ಅಲ್ಲಿ ನಡೆಯುತ್ತಿದ್ದ ಮುಖ್ಯ ಚರ್ಚೆಯೇ ಸಾಹಿತ್ಯ ಮತ್ತು ರಾಜಕೀಯ
ಮೈಸೂರಿನ ಸಯ್ಯಾಜಿರಾವ್ ರಸ್ತೆ ಪಕ್ಕದಲ್ಲಿರುವ ಪ್ರಭಾ ಥಿಯೇಟರ್‌ನ ಬಲಗಡೆಗೆ ಈಗ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಇದೆ. ಅದರ ಕೆಳಗಡೆಗೆ ಐದಾರು ದಶಕಗಳ ಹಿಂದೆ ಒಂದು ಇಂಡಿಯನ್ ಕಾಫಿ ಹೌಸ್ ಇತ್ತು. ೧೯೬೨ರ ಹೊತ್ತಿಗೆ ಕಾಫಿಹೌಸ್‌ನಲ್ಲಿ ಭರಪೂರ ಚರ್ಚೆಗಳು ನಡೆಯುತ್ತಿದ್ದವು. ಒಮ್ಮೆ ಬಿ.ಎನ್.ಶ್ರೀರಾಮ್ ಅವರು ಆ ಕಾಲಘಟ್ಟದ ಸಾಹಿತ್ಯ ವಿಮರ್ಶೆ, ರಾಜಕೀಯ ವಿಶ್ಲೇಷಣೆಗಳಿಗೆ ಕಾಫಿ ಹೌಸ್ ಹೇಗೆ ವೇದಿಕೆಯಾಗಿತ್ತೆಂಬುದನ್ನು ಹಂಚಿಕೊಂಡಿದ್ದರು. ಬಹುಶಃ ಈ ತಲೆಮಾರಿನವರು ಕೆಫೆ ಕಾಫಿಡೇಯಲ್ಲಿ ಮಾಡುವ ಚರ್ಚೆಗಳಲ್ಲಿ ಸಾಹಿತ್ಯ ಸಂಗತಿಗಳಿಲ್ಲದಿದ್ದರೆ ವಿಶೇಷವೇನಲ್ಲ.
ಇರಲಿ, ಕೊಡಗಿನ ಮಂದಣ್ಣ ಎಂಬವರು ಆ ಕಾಫಿ ಹೌಸನ್ನು ನಡೆಸುತ್ತಿದ್ದರು. ಅವರದು ಚುರುಕು ವ್ಯಕ್ತಿತ್ವ. ಕೊಡಗಿನಿಂದ ಮೈಸೂರಿಗೆ ಬಂದು ಬದುಕು ಕಟ್ಟಿಕೊಳ್ಳಬೇಕೆಂದಿದ್ದ ವ್ಯವಹಾರಸ್ಥನೂ ಆಗಿದ್ದರು. ಕಾಫಿ ಹೌಸಿನಲ್ಲಿ ಆಗ ಜ್ಯೂಕ್ ಬಾಕ್ಸ್ ಇರುತ್ತಿತ್ತು. ಬಂದ ಗ್ರಾಹಕರು ಅವರಿಗೆ ಬೇಕಾದ ಸಂಗೀತವನ್ನು ಆಯ್ಕೆ ಮಾಡಿ, ಇಪ್ಪತ್ತೈದು ಪೈಸೆ ನೀಡಿದರೆ ಇಡೀ ಕಾಫಿಹೌಸಿನಲ್ಲಿ ಸಂಗೀತ ಆವರಿಸಿಬಿಡುತ್ತಿತ್ತು. ಒಂದು ಕಾಫಿ ಬೆಲೆ ಐವತ್ತರಿಂದ ಎಪ್ಪತ್ತೈದು ಪೈಸೆಯಷ್ಟಿರುತ್ತಿತ್ತು. ಈಗಿನ ಕಾಫಿ ಕೆಫೆಯಲ್ಲಿ ತರಾವರಿ ಜ್ಯೂಸ್, ಮಿಲ್ಕ್‌ಶೇಕ್, ಸ್ನಾಕ್ಸ್ ಸಿಗುವಂತೆ ಆಗಿನ ಕಾಫಿಹೌಸಿನಲ್ಲಿ ಲಭ್ಯವಿರುತ್ತಿದ್ದ ತಿಂಡಿಗಳು ಕೆಲವೇ ಕೆಲವು. ಕಾಫಿ, ಬ್ರೆಡ್ ಟೋಸ್ಟ್, ಆಮ್ಲೇಟ್‌ಗಳಷ್ಟೇ ಸಿಗುತ್ತಿತ್ತೇ ಹೊರತು, ತಿಂಡಿಪಟ್ಟಿಯಲ್ಲಿ ದೋಸೆಯ ಹೆಸರಿರುತ್ತಿದ್ದುದು ಅಪರೂಪದ ದಿನಗಳಲ್ಲಿ ಮಾತ್ರ.
ಇಂಡಿಯನ್ ಕಾಫಿ ಹೌಸಿಗೆ ಸಾಹಿತ್ಯ ದಿಗ್ಗಜರ ಪಡೆಯೇ ಆಗಮಿಸುತ್ತಿತ್ತು. ಮೊಗೇರಿ ಗೋಪಾಲಕೃಷ್ಣ ಅಡಿಗ, ಯು.ಆರ್.ಅನಂತಮೂರ್ತಿ, ಪೋಲಂಕಿ ರಾಮಮೂರ್ತಿ, ಪಂಡಿತ್ ರಾಜೀವ ತಾರಾನಾಥ್, ವಿಶ್ವನಾಥ ಮಿರ್ಲೆ, ಬಾಲಗೋಪಾಲ ವರ್ಮಾ, ಹೆಚ್.ಎಂ.ಚನ್ನಯ್ಯ, ಜಿ.ಎಚ್.ನಾಯಕ, ಪೂರ್ಣಚಂದ್ರ ತೇಜಸ್ವಿ, ಬಿ.ಎನ್.ಶ್ರೀರಾಮ್ ಅವರಂತಹ ಅನೇಕರು ಒಂದು ಗುಂಪಾಗಿ ಕೂಡಿರುತ್ತಿದ್ದರು. ಮುಟ್ಟಿದರೆ ಸಾಕು ಸ್ಟಾರ್ಟ್ ಆಗಿಬಿಡುವ ಮೋರಿಸ್ ಮೈನರ್ ಕಾರಿನಲ್ಲಿ ಕಾಫಿ ಹೌಸಿಗೆ ಬರುತ್ತಿದ್ದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಿ.ವಿ.ಅರಸ್, ವಿ.ಕೆ.ನಟರಾಜ್, ರಫೀಕ್ ಅಹಮದ್, ಬಿ.ಕೆ.ಚಂದ್ರಶೇಖರ್, ಈಗ ಕೆನಡಾದಲ್ಲಿರುವ ಜಿ.ಎನ್.ರಾಮು ಇವರೆಲ್ಲರೂ ಇನ್ನೊಂದು ಗುಂಪಾಗಿ ಸೇರಿಕೊಳ್ಳುತ್ತಿದ್ದರು. ಅಲ್ಲಿ ನಡೆಯುತ್ತಿದ್ದ ಮುಖ್ಯ ಚರ್ಚೆಯೇ ಸಾಹಿತ್ಯ ಮತ್ತು ರಾಜಕೀಯ. ಆಗಿನ ಕಾಲಕ್ಕೆ ಸಮಾಜದ ಮುಖವಾಣಿಯಂತಿದ್ದ ಪತ್ರಿಕೆಗಳಲ್ಲಿ ಭಾನುವಾರ ವಿಶೇಷವಾಗಿ ಒಂದು ಸಣ್ಣಕಥೆ ಇಲ್ಲಾ, ಕವಿತೆ ಪ್ರಕಟವಾಗುತ್ತಿತ್ತು. ಸಣ್ಣಕತೆಗಳ ಉತ್ಕರ್ಷದ ಕಾಲವಾಗಿತ್ತದು. ಭಾನುವಾರದ ಪತ್ರಿಕೆಗಳಿಗೆ ಬೇಡಿಕೆ ತುಸು ಹೆಚ್ಚು. ಎಲ್ಲಿ ಪತ್ರಿಕೆ ಗಳೆಲ್ಲ ಖರ್ಚಾಗಿಬಿಡುತ್ತವೋ ಎಂದು ಸಾಹಿತ್ಯಪ್ರಿಯರೆಲ್ಲ ಸಯ್ಯಾಜಿರಾವ್ ರಸ್ತೆಗೆ ದೌಡಾಯಿಸುತ್ತಿದ್ದರು.
ಕಾಫಿ ಹೌಸಿನಲ್ಲಿ ಆ ದಿನ ಪ್ರಕಟಗೊಂಡ ಕಥೆ, ಕವಿತೆಯ ವಿಮರ್ಶೆ ನೇರ ಮತ್ತು ನಿಷ್ಠುರವಾಗಿರುತ್ತಿತ್ತು. ಈಗಿನವರಂತೆ ಕರ್ತೃನಿಷ್ಠ ವಿಮರ್ಶೆಯಲ್ಲ ಬಿಡಿ. ಅಲ್ಲಿ ಸೇರಿರುತ್ತಿದ್ದವರ ಅಭಿಪ್ರಾಯಗಳಲ್ಲಿ ಹೊಗಳುವಿಕೆ, ಟೀಕೆ ಸಾಮಾನ್ಯ ವಾಗಿರುತ್ತಿತ್ತು. ಅಂದಹಾಗೆ, ಇಂಡಿಯನ್ ಕಾಫಿ ಹೌಸಿನಲ್ಲಿ ವಿಮರ್ಶೆ, ಚರ್ಚೆ ನಡೆಯುವಾಗೆಲ್ಲ ಸಿಗರೇಟಿಗೆ ಪಾತ್ರ ಪ್ರವೇಶಿಕೆ ಕೊಡದಿದ್ದರೆ ಹೇಗೆ? ‘ಪನಾಮ’ ಹೆಸರಿನ ಸಿಗರೇಟು ಬಹುಪ್ರಸಿದ್ಧಿ ಪಡೆದಿತ್ತು.
ಇಪ್ಪತ್ತು ಸಿಗರೇಟುಗಳಿದ್ದ ಪ್ಯಾಕ್ ಅದು. ಅನಂತಮೂರ್ತಿ ಮತ್ತು ಡಿ.ವಿ.ಅರಸ್ ಕೈಯಲ್ಲಿ ಅದೇ ಪ್ಯಾಕಿನ ಸಿಗರೇಟುಗಳುರಾರಾಜಿಸುತ್ತಿದ್ದವು. ಮಾತ್ರವಲ್ಲ, ಬಹುತೇಕ ಸಾಹಿತಿಗಳು, ವಿಮರ್ಶಕರುಸಿಗರೇಟು ಸೇದುತ್ತಲೇ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹೀಗೆ ಸಾಹಿತ್ಯಯಾನದಲ್ಲಿ ಧೂಮವೂ ಪಾನವಾಗುತ್ತಿತ್ತು. ಅದೊಂದು ಸಂದರ್ಭ, ಅದೇ ಕಾಫಿ ಹೌಸಿನಲ್ಲಿ ಕುಳಿತಿದ್ದ ಅನಂತಮೂರ್ತಿ ಯವರು ತಾವು ಬರೆದ ಕಥೆ ಓದುತ್ತಿದ್ದರು.
ಕೇಳಿಸಿಕೊಂಡ ಪೋಲಂಕಿ ರಾಮಮೂರ್ತಿ ಅವರು ‘ಹೇ, ಇದನ್ನು ಪತ್ರಿಕೆಗೆ ಕಳಿಸಬಹುದು’ ಎಂದು ಸಲಹೆಯಿತ್ತರು. ಆದರೆ ಅನಂತಮೂರ್ತಿ ಅವರು, ‘ನೀವೆಲ್ಲ ಕಥೆ ಕೇಳಿದ್ರಲ್ಲಾ ಅದೇ ಸಾಕು’ ಎಂದಿದ್ದರಂತೆ. ಇದೇ ಹೊತ್ತಿಗೆ ದೆಹಲಿಯ ಕಾನಾಟ್ಎಂ ಬಲ್ಲಿಯೂ ಒಂದು ಕಾಫಿ ಹೌಸ್ ಇತ್ತು. ಅಲ್ಲಿಗೆ ರಾಮಮನೋಹರ ಲೋಹಿಯಾ, ಸಿ.ಪಿ.ಎಂ., ಸಮಾಜವಾದಿ ಸದಸ್ಯರು, ದೆಹಲಿಯ ಇಂಟಲಿಜೆನ್ಸ್ ತಂಡದ ಅನೇಕರು ಬರುತ್ತಿದ್ದರು. ಆ ಕಾಫಿ ಹೌಸಿನಲ್ಲಿ ನಡೆಯುತ್ತಿದ್ದುದೂ ರಾಜಕೀಯ ಚರ್ಚೆಗಳೇ. ೧೯೬೯ರ ಹೊತ್ತಿಗೆ ಗುತ್ತಿಗೆಯ ಅವಧಿ ಮುಗಿದ ಕಾರಣಕ್ಕಾಗಿಯೋ ಏನೊ ಮಂದಣ್ಣನವರ ಇಂಡಿಯನ್ ಕಾಫಿ ಹೌಸ್ ಮುಚ್ಚಿಹೋಯಿತು. ಛಲಬಿಡದೆ ಸೂಕ್ತಸ್ಥಳ ಹುಡುಕುತ್ತಿದ್ದ ಮಂದಣ್ಣ, ಮಾನಸಗಂಗೋತ್ರಿಯ ಬಳಿ ಅನಿವಾಸಿ ವಿದ್ಯಾರ್ಥಿಗಳ ವಸತಿಯಿದ್ದ ಕಟ್ಟಡದಲ್ಲಿ ವರ್ಷ ಕಳೆಯುವ ಮುನ್ನ ಹೊಸ ಕಾಫಿ ಹೌಸನ್ನು ತೆರೆದೇಬಿಟ್ಟರು! ತೇಜಸ್ವಿ ಅವರಿನ್ನೂ ಮೂಡಿಗೆರೆಗೆ ಹೋಗಿರಲಿಲ್ಲ. ಮೊದಲ ಮಗಳು ಸುಶ್ಮಿತಾ ಆಗತಾನೇ ಹುಟ್ಟಿದ್ದಳು. ಬಿ.ಎನ್.ಶ್ರೀರಾಮ್ ಮತ್ತು ಪದ್ಮಾ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡ ತೇಜಸ್ವಿ ಅವರು ಬಂದದ್ದು, ಇದೇ ಕಾಫಿ ಹೌಸಿಗೆ.
ಆಧುನಿಕತೆಗೆ ಕಾಫಿ ಹೌಸ್ ತೆರೆದುಕೊಳ್ಳುತ್ತಿದ್ದ ಕಾಲವದು. ಹಾಗಾಗಿ ತಿಂಡಿಪಟ್ಟಿಯಲ್ಲಿ ಬಿರಿಯಾನಿ, ಕಬಾಬ್, ಊಟ ಕೂಡ ಸೇರಿತ್ತು. ಮಂದಣ್ಣ ಅನೇಕ ಆರ್ಡರ್‌ಗಳನ್ನು ತೆಗೆದುಕೊಂಡು, ಕಳುಹಿಸಿಕೊಡುತ್ತಿದ್ದರು. ತೇಜಸ್ವಿ ಇವರಿಬ್ಬರಿಗೂ ಬಿರಿಯಾನಿ ಆರ್ಡರ್ ಮಾಡಿ, ಹರಟುತ್ತಿದ್ದರು. ‘ಮಗಳು ಹುಟ್ಟಿದಾಳಯ್ಯ. ಬಾಣಂತಿಗೆ ಊಟ ತರೋದಕ್ಕೆ ಹೇಳಿದ್ರು. ಥೋ.. ಈಗ ನೆನಪಾಯ್ತು ನೋಡು’ ಎನ್ನುತ್ತಾ ಮರೆಗುಳಿತನಕ್ಕೆ ನಾಚುತ್ತಲೇ, ತಿನ್ನುತ್ತಿದ್ದ ಇಬ್ಬರನ್ನು ಅಲ್ಲೇ ಬಿಟ್ಟು ಕಾಫಿ ಹೌಸಿಂದ ಹೊರಟುಹೋಗಿದ್ದರು!
– ಕೀರ್ತಿ ಬೈಂದೂರು





