Mysore
27
broken clouds
Light
Dark

ಮಂಗಲದ ಮನೋವಿಜ್ಞಾನಿ ಬಸವಣ್ಣನವರ ಕುರಿತು

ಕೆ.ವೆಂಕಟರಾಜು

‘ನಾನು ದೊಡ್ಡರಸಿನ ಕೊಳದ ನೀರು ಕುಡಿದು ಬೆಳೆದವನು. ಈಗ ಚಾಮರಾಜನಗರದ ನನ ಸಹಪಾಠಿಗಳು, ಸಮಕಾಲೀನರು ಯಾರೂ ಇಲ್ಲ ಅನಿಸುತ್ತೆ’ ಎಂದು 91 ವರ್ಷಗಳ ಮನೋವಿಜ್ಞಾನಿ, ಮನೋ ವಿಜ್ಞಾನದ ಶ್ರೇಷ್ಠ ಅಧ್ಯಾಪಕ ಮತ್ತು ಕನ್ನಡದಲ್ಲಿ ಮನಶ್ಯಾಸ್ತ್ರದ ಬಗ್ಗೆ ಬರೆದಿರುವ, ಬರೆಯುತ್ತಿರುವ ಪ್ರೊಫೆಸರ್ ಎಂ. ಬಸವಣ್ಣ ತಿಳಿಸುತ್ತಾರೆ. ಚಾಮರಾಜನಗರದ ತಾವು ಓದಿದ ಮಂಗಲದ ಮನೋವಿಜ್ಞಾನಿ ಬಸವಣ್ಣನವರ ಕುರಿತು ಮುನಿಸಿಪಲ್ ಹೈಸ್ಕೂಲು (ಈಗ ಇದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಾಗಿದೆ) ಅಲ್ಲಿಯ ವಿಜ್ಞಾನದ ಅಧ್ಯಾಪಕ ಶಾಮರಾಯರು, ಪಿ.ಪರಶುರಾಮ್, ಸಿ.ಬಿ.ಜಯರಾವ್ ಹಾಗೂ ಸಹಪಾಠಿಗಳಾದ ಕ್ರೀಡಾಪಟು ಎಂ.ಮಾದಯ್ಯ, ಪಿ.ಮಾದಯ್ಯ, ಶ್ರೀಧರ ಅಯ್ಯಂಗಾರ್, ಸುಂದರಮ್ಮ, ಲಕ್ಷ್ಮೀಕಾಂತಮ್ಮ ಮುಂತಾದವರನ್ನು ಎಂ.ಬಸವಣ್ಣ ನೆನಪಿಸಿಕೊಳ್ಳುತ್ತಾರೆ, ಈಗ ಇವರು ಯಾರೂ ಇಲ್ಲ.

ಪ್ರೊಫೆಸರ್ ಬಸವಣ್ಣ ಚಾಮರಾಜನಗರಕ್ಕೆ ಎಂಟು ಕಿ.ಮೀ. ದೂರ ಇರುವ ಮಂಗಲ ಗ್ರಾಮದವರು (ಚಾಮರಾಜನಗರ ಜಿಲ್ಲೆಯ ಮೂರೂ ತಾಲ್ಲೂಕು ಗಳಲ್ಲಿಯೂ ಮಂಗಲ ಎಂಬ ಗ್ರಾಮಗಳಿವೆ. ಶಾಸನಗಳಲ್ಲಿ ಚತುರ್ವೇದಿ ಮಂಗಲದ ಉಲ್ಲೇಖಗಳು ಇದೆ). ರೇಷ್ಮೆ ಕೃಷಿ ನಂಬಿಕೊಂಡಿದ್ದ ಬಡ ಕುಟುಂಬ, ತಂದೆ ಮಲ್ಲಪ್ಪ, ತಾಯಿ ನಂಜಮ್ಮನವರು ಈಗ ಚಾಮರಾಜನಗರದ ಒಂದು ಬಡಾವಣೆ ಆಗಿರುವ ಸೋಮವಾರಪೇಟೆ ಗ್ರಾಮದವರು.

