Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮುಂಗಾರಿಗೆ ಯಾಕೆ ಈ ಭಾರಿ ಇಷ್ಟು ತರಾತುರಿ ?

farmers

ಬಿ.ಆರ್.ಜೋಯಪ್ಪ

ಇತ್ತೀಚಿನ ವರ್ಷಗಳಲ್ಲಿ ‘ಸೋಮಾರಿತನ’ ತೋರುತ್ತಿದ್ದ ಮುಂಗಾರು ಈ ಸತಿ ಮಾತ್ರ ಮೇ ತಿಂಗಳಲ್ಲೇ ‘ನಾ ರೆಡಿ’ ಅಂತ ಸುರಿಯಿತು. ಅದೂ ಚಂಡಮಾರುತದೊಡಗೂಡಿ! ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದ ರೈತರು ಕಂಗಾಲಾಗಿದ್ದಾರೆ. ಜನರ ಗಡಿಬಿಡಿ, ಪರದಾಟ, ವೃದ್ಧರ ಪರಪರ, ಪಿರಿಪಿರಿ. . . ಯಾವ ಕೆಲಸ ಮೊದಲು, ಯಾವುದು ನಂತರ, ಹಬ್ಬ, ಜಾತ್ರೆ, ಪೂಜೆ, ಗೃಹಪ್ರವೇಶ, ನಾಮಕರಣ, ಮದುವೆ, ಸಭೆ, ಸುತ್ತಾಟ. . . ಸ್ವಂತ ಕೆಲಸ ಪೂರ ಬಾಕಿ! !

ಕೃತಿಕಾ ನಕ್ಷತ್ರದ ಕಡೇ ಪಾದದಿಂದ ಆರಂಭಗೊಂಡ ಮಳೆ ರೋಹಿಣಿ ನಕ್ಷತ್ರದ ಮಳೆವರೆಗೆ ಎಡೆಬಿಡದೆ ಸುರಿಯಿತು. ಜೂನ್ ಎಂಟರಿಂದ ಮೃಗಶಿರಾ ನಕ್ಷತ್ರದ ಮಳೆ ಆರಂಭಗೊಳ್ಳಲಿದೆ. ಆರ್ದ್ರಾ (ಆರಿದ್ರಾ) ಮಳೆ. ನಮ್ಮ ಹಿರಿಯರು ಆರ್ದ್ರಾ ಮಳೆಯನ್ನು ‘ಭೂಮಿಗೆ ಭಾಷೆ ಕೊಟ್ಟ ಮಳೆ’ ಎನ್ನುತ್ತಾರೆ. ‘ಈ ಮಳೆಗೆ ಹಳ್ಳಕೊಳ್ಳ ತುಂಬುತ್ತದೆ. ಜಲದ ಬುಗ್ಗೆ ಚಿಮ್ಮುತ್ತದೆ’ ಎಂಬುದು ಹಿರಿಯರ ಆಂಬೋಣ.

ಜನರ ಪರದಾಟ
“ನಮ್ಮ ಮನೆಯಲ್ಲಿ ಒಂದು ಕೊಳ್ಳಿ ಸೌದೆ ಇಲ್ಲ. ಒಡೆದು ಹಾಕಿದ ಸೌದೆ ತೋಟದಲ್ಲೇ ಆಯಿತು. ನಿಮ್ಮದು? ನಮ್ಮದು ಕಡಿಲೂ ಇಲ್ಲ” ಎನ್ನುತ್ತಾರೆ. ಇನ್ನು ಕೆಲವರಲ್ಲಿ ಸೌದೆ ಒಟ್ಟಲು ಕೊಟ್ಟಿಗೆಯೇ ಇಲ್ಲವಂತೆ! “ಓಡಾಟ ಕಮ್ಮಿ ಮಾಡಿ, ಮಳೆಗಾಲಕ್ಕೆ ಬೇಕಾದುದನ್ನು ಬೇಗ ಬೇಗ ಮಾಡೀಂತ ಹೇಳಿದ್ರೆ ಕೇಳೋದಿಲ್ಲವಲ್ಲ” ಅಂತ ಹಿರಿಯರು ಬೊಬ್ಬೆ ಹಾಕುತ್ತಿದ್ದಾರೆ. ಕೊಡಗಿನ ಬಹುಪಾಲು ಮನೆಗಳಲ್ಲಿ ಇದೇ ಕಥೆ.

ಮೀನು ಸಿಗಲಿಲ್ಲ
ಪ್ರತಿ ವರ್ಷ ಮಳೆಗಾಲದ ಹೊಸ ನೀರು ತೋಡು, ಹೊಳೆ, ಕೆರೆಯಲ್ಲೆಲ್ಲಾ ತುಂಬಿ ಹರಿವಾಗ ಮೊಟ್ಟೆ ‘ಉರ್ಚಲು’ ಹತ್ತುವ ಮೀನುಗಳದೇ ಸಂಭ್ರಮ. ಈ ಸಾರಿ ಮೀನುಗಳಿಗೂ ಗೊಂದಲ! ದಿಢೀರ್ ತುಂಬಿ ಹರಿದ ನೀರು, ಮೊಟ್ಟೆ ಬಲಿಯದೆ ಉರ್ಚುವುದಾದರೂ ಹೇಗೆ? ಮೀನು ಹತ್ತಿತೋ, ಇಲ್ಲವೋ, ಜನರಂತೂ ಮೀನು ಹಿಡಿಯಲಿರುವ ಪರಿಕರಗಳಾದ ಬಲೆ, ಗೋರಿ, ಕೂಳಿ, ಪೊಡ ಇವು ಯಾವ್ದನ್ನೂ ಜೋಡಿಸಿಕೊಂಡಿರಲಿಲ್ಲ. ಕೆಲವರು ಸೊಳ್ಳೆ ಪರದೆ, ಶೇಡ್ ನೆಟ್ ಇವುಗಳನ್ನು ಮೀನು ಹಿಡಿಯಲು ಬಳಸಿದರಂತೆ!

ಬಿಸಿಲಿಲ್ಲ ಹಪ್ಪಳವಿಲ್ಲ
ಸರಿಯಾಗಿ ಬಿಸಿಲು ಇಲ್ಲದ್ದರಿಂದ ಹಲಸಿನ ಹಪ್ಪಳ ಒಣಗಿಸಲು ಆಗಲಿಲ್ಲ. ಮಾವಿನ ಹಣ್ಣಿನ ಮಾಂಬಳದ ಕತೆಯೂ ಅದೇ. ಕೆಲವರು ‘ಸಾಂತಣಿ’ ಒಣಗಿಸಿದ್ದಾರಂತೆ. ಸಾಂತಣಿ ಎಂದರೆ ಬೇಯಿಸಿ ಒಣಗಿಸಿದ ಹಲಸಿನ ಬೀಜ. ಹಲಸಿನ ಬೀಜವನ್ನು ಕೊಂಚ ಉಪ್ಪು ಹಾಕಿ ಬೇಯಿಸಿ, ಒಣಸುತ್ತಾರೆ ಮಳೆಗಾಲದಲ್ಲಿ ಬಾಯಾಡಿಸಲು! ಹಾಗೆ ಬೇಯಿಸಿ ಒಣಗಿಸಿದ ಹಲಸಿನ ಬೀಜವನ್ನು ಸಾಂತಣಿ ಅನ್ನುತ್ತಾರೆ. ಮತ್ತೆ ಕೆಲವರು ಹಲಸಿನ ಬೀಜವನ್ನು ಮಣ್ಣು ಮೆತ್ತಿ ಒಣಗಿಸಿ, ಮಣ್ಣಿನ ಮಡಕೆಯಲ್ಲಿ ತುಂಬಿಸಿ ಬಾಯಿಕಟ್ಟಿ ಇಡುತ್ತಾರೆ. ಚಳಿ, ಮಳೆಗಾಲದಲ್ಲಿ ಅದನ್ನು ಹುರಿದು ತಿನ್ನುತ್ತಾರೆ. ಸಂಜೆಯ ಕರಿ ಕಾಫಿಗೆ ಹುರಿದ ಹಲಸಿನ ಬೀಜ ಹೇಳಿ ಮಾಡಿಸಿದ ಕೊಡಗಿನ ತಿಂಡಿ! ಈ ಬಾರಿ ಕೆಲವರು ಒಣಗಿಸಿಟ್ಟು ಮಳೆಗಾಲಕ್ಕೆ ತಯಾರಾಗಿದ್ದಾರೆ.

ಮದುವೆ
‘ಮನೆಗೇ ಬಂದು ಮದುವೆಗೆ ಆಮಂತ್ರಿಸಿದ್ದಾರೆ. ಏನು ಮಾಡೋದು? ಮಳೆ ಬೇರೆ ಬಿಡುತ್ತಿಲ್ಲ. ಮದುವೆಗೆ ಹೋಗಲೇಬೇಕು’ ಹೋಗುವವರಿಗೇ ತಲೆಬಿಸಿ. ಇನ್ನು ಮದುವೆ ಮಾಡುವವರ ಗೋಳು? ಎಷ್ಟು ಜನರಿಗೆ ಅಡುಗೆ ಮಾಡಬೇಕು? “ಚಪ್ಪರದ ಮದುವೆಗೆ ಜನ ಹೇಗಾದರೂ ಬಂದಾರು! ! ಆದರೆ ಮರುದಿನದ ಸಮಾರಂಭಕ್ಕೆ ಜನರ ಸಂಖ್ಯೆಯನ್ನು ಅಂದಾಜು ಮಾಡಲಾಗುವುದಿಲ್ಲ. ಮಾಡಿದ ಅಡುಗೆ ವೇಸ್ಟ್ ಆಗಬಾರದಲ್ಲ? ಈ ಮಳೆಗಾಲದಲ್ಲಿ ಮದುವೆ ಮಾಡಬೇಕಿತ್ತಾ. . . ” ಕೆಲವರ ಪರ ನುಡಿ! ಎರಡು ತಿಂಗಳಿಗೆ ಮೊದಲೇ ನಿಶ್ಚಯ ಮಾಡಿದ ಸಮಾರಂಭ. ಆಗ ಗೊತ್ತಿತ್ತಾ ಮಳೆ ವಿಚಾರ? ಅಂತೂ ತಲೆಗೊಂದು ತರ ಮಾತಿಗಿಲ್ಲ ಬರ!

ಸಂತೆ
ಮಳೆಗಾಲದಲ್ಲಿ ಸಂತೆಯೊಂದು ಗೋಳು. ಕೊಡಗಿನಂತಹ ಕಡೆ ದಿನಕ್ಕೊಂದು ಕಡೆ ಸಂತೆ. ಜನರಿಗೆ ಏನೋ ಅನುಕೂಲ ಹೌದು. ಆದರೆ ವ್ಯಾಪಾರಿಗರು ವಾರದ ಏಳು ದಿನವೂ ಊರೂರು ಅಲೆಯಬೇಕು. ವಸ್ತುಗಳನ್ನು ಜೋಡಿಸಿಕೊಂಡು ಬೆಳಗಿನ ಜಾವಕ್ಕೆಲ್ಲಾ ಮಳೆಗಾಲದಲ್ಲಿ ಹೊರಡಬೇಕಲ್ಲಾ. . . ಆನೆ ಹುಲಿಗಳ ಕಾಟ ಬೇರೆ. ಖಾಸಗಿ ವಾಹನಕ್ಕೆ ದುಬಾರಿ ಬೆಲೆ ಕೊಟ್ಟು ಮಾರುಕಟ್ಟೆ ತಲುಪಬೇಕಲ್ಲಾ. . .

ಕೃಷಿಕರ ಪರದಾಟ
ಗದ್ದೆಗೆ ಕೊಟ್ಟಿಗೆ ಗೊಬ್ಬರ ಹಾಕಲಿಕ್ಕಾಗಲಿಲ್ಲ! ಗದ್ದೆಯಲ್ಲಿ ನೀರು ತುಂಬಿದೆ. ಗದ್ದೆಯಲ್ಲಿ ಮಾಡಿದ ಬಹುಪಾಲು ತರಕಾರಿ ಕೊಳೆತುಹೋಯಿತು. ತೋಟದ ಬೇಲಿ ಸವರಲಿಲ್ಲ. ಕಾಫಿ ಗಿಡದ ಕಂಬ ಚಿಗುರು ಮುರಿಯಲಿಲ್ಲ. ಗಿಡದ ಬುಡ ಬುಡಿಸಬೇಕು. ಗೊಬ್ಬರ ಹಾಕಬೇಕು ಎಲ್ಲಾ ತೋಟಗಳಲ್ಲೂ ಒಂದೇ ತರಹದ ಕೆಲಸ ಕಾರ್ಮಿಕರ ಕೊರತೆಯಂತೂ ಹೇಳತೀರದು.

ಅಜ್ಜಿ ಮನೆಯ ಸುಖ
ಒಂದಷ್ಟು ದಿನ ಅಜ್ಜಿ ಮನೆಯಲ್ಲಿ ಮೊಮ್ಮಕ್ಕಳು ಇದ್ದು ಆನಂದಿಸಿದರು. ಮಕ್ಕಳ ಆನಂದಕ್ಕೆ ಮಳೆ ಕಡಿವಾಣ ಹಾಕಿತು. ಹಲಸು, ಮಾವು, ಸೀಬೆ ಹಣ್ಣಿನ ಸುಗ್ಗಿ! ಮಳೆಯಿಂದಾಗಿ ಹೊರಹೋಗಲಿಲ್ಲ. ಕೆಲವೆಡೆಯಂತೂ ಹೊರಗೆ ಕಾಲಿಟ್ಟಲ್ಲೆಲ್ಲ ಜಿಗಣೆಗಳು! ! ಪಿಕ್ನಿಕ್ ಹೋಗಲಾಗಲಿಲ್ಲ. ಬೇಸಿಗೆ ಶಿಬಿರವೂ ಅಪೂರ್ಣವಾದಂತಾಯಿತು.

ಶಾಲೆ ಮಣಭಾರದ ಬ್ಯಾಗು
ಶಾಲೆ ತೆರೆಯುವ ಮುನ್ನ ಮಕ್ಕಳು ಪೂರ್ಣ ತಯಾರಾಗಬೇಕಲ್ಲಾ! ರೈನ್ ಕೋಟ್, ಗಂಬೂಟ್, ಸ್ವೆಟರ್, ಕೊಡೆ, ನೀರು ಮತ್ತು ತಿಂಡಿ ಡಬ್ಬಿಗೊಂದು ಕ್ಯಾರಿಬ್ಯಾಗ್, ಬೆನ್ನಿಗೆ ಮತ್ತೊಂದು ‘ಮಣಭಾರದ ಬ್ಯಾಗು’ – ಅದ್ಯಾವುದೂ ತೆಗೆದಾಗಿಲ್ಲ! ತೀವ್ರ ಮಳೆಯ ಕಾರಣ ಶಾಲೆಗೆ ಎರಡು ದಿನಗಳ ರಜೆ! ಸುದ್ದಿ ಕೇಳಿದ ಮಕ್ಕಳು, ಪೋಷಕರು ‘ಹೋ. . . ಅಂತ’ ಖುಷಿಪಟ್ಟರು. ಶನಿವಾರ ಪೂರ್ಣ ಕ್ಲಾಸ್ ಅಂತ ಹೇಳಿದಾಗ!

Tags:
error: Content is protected !!