Mysore
22
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಚಾಮರಾಜನಗರದ ತರುಣ ವಿಮರ್ಶಕ ದಿಲೀಪ್‌ಗೆ ಅಕಾಡೆಮಿ ಯುವ ಪ್ರಶಸ್ತಿ

ಮೂಲತಃ ಚಾಮರಾಜನಗರದವರಾದ ದಿಲೀಪ್ ಕುಮಾರ್, ವೃತ್ತಿಯಿಂದ ಅಧ್ಯಾಪಕರಾದರೂ ವೃತ್ತಿಯಾಚೆಗೂ ಸಾಹಿತ್ಯ ಮತ್ತು ಸಂಶೋಧನೆಯನ್ನು ಬದುಕುವುದಕ್ಕಾಗಿ ಅಲ್ಲ, ಬಾಳುವುದಕ್ಕಾಗಿ ಮನಸ್ಸಿಗೆ ಹಚ್ಚಿಕೊಂಡವರು, ಆಳವಾಗಿ ಪ್ರೀತಿಸಿದವರು, ಮೈಮೇಲೆ ಆವಾಹಿಸಿಕೊಂಡವರು, ಪಂಪನಲ್ಲಿ ವಿಶೇಷವಾದ ಪ್ರೀತಿಯಿಟ್ಟವರು.

ಪ್ರಶಸ್ತಿ ಪಡೆದ ಕೃತಿ ‘ಪಚ್ಚೆಯ ಜಗುಲಿ’ ಕೂಡ, ಪಂಪನ ಕಾವ್ಯಗಳ ಕುರಿತ ಹದಿನಾಲ್ಕು ವಿಮರ್ಶಾ ಲೇಖನಗಳ ಸಂಕಲನ. ಇದು ಪಂಪನ ಸಮಗ್ರ ವಿಮರ್ಶೆಯಲ್ಲ, ಪಂಪನ ಶೃಂಗಾರ ಪ್ರಸಂಗಗಳನ್ನು ಕುರಿತ ಬಿಡಿ ಲೇಖನಗಳಾಗಿವೆ – ಇದು ಅವರ ಮೊತ್ತಮೊದಲ ವಿಮರ್ಶಾ ಲೇಖನ ಸಂಕಲನವೂ ಹೌದು. ಇಲ್ಲಿರುವವು ವಿಮರ್ಶಾ ಲೇಖನ ಗಳೆನ್ನುವುದೇನೋ ಸರಿಯೇ, ಆಧುನಿಕ ವಿಮರ್ಶೆಯ ಭಾಷೆ- ಪರಿಭಾಷೆಗಳ ಪರಿವೇಷವನ್ನು ಹೊದ್ದಿವೆಯೆಂಬುದು ಸತ್ಯ. ಆದರೆ ಸಾಮಾನ್ಯ ವಿಮರ್ಶೆಗಳಿಗಿಂತ ತುಸು ಭಿನ್ನವಾದ ದಾರಿ ತುಳಿಯುವ ಈ ಲೇಖನಗಳಲ್ಲಿ ವಿಮರ್ಶೆಯೊಂದಿಗೆ ಪಂಪನ ಕಾವ್ಯಸತ್ತ್ವವನ್ನು, ಕಲಾತ್ಮಕತೆಯನ್ನು ಕುರಿತ ಅವರ ಅಭಿಮಾನ ಬೆರಗುಗಳು ಸಾಕಷ್ಟು ಢಾಳಾಗಿ ಒಡಮೂಡಿರುವುದನ್ನು ಗುರುತಿಸಬಹುದು.

ಭಾವನೆ ಮತ್ತು ಬರಹದಲ್ಲಿ ಕವಿಯೇ ಆಗಿರುವ ದಿಲೀಪ್‌ರಿಗೆ ಇದು ಸಹಜವೂ ಸಹ. ಪ್ರತಿ ಲೇಖನದ ಶೀರ್ಷಿಕೆಯನ್ನು ಪಂಪನ ಕಾವ್ಯದಿಂದಲೇ ಆಯ್ದುಕೊಳ್ಳಲಾಗಿದೆ. ಉದಾಹರಣೆಗೆ ಆನೆಗೊಲೆಗೊಂದಪುದು, ಸಾಮಾನ್ಯಮೇ ಬಗೆಯೆ ಭವತ್ ಕೇಶಪಾಶಪ್ರಪಂಚಂ, ಲೋಕಾಶ್ಚರ್ಯಮಂ ಮಾಡಿಕೊಂದುದು – ಹೀಗೆ ಈ ಬರಹಗಳು ವಿಮರ್ಶೆಯಾಗಿರುವ ಜೊತೆಜೊತೆಗೇ ಕವಿಪಂಪನ ಆತ್ಮೀಯ ವಿಶ್ಲೇಷಣೆಯೂ ಆಗಿರುವುದು ವಿಶೇಷ.

ಕೃತಿಗೆ ಮುನ್ನುಡಿ ಬರೆಯುತ್ತಾ ಖ್ಯಾತ ವಿಮರ್ಶಕ ದಿ.ಜಿ.ಹೆಚ್.ನಾಯಕರು ಹೀಗೆ ಹೇಳುತ್ತಾರೆ- ‘ಪಂಪನ ಮಹಾಕಾವ್ಯಗಳನ್ನು ಕುರಿತಂತೆ ಸಮಗ್ರ ಸಮರ್ಥ ವಿಮರ್ಶೆ ಬರೆಯಬಹುದಾದ ಯೋಗ್ಯತೆ ದಿಲೀಪ್‌ರಲ್ಲಿ ಇದೆ ಎಂಬ ಭಾವನೆ, ಅಭಿಪ್ರಾಯ ಅವರ ಈ ಕೃತಿ ಓದಿದ ಮೇಲೆ ನನ್ನಲ್ಲಿ ಉಂಟಾಗಿದೆ’ ಪ್ರಶಸ್ತಿಯ ಸಂದರ್ಭದಲ್ಲೇ ಇತ್ತೀಚೆಗೆ ಪ್ರಕಟವಾದ ದಿಲೀಪ್ ಅವರ ಫೋನ್ ಇನ್ ಸಂದರ್ಶನವೊಂದರಲ್ಲಿ ತಮಗೆ ಸ್ಛೂರ್ತಿಯ ಸೆಲೆಯಾದ ದಿ.ಪ್ರೊ.ಜಿ.ಹೆಚ್.ನಾಯಕ, ಓ.ಎಲ್.ನಾಗ ಭೂಷಣಸ್ವಾಮಿ, ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಪಂಡಿತಾರಾಧ್ಯ ಮೊದಲಾದ ಹಿರಿಯರನ್ನು ನೆನೆಯುತ್ತಾ, ಅವರೆಲ್ಲರ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಹಿರಿದನ್ನು, ಮಹತ್ತನ್ನು ಗೌರವಿಸುತ್ತಲೇ, ಪರಂಪರೆಯೊಂದಿಗೆ ಹೆಮ್ಮೆಯಿಂದ ಗುರುತಿಸಿ ಕೊಳ್ಳುತ್ತಲೇ ಪರಂಪರೆಯನ್ನು ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸುವ ಸ್ವಾತಂತ್ರ್ಯವನ್ನೂ, ಆ ಸ್ವಾತಂತ್ರ್ಯ ಸ್ವಚ್ಛಂದವಾಗದಂತೆ, ಉಡಾಫೆಯಾಗದಂತೆ, ಅಲ್ಪಜ್ಞಾನದ ದುರಹಂಕಾರವಾಗದಂತೆ ಎಚ್ಚರವನ್ನೂ ಉಳಿಸಿಕೊಂಡು ಬಂದಿರುವ ದಿಲೀಪ್, ಹಳಗನ್ನಡ ಸಾಹಿತ್ಯವನ್ನು ಈ ಕಾಲಕ್ಕೆ ಅಪರೂಪವೆನಿಸುವಷ್ಟು ಅಕ್ಕರೆಯಿಂದ ಹಸಿವಿನಿಂದ ಓದಿಕೊಂಡಿರುವವರು, ಪೊಳ್ಳಿಲ್ಲದೆ ಬರೆಯುವವರು, ನುಡಿಯುವವರು. ಪಂಪನನ್ನೇ ಕುರಿತು ವಿಶೇಷ ಆಸ್ಥೆಯಿಂದ ಬರೆದ ಈ ವಿಮರ್ಶಾಸಂಕಲನಕ್ಕೆ ಪ್ರಶಸ್ತಿ ಸಂದಿರುವುದು, ಕೇವಲ ವಿಮರ್ಶಾ ಕ್ಷೇತ್ರಕ್ಕೆ ಸಂದ ಪ್ರಶಸ್ತಿಯಲ್ಲ, ದಿಲೀಪ್ ಅವರ ಪಂಪ ಪ್ರೀತಿಗೆ ಸಂದ ಪ್ರಶಸ್ತಿಯೆನಿಸಿದೆ.

” ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಚಾಮರಾಜನಗರದ ವಿಮರ್ಶಕ ದಿಲೀಪ್ ಕುಮಾರ್ ಬರೆದ ‘ಪಚ್ಚೆಯ ಜಗುಲಿ’ ಎಂಬ ವಿಮರ್ಶಾ ಕೃತಿಗೆ ಸಂದಿದೆ.”

– ಮಂಜುನಾಥ ಕೊಳ್ಳೇಗಾಲ

Tags:
error: Content is protected !!