ಪ್ರಾಥಮಿಕ 4ನೇ ತರಗತಿ ಮುಗಿದ ನಂತರ ಅಜ್ಜಿಯ ಮನೆ ಸೋಮವಾರ ಪೇಟೆಗೆ ಬಂದು ಮಾಧ್ಯಮಿಕ ಶಾಲೆಗೆ ಸೇರಿದರು. ಅಪೂರಾಯರು ಆಗ ಮಿಡಲ್ ಸ್ಕೂಲಿನ ಜನಪ್ರಿಯ ಮುಖ್ಯೋಪಾಧ್ಯಾಯರು. ಒಬ್ಬನೇ ಒಬ್ಬ ಹುಡುಗ ಶಾಲೆಗೆ ಚಕ್ಕರ್ ಹೊಡೆದರೂ ಗಮನಿಸಿ ಶಿಕ್ಷೆ ಕೊಡುತ್ತಿದ್ದರು.

ಇವರನ್ನು ರೂಪಿಸಿದ್ದು ಮುನಿಸಿಪಲ್ ಹೈಸ್ಕೂಲು, ಇವರು ಈ ಶಾಲೆಯ ಎರಡನೇ ಬ್ಯಾಚೋ ಮೂರನೇ ಬ್ಯಾಚಿನವರೋ ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಡೆದ ಮೆರವಣಿಗೆಯಲ್ಲಿ ಧ್ವಜ ಹಿಡಿದು ಮುಂದೆ ಸಾಗಿದವರು ಇವರೇ! ಈ ದಿವಸಗಳನ್ನು ಅವರು ಅತ್ಯಂತ ಸಂತೋಷದಿಂದ ನೆನಪಿಸಿಕೊಳ್ಳು ತ್ತಾರೆ. ಖಾಸಾ ಚಾಮರಾಜ ಒಡೆಯರು ಜನಿಸಿದ ಕಾರಣಕ್ಕೆ ನಿರ್ಮಿಸಿದ ಜನನ ಮಂಟಪ ಮತ್ತು ಇತರ ಕಡೆಗಳಲ್ಲಿ ಹೈಸ್ಕೂಲು ನಡೆಯುತ್ತಿತ್ತು. ಬಿದಿರಿನ ತಡಿಕೆ ಗಳನ್ನು ನಿಲ್ಲಿಸಿ ತರಗತಿಗಳನ್ನು ಮಾಡಲಾಗುತ್ತಿತ್ತು. ಸಿ.ಬಿ.ಜಯರಾಯರು ಇಂಗ್ಲಿಷ್ ಮೇಷ್ಟಾಗಿದ್ದರು. (ನಾಟಕದ ಹವ್ಯಾಸ ಇದ್ದವರು, ಕೆಲಸಕ್ಕೆ ರಾಜೀನಾಮೆ ನೀಡಿ ಪೀರ್ ಕಂಪೆನಿ, ಹೆಚ್.ಎಲ್.ಎನ್.ಸಿಂಹ ಅವರ ಕಂಪೆನಿ ಮತ್ತು ಕೊನೆಗೆ ಆಕಾಶವಾಣಿ ಸೇರಿದರು). ಇವರು ಕೈಲಾಸಂರಿಗೆ ಮಿತ್ರರು. ಹಾಗಾಗಿ ಕೈಲಾಸಂ ಜನನ ಮಂಟಪದಲ್ಲಿ ನಡೆಯುತ್ತಿದ್ದ ಹೈಸ್ಕೂಲಿಗೆ ಬಂದು ಭಾಷಣ ಮಾಡಿದ್ದರು. ಮೈಸೂರಿಗೆ ಬಂದಿದ್ದ ಅನಕೃ ಅವರನ್ನು ಜಯರಾಯರ ಆದೇಶದ ಮೇರೆಗೆ ಬಸವಣ್ಣನವರೇ ಮೈಸೂರಿನಿಂದ ಕರೆತಂದು ಭಾಷಣ ಮಾಡಿಸಿದ್ದರು.

ಹೈಸ್ಕೂಲು ಮತ್ತು ಆ ನಂತರ ಇಂಟರ್ ಮೀಡಿಯಟ್, ಪದವಿ ಮತ್ತು ಎಂ.ಎ. ಅವಧಿಯಲ್ಲಿ ಅನ್ನ, ಆಶ್ರಯ ನೀಡಿದ್ದು ಸುತ್ತೂರು ಮಠ. ಮನೆಯ ದೇವರಮನೆಯಲ್ಲಿ ರಾಜೇಂದ್ರಸ್ವಾಮಿಗಳ ಪೋಟೋ ಇದೆ ಎನ್ನುತ್ತಾರೆ ಬಸವಣ್ಣ. ಹೈಸ್ಕೂಲಿಗೆ ಸೇರಿದಾಗ ರೇಷ್ಮೆಗೂಡು ಮಾರಿದಾಗ ಬಂದ 60 ರೂಪಾಯಿ ಕೈಗೆ ಕೊಟ್ಟು ನಿನಗೆ ಬೇಕಾದ ಪುಸ್ತಕ ಖರೀದಿಸು ಎಂದು ನನ್ನ ತಂದೆ ಹಣ ನೀಡಿದರು. ಆ ಹಣದಲ್ಲಿ ಪುಸ್ತಕ ಪೆನ್ನನ್ನು ಶಾಮಣ್ಣನವರ ಬುಕ್ ಡಿಪೋದಲ್ಲಿ ಕೊಂಡೆ ಎನ್ನುತ್ತಾರೆ.

ಬಸವಣ್ಣ, ಹೈಸ್ಕೂಲು ಮುಗಿಸಿ, ಕಾಲೇಜು ಸೇರುತ್ತಾರೆ. ಎರಡು ವರ್ಷದ ಇಂಟರ್ ಮಿಡಿಯಟ್ಟನ್ನು ಉನ್ನತ ದರ್ಜೆಯಲ್ಲಿ ಪಾಸು ಮಾಡುತ್ತಾರೆ. ಬಿ.ಇ. ಎಂ.ಬಿ.ಬಿ.ಎಸ್. ಕಾಲೇಜಿನ ಗೇಟುಗಳು ಇವರಿಗೆ ತೆರೆದಿರುತ್ತವೆ. ಆದರೆ ಇವರಿಗೆ ಇಂಗ್ಲಿಷ್ ಸಾಹಿತ್ಯ ಓದಲು ಆಸೆ. ವಿಜ್ಞಾನದ ವಿದ್ಯಾರ್ಥಿಯಾದ ಇವರಿಗೆ ಪ್ರೊಫೆಸರ್ ಸಿಡಿಎನ್ ಅವಕಾಶ ನಿರಾಕರಿಸುತ್ತಾರೆ. ಜುಲುಮೆ ಮಾಡಿದ ಮೇಲೆ, ಪ್ರಿನ್ಸಿಪಾಲರಿಂದ ಅನುಮತಿ ಪತ್ರ ತಾ ಎನ್ನುತ್ತಾರೆ. ಆಗ
ಪ್ರಿನ್ಸಿಪಾಲರಾಗಿದ್ದವರು ಎಂ.ವಿ.ಗೋಪಾಲಸ್ವಾಮಿಯವರು. ಅವರು ಮನಶ್ಯಾಸ್ತ್ರದ ವಿಭಾಗದಲ್ಲಿ ಮೊದಲ ಭಾರತೀಯ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕೊಲ್ಕತ್ತಾ ವಿ.ವಿ. ಎರಡೂ ಸರಿಸುಮಾರು ಒಂದೇ ಕಾಲದಲ್ಲಿ ಮನಶ್ಯಾಸ್ತ್ರ ವಿಭಾಗವನ್ನು ಪ್ರಾರಂಭ ಮಾಡಿದರೂ, ಮೈಸೂರು ವಿ.ವಿ.ಯಲ್ಲಿ ಪೂರ್ಣ ಪ್ರಮಾಣದ ಪ್ರಾಧ್ಯಾಪಕರು ಇದ್ದರು.

ಪ್ರಾಂಶುಪಾಲರೊಡನೆ ನಡೆದ ಈ ಭೇಟಿ ಎಂ.ಬಸವಣ್ಣನವರ ಬದುಕನ್ನೇ ಬದಲಿಸಿತು. ಅವರು ತಮ್ಮ ಮನೆಯಲ್ಲಿಯೇ ರೇಡಿಯೋ ಟ್ರಾನೀಟರ್ ಇಟ್ಟುಕೊಂಡು ಆಕಾಶವಾಣಿ ಕೇಂದ್ರ ಆರಂಭಿಸಿದ್ದರು. ಅವರು ಇಂಗ್ಲೆಂಡಿನ ಮನಶಾಸ್ತ್ರ ಪ್ರಾಧ್ಯಾಪಕ ಸ್ಟಿಯರ್‌ಮನ್ ಅವರ ನೇರ ಶಿಷ್ಯರು. ಅವರು ನೀನು ಇಂಗ್ಲಿಷ್ ಸಾಹಿತ್ಯವನ್ನು ಮನೆಯಲ್ಲಿಯೇ ಓದಿಕೊಳ್ಳಬಹುದು. ಈಗ ಮನಶ್ಯಾಸ್ತ್ರ ವಿಭಾಗ ಆರಂಭಿಸುತ್ತಿದ್ದೇನೆ. ಉಜ್ವಲ ಭವಿಷ್ಯ ಇದೆ, ಸೇರು ಎಂದರು. ಮನಶ್ಯಾಸ್ತ್ರದ ವಿದ್ಯಾರ್ಥಿಯಾಗಿ ಅವರು ಸೇರಿದರು. ಬಿ.ಎಸ್ಸಿ., ಮತ್ತು ಎಂ.ಎ. ಮುಗಿಸಿದರು. ಎಂ.ಎ. ಮುಗಿಸಿದ ತಕ್ಷಣ ಅವರಿಗೆ ಅದೇ ಕಾಲೇಜಿನಲ್ಲಿ ಕೆಲಸ ಸಿಕ್ಕಿತು. ಅದರ ಮತ್ತೊಬ್ಬ ಪ್ರಾಧ್ಯಾಪಕರಾದ ಪ್ರೊ. ಕುಪ್ಪುಸ್ವಾಮಿ, ಈಗಲೇ ಏಕೆ ಕೆಲಸಕ್ಕೆ ಹೋಗಿ, ಈಗಿನ ನಿಮ್ಹಾನ್ಸ್ ಎಂದು ಕರೆಯುವ ಸಂಸ್ಥೆಯಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಡಿಪ್ಲೊಮಾ ಮಾಡು ಎಂದರು. ಕಾಲೇಜಿನ ಮೇಸ್ಟಿಗೆ 100 ರೂಪಾಯಿ ಸಂಬಳ, ಇಲ್ಲಿ ಸ್ಟೇ ಫಂಡು 125 ರೂಪಾಯಿ. ಆ ನಂತರ ಅಲ್ಲೇ ರಿಸರ್ಚ್ ಫೆಲೋ ಆದೆ!

