Mysore
20
clear sky

Social Media

ಸೋಮವಾರ, 17 ಫೆಬ್ರವರಿ 2025
Light
Dark

ಕೊಳ್ಳೇಗಾಲದ ಹಳೆಯ ಮನೆಯ ಹುಡುಕುತ್ತಾ ಕಳೆದು ಹೋದೆ

ಕೊಳ್ಳೇಗಾಲದ ತಾತನ ಮನೆಯನ್ನು ನೋಡಿ ಬಂದ ಮೇಲೆಯೂ ಮೊನ್ನೆ ಪುಸ್ತಕವೊಂದನ್ನು ಓದುವಾಗ ಆ ಕಥೆ ಅಲ್ಲಿಯೇ ಘಟಿಸುತ್ತಿತ್ತು! ನನ್ನ ಕಲ್ಪನೆಯಲ್ಲಿ ತಾತನ ಮನೆ ಸ್ವಲ್ಪವೂ ಮುಕ್ಕಾಗದಂತೆ ನಾನು ಬಾಲ್ಯದಲ್ಲಿ ಕಂಡಂತೆಯೇ ಇತ್ತು…

ಭಾರತಿ ಬಿ. ವಿ.

ಕಳೆದ ವಾರ ಇದ್ದಕ್ಕಿದ್ದಂತೆ ಕಾಲ ಕೂಡಿ ಬಂದು, ಕೊಳ್ಳೇಗಾಲ ದತ್ತ ಫೋಟೋಗ್ರಾಫರ್ ಗೆಳೆಯನ ಜೊತೆ ಹೊರಟಾದ ನಂತರವೂ ನನಗದು ಕನಸೇನೋ ಅನ್ನಿಸುತ್ತಿತ್ತು. ಸಾಧಾರಣ ವಾಗಿ ಅಪ್ಪನ ಊರನ್ನು ನಮ್ಮ ಊರು ಅನ್ನುತ್ತೇವಲ್ಲವಾ? ಆದರೆ ನನಗೆ ನಾನು ಹುಟ್ಟಿದ ಅಮ್ಮನ ಅಪ್ಪನ ಕೊಳ್ಳೇಗಾಲದ ಮನೆಯೇ ಯಾವಾಗಲೂ ನನ್ನ ಊರು ಅನ್ನಿಸುವುದು.

ಬಹುಶಃ ನಾವು ರಜೆಯ ಬಹು ಭಾಗವನ್ನು ಅಲ್ಲಿ ಕಳೆಯುತ್ತಿದ್ದ ನೆನಪುಗಳು ಆ ಮನೆಯ ಮೂಲೆಮೂಲೆಗಳಲ್ಲಿ ಇರುವುದರಿಂದ ಇರಬಹುದು. ಹಾಗಾಗಿಯೇ ಎಷ್ಟೋ ವರ್ಷಗಳ ನಂತರವೂ ಆ ಮನೆಯ ತುಡಿತ ಮುಗಿದಿಲ್ಲವೇನೋ. ಡ್ರೈವರ್ ‘ಮನೆ ಲೊಕೇಷನ್ ಹೇಳಿ’ ಅಂದಾಗ ‘ಕೃಷ್ಣ ಥಿಯೇಟರ್ ಅಂತ ಹಾಕಿ’ ಅಂದೆ. ಮನೆ ಗೊತ್ತಿತ್ತು, ಆದರೆ ವಿಳಾಸ ಗೊತ್ತಿರಲಿಲ್ಲವಲ್ಲ. . .

ಆ ಸೈಟನ್ನು ತಾತ ಕೊಂಡಾಗ ಅದು ಕೊಳ್ಳೇಗಾಲದ outskirts ಆಗಿತ್ತಂತೆ. ತಾತನ ಅಪ್ಪ-ಅಮ್ಮ ‘ಸ್ಮಶಾನದ ಥರ ಇದೆ, ಅಲ್ಲಿ ಯಾಕೆ ಮನೆ ಕಟ್ಟುತ್ತೀ’ ಅಂದರೂ ನನ್ನಷ್ಟೇ ಮೊಂಡು ಸ್ವಭಾವದ ತಾತ ಯಾರ ಮಾತನ್ನೂ ಕೇಳದೇ ಅಲ್ಲಿಯೇ ಮನೆ ಕಟ್ಟಿಸಿದ್ದರಂತೆ. ಸುಮಾರು ೭೦ * ೨೦೦ ಅಡಿ ಜಾಗವಾದರೂ ಮನೆ ತೀರಾ ದೊಡ್ಡದೇನಿರಲಿಲ್ಲವಂತೆ. ಮುಂದೆ ಸಾಕಷ್ಟು ಜಾಗ ಖಾಲಿ, ಹಿತ್ತಲಿನಲ್ಲಿ ಮನೆಯ ಮೂರರಷ್ಟು ಖಾಲಿ ಜಾಗ. ಕತ್ತಲಾದ ನಂತರ ನರಪ್ರಾಣಿ ಓಡಾಡುತ್ತಿರಲಿಲ್ಲವಂತೆ. ಆ ಸ್ಮಶಾನದಂಥ ಜಾಗ, ಮುಂದೆ ಊರಿಗೆ ಕನೆಕ್ಟ್ ಆಗಿ, ಆ ನಂತರ ಊರ ಮಧ್ಯಭಾಗವಾಗಿ, ರಸ್ತೆಯ ಆ ಬದಿಯಲ್ಲಿ ಕೃಷ್ಣ ಥಿಯೇಟರ್ ಎದ್ದು, ರಸ್ತೆಯ ಮತ್ತೊಂದು ತುದಿಯಲ್ಲಿ ಬಸ್ ಸ್ಟ್ಯಾಂಡ್ ಆಗಿ. . . ಒಟ್ಟಿನಲ್ಲಿ ತಾತನ ಮನೆಯಿದ್ದ ಸ್ಮಶಾನದಂಥ ರಸ್ತೆ most happening place ಆಗಿಹೋಗಿತ್ತು. ನಮ್ಮ ತಾತನ ಮನೆ ಕೃಷ್ಣ ಥಿಯೇಟರ್ ಎದುರು ಎಂದಾಗಲೆಲ್ಲ ‘ಓಹ್ ಇವರು ಭಾರಿ ಶೀಮಂತರಿರಬೇಕು’ ಎಂದುಕೊಳ್ಳುತ್ತಾರೆ ಎಲ್ಲರೂ. ಆದರೆ ಅಸಲಿ ಕತೆ ಇದು!

‘ಬಸ್ ಸ್ಟ್ಯಾಂಡ್ ಬಂತು ಅಂತ ತೋರಿಸ್ತಿದೆ. ಈಗ ಎಲ್ಲಿ ತಿರುಗಬೇಕು’ ಡ್ರೈವರ್ ಕೇಳಿದಾಗ ನಾನು ತಬ್ಬಿಬ್ಬಾಗಿ ಸುತ್ತಲೂ ನೋಡಿದೆ. ‘ಹಾಗೇ ಮುಂದೆ ಹೋಗಿ. ಮೊದಲು ಶೋಭಾ ಥಿಯೇಟರ್ ಮುಂದೆ ಶಾಂತಿ ಆಮೇಲೆ ಕೃಷ್ಣ ಬರತ್ತೆ’ ಅಂದೆ. ಸಾಕಷ್ಟು ಮುಂದೆ ಹೋದರೂ ಶೋಭಾ ಥಿಯೇಟರ್ ಕಾಣಿಸದೇ ತಬ್ಬಿಬ್ಬಾಗುವಾಗಲೇ ಶಾಂತಿ ಥಿಯೇಟರ್ ಕಾಣಿಸಿತು. ‘ಓ ಶೋಭಾ ಒಡೆದು ಹಾಕಿದಾರೆನೋ’ ಅನ್ನುತ್ತಿರುವಾಗಲೇ ನಾವು ರಸ್ತೆಯ ಕೊನೆಗೆ ಬಂದಾಗಿತ್ತು. ‘ಅರೆ ಕೃಷ್ಣ ಎಲ್ಲಿ ಹೋಯ್ತು’ ಎಂದು ಯೋಚಿಸುತ್ತಲೇ ಮತ್ತೆ ಯೂ ಟರ್ನ್ ತೆಗೆದುಕೊಂಡು ವಾಪಸ್ ಬಂದರೂ ನನಗೆ ನಮ್ಮ ಮನೆಯ ರಸ್ತೆಯ ಗುರುತು ಸಿಕ್ಕಲಿಲ್ಲ. ‘ಇಲ್ಲಿ ಬಲಕ್ಕೆ ತಿರುಗಿ ನೋಡೋಣ’ ಅಂದೆ. ಬಲಕ್ಕೆ ತಿರುಗಿ ನಿರ್ಮಾಣದ ಹಂತದಲ್ಲಿದ್ದ ಒಂದು ಭವ್ಯ ಕಟ್ಟಡದ ಮುಂದೆ ನಿಲ್ಲಿಸಿದರು. ‘ಏ ನಿಮ್ಮ ತಾತನ ಮನೆ ಸಕತ್ ಪ್ರಾಪರ್ಟಿ’ ಗೆಳೆಯ ಅನ್ನುವಾಗಲೇ ‘ಇದಲ್ಲ. ಅವರದ್ದು ಕಾರ್ನರ್ ಸೈಟ್’ ಅಂದೆ. ಕಾರಿನಿಂದ ಕೆಳಗಿಳಿದು ಸಾಲಾಗಿದ್ದ ಅಂಗಡಿಗಳನ್ನು ನೋಡುತ್ತಾ ನಾನು ಎಲ್ಲಿದ್ದೀನಿ ಎಂದೇ ಅರ್ಥವಾಗದೇ ಮಂಕಾಗಿ ನಿಂತುಬಿಟ್ಟೆ. ‘ಯಾವುದು ಮನೆ’ ಗೆಳೆಯ ಕ್ಯಾಮೆರಾ ಸಿದ್ಧಗೊಳಿಸುತ್ತಾ ಕೇಳಿದ. ಬೆಪ್ಪಾಗಿ ರಸ್ತೆಯುದ್ದಕ್ಕೂ ಕಣ್ಣಾಡಿಸಿದರೆ ಸಂಪೂರ್ಣ ಅಪರಿಚಿತತೆ! ತಾತನ ಮನೆಯ ಮುಂದಿದ್ದ ಹೊಂಗೆ, ಅಶೋಕ, ಆಕಾಶಮಲ್ಲಿಗೆ ಮರಗಳು ಈ ಹಿಂದೆ ಬಂದಾಗಲೇ ಮಾಯವಾಗಿದ್ದವಾದರೂ, ತೀರಾ ಈ ಪರಿಯ ಅಪರಿಚಿತತೆ ಕಾಡಿರಲಿಲ್ಲ. ‘ಕಾಳಿಕಾಂಭ ಜ್ಯೋತಿಷ್ಯಾಲಯ ಅಂತ ಇದೆ. ಅಲ್ಲಿ ಕೇಳೋಣ ಬಾ’ ಗೆಳೆಯ ರೇಗಿಸುವಾಗಲೇ ಬೇಕರಿ, ಮತ್ತು ಕಿರಾಣಿ ಅಂಗಡಿಗಳ ನಡುವೆ ಉಸಿರುಗಟ್ಟಿದಂತಿದ್ದ ಸಣ್ಣ ಗೇಟ್ ಕಾಣಿಸಿತು. ‘ಇಲ್ಲಿದೆ ನಮ್ಮನೆ’ ಎಂದೆ. ನನ್ನ ಗಂಟಲಿನಿಂದ ಹೊರಬಿದ್ದ ಸ್ವರ ನನಗೇ ಕೇಳಿಸದಷ್ಟು ಸಣ್ಣಗಿತ್ತು.

ಒಳ ಸಾಗಿದರೆ ಹಿಂದೆ ತಾತನ ಮನೆಯ ಅಂಗಳದಲ್ಲಿ ಮಲ್ಲಿಗೆ ಚಪ್ಪರವಿದ್ದ ಜಾಗದಲ್ಲಿ ಮತ್ತೊಂದು ಮನೆ ಎದ್ದಿತ್ತು. ಆ ಮನೆಯವರಿಗೆ ನನ್ನ ಪರಿಚಯ ಹೇಳಿಕೊಂಡಾಗ ಪಾಪ ಪ್ರೀತಿಯಿಂದ ಸ್ವಾಗತಿಸಿದರು. ಇವನೋ ಮಾತುಗಾರ, ಅವರ ಬಳಿ ‘ಇವರು ಸುಬ್ರಹ್ಮಣ್ಯಂ ಮೊಮ್ಮಗಳು. ಫೇಮಸ್ ಲೇಖಕಿ’ ಎಂದು ಶುರು ಹಚ್ಚಿಕೊಂಡ. ‘ಸುಮ್ನಿರಪ್ಪ ಅದೆಲ್ಲ ಯಾಕಿಲ್ಲಿ’ ನಾನು ತಲೆ ಚಚ್ಚಿಕೊಳ್ಳುವಾಗಲೇ ಆಕೆ ‘ಓ ಹೌದಾ. ನಂಗೂ ಸುಮಾರು ಓದೋ ಅಭ್ಯಾಸ ಇದೆ’ ಅಂದರು. ಇವನು ಅಲ್ಲಿಗೇ ನಿಲ್ಲಿಸದೆ ನನ್ನ ಪುಸ್ತಕಗಳ ಹೆಸರುಗಳನ್ನು ಹೇಳುತ್ತಾ ‘ಅದು ಓದಿದೀರಾ’ ಎಂದು ಶುರು ಹಚ್ಚಿಕೊಂಡ. ನಾನು ಸುಮ್ನಿರು ಮಾರಾಯಾ ಅಂತ ಸನ್ನೆ ಮಾಡುವಾಗಲೇ ಅವರು ‘ಅದು ಓದಿಲ್ಲ. ನಾನು ಮ್ಯಾಗಜ಼ೀನ್‌ಗಳನ್ನೆಲ್ಲ ಓದ್ತೀನಿ’ ಅಂದರು. ನಂತರ ಅವನು ಆ ಮಾತು ಮುಂದುವರಿಸಲಿಲ್ಲ! ತಾತನ ಮನೆ ನೋಡಿ ಎಂದು ಕರೆದರು. ನಾನು ಮುಂಬಾಗಿಲು ಇಷ್ಟು ಸಣ್ಣದಿತ್ತಾ ಎಂದು ಯೋಚಿಸುತ್ತಾ ಒಳಹೊಕ್ಕವಳು, ಕಾಲಿಡುತ್ತಲೇ ಮುಗಿದೇ ಹೋದ ಸಣ್ಣ ವರಾಂಡಾ ನೋಡಿ ದಿಗ್ಭ್ರಾಂತಳಾಗಿ ನಿಂತೆ. ನನ್ನ ನೆನಪಿ ನಂಗಳದಲ್ಲಿ ಈ ವರಾಂಡಾ ಅದೆಷ್ಟು ವಿಶಾಲವಾಗಿತ್ತು! ಆ ಮೂಲೆಯಲ್ಲಿದ್ದ ಆರಾಮ್ ಕುರ್ಚಿಗಾಗಿ ಮಕ್ಕಳೆಲ್ಲ ಬಡಿ ದಾಡಿದ್ದು, ಕಿಟಕಿಯ ಬದಿಯ ಮೇಜಿನ ಮೇಲೆ ಕುಣಿದಿದ್ದು ನೆನಪಿದೆ. ಆದರೆ ಇಷ್ಟು ಚಿಕ್ಕ ಜಾಗದಲ್ಲಿ. . .? ಮನಸ್ಸು ಒಪ್ಪಲು ನಿರಾಕರಿಸಿತು. ಎದುರಿನ ಗೋಡೆಯನ್ನು ತೋರಿಸುತ್ತಾ ‘ಈ ಗೋಡೆಯಾಚೆಗಿನ ಕೋಣೆಯಲ್ಲಿ ತಾತನ ಲೈಬ್ರರಿ ಇತ್ತು. ಎಷ್ಟೊಂದು ಪುಸ್ತಕಗಳಿದ್ದವು’ ಎಂದು ಗೊಣಗಿ ಕೊಂಡೆ. ಇಷ್ಟು ಚಿಕ್ಕ ಜಾಗದಲ್ಲಿ ಇನ್ನೆಷ್ಟು ಮಹಾ ಪುಸ್ತಕಗಳಿ ದ್ದಿರಲು ಸಾಧ್ಯ ಎನ್ನುವ ಯೋಚನೆ ನನ್ನನ್ನು ಕಂಗಾಲಾಗಿಸಿತು. ಇದ್ದಕ್ಕಿದ್ದಂತೆ ಜಗತ್ತು ಶ್ರಿಂಕ್ ಆಗಿ ಹೋದ ಭಾವ.

ಹಾಲ್‌ಗೆ ಕಾಲಿಟ್ಟರೆ ಎಡ ಬದಿಯಲ್ಲಿದ್ದ ತಿಂಡಿ ರೂಮ್ ಮಾಯವಾಗಿ, ಅಲ್ಲೊಂದು ಶೋಕೇಸ್ ಕಟ್ಟಿದ್ದರು. ‘ಮಾಲ್ಗುಡಿ ಡೇಸ್’ನ vendor of sweets ಕಥೆಯಲ್ಲಿದ್ದಂಥ ಆ ಕೋಣೆಯ ಪರಿಮಳ ಮನಸ್ಸಿನಲ್ಲಿ ಸುಳಿಯಿತು. ಆ ಕೋಣೆಗೆ ಬೀಗ ಹಾಕಿರುತ್ತಿದ್ದರು. ಸಂಜೆ ನಾಲ್ಕಕ್ಕೆ ಬಾಗಿಲು ತೆರೆದು, ಅಜ್ಜಿ ತಿಂಡಿಗಳನ್ನು ಕೊಡುವ ದಿವ್ಯ ಗಳಿಗೆಗೆ ನಾವು ಕಾದು ಕೂರುತ್ತಿದ್ದ ನೆನಪಿನಲ್ಲಿ ‘ಇಲ್ಲೇ ತಾತ ಗೋಡೆ ಗಡಿಯಾರ ಹಾಕಿದ್ದು’ ಎಂದೆ. ಬಲಬದಿಯಲ್ಲಿ ನಾನು ಕಡಲೆಕಾಯಿ ಕದ್ದು ತಿಂದು ಸಿಕ್ಕು ಬಿದ್ದ ಕೋಣೆಯೂ ಮಾಯವಾಗಿತ್ತು. ಜೋಡಿಸಿದ್ದ ಕಡಲೆಕಾಯಿಗಳ ಮೂಟೆಯಲ್ಲಿ ಸಣ್ಣದೊಂದು ತೂತು ಮಾಡಿ ಕದ್ದು ತಿಂದು ಮುಗಿಸಿ ಏಳುವಾಗ, ಬ್ಲೌಸ್‌ನ ಹುಕ್ ಹಿಂದಿನ ಚೀಲಕ್ಕೆ ಸಿಕ್ಕಿಕೊಂಡು ಬಿಡಿಸಿಕೊಳ್ಳಲಾಗದೆ ತಾತನ ಕೈಲಿ ಸಿಕ್ಕು ಬಿದ್ದು. . . ಆಗ ಅವಮಾನವೆನಿಸಿದ್ದ ನೆನಪು ಈಗ ತುಟಿಯಂಚಿನಲ್ಲಿ ನಗು ತಂದಿತು.

ಮುಂದಿನ ಕೋಣೆ ಒಂದು ರೀತಿಯಲ್ಲಿ ನಮ್ಮ ಕೆಫೆ ಕಾಫಿ ಡೇ ಆಗಿತ್ತು. ಬೆಳಿಗ್ಗೆ ಸಾಲಾಗಿ ಕೂತು ಅಜ್ಜಿ ಹುರಿದು ಮಾಡು ತ್ತಿದ್ದ ಪುಡಿಯಲ್ಲಿ ದಿನವೂ ಫ್ರೆಷ್ ಆಗಿ ಕಾಫಿ ಕುಡಿಯುತ್ತಿದ್ದ ರೂಮ್ ಅದು. ಆದರೆ ತಾತನಿಗೆ ಪೆರಾಲಿಸಿಸ್ ಆದ ನಂತರ ಅಡುಗೆ ಮನೆಗೆ, ಬಾತ್‌ರೂಮ್‌ಗೆ ಓಡಾಟಕ್ಕೆ ಅನುಕೂಲ ವಾಗಲೆಂದು ಅಲ್ಲಿಯೇ ಒಂದು ಮಂಚ ಹಾಕಿದ್ದರು.

ಸಣ್ಣದಾದ ಆ ಕೋಣೆಯನ್ನು ನೋಡುತ್ತಾ ಇಲ್ಲಿ ಮಂಚವೆಲ್ಲಿ ಸಾಲುತ್ತಿತ್ತು ಎಂದು ನೆನಪಿಸಿಕೊಳ್ಳಲು ಪ್ರಯತ್ನಿಸಿ ಸೋತೆ. ನೆನಪುಗಳಿಗೂ, ಆ ಜಾಗಗಳಿಗೂ ಕನೆಕ್ಷನ್ನೇ ಸಿಗದೇ ಒಂಥರಾ ವಿಷಾದ ಭಾವ ಆವರಿಸಿತು. ಖಾಲಿ ಮೌನವನ್ನು ಮುರಿಯಲೆಂದೋ ಏನೋ ಗೆಳೆಯ ಅವನ ಚಡ್ಡಿ ದೋಸ್ತನ ನನಪಿಸಿಕೊಳ್ಳುವವನ ಹಾಗೆ ‘ನಮ್ಮ ಸುಬ್ರಹ್ಮಣ್ಯಂ ಇದ್ರಲ್ಲ. . . ’ ಎಂದೇನೋ ಮಾತಾಡುತ್ತಿದ್ದ ಮನೆಯವರ ಜೊತೆ.

ಆ ರೂಮ್‌ನ ಎಡಗಡೆಯಲ್ಲಿ ಸಣ್ಣದೊಂದು ಗೋಡೆ ಗೂಡಿನಲ್ಲಿ ನಾಲ್ಕು ದೇವರ ಫೋಟೋಗಳನ್ನು ಇಟ್ಟಿದ್ದರು ಅಜ್ಜಿ. ಮಡಿಹುಡಿ ಇಲ್ಲದ ಸಂಸಾರ ನಮ್ಮದು. ೧೦ ನಿಮಿಷದಲ್ಲಿ ಅಜ್ಜಿಯ ಪೂಜೆ ಮುಗಿಯುತ್ತಿತ್ತು. ಆ ನಂತರ ಇಡೀ ದಿನ ಬೇಯಿಸು, ಬಡಿಸು ಇದೇ ಆಗಿಹೋಗುತ್ತಿತ್ತು. ಅದರ ಪಕ್ಕದಲ್ಲಿ ನಾವೆಲ್ಲರೂ ಸಾಲಾಗಿ ಮಲಗಲೆಂದು ಕಟ್ಟಿಸಿದ್ದ ‘ಹೊಸ ರೂಮ್’ ಇತ್ತು. ಎರಡೂ ರೂಮ್‌ಗಳಿಗೆ ಹೋಗುವ ಬಾಗಿಲಿದ್ದ ಜಾಗದಲ್ಲಿ ಈಗ ಗೋಡೆಯಿತ್ತು. ಅದು ಆಗ ಭೂಮಿಯಗಲ ಕಾಣುತ್ತಿತ್ತಲ್ಲ. . ಅದೂ ಅಂಗೈಯಗಲವಿತ್ತಾ ಮನಸ್ಸು ಕೇಳುವಾಗಲೇ ಅದೊಂದು ಘಟನೆ ನೆನಪಾಯಿತು. ಚಿಕ್ಕಮ್ಮನ ಮದುವೆಯ ನಂತರ ಚಿಕ್ಕಪ್ಪ ಮೊದಲ ಬಾರಿ ಮನೆಗೆ ಬಂದಿದ್ದರು. ಯಾರೋ ‘ಅಳಿಯಂದಿರೇ’ ಎಂದು ಕರೆದಿದ್ದನ್ನು ಕೇಳಿ ಅಲ್ಲೇ ಆಟವಾಡುತ್ತಿದ್ದ ಅಕ್ಕ ‘ಅಳಿಯಾ ಮನೆ ತೊಳಿಯಾ’ ಎಂದುಬಿಟ್ಟಿದ್ದಳು! ಏನು ಅನಾಹುತವಾಗುತ್ತದೋ ಎಂದು ಎಲ್ಲರೂ ಆತಂಕದಲ್ಲಿ ನಿಂತಿರುವಾಗಲೇ ಚಿಕ್ಕಪ್ಪ ‘ಏ ಇಷ್ಟು ದೊಡ್ಡ ಮನೆ ತೊಳಿಯಕ್ಕೆ ನನ್ಕೈಲಿ ಆಗಲ್ಲಮ್ಮ’ ಅಂದು ಎಲ್ಲರನ್ನೂ ನಗಿಸಿದ್ದು ನೆನಪಾಯಿತು. ಮನೆ ಆಗ ನಿಜಕ್ಕೂ ದೊಡ್ಡದಾಗಿ ಇದ್ದಿರಬೇಕು. ಇಲ್ಲವಾದರೆ ಹಾಗೆ ಹೇಳ್ತಿರಲಿಲ್ಲ ಅಲ್ಲವಾ ಎಂದು ಸಮಾಧಾನವಾಯಿತು.

ಅಡುಗೆ ಕೋಣೆಗೆ ಇಣುಕಿದವಳಿಗೆ ಅಜ್ಜಿ ಸೀಮೆ ಎಣ್ಣೆ ಸ್ಟೋವ್ ಇಡುತ್ತಿದ ಕಟ್ಟೆ, ಸೌದೆ ಒಲೆಗಾಗಿ ಕಟ್ಟಿದ್ದ ಗೂಡು ಎಲ್ಲವೂ ಕಾಣಿಸಿ ‘ಹೋ ಅಡುಗೆ ಮನೆ ಮಾತ್ರ ಹಾಗೇ ಇದೆ’ ಎಂದೆ ಸಂಭ್ರಮದಿಂದ. ನನ್ನ ನೆನಪಿನ ಕೊಂಡಿ ಎಲ್ಲಿಯೋ ಒಂದು ಕಡೆಯಾದರೂ ಸಿಕ್ಕಿಕೊಂಡಿದ್ದಕ್ಕೆ ಖುಷಿಯಾಗಿತ್ತು. ಅದೇ ಖುಷಿಯಲ್ಲಿ ಹಿತ್ತಲಿಗೆ ಕಾಲಿಟ್ಟವಳು ಅಲ್ಲಿ ಹೊಸದಾಗಿ ಎದ್ದಿದ್ದ ಮತ್ತೊಂದು ಮನೆಯನ್ನು ನೋಡುತ್ತಾ ಬೆಪ್ಪಾಗಿ ನಿಂತೆ. ಆ ಕಡೆಯಿಂದ ಮನೆಯ ಹಿತ್ತಲಿಗಾದರೂ ಕನೆಕ್ಟ್ ಆಗಬಹುದು ಎಂದುಕೊಂಡಿದ್ದು ಸುಳ್ಳಾಗಿತ್ತು. ‘ಬಾವಿ ಎಲ್ಲಿದೆ’ ಎಂದೆ ಅದರ ಸುತ್ತಲಿನ ಜಾಗವನ್ನು, ಬಾವಿಯ ಅಳತೆಯ ಲೆಕ್ಕಾಚಾರದಿಂದ ಪುನರ್ನಿಮಾಣ ಮಾಡಲು ಪ್ರಯತ್ನಿಸುವವಳಂತೆ. ‘ಬಾವಿ ಮುಚ್ಚಿಸಿಬಿಟ್ವಿ. ಇಲ್ಲೇ ಇದ್ದಿದ್ದು’ ಖಾಲಿ ಜಾಗ ತೋರಿಸುತ್ತಾ ಹೇಳಿದರು. ಆ ಜಾಗದಲ್ಲಿ ಏನನ್ನೂ ಕಟ್ಟದ ಮೇಲೆ ಬಾವಿ ಯಾಕೆ ಮುಚ್ಚಿಸಿದರು ಎಂದು ಅರ್ಥವಾ ಗಲಿಲ್ಲ. ಎದುರಿನ ಮಾವಿನ ಮರ ನೋಡಿ ‘ಮಾವಿನ ಮರ ಇನ್ನೂ ಇದೆ! ’ ಎಂದೆ. ‘ಇಲ್ಲ ಇದು ಆ ಮಾವಿನ ಮರವಲ್ಲ. ಅದು ಕಡಿಸಿಬಿಟ್ವಿ’ ಅಂದರು. ತುಳಸಿಕಟ್ಟೆಯೊಂದು ಉಳಿದಿತ್ತು. ‘ಅದು ಮೊದಲು ಇಲ್ಲಿತ್ತು. ಅಲ್ಲಿಗೆ ಶಿಫ್ಟ್ ಮಾಡಿದ್ವಿ’ ಎಂದರು. ನಾನು ಹಿಂದೆ ಹೊಸದಾಗಿ ಕಟ್ಟಿಸಿದ್ದ ಮನೆಯ ಮುಂದಿನ ಓಣಿಯಲ್ಲಿ ನಡೆದು ಗೇಟಿನ ಬಳಿ ಹೋಗಿ ಸುಧಾರಿಸಿಕೊಳ್ಳುವವಳಂತೆ ನಿಂತೆ. ತಲೆ ಎತ್ತಿದರೆ ರಸ್ತೆಯ ಆ ಬದಿಯಲ್ಲಿ ಕೃಷ್ಣ ಥಿಯೇಟರ್! ನನ್ನ ಬಾಲ್ಯದ ಸಿನಿಮಾ ಹುಚ್ಚಿನ ಪ್ರತೀಕವಾಗಿದ್ದ ಭವ್ಯವಾದ ಥಿಯೇಟರ್ ಈಗ ಕುಗ್ಗಿ ಹೋಗಿ, ನೂರಾರು ಪೋಸ್ಟರ್‌ಗಳನ್ನು ಮೆತ್ತಿಸಿಕೊಂಡು ಕರುಣಾಜನಕವಾಗಿ ಕಾಣಿಸುತ್ತಿತ್ತು. ಇದ್ದಕ್ಕಿದ್ದಂತೆ ‘ಓಹ್ ಇಲ್ಲಿಂದ ಕೃಷ್ಣ ಥಿಯೇಟರ್ ಕಾಣಿಸುತ್ತಿದೆ ಅಂದರೆ ಬಹುಶಃ ಈ ಜಾಗ ಹೊಸ ರೂಮ್‌ನ ಭಾಗವಾಗಿದ್ದಿರಬೇಕು’ ಎಂದು ಸಾವಿರಾರು ವರ್ಷಗಳ ಹಿಂದಿನ ಊರುಗಳನ್ನು ಅಗೆಯುವಾಗಿನ ಪುರಾತ್ತತ್ವ ಶಾಸ್ತ್ರಜ್ಞರಂತೆ ಲೆಕ್ಕ ಹಾಕುತ್ತಾ ನಿಂತೆ. . .

 

Tags: