 1944ರ ಸಂದರ್ಭದಲ್ಲಿಯೇ ಪತ್ರಿಕೆಗಳಿಗೆ ಸ್ವಾತಂತ್ರ್ಯ ಚಳವಳಿಯ ಸಂಬಂಧ ಅಂಕಣಗಳನ್ನು ಬರೆಯುತ್ತಿದ್ದರು. ನಂತರ ಕೆಲಕಾಲ ಗಾಂಧಿ ಸೇವಾ ಗ್ರಾಮದಲ್ಲಿಯೂ ಸೇವೆ ಸಲ್ಲಿಸಿದರು. ಆಗಿನ ಸಮಯದಲ್ಲಿ ಕನ್ನಡನಾಡು ಕಂಡ ಅಪ್ರತಿಮ ಹಾಗೂ ಅತ್ಯಂತ ನಿರ್ಭೀತ ಪತ್ರಕರ್ತ ಎನಿಸಿಕೊಂಡಿದ್ದ ಖಾದ್ರಿ ಶಾಮಣ್ಣರು, ಬಹಳ ಕಾಲ ಜನವಾಣಿ ಹಾಗೂ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜಾಗೃತಿ, ಪ್ರಜಾವಾಣಿಗಳಲ್ಲಿ ಪತ್ರಕರ್ತರಾಗಿ ಆನಂತರ ಕನ್ನಡಪ್ರಭ ಪತ್ರಿಕೆಯ ಸಂಪಾದಕರಾಗಿ ಬಹಳ ಕಾಲ ಕೆಲಸ ಮಾಡಿದರು. ತಮ್ಮ ಬರಹಗಳ ಮೂಲಕ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಶಾಮಣ್ಣ ಅವರ ರಕ್ತದ ಪ್ರತಿ ಕಣದಲ್ಲಿಯೂ ಹೋರಾಟದ ಮನೋಭಾವನೆ ಹರಿಯುತ್ತಿತ್ತು. ಆಗಿನ ಕಾಲದಲ್ಲಿ ಜನರು ಖಾದ್ರಿ ಶಾಮಣ್ಣರ ಬಳಿ ಮಾತನಾಡಲು ಕೂಡ ಹೆದರುತ್ತಿದ್ದರು. ಅವರನ್ನು ಅಪರಿಮಿತವಾಗಿ ಗೌರವಿಸುತ್ತಿದ್ದರು ಕೂಡ.
ಒಂದು ಕಾಲದಲ್ಲಿ ಜನರ ಮನೆಮಾತಾಗಿ, ಎಲ್ಲರಿಂದ ಗೌರವಿಸಲ್ಪಡುತ್ತಿದ್ದ ಶಾಮಣ್ಣ ಅವರನ್ನು ಸಾಕಿ ಸಲುಹಿದ ಈ ಸೂರು ಈಗ ಅದೆಷ್ಟು ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ನೋಡಿ ಮನಸ್ಸು ಮುದುಡಿತು. ಕಾಲ ಅದೆಂತಹ ಮಹಾಮಾಯಿ! ಇಷ್ಟು ಯೋಚಿಸುವ ವೇಳೆಗಾಗಲೇ ಮಧ್ಯಾಹ್ನ ಬಿಸಿಲು ಸುಡಲು ಶುರುವಿಟ್ಟಿತು. ಮನೆ ಸೇರಲು ಕಾಲು ಬೇಗಬೇಗ ಮುಂದೆ ಹೆಜ್ಜೆ ಹಾಕಿತು. ದೇಹ ಮನೆ ತಲುಪಿದರೂ, ಮನಸ್ಸು ಮಾತ್ರ ಖಾದ್ರಿ ಶಾಮಣ್ಣರ ಶಿಥಿಲಾವಸ್ಥೆಯಲ್ಲಿದ್ದ ಸೂರಿನ ಸುತ್ತ ಸುತ್ತುತ್ತಿತ್ತು.