ತಿರುಪತಿ ವಿವಿಯಲ್ಲಿ ಎಂ.ಎ. ಮುಗಿಸಿದ ಆನಂತರ ಅದೇ ಕುಪ್ಪುಸ್ವಾಮಿಯವರು ಆಂಧ್ರದಲ್ಲಿ ಮನಶ್ಯಾಸ್ತ್ರ ವಿಭಾಗ ಕಟ್ಟುವಂತೆ ತಿರುಪತಿ ವೆಂಕಟೇಶ್ವರ ವಿ.ವಿ.ಗೆ ಕಳುಹಿಸಿಕೊಟ್ಟರು. ಆಂಧ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಮನಶ್ಯಾಸ್ತ್ರ ವಿಭಾಗ ಆರಂಭಿಸಿ, ಕಟ್ಟಿ ಬೆಳೆಸಿದೆ. ಸಾವಿರಾರು ವಿದ್ಯಾರ್ಥಿಗಳು ಹೊರಬಂದರು. 1970 ರಲ್ಲಿ ನಾನು ಪಿಎಚ್.ಡಿ. ಮುಗಿಸಿದೆ. ಆತ್ಮ ವಿಶ್ವಾಸಕ್ಕೆ “ನಾನು” ಎಂಬ ಪರಿಕಲ್ಪನೆಯ ವಿಷಯದಲ್ಲಿ ಪಿಎಚ್.ಡಿ. ಪ್ರಬಂಧ, ಬರೆದೆ. ನಾನು ಪ್ರಕಟಿಸಿಲ್ಲ. ಅಮೆರಿಕೆಯಲ್ಲಿ ಇದ್ದರೂ ಇಂತಹ ಪ್ರಬಂಧ ಬರೆಯಲಾಗುತ್ತಿರಲಿಲ್ಲ ಎಂದು ಇದರ ಮೌಲ್ಯಮಾಪನ ಮಾಡಿದ ಪ್ರೊ.ಕಾಲ್ ರೋಜರ್ಸ್ ಎಂಬ ಪ್ರಾಧ್ಯಾಪಕರು ಟಿಪ್ಪಣಿ ಬರೆದಿದ್ದರು!

1993ರಲ್ಲಿ ನಾನು ವಿ.ವಿ. ಯಿಂದ ನಿವೃತ್ತನಾದೆ. ಅಲ್ಲಿಯ ಹವಾಮಾನ ಒಂದನ್ನು ಬಿಟ್ಟು ತಿರುಪತಿ ವಿ.ವಿ. ಎಲ್ಲದರಲ್ಲಿಯೂ ಚೆನ್ನಾಗಿತ್ತು. ಬೆಂಗಳೂರಿನಲ್ಲಿ ಹವಾಮಾನ ಚೆನ್ನಾಗಿದೆ! ಎನ್ನುತ್ತಾರೆ.

ಬಿ.ಎಡ್. ವಿದ್ಯಾರ್ಥಿಗಳಿಗೆ ಸೂಕ್ತ ಪುಸ್ತಕ ಇಲ್ಲ ಎಂದು ಜಿ.ಎಸ್. ಶಿವರುದ್ರಪ್ಪ ನವರು ಇವರಿಂದ ಶೈಕ್ಷಣಿಕ ಮನೋವಿಜ್ಞಾನ ಎಂಬ ಪಠ್ಯಪುಸ್ತಕ ಬರೆಸಿದರು. ಅವರ ಕಾಲದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಹೊರ ತರುತ್ತಿದ್ದ ಸಾಧನಾ? ಸಂಚಿಕೆಗೆ ತಪದೇ ಬರೆಯಲು ತಾಕೀತು ಮಾಡಿದರು. ಈ ಲೇಖನಗಳು, ಅನುಭವ, ತನ್ನ ಜತೆಗಾರರು, ಸಹಪಾಠಿಗಳು ಯಾರೂ ಬದುಕಿಲ್ಲ ಎನ್ನುವುದು ಇವರಿಗೆ ವ್ಯಥೆ, ವಯಸ್ಸು ಸುತ್ತಾಡಲೂ ಅವಕಾಶ ಕೊಡುವುದಿಲ್ಲ. ನನ್ನ ಮಾತು ಕೇಳಿದರೆ ವಯಸ್ಸು ತಿಳಿಯುವುದಿಲ್ಲ. