ಅಕ್ಷತಾ
ಕಂಬಳ ಆರಂಭದ ಹಿಂದಿನ ದಿನ ೧೫೦ ಜೋಡಿಗಳು ಪುತ್ತೂರಿನಿಂದ ಹೊರಟು ಕುಶಾಲನಗರದಲ್ಲಿ ವಿಶ್ರಮಿಸಿ ನಂತರ ಮೈಸೂರಿಗೆ ತಲುಪಬೇಕಿತ್ತು. ಹೊರಡುವ ಸಂಭ್ರಮವನ್ನೊಮ್ಮೆ ನೋಡೋಣವೆಂದು ಪುತ್ತೂರಿನ ಮೈದಾನಕ್ಕೆ ಬಂದರೆ ಎರಡು ಟೆಂಪೋ ಬಿಟ್ಟರೆ ಖಾಲಿ ಬಯಲು. ಆದದ್ದಾಗಲಿಯೆಂದು ಟೆಂಪೋ ಬಳಿ ಬಂದರೆ ಕೋಣವೊಂದು ಒಳಗಿನಿಂದ ತಲೆಯಾಡಿಸಿ ಹತ್ತಿರ ಕೂಗಿತು. ‘ಏನು ಇದರ ಹೆಸರು?’ ಕೆಳಗಿದ್ದವರಲ್ಲಿ ಕೇಳಿದಾಗ ‘ಭೋಜ‘ ಎಂದುತ್ತರ. ‘ಭೋಜಾ….ಓ ಭೋಜ’ ಕರೆದರೆ ಕೊಂಡಾಟದಲ್ಲಿ ಕೈ ನೆಕ್ಕಿದಾಗ ತಲೆ ಸವರಿದೆ.
‘ಛೇ! ೧೫೦ ಜೋಡಿ ಕೋಣಗಳು ಹೊರಡುವ ಸಂಭ್ರಮ ನೋಡಬೇಕೆಂದು ಬಂದ್ರೆ ಬರೀ ಒಂದು ಜೊತೆ’ ಎಂದುಕೊಂಡು ಬಸ್ ಹತ್ತಿ ಟ್ರಾಫಿಕ್ ಹರಸಾಹಸದಲ್ಲಿ ಮೈಸೂರು ಸೇರಿದಾಗ ಸಂಜೆಯಾಗಿತ್ತು. ಒಂದು ಸ್ಟ್ರಾಂಗ್ ಕಾಫಿ ಕುಡಿದು ಸಾತಗಳ್ಳಿ ಕಂಬಳದ ಟ್ರ್ಯಾಕ್ ಕಡೆ ಹೊರಟೇಬಿಟ್ಟೆ. ಉಳಿದ ಜೋಡಿಗಳು ಮೈಸೂರು ತಲುಪಿದ್ವಾ ಅನ್ನೋ ಕುತೂಹಲ ಬೇರೆ ಇತ್ತಲ್ಲ ಹೇಗೂ!
ಇದು ಮಂಗ್ಳೂರೋ, ಮೈಸೂರೋ? ಎಂಬಂತೆ ಕರಾವಳಿಯ ಕೆಲ
ಕಟ್ಟುಮಸ್ತಿನ ಹೈದರು ಟ್ರ್ಯಾಕ್ ಅಕ್ಕಪಕ್ಕ ಓಡಾಡುತ್ತಿದ್ದರೆ, ಇನ್ನೂ ಕೆಲವರು ಕೋಣಗಳನ್ನು ಮೀಯಿಸುತ್ತಾ ತಾವೂ ಸ್ನಾನ ನಿರತರು. ಸುತ್ತಲೂ ಕಣ್ಣು ಹಾಯಿಸಿದೆ. ಮೂರೂವರೆ ಸಾವಿರ ಜನರು ಕುಳಿತು ನೋಡುವಂತಹ ಆಸನ ವ್ಯವಸ್ಥೆಯಿತ್ತು. ನಮ್ಮೂರ ಕಂಬಳ ಯೋಚಿಸಿ ನಗು ಬಂತು. ಅಪ್ಪ, ಚಿಕ್ಕಪ್ಪರೊಡನೆ ಕಂಬಳಕ್ಕೆ ಹೋಗಿದ್ದಾಗ ನಿಂತು ನೋಡಿದ್ದೇ ಹೆಚ್ಚು!
ವಿಶಾಲ ವೇದಿಕೆಯ ಒಂದು ಬದಿಯಲ್ಲಿ ತೋರಣ ಕಟ್ಟುತ್ತಿದ್ದ ಮಂದಿಯಾದರೆ ಇನ್ನೊಂದು ಬದಿಯಲ್ಲಿ ಸಣ್ಣ ಸಣ್ಣ ಟೆಂಟುಗಳು, ಅದರೊಳಗಿನಿಂದ ಹುರುಳಿಕಾಳಿನ ಘಮ! ಕೋಣಗಳ ವಾಸ್ತವ್ಯ ಬಿಡಾರದಿಂದ ಈ ಪರಿಮಳ ಬರುತ್ತಿದೆಯೆಂದರೆ ಕೋಣಗಳು ಬಂದಿರೋದು ಪಕ್ಕಾ ಆಯ್ತು. ಅಲ್ಲಲ್ಲಿ ನಿಂತಿದ್ದ ಯುಟ್ಯೂಬರ್ಸ್, ವ್ಲಾಗರ್ಸ್ ನಡುವೆ ದಾರಿ ಮಾಡಿಕೊಂಡು ಕೋಣಗಳ ಟೆಂಟ್ ಬಳಿ ಹೋದರೆ ಕರೆದುಕೊಂಡು ಬಂದವರೂ ಕೋಣಗಳೂ ಪ್ರಯಾಣದ ಸುಸ್ತನ್ನು ಸಸ್ತಾ ಮಾಡಿಕೊಳ್ಳುವುದರಲ್ಲೇ ತಲ್ಲೀನ.
ಪ್ರತಿಯೊಂದು ಡೇರೆ ಬಳಿಯೂ ಇಪ್ಪತ್ತು ಮೂವತ್ತು ಮಂದಿ ಸುತ್ತುವರಿದು ಕೋಣಗಳ ಕುರಿತು ಕೇಳುತ್ತಿದ್ದಾಗ ಆಯಾಸದ ನಡುವೆಯೂ ಕೋಣಗಳ ಮಾಲೀಕರದ್ದು ಸಮಾಧಾನದ ವಿವರಣೆ. ಇದೇ ಮಂಗ್ಳೂರಿನಲ್ಲೇನಾದ್ರೂ ಕೇಳ್ತಿದ್ರೆ!? ಏನೋ ಒಂದು ಆಗ್ತಿತ್ತು ಬಿಡಿ. ಎಲ್ಲಾ ಟೆಂಟ್ಗಳನ್ನು ನೋಡಿ ಮುಂದೆ ಹೋಗ್ತಿದ್ದಾಗ ‘ಸ್ವಲ್ಪ ದೂರದಿಂದ ಹೋಗಿ, ಆ ಕೋಣ ಹಾಯುತ್ತೆ’ ಯಾರೋ ಒಬ್ಬರು ಹೇಳಿದ್ದು ಕೇಳಿ ತುಸು ಮುಂದೆ ಬಂದು ನೋಡಿದೆ. ಮೂಗಿಗೆ ನಾಲ್ಕು ಮೂಗುದಾರಗಳಿಂದ ಎಳೆದು ಕಟ್ಟಿದ ಕರ್ರಗಿನ ಕೋಣ ತಲೆ ಕೆಳಗೆ ಹಾಕಿ ಅಡಿಗಣ್ಣಿನಿಂದ ನೋಡುತ್ತಿತ್ತು. ‘ಇದು ಜೋರಿನ ಕೋಣ.ಹತ್ರ ಬರ್ಬೇಡಿ, ಹೇಗೆ ರಿಯಾಕ್ಟ್ ಮಾಡುತ್ತೆ ಹೇಳೋಕಾಗಲ್ಲ’ ಸ್ವರ ಎಲ್ಲೋ ಕೇಳಿದ ಹಾಗಿದೆಯಲ್ಲ ಎಂದು ತಿರುಗಿ ನೋಡಿದರೆ ಪುತ್ತೂರಿನಲ್ಲಿ ಸಿಕ್ಕ ಅದೇ ವ್ಯಕ್ತಿ! ‘ಇದು ಭೋಜ?’ ಸಂಶಯದಿಂದ ಕೇಳಿದೆ. ‘ಹೌದು…. ಹೇಗೆ ಗೊತ್ತಾಯ್ತು?’ ಆತನ ಪ್ರಶ್ನೆ ನನ್ನ ತನಕ ತಲುಪಲಿಲ್ಲ.
ಭೋಜನನ್ನೇ ಸೂಕ್ಷ್ಮವಾಗಿ ನೋಡಿದೆ. ಊರಿನಲ್ಲಿ ಆರಾಮಾಗಿ ನಿಂತಿದ್ದವನಿಗೆ ಇಲ್ಲಿ ನಾಲ್ಕು ಹಗ್ಗಗಳು! ಸ್ವಲ್ಪ ಬೇಸರವೆನಿಸಿತು. ಒಲ್ಲದ ಬದುಕಿಗೆ ಒತ್ತಾಯದಿಂದ ತಳ್ಳುವ ಮನುಷ್ಯನ ಪ್ರವೃತ್ತಿಯ ಸೂಚ್ಯದಂತೆ ಹಗ್ಗಗಳು ಭಾಸವಾಯಿತು. ಎಳೆದು ಕಟ್ಟಿದ ಹಗ್ಗದ ಬಿಗುವಿಗೆ ತಲೆ ಎತ್ತಲಾರದ ಅಸಾಧ್ಯನೋವು, ಕಣ್ಣಿನಿಂದ ಜಾರುತ್ತಿದ್ದ ಹನಿಗಳ ನಡುವೆಯೂ ಕಂಡವರ ಕೆಮರಾಗಳಿಗೆ ಒಂದೊಳ್ಳೆ ಪೋಸ್ ಕೊಡಲು ಪ್ರಯತ್ನಿಸುತ್ತಿದ್ದ. ‘ಆ ಕೋಣ ನೋಡು ಒಳ್ಳೆ ರಾಜನಂತಿದ್ದಾನೆ’ ಭೋಜನನ್ನು ತಮ್ಮ ಪುಟ್ಟ ಮಗನಿಗೆ ತೋರಿಸಿ ಹೇಳುತ್ತಿದ್ದರು. ತನಗೆ ಬೇಕಾದಂತೆ ಪ್ರೀತಿಯನ್ನೂ ಅಕ್ಕರೆಯನ್ನೂ ತೋರಿಸುವ ಸ್ವಾತಂತ್ರ್ಯ ಈಗಿರಲಿಲ್ಲ ರಾಜನಾದ ಭೋಜನಿಗೆ.
ಭೋಜ……ರಾಜ!? ಅಲ್ಲಿನ ಭೋಜನಿಗೆ ಇಲ್ಲಿ ರಾಜನ ಟ್ರೀಟು. ಆದರೆ, ಅವನು ಪೂರ್ತಿ ಬಂಽ. ಭೋಜನಿಗೇನಾದರೂ ಮಾತು ಬರುತ್ತಿದ್ದರೆ? ಆ ಕ್ಷಣಕ್ಕನ್ನಿಸಿತು. ‘ಭೋಜಾ……‘ ನಿಂತಲ್ಲಿಂದಲೇ ಕೂಗಿದೆ. ಭಾರವಾದ ತಲೆಯನ್ನೆತ್ತಿ ನಾಲಿಗೆ ಚಾಚಿದ ಭೋಜ
” ಭೋಜನನ್ನೇ ಸೂಕ್ಷ್ಮವಾಗಿ ನೋಡಿದೆ. ಊರಿನಲ್ಲಿ ಆರಾಮಾಗಿ ನಿಂತಿದ್ದವನಿಗೆ ಇಲ್ಲಿ ನಾಲ್ಕು ಹಗ್ಗಗಳು! ಸ್ವಲ್ಪ ಬೇಸರವೆನಿಸಿತು. ಒಲ್ಲದ ಬದುಕಿಗೆ ಒತ್ತಾಯದಿಂದ ತಳ್ಳುವ ಮನುಷ್ಯನ ಪ್ರವೃತ್ತಿಯ ಸೂಚ್ಯದಂತೆ ಹಗ್ಗಗಳು ಭಾಸವಾಯಿತು.”




