ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಉಭಯ ಸದನಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು, ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ ಸದನದಲ್ಲಿ ಗದ್ದಲ-ಕೋಲಾಹಲ ಹೆಚ್ಚಾಗುತ್ತಿದ್ದಂತೆ ವಿಧಾನ ಪರಿಷತ್ ಕಲಾಪ ಮುಂದೂಡಿಕೆಯಾಗಿದೆ.. ಸಿ.ಟಿ. ರವಿ ಅಶ್ಲೀಲ ಪದ ಬಳಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ನನ್ನ ವಿರುದ್ಧ ಸಿ.ಟಿ.ರವಿ ಅವರು, 10ಕ್ಕೂ ಹೆಚ್ಚು ಬಾರಿ ಪ್ರಾಸ್ಟಿಟ್ಯೂಡ್ ಎಂಬ ಪದ ಬಳಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. ನಂತರ ಕಾಂಗ್ರೆಸ್ ಸದಸ್ಯರ ಜೊತೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ಮಾಡಿ ದೂರು ನೀಡಿದರು.
ದೂರು ಸ್ವೀಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಡಿಯೋ ಹಾಗೂ ವಿಡಿಯೋ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಓರ್ವ ಹೆಣ್ಣಿನ ಬಗ್ಗೆ ಸದನದಲ್ಲಿ ಈ ರೀತಿಯ ಪದ ಬಳಕೆ ಮಾಡಿರುವುದು ಅವರ ಸಂಸ್ಕೃತಿ ಏನು ಎಂಬುದು ತೋರಿಸುತ್ತದೆ. ಸಿ.ಟಿ.ರವಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್‌ನ ಹಲವಾರು ಸದಸ್ಯರು ಸಭಾಪತಿಗೆ ಆಗ್ರಹಿಸಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಎಂಎಲ್‌ಸಿ ಸಿ.ಟಿ.ರವಿ ಅವರು, ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಬಗ್ಗೆ ನಾನು ಅಶ್ಲೀಲ ಪದ ಬಳಕೆ ಮಾಡಿಲ್ಲ. ನಾನು ಆ ಪದ ಬಳಸಿದ್ದರೆ ತೆಗೆಯಿರಿ. ಇಲ್ಲಸಲ್ಲದ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದರು.