Mysore
25
scattered clouds

Social Media

ಭಾನುವಾರ, 15 ನವೆಂಬರ್ 2026
Light
Dark

ಕಾರ್ಡೀಲಿಯಾ ಸಮುದ್ರಯಾನ

ಭಾರತಿ ಬಿ.ವಿ.

ಕೇರಳಂ ರಾಜ್ಯದ ಕೊಚ್ಚಿ ಸಾಗರಿಕಾ ಬಂದರಿಗೆ ಕಾಲಿಟ್ಟಾಗ ಅಲ್ಲಿನ ಜನಸಂದಣಿ ಕಂಡು ಬೆಚ್ಚಿಬಿದ್ದಿದ್ದೆ! ೨೫೦೦ ಜನರಿಗೆ ಈ ಕಾರ್ಡೀಲಿಯಾ ಹಡಗು ಎಲ್ಲಿ ಸ್ಥಳಾವಕಾಶ ಮಾಡುತ್ತದೋ ಅನ್ನಿಸಿತ್ತು. ಉದ್ದುದ್ದ ಕ್ಯೂಗಳಲ್ಲಿ ನಿಂತು ಇಮಿಗ್ರೇಷನ್ ಮುಗಿಸಿದ್ದಾಯಿತು. ನಮ್ಮ ಕ್ಯಾಬಿನ್ ೫ನೇ ಡೆಕ್‌ನಲ್ಲಿತ್ತು. ಹೋಗಿ ನೋಡಿದರೆ ಸಣ್ಣ ಕ್ಯಾಬಿನ್. ನಡೆದರೆ ಎಲ್ಲೆಲ್ಲೂ ಗೋಡೆಯೇ ಅಡ್ಡ ಬರುತ್ತಿತ್ತು! ಅಲ್ಲಿದ್ದ ಸ್ಟೂಲಿನ ಮೇಲೆ, ಟಿವಿ ಸ್ಟ್ಯಾಂಡ್ ಮೇಲೆಲ್ಲ ಸೂಟ್ಕೇಸ್ ಗಳನ್ನು ಇಟ್ಟಿದ್ದಾಯಿತು. ಮಿನಿ ಬಾತ್ರೂಮ್ ಕಮ್ ಟಾಯ್ಲೆಟ್‌ನಲ್ಲಿ ಐದೂಮುಕ್ಕಾಲು ಅಡಿಯ ದೇಹವನ್ನು ಹೇಗೆ ತುರುಕಿಸುವುದಪ್ಪಾ ಅಂತ ಕಿರಿಕಿರಿಯಾದರೂ ಯಥೇಚ್ಛ ಊಟ, ಡ್ರಿಂಕ್ಸ್, ಹಾಡು ಅಂತ ಮನಸ್ಸು ಸರಿದೂಗಿಸಿಕೊಂಡಿತು. ಅಷ್ಟರಲ್ಲಿ ಮಂಚದ ಆ ಪಕ್ಕದಲ್ಲಿದ್ದ ಕಿಟಕಿಯ ಪರದೆ ಕಾಣಿಸಿತು. instagramನಲ್ಲಿ ಜೋಡಿಗಳು ಕಿಟಕಿಯಲ್ಲಿ ಕುಳಿತು ಕಾಫಿ ಹೀರುವ ವಿಡಿಯೋಗಳನ್ನು ನೋಡಿದ್ದೆ. ‘ಆಹಾ ನಾಳೆ ಬೆಳಿಗ್ಗೆ ಇಲ್ಲಿ ಕೂತೇ ಕಾಫಿ ಕುಡೀತೀನಿ’ ಎಂದು ಪರದೆ ಸರಿಸಿದರೆ ಆ ಕಡೆ ದೊಡ್ಡದೊಂದು ಜೀವರಕ್ಷಕ ದೋಣಿಯನ್ನು ಸಮುದ್ರವನ್ನೇ ಮರೆಮಾಚುವಂತೆ ಕಟ್ಟಿದ್ದು ಕಾಣಿಸಿ ಎದೆ ಒಡೆದಂತಾಯಿತು! ಕ್ಯಾಬಿನ್ ಬುಕ್ ಮಾಡುವಾಗ ಕಿಟಕಿ ಇರೋದು ತಗೊ, ಇಲ್ಲಾಂದ್ರೆ ಉಸಿರುಗಟ್ಟಿದಂತಾಗಿ ಸತ್ತೋಗ್ತೀನಿ ಅಂದಿದ್ದೆ. ಈಗ ಕಿಟಕಿಯಿಂದ ಬಗ್ಗಿ ನೋಡಿದರೆ ಸಮುದ್ರ ಹಡಗಿನ ತಳದಲ್ಲಿ ಮಾತ್ರ ಚೂರು ಕಾಣುತ್ತಿತ್ತು. ಸಮುದ್ರ ಪೂರ್ತಿಯಾಗಿ ಕಾಣೋದೆಲ್ಲ ತುಂಬ ಬೆಲೆಯವಂತೆ. ಆದರೆ ಇದು ಹೀಗಿರುತ್ತೆ ಅಂತ ಯಾರಿಗೆ ಗೊತ್ತಿತ್ತು’ ಅಂತ ಗಂಡ ಕೈ ತೊಳಕೊಂಡ.

ಸರಿ ಈ ಕಿಟಕಿಯ ಮನೆ ಹಾಳಾಗಲಿ ಅಂತ ಅಶಾಂತಳಾಗಿ ಮೇಲಿನ ಡೆಕ್‌ಗೆ ಹೋಗಿ ಕುಳಿತೆ. ಹಡಗು ಹೊರಟಿತು. ಪೋರ್ಟ್‌ನಿಂದ (೨೨ ನಾಟಿಕಲ್ ಮೈಲಿ?…) ಸಾಗುವವರೆಗೆ ಆಲ್ಕೊಹಾಲ್ ಕೊಡುವಂತಿಲ್ಲವಂತೆ. ನಾನು ಅಲ್ಲಿಯವರೆಗೆ ಕಾದು ಒಂದು ಗ್ಲಾಸ್ ವೈನ್ ಕುಡಿದ ನಂತರ ಸ್ವಲ್ಪ ಶಾಂತಳಾದೆ. ಊಟಕ್ಕೆ ಹೋಗೋಣವೆಂದು ಎದ್ದರೆ ಪೂರ್ತಿ ತೂರಾಡುತ್ತಿದ್ದೇನೆ! ‘ಥೋ ಜುಜುಬಿ ವೈನ್ ಕುಡಿದು ಕೂಡಾ ಹೀಗೆ ತೂರಾಡಿದರೆ ಏನು ಗತಿ ಶಿವಾ’ ಎಂದು ಅವಮಾನವಾಯಿತು. ಅಷ್ಟರಲ್ಲಿ ಜೊತೆಗಿದ್ದವರು ‘ಹಡಗು ತುಂಬ ಅಲ್ಲಾಡ್ತಿದೆ ಅಲ್ವಾ’ ಅಂದರು. ಆಗ ಅರ್ಥವಾಯಿತು ನಾನಲ್ಲ ಅಲ್ಲಾಡುತ್ತಿರುವುದು, ಇಡೀ ಹಡಗೇ ಅಲ್ಲಾಡುತ್ತಿದೆ ಎಂದು! ಆ ದಿವ್ಯಕ್ಷಣದಲ್ಲಿ ‘ಭಾರತಿ ೬ ದಿನ ಹೀಗೇ ಅಲುಗಾಡುತ್ತಾ ಸಮುದ್ರದ ಮೇಲೆಯೇ ಇರಬೇಕಲ್ಲ’ ಅನ್ನುವ ಯೋಚನೆ ಹುಟ್ಟಿ ತಳಮಳ ಶುರುವಾಯಿತು! ಟ್ರಿಪ್ ಹೊರಟಾಗ ದೇವರಾಣೆಗೂ ಹಡಗು ಸಮುದ್ರದ ಮೇಲೆ ತೇಲುತ್ತದೆ ಮತ್ತು ನಾವು ಅದರೊಳಗೇ ಇರಬೇಕು ಎನ್ನುವುದನ್ನೇ ಮರೆತುಬಿಟ್ಟಿದ್ದೆ! ಅಂಥ ಪ್ರಮುಖ ವಿಷಯವೊಂದನ್ನು ಹೇಗೆ ಮರೆತಿದ್ದೆ ಅಂತ ಈಗಲೂ ಆಶ್ಚರ್ಯವಾಗುತ್ತದೆ.

ನನಗೆ ಈಜುಕೊಳದ ನೀರಿನ ತೇಲು ಅಲುಗಾಟವೇ ಅಪಾರ ಆತಂಕವುಂಟು ಮಾಡುತ್ತದೆ. ಸಣ್ಣಪುಟ್ಟ ಮಕ್ಕಳೆಲ್ಲ ಈಜುತ್ತಿರುವಾಗ ನಾನು ಜೀವನ್ಮರಣದ ಪ್ರಶ್ನೆ ಎದುರಾದ ಹಾಗೆ ಅರಚುತ್ತಿರುತ್ತೇನೆ! ಅಂಥ ನಾನು ಸಮುದ್ರದ ಮೇಲೆ ತೇಲಬೇಕು ಅನ್ನುವುದನ್ನೇ ಮರೆತಿದ್ದು ಈ ಶತಮಾನದ ವಿಸ್ಮಯಗಳಲ್ಲಿ ಒಂದು. ಸ್ಟಾರ್ ಕ್ರೂಸ್‌ನವರ ಹಡಗು ತುಂಬ ದೊಡ್ಡದಿತ್ತು. ಸ್ವಲ್ಪವೂ ಅಲುಗಾಡುತ್ತಿರಲಿಲ್ಲ. ಇದೂ ಹಾಗೇ ಇರುತ್ತದೆ ಎಂದು ಕಲ್ಪಿಸಿಕೊಂಡು ಯಾಮಾರಿದ್ದೆ ಅನ್ನಿಸುತ್ತದೆ. ಕಣ್ಣು ಹಾಯಿಸಿದರೆ ಎತ್ತೆತ್ತಲೂ ಸಮುದ್ರವೇ. ಯಾವುದೋ ಪಂಜರದಲ್ಲಿ ಸಿಕ್ಕಿಬಿದ್ದಂತೆ ಭಾಸವಾಯಿತು. ಅಲ್ಲಿಂದಾಚೆಗೆ ನೆಲದ ಮೇಲೆ ಯಾವಾಗ ಕಾಲಿರಿಸುತ್ತೇನೋ ಅನ್ನುವುದೇ ಜಪವಾಯಿತು.

ರಾತ್ರಿ ರೂಮಿಗೆ ಬಂದು ಮಲಗಿದರೆ ಉಯ್ಯಾಲೆಯ ಮೇಲೆ ಮಲಗಿದ ಹಾಗಾಯಿತು. ಸಾಲದ್ದಕ್ಕೆ ಏನೇನೋ ಸದ್ದುಗಳು ಕೇಳಿಸಲು ಶುರುವಾಯಿತು! ಎದ್ದು rescue boat ಏನಾದರೂ ತೆಗೆಯುತ್ತಿದ್ದಾರಾ ಅಂತ ಕಿಟಕಿಯಲ್ಲಿ ಬಗ್ಗಿ ನೋಡಿದೆ, ಸಮುದ್ರದಲ್ಲಿ ಟೈಟಾನಿಕ್ ಥರ ಹಲಗೆಗಳು ತೇಲಿಹೋಗ್ತಿದಾವಾ ಅಂತ ನೋಡಿದೆ! ಹೀಗೆ ಎಷ್ಟೋ ಹೊತ್ತಿನ ತನಕ ನೋಡಿ ಕೊನೆಗೆ ಸಾಯಲಿ ಹೋಗತ್ಲಾಗೆ ಅಂತ ಮಲಗಿದರೂ ಬಹಳ ಹೊತ್ತಿನ ನಂತರ ನಿದ್ರೆ ಬಂತು.

ಬೆಳಿಗ್ಗೆ ಎದ್ದು ಡೈನಿಂಗ್ ಹಾಲ್‌ಗೆ ಹೋಗಿ ಅಪ್ಪ, ನಾನು ಲೀಟರ್‌ಗಟ್ಟಲೆ ಕಾಫಿ ಕುಡಿದೆವು. ಮಧ್ಯಾಹ್ನದ ಊಟಕ್ಕಂತೂ ರಾಶಿ ಐಟಂಗಳು. ಸಂಜೆ ಹೈ ಟೀಗೆ ೧೦ ಖಾದ್ಯಗಳು, ರಾತ್ರಿಗೆ ಮತ್ತೆ ೨೦-೨೫ ಖಾದ್ಯಗಳು. ಯಾವುದಕ್ಕೂ ಹೆಚ್ಚುವರಿ ಹಣ ಕೊಡಬೇಕಿಲ್ಲ. ಎಲ್ಲವೂ ಪ್ಯಾಕೇಜ್ ಹಣದಲ್ಲಿಯೇ ಸೇರಿತ್ತು. ೫-೬ನೆಯ ಡೆಕ್‌ನಲ್ಲಿ ಸಾಕಷ್ಟು ಅಂಗಡಿಗಳು, ಕ್ಯಾಸಿನೋ, ಥಿಯೇಟರ್ ಎಲ್ಲವೂ ಇದ್ದವು. ಸಂಜೆಯಾದರೆ ಲೈವ್ ಹಾಡಿನ ಕಾರ್ಯಕ್ರಮ ಶುರುವಾಗುತ್ತಿತ್ತು. ಅಪ್ಪುವಿನ ಬೊಂಬೆ ಹೇಳುತೈತೆ ಹಾಡಿದಾಗ ಕನ್ನಡಿಗರಿಗೆಲ್ಲ ರೋಮಾಂಚನ! ಬಾಲಿವುಡ್ ಡ್ಯಾನ್ಸ್, ಹೌಸಿ ಹೀಗೆ ರಾಶಿ ಕಾರ್ಯಕ್ರಮಗಳು. ತೆಳುದೇಹದ, ಚಪ್ಪಟೆ ಹೊಟ್ಟೆಯ ಸಣ್ಣಪುಟ್ಟ ಹುಡುಗ ಹುಡುಗಿಯರು ಅದ್ಭುತವಾಗಿ ನೃತ್ಯ ಮಾಡಿದರು. ಮೇಲಿನ ಡೆಕ್‌ನಲ್ಲಿ ಈಜುಕೊಳ. ಜನರೆಲ್ಲ ಖುಷಿಯಲ್ಲಿ ಸ್ವರ್ಗದಲ್ಲಿರುವಂತೆ ಓಡಾಡುತ್ತಿದ್ದರು. ನಾನೂ ಎಲ್ಲವನ್ನು ತೂಗಾಡುತ್ತ ಮಾಡುತ್ತಿದ್ದೆನಾದರೂ ಮುಗಿಯದ ನೆಲದ ಕನಸು.

ಮಾಲ್ಡೀವ್ಸ್‌ನಲ್ಲಿ ಸಮುದ್ರದ ಮಧ್ಯವೇ ಹಡಗನ್ನು ನಿಲ್ಲಿಸಿ, ಸಣ್ಣ ಬೋಟಿನಲ್ಲಿ ನಮ್ಮನ್ನೆಲ್ಲ ದಡಕ್ಕೆ ಕರೆದೊಯ್ಯುತ್ತಾರೆ ಅಂದಾಗ ಇದೊಂದು ಬಾಕಿಯಿತ್ತು ಅಂದುಕೊಂಡೆ. ಆ ಬೋಟೋ ೭೦ ಜನರನ್ನು ತುಂಬಿಕೊಂಡ ನಂತರ ಅಲುಗಾಡುತ್ತ ಹೊರಟಾಗ, ಟೈಟಾನಿಕ್‌ನ ಜಾಕ್ ರೀತಿ ಸಮುದ್ರದೊಳಗೆ ಮುಳುಗುತ್ತದೇನೋ ಅನ್ನಿಸುವಷ್ಟು ಭಯ ಹುಟ್ಟಿಸಿತು. ಮಾಲ್ಡೀವ್ ನ ನೆಲದ ಮೇಲೆ ಕಾಲಿಟ್ಟಾಗ ಅದೇನು ಸಂಭ್ರಮವೋ. ಕೊಲಂಬೋ ದಲ್ಲಿ ಮತ್ತೆ ಬೋಟ್ ಹತ್ತಬೇಕಲ್ಲ ಅನ್ನುವ ಆತಂಕದಲ್ಲಿ ಹಡಗಿನಾಚೆ ಬಂದರೆ ಸೀದಾ ನೆಲದ ಮೇಲಿದ್ದೇವೆ ಅಂತ ಅದೆಷ್ಟು ಖುಷಿಯಾಗಿತ್ತು ಅಂತೀರಿ ನನಗಂತೂ. ಅಂತೂ ೬ ದಿನವೂ ಡ್ಯಾನ್ಸ್ ನೋಡುವಾಗಲೂ, ಹಾಡು ಕೇಳುವಾಗಲೂ, ಡೈನಿಂಗ್ ಹಾಲ್‌ನಲ್ಲಿ ವೇಟರ್ ಹುಡುಗ-ಹುಡುಗಿಯರು ಸಾಲಾಗಿ ಜೋಡಿಸಿಟ್ಟಿದ್ದನ್ನು ದಿನಕ್ಕೆ ೪ ಹೊತ್ತು ತಿನ್ನುವಾಗಲೂ ಹಡಗು ಅಲುಗಾಡುವ, ಮುಳುಗುವ ಭ್ರಮೆಯೇ ಈ ಪೂಷಣಿಕೆ ಪುಕ್ಕಲಿಗೆ! ಒಂದು ದಿನ ಕಿಟಕಿಯ ಪಕ್ಕ ಕುಳಿತು ಪುಸ್ತಕ ಓದುತ್ತಿರುವಾಗ ಬಿಳಿ ಯೂನಿಫಾರ್ಮ್ ಧರಿಸಿದವನೊಬ್ಬ ಹೊರಗೆ ಓಡಾಡುತ್ತಿದ್ದರೆ ಅಯ್ಯೋ ಹಡಗಿಗೆ ಏನಾದರೂ ಸಮಸ್ಯೆಯಾಗಿರಬಹುದಾ ಅಂತ ಬೆವರುವ ಮಟ್ಟಿಗೆ ಆತಂಕಗೊಂಡಿದ್ದೆ ಅಂದರೆ ಲೆಕ್ಕ ಹಾಕಿ. ಅಂತೂ ಪ್ರವಾಸ ಮುಗಿಯುವ ದಿನ ಬಂತು. ಅಷ್ಟು ದಿನವೂ ಸ್ವಲ್ಪವು ಹುಬ್ಬು ಗಂಟಿಕ್ಕದೆ ಸರ್ವ್ ಮಾಡುವ ಹುಡುಗ-ಹುಡುಗಿಯರು ಮಧ್ಯಾಹ್ನದ ಹೊತ್ತಿಗೆ ಊಟ ಮುಗಿಸುವ ತರಾತುರಿಯಲ್ಲಿದ್ದರು. ನಡುವೆಯೇ ಒಬ್ಬ ವೇಟರ್ ಹುಡುಗ ಬಂದು ‘ನಮ್ಮ ಆತಿಥ್ಯ ಹೇಗಿತ್ತು’ ಎಂದು ವಿನಯದಿಂದ ವಿಚಾರಿಸಿದ. ನಾನು ‘ತುಂಬ ಚೆನ್ನಾಗಿತ್ತು ಕಣ್ರಪ್ಪ. ಅದೆಷ್ಟು ತಾಳ್ಮೆ ನಿಮಗೆ! ಇನ್ನು ನೀವೆಲ್ಲ ಮನೆಗೆ ಹೋಗುವುದಾ? ಅಂದೆ. ‘ಇಲ್ಲ ಇವತ್ತು ಸಂಜೆಯೇ ಮತ್ತೆ ಮುಂದಿನ ಟ್ರಿಪ್ ಶುರುವಾಗುತ್ತದೆ.

ನಮಗೆ ೬ ತಿಂಗಳು ದಿನವೂ ಕೆಲಸವಿರುತ್ತದೆ. ನಂತರ ೨ ತಿಂಗಳು ರಜೆ ತೆಗೆದುಕೊಳ್ಳಬಹುದು’ ಎಂದ. ‘ವಾರದ ರಜೆ?’ ಅಂದೆ. ‘ಅದೆಲ್ಲ ಇರೋದಿಲ್ಲ. ದಿನವೂ ಕೆಲಸ ಮಾಡಬೇಕು’ ಅಂದ. ಅವನು ಸಿಕ್ಕಿಂನವನಂತೆ. ಸಂಸಾರವನ್ನು ನೋಡಲು, ನೆಲವನ್ನು ನೋಡಲು ೬ ತಿಂಗಳು ಕಾಯಬೇಕು!

ಚೆನ್ನಾಗಿ ತಿಂದುಂಡು ಸುಖವಾಗಿದ್ದರೂ ಯಾವಾಗ ನೆಲಕ್ಕೆ ಇಳಿಯುತ್ತೇನೋ ಎಂದು ಒದ್ದಾಡುತ್ತಿದ್ದ ನನಗೆ ಕಪಾಳಕ್ಕೆ ಯಾರೋ ಹೊಡೆದಂತಾಯಿತು. ನಾವೆಲ್ಲ ಹಡಗಿನಿಂದ ಇಳಿದು ಕೊಚ್ಚಿನ್‌ನಲ್ಲಿ ಇಮಿಗ್ರೇಷನ್ ಕ್ಯೂನಲ್ಲಿ ನಿಂತಾಗ ಹಡಗಿನ ಸಿಬ್ಬಂದಿ ಪ್ರತ್ಯೇಕ ಸಾಲಿನಲ್ಲಿ ನಿಂತಿದ್ದರು. ಸಿಗುವ ಒಂದೆರಡು ಗಂಟೆಗಳಲ್ಲಿ ಹೊರಬಂದು ಏನು ಮಾಡುತ್ತಾರೋ ಗೊತ್ತಿಲ್ಲ. ದಿನವೂ ತೂಗಾಡುವ ಹಡಗಿನಲ್ಲಿಯ ಬದುಕುವವರು ನೆಲದ ಸ್ಪರ್ಶಕ್ಕಾಗಿ ಹಾತೊರೆಯುತ್ತಾರೇನೋ. ಮತ್ತೆ ಸಂಜೆಗೆ ಅದೇ ಹಡಗು, ಅದೇ ಸಮುದ್ರ, ಮತ್ತೊಂದು ಬ್ಯಾಚ್ ಜನರು. ಹೊತ್ತೊತ್ತಿಗೆ ೨೫-೩೦ ಖಾದ್ಯಗಳ ಅಡುಗೆ ತಯಾರಿಸು, ನಗುಮುಖದಲ್ಲಿ ವಿಚಾರಿಸು, ಕೇಳಿದ್ದನ್ನು ತಂದುಕೊಡು ಅಷ್ಟೇ ಬದುಕು. ಯಾಕೋ ಮನಸ್ಸು ಆರ್ದ್ರವಾಯಿತು.

” ನನಗೆ ಈಜುಕೊಳದ ನೀರಿನ ತೇಲು ಅಲುಗಾಟವೇ ಅಪಾರ ಆತಂಕವುಂಟು ಮಾಡುತ್ತದೆ. ಅಂಥ ನಾನು ಸಮುದ್ರದ ಮೇಲೆ ತೇಲಬೇಕಲ್ಲ ಅನ್ನುವುದನ್ನೇ ಮರೆತಿದ್ದು ಈ ಶತಮಾನದ ವಿಸ್ಮಯಗಳಲ್ಲಿ ಒಂದು!”

 

 

Tags:
error: Content is protected !!