Mysore
16
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಕಪ್ಪಡಿ ಜಾತ್ರೆ ; ಕಾವೇರಿ ತೀರದಲ್ಲಿ ಬಹುಜನ ಸಂಗಮ

• ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಅಲ್ಲೊಂದು ತಣ್ಣಗೆ ಹರಿವ ನದಿಯಾನ. ನದಿಯ ಮಡಿಲೊಳಗೆ ತಂಪಾದ ನೆರಳು ನೀಡುವ ಹಸಿರು ಕಂಗೊಳಿಸುವ ಗಿಡಮರಗಳು, ನೆಲದವನ ಒಡಲಿಂದ ಅನ್ನವ ತರಲೆಂದು ಬೇರು ನಾಟಿಸಿಕೊಳ್ಳಲು ಕಾದಿರುವ ನೀರಬಯಲಿನ ಗದ್ದೆಗಳು, ಚಳಿಯು ಕರಗಿ ಬಿಸಿಲಾಗುವ, ಬಿಸಿಲು ಕರಗಿ ಚಳಿಯಾಗುವ ಚೆಂಬಿಸಿಲಗಾಲ. ಹೆಜ್ಜೆಹೆಜ್ಜೆಗೂ ಮನತಣಿಸುವ, ಮೈನವಿರೇಳಿಸುವ ‘ಹಾದಿ ಒಳಗಲ ಜ್ಯೋತಿ, ಬೀದಿ ಒಳಗಲ ಜ್ಯೋತಿ- ನಂಬಿದವರಾ ಮನೆಯಾ ಒಳಗೆ ತುಂಬಿ ತುಳುಕಾಡು ಬಾಪ್ಪ- ನಾವು ಕೂಗುವಾ ಕೂಗು ನಿಮ್ಮ ಪಾದಕರುವಾಗಲಪ್ಪಾ… ಮಂಟೇದಾ… ಧರೆಗೆ ದೊಡ್ಡಯ್ಯನವರು… ಕಿಡುಗಣ್ಣ ರಾಜಪ್ಪಾಜಿ… ಪರಂಜ್ಯೋತಿ…’ ಪದಗಳು ನುಡಿಕಾವೇರಿಯ ನೆಂಟರಂತೆ ನಾಟುತ್ತಾ ಹೋಗುತ್ತವೆ. ಇಂಥ ಅವಿಸ್ಮರಣೀಯ ಅನುಭವವಾಗುವುದು ಕಪ್ಪಡಿ ಎಂಬೋ ಪುಣ್ಯಭೂಮಿಯಲ್ಲಿ, ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಸಂತನೆಲ ಕಪ್ಪಡಿ, ಇಲ್ಲಿ ನೆಲೆ ನಿಲ್ಲುವ ಮೂಲಕ ನಿತ್ಯವೂ ಸತ್ಯ-ಶಾಂತಿ-ಸೌಹಾರ್ದತೆಗೆ ಕಾರಣಕರ್ತರಾದವರು ಧರ್ಮಗುರು ಮಂಟೇಸ್ವಾಮಿಯವರ ಶಿಷ್ಯರಾದ ರಾಚಪ್ಪಾಜಿ ಹಾಗೂ ಚೆನ್ನಾಜಮ್ಮನವರು.

ಯಾರೀ ಧರ್ಮಗುರುವು? ಯಾರೀ ಶಿಶುಮಕ್ಕಳು? ನಮ್ಮ ಸಮಾಜದಲ್ಲಿ ಸಾಂಸ್ಕೃತಿಕ ಯಾಜಮಾನ್ಯದ ಕಾರಣದಿಂದ ಯಾರನ್ನು ಕೊಳಕು ಎಂದು ದೂರವಾಗಿಸಲಾಗಿತ್ತೋ, ಯಾವುದನ್ನು ಕಪ್ಪು ಎಂದು ಕೀಳಾಗಿಸಲಾಗಿತ್ತೋ, ಯಾವ ನಾಡನು ಕತ್ತು ಎಂದು ಕೊಂಕಿಸಲಾಗಿತ್ತೋ ಆ ನಾಡು-ನೆಲೆ-ನಿಲುವುಗಳನ್ನು ತಮ್ಮ ನಡೆ-ನುಡಿಗಳ ಕಂಡಾಯ ಕ್ರಾಂತಿಯ ಮೂಲಕ ಬೆಳಗಿದ ಲೋಕ ಕಲ್ಯಾಣಕಾರಕ ಧರ್ಮಗುರುವು ಪರಂಜ್ಯೋತಿ ಮಂಟೇಸ್ವಾಮಿಯವರು. ‘ನಂದಿಯಾಗಮಲೀಲೆ’ ಕೃತಿಯ ಪ್ರಕಾರ, ಚಾರಿತ್ರಿಕವಾಗಿ ‘ಮಂಟೇಲಿಂಗ’ನೆಂಬ 15ನೇ ಶತಮಾನದ ಐತಿಹಾಸಿಕ ಸಂತ ಚೇತನ ಮಂಟೇಸ್ವಾಮಿ ಅರ್ಥಾತ್‌ ಮಂಟೇಲಿಂಗಯ್ಯನವರು ಕಂಡದ್ದು, 12ನೇ ಶತಮಾನದ ಕಲ್ಯಾಣದ ಬಸವೇಶ್ವರ-ನೀಲಮ್ಮ ಶರಣ ದಂಪತಿಗಳಲ್ಲ. 15ನೇ ಶತಮಾನದಲ್ಲಿ ಅವರ ಹೆಸರು ಮತ್ತು ಆಶಯವನ್ನಿಟ್ಟುಕೊಂಡು ಬಾಳಿದ ಕೊಡೇಕಲ್ಲೆಂಬ ಕಡಿಯ ಕಲ್ಯಾಣ’ದ ಬಸವೇಶ-ನೀಲಮ್ಮನವರು. ನೀಲಗಾರ ನುಡಿಕಾರರು ಕಟ್ಟಿರುವ ‘ಧರೆಗೆ ದೊಡ್ಡವರು ಮಂಟೇಸ್ವಾಮಿ’ ಎಂಬ ಮಾತಿನ ಮಹಾಕಾವ್ಯದಲ್ಲಿ ಈ ಸಂಗತಿಗಳನ್ನು ಚಿತ್ತಾಕರ್ಷಕವಾಗಿ
ನಿರೂಪಿಸಲಾಗಿದೆ.

12ನೇ ಶತಮಾನದ ಶರಣರು ಕಂಡ ಕನಸುಗಳನ್ನು ಸಾಕಾರಗೊಳಿಸಲು ವಚನೋತ್ತರ ಯುಗದಲ್ಲಿ ಮೂಡಿಬಂದ ಜನಮುಖಿ ತತ್ವಪರಂಪರೆ ಕೊಡೇಕಲ್ ಬಸವಣ್ಣನವರದ್ದು. ವಚನದರ್ಶನವು ಸಾಂಸ್ಥಿಕರಣಕ್ಕೆ ಹಾಗೂ ಕರ್ಮಠೀಕರಣಕ್ಕೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಶರಣ ನದಿಗಳ ವಚನಧಾರೆಯನ್ನು ಸರ್ವಜನಾಂಗದ ಶಾಂತಿತೋಟಗಳಿಗೆ ಹರಿಸಲು ಸಂಸಿದ್ಧರಾದ ನುಡಿಕಾರ ಕೊಡೇಕಲ್ ಬಸವಣ್ಣನವರ ಮಾರ್ಗದರ್ಶನದಂತೆ ಮುನ್ನಡೆದ ಶಿಷ್ಯರಲ್ಲಿ ಮಂಟೇಸ್ವಾಮಿ ಅವರು ಪ್ರಸಿದ್ದರು. ಮುಂದೆ, ಇದೇ ಮಂಟೇಸ್ವಾಮಿ ಅವರ ಮಾರ್ಗದರ್ಶನದಂತೆ ಮುನ್ನಡೆದು ಲೋಕ ಕಲ್ಯಾಣಕ್ಕಾಗಿ ಜೀವನ ಮುಡಿಪಿಟ್ಟ ಮಹಾಸಾಧಕ ಶಿಷ್ಯರಲ್ಲಿ ಒಬ್ಬರು ರಾಚಪ್ಪಾಜಿ. ಇವರು ಮೂಲತಃ ಕೊಡೇಕಲ್ ಬಸವಣ್ಣನವರ ಮಗ. ರಾಚಪ್ಪಾಜಿ ಅವರ ತಂದೆಯು ಮಂಟೇಸ್ವಾಮಿ ಅವರಿಗೆ ಗುರುಗಳಾದರೆ, ತಂದೆಯ ಶಿಷ್ಯರಾದ ಮಂಟೇಸ್ವಾಮಿ ಅವರು ರಾಚಪ್ಪಾಜಿಗೆ ಗುರುಗಳು.

ಮಂಟೇಸ್ವಾಮಿಯವರು ತಮ್ಮ ಗುರುಕಾರುಣ್ಯಕ್ಕೆ ಅನುವಾಗಿ ಉತ್ತರದಿಂದ ರಾಚಪ್ಪಾಜಿಯವರನ್ನು ಕರೆದುಕೊಂಡು ಕತ್ತಲರಾಜ್ಯಕ್ಕೆ ಬರುತ್ತಾರೆ. ದಾರಿಯ ನಡುವೆ ವಿಜಯನಗರದ ಗಾರುಡಿಗರನ್ನು ಮುಖಾಮುಖಿಯಾಗುತ್ತಾರೆ. ಆಗ ರಾಚಪ್ಪಾಜಿಯ ಅಪ್ರತಿಮಬಲದಿಂದ ವಿಜಯನಗರದ ಗಾರುಡಿಗರನ್ನು ಗೆಲ್ಲುತ್ತಾರೆ. ಆ ಗೆಲುವಿಗೆ ಪೂರಕವಾಗಿ ಗಾರುಡಿಗರಲ್ಲಿದ್ದ ಸಾಕುಮಗಳು ಚನ್ನಾಜಮ್ಮನನ್ನು ಉಡುಗೊರೆಯಂತೆ ಪಡೆಯುತ್ತಾರೆ. ಮುಂದೆ ಕಪ್ಪಡಿ ಜಾತ್ರೆ ಕಾವೇರಿ ತೀರದಲ್ಲಿ ಬಹುಜನ ಸಂಗಮ ಮಂಟೇಸ್ವಾಮಿಯವರು ದುರಹಂಕಾರದಿಂದ ಮೆರೆಯುತ್ತಿದ್ದ ಮಾರನಾಯಕನನ್ನು ಮಣಿಸಿ, ಮೈಸೂರು ಅರಸರಿಗೆ ಅವರ ರಾಜ್ಯ ಮತ್ತು ಪುತ್ರಿ ದಕ್ಕುವಂತೆ ಮಾಡುತ್ತಾರೆ. ಗಂಡು ಮಕ್ಕಳಿಲ್ಲದಿದ್ದ ಅವರಿಗೆ ಮಕ್ಕಳ ಫಲದ ವರಕೊಟ್ಟು, ಅವರ ಏಕೈಕ ಪುತ್ರಿ ದೊಡ್ಡಮ್ಮ ತಾಯಿಯನ್ನು ದತ್ತು ಪಡೆಯುತ್ತಾರೆ. ಹೀಗೆ ಮುಂದುವರಿಯುತ್ತಾ ಶಿಷ್ಯ ಸಿದ್ದಪ್ಪಾಜಿಯ ಮೂಲಕ ಪಾಂಚಾಳರ ಅಹಂಕಾರ ನಿರಸನ ಮಾಡಿಸಿ ಕಬ್ಬಿಣದ ಮೇಲಿನ ಏಕಾಧಿಪತ್ಯವನ್ನು ಅಳಿಸಿ, ಲೋಕ ಕಲ್ಯಾಣದ ಹಲವಾರು ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಕೊನೆಗೆ ಗುರುಗಳಾದ ಮಂಟೇಸ್ವಾಮಿ ಅವರು ಕಾಲಜ್ಞಾನವನ್ನು ಬೋಧಿಸಿ, ಮುಂಬರುವ ಕಲಿಗಾಲಕ್ಕೆ ಮುನ್ನ ತಾವೆಲ್ಲರೂ ಲೋಕದ ಕಣ್ಣಿಂದ ಮರೆಯಾಗಿರಬೇಕೆಂದು ತಿಳಿಸುತ್ತಾರೆ. ಗುರುಗಳ ಸೂಚನೆಯಂತೆ ಸಿದ್ದಪ್ಪಾಜಿ ಚಿಕ್ಕಲ್ಲೂರಿನಲ್ಲಿ, ದೊಡ್ಡಮ್ಮ ತಾಯಿಯವರು ಮುಟ್ಟನಹಳ್ಳಿ ತೋಪಿನಲ್ಲಿ, ರಾಚಪ್ಪಾಜಿ ಹಾಗೂ ಚನ್ನಾಜಮ್ಮ ಅವರು ಕಪ್ಪಡಿಯಲ್ಲಿ ನೆಲೆಗೊಳ್ಳುತ್ತಾರೆ. ಲೋಕ ಕಲ್ಯಾಣಾರ್ಥವಾದ ಕಾಯಕಗಳನ್ನು ಸಮಾಪ್ತಗೊಳಿಸಿ ಜೀವಂತ ಸಮಾಧಿಯಾಗುತ್ತಾರೆ. ಆ ಜೀವತಾಣಗಳೇ ಇಂದು ‘ಉರಿಗದ್ದುಗೆ’ಗಳಾಗಿರುವುದು; ಸರ್ವಜನಾಂಗದ ಆರಾಧನಾ ತಾಣಗಳಾಗಿರುವುದು.

ಕಾವೇರಿ ತಾಯಿಯ ತಣ್ಣನೆಯ ಮಡಿಲ ಸ್ಪರ್ಶದ ತಾಣವಾದ ಕಪ್ಪಡಿಯಲ್ಲಿ ನೆಲೆಗೊಂಡ ರಾಚಪ್ಪಾಜಿ ಮತ್ತವರ ಸೋದರಿ ಚನ್ನಾಜಮ್ಮನವರಿಗೆ ಬಹುಜನ ಸಮುದಾಯಗಳು ತೋರುವ ಭಕ್ತಿವಿಶ್ವಾಸ, ಆರಾಧನಾ ಭಾವಗಳ ಪ್ರತೀಕವಾಗಿ ಪ್ರತೀ ವರ್ಷ ಕಪ್ಪಡಿಯಲ್ಲಿ ಜಾತ್ರೆಯು ವೈಭವಪೂರ್ಣವಾಗಿ ನಡೆಯುತ್ತದೆ. ಪರಸ್ಪರ ಒಪ್ಪಂದದ ಪ್ರಕಾರ, ಕಪ್ಪಡಿ ಕ್ಷೇತ್ರದ ಉಸ್ತುವಾರಿಯು ಮಳವಳ್ಳಿ ಮಠದ ಸ್ವಾಮೀಜಿಯವರಿಗೆ ಸೇರಿದ್ದು. ಆದರೆ 2 ವರ್ಷಗಳಿಗೊಮ್ಮೆ ಕಪ್ಪಡಿ ಜಾತ್ರೆಯ ಸಂದರ್ಭದಲ್ಲಿ ಒಂದು ತಿಂಗಳು ಮಾತ್ರ ಬೊಪ್ಪೇಗೌಡನಪುರ ಮಠದ ಸ್ವಾಮೀಜಿಯವರ ಉಸ್ತುವಾರಿ ಸೇರುತ್ತದೆ. ಹೀಗೆ, ಎರಡೂ ಮಠದ ಸ್ವಾಮೀಜಿಗಳ ಮೈತ್ರಿಯಲ್ಲಿ ಕಪ್ಪಡಿ ಜಾತ್ರೆಯು ಅರ್ಥಪೂರ್ಣವಾಗಿ ಸಾಗುತ್ತಾ ಬರುತ್ತಿದೆ. ಮೊದಲಿಗೆ ಚಿಕ್ಕಲ್ಲೂರು ಜಾತ್ರೆ ಆರಂಭವಾಗಿ ಕೊನೆಗೆ ಬೊಪ್ಪಗೌಡನಪುರದ ಜಾತ್ರೆ ನಡೆಯುವ ನಡುವೆ ಕಪ್ಪಡಿ ಜಾತ್ರೆ ನಡೆಯುತ್ತದೆ. ಶಿವರಾತ್ರಿ ದಿನದ ಜಾಗರಣೆಯಿಂದ ಆರಂಭವಾಗಿ ಯುಗಾದಿಯವರೆಗೆ ಒಂದು ತಿಂಗಳು ಕಾಲ ನಡೆಯುವ ಜಾತ್ರೆಯಿದು. ಕಪಡಿ ಜಾತ್ರೆಗಾಗಿ ನೆರೆವವರು ಏಕಜಾತಿ, ಏಕಧರ್ಮ, ಏಕಪ್ರದೇಶ, ಏಕಕಾಯಕದ ಜನತೆಯಲ್ಲ. ಕರ್ನಾಟಕದ ಹಲವು ನೆಲೆಗಳಿಂದ ಬಹುಜಾತಿಯ ಬಹುಕಾಯಕ ಜನಸಮುದಾಯಗಳು ಇಲ್ಲಿ ಸಾಮರಸ್ಯದಿಂದ ಸಮಾಗಮಗೊಳ್ಳುತ್ತವೆ.

ಕಪ್ಪಡಿ ಸಮೀಪದ ಕುಟ್ಟಿ ಕೋಟೆಯಲ್ಲಿ ಮುಸಲ್ಮಾನ ಜನರಿಗೆ ರಾಚಪ್ಪಾಜಿ ಅವರು ನೀಡಿದ ಔಷಧೋಪಚಾರದ ಕಾರಣವೋ ಅಥವಾ ಸೂಫಿ ಪರಂಪರೆಯನ್ನು ತಮ್ಮೊಳಗೆ ಜೀವಿಸುತ್ತಾ ಬಂದ ಕಾರಣದಿಂದಲೋ ಇಂದಿಗೂ ಮುಸಲ್ಮಾನರು ರಾಚಪ್ಪಾಜಿ ಅವರನ್ನು ತಮ್ಮ ಪಾಲಿನ ಮಹಾಸಂತರಾಗಿಯೇ ಪರಿಭಾವಿಸಿಕೊಂಡು ಪೂಜಿಸುತ್ತಾ ಬರುತ್ತಿದ್ದಾರೆ. ಹೆಬ್ಬಾಳು ಮುತ್ತಮುತ್ತಲಿನ ಗ್ರಾಮಸ್ಥರು ಇಂದಿಗೂ ಕಪ್ಪಡಿಯ ರಾಚಪ್ಪಾಜಿಗೆ ನಡೆದುಕೊಳ್ಳುವುದು ಕಂಡು ಬರುತ್ತದೆ. ನಿಗದಿತ ದಿನದಂದು ವಿಶೇಷವಾಗಿ ಹುಣ್ಣಿಮೆಯ ದಿನ ಕಪ್ಪಡಿ ಜಾತ್ರೆಗೆ ಬರುವ ರಾಚಪ್ಪಾಜಿಯವರ ಮುಸ್ಲಿಂ ಭಕ್ತರು ರಾಚಪ್ಪಾಜಿ ಮತ್ತು ಚನ್ನಾಜಮ್ಮರ ಗದ್ದುಗೆಗಳ ತುಸುದೂರದಲ್ಲಿ ಬಾಲಚಂದ್ರನ ಆಕಾರದಲ್ಲಿ ಬೆರಣಿಗಳನ್ನು ಜೋಡಿಸಿ, ಅವುಗಳ ಮೇಲೆ ಸಾಂಬ್ರಾಣಿ, ಕರ್ಪೂರ, ಗಂಧದ ಪುಡಿಗಳನ್ನು ಉದುರಿಸುತ್ತಾರೆ. ಅವರ ಜೊತೆಯಲ್ಲಿರುವ ಹಜರತ್ತರು ಪ್ರಾರ್ಥನೆ ಮಾಡಿ ಬೆರಣಿಗೆ ಬೆಂಕಿ ತಾಕಿಸುತ್ತಾರೆ. ಅನಂತರ ಆ ಗುರು ಪೀರಣ್ಣ (ಸೂಫಿ ಗುರುವಿಗೆ ಪೀರ್ ಎಂದು ಕರೆಯುವರು) ಮಂಟೇಸ್ವಾಮಿಯವರ ಹೆಸರಿಗೆ ‘ಹಜರತ್ ಇಮಾಮ್ ಷಾವಲಿ ಅಲ್ಲಾಕು!’ ಎಂದು ಹೇಳುತ್ತಾನೆ. ಆಗ ಅಲ್ಲಿ ಸೇರಿದ್ದ ಭಕ್ತಗಣವು ‘ದೀನ್! ದೀನ್!’ ಎಂದು ಉದ್ಧರಿಸುತ್ತಾರೆ. ನಂತರ ರಾಚಪ್ಪಾಜಿಯವರ
ಕಾವೇರಿ ತಾಯಿಯ ತಣ್ಣನೆಯ ಮಡಿಲ ಸ್ಪರ್ಶದ ತಾಣವಾದ ಕಪ್ಪಡಿಯಲ್ಲಿ ನೆಲೆಗೊಂಡ ರಾಚಪ್ಪಾಜಿ ಮತ್ತವರ ಸೋದರಿ ಚನ್ನಾಜಮ್ಮನವರಿಗೆ ಬಹುಜನ ಸಮುದಾಯಗಳು ತೋರುವ ಭಕ್ತಿವಿಶ್ವಾಸ, ಆರಾಧನಾಭಾವಗಳ ಪ್ರತೀಕವಾಗಿ ಪ್ರತೀ ವರ್ಷ ಕಪ್ಪಡಿಯಲ್ಲಿ ಜಾತ್ರೆಯು ವೈಭವಪೂರ್ಣವಾಗಿ ನಡೆಯುತ್ತದೆ.
ಹೆಸರಿಗೆ ‘ಹಜರತ್‌ ಸುಲ್ತಾನ್ ಷಾವಲಿ ಅಲ್ಲಾಕು!’ ಎಂದಾಗ ಎಲ್ಲರೂ ‘ದೀನ್ ದೀನ್!” ಎಂದು ಘೋಷಿಸುತ್ತಾರೆ. ಮತ್ತೆ ಹಜರತ್ತರು ಚನ್ನಾಜಮ್ಮನನ್ನು ಕುರಿತು ‘ಮುನ್ನೀಷಾವಲಿ ಅಲ್ಲಾಕು!’ ಎಂದಾಗ ಯಥಾಪ್ರಕಾರ ಎಲ್ಲರೂ ‘ದೀನ್! ದೀನ್!’ ಎಂದು ಉದ್ವೇಷಣೆ ಮಾಡುತ್ತಾರೆ. ಈಗ ಎಲ್ಲರೂ ಒಟ್ಟಾಗಿ ಪ್ರಾರ್ಥಿಸಿ ಮೊದಲಿ ಪ್ರಸಾದವನ್ನು ಸ್ವೀಕರಿಸುತ್ತಾರೆ.

ಕಪ್ಪಡಿ ಜಾತ್ರೆಯಲ್ಲಿ ನೀಡಲಾಗುವ ಮಾದಲಿ ಪ್ರಸಾದವು ತುಂಬಾ ವಿಶೇಷತೆಯುಳ್ಳದ್ದು. ಉರ್ದುವಿನಲ್ಲಿ ‘ಮಾಲದಿ’ ಎಂದರೆ ಸಿಹಿತಿನಿಸು ಎಂದರ್ಥ. ಜನನುಡಿಯ ಸೌಲಭ್ಯಾಕಾಂಕ್ಷೆಯ ನಿಮಿತ್ತ ‘ಮಾಲದಿ’ ಎಂಬುದು ‘ಮಾದಲಿ’ ಆಗಿದೆ ಎಂಬುದು ಭಾಷಾತಜ್ಞರ ಅಭಿಮತ. ಮಾದಲಿ ಪ್ರಸಾದವನ್ನು ಕೊಡುವ ಮಾದಲಿಕಟ್ಟೆ ರಾಚಪ್ಪಾಜಿಯವರ ಗದ್ದುಗೆಯ ಎಡಭಾಗದಲ್ಲಿದೆ. ಮಾದಲಿ ಸೇವೆಯು ಜಾತ್ರೆ ಶುರುವಾದ ನಂತರದ 25ನೇ ದಿನ ನಡೆಯುತ್ತದೆ. ಆ ದಿನ ಈ ಕಟ್ಟೆಯನ್ನು ಶುಚಿ ಮಾಡಿ ಪೂಜಿಸುತ್ತಾರೆ. ‘ಮಾದಲಿ’ ಎಂದರೆ ರವೆ, ಕೊಬ್ಬರಿ ತುರಿ, ಸಕ್ಕರೆಪುಡಿ, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಬಾದಾಮಿಗಳನ್ನು ತುಪ್ಪದಲ್ಲಿ ಹುರಿದ ಸಿಹಿತಿನಿಸು… ಹೀಗೆ ಸಿದ್ಧವಾದ ಮಾದಲಿಯನ್ನು ಮಾದಲಿಕಟ್ಟೆಯಲ್ಲಿ ರಾಶಿ ಹಾಕುತ್ತಾರೆ. ಇದನ್ನು ಮಠದ ಬುದ್ಧಿಯವರು ಬಂದು ಪೂಜೆ ಮಾಡಿದ ಮೇಲೆ ಭಕ್ತಾದಿಗಳಿಗೆಲ್ಲ ಹಂಚುತ್ತಾರೆ.

ಹೀಗೆ, ಅನ್ನ ಬೆಳೆಯುವ ರೈತರಿಂದ ಹಿಡಿದು ಅರಿವನ್ನು ನೀಡುವ ಸೂಫಿಸಂತರವರೆಗೆ, ಅಂಬೆಗಾಲಿಡುವ ಮಗುವಿನಿಂದ ಹಿಡಿದು ಜೀವನ ಸಂಧ್ಯಾಕಾಲದ ವಯೋಮಾನದವರವರೆಗೆ, ವೇದಬೋಧಕ ವೇದಾಂತಿಯಿಂದಿಡಿದು ಕಸಗುಡಿಸುವ ಕಾಯಕಜೀವಿಯವರೆಗೆ ಯಾವುದೇ ಭಿನ್ನಭೇದವಿಲ್ಲದೆ, ಜನಮೈತ್ರಿಯಲ್ಲಿ ಸಾಗುವ ಕಪ್ಪಡಿ ಜಾತ್ರೆಯು ಭಾರತದೇಶದ ಬಹುತ್ವ ಸಂಸ್ಕೃತಿಯ ಮೇರುಗುಣಕ್ಕೆ ಕನ್ನಡಿಯಂತಿದೆ.

kmbyrappa@gmail.com

Tags:
error: Content is protected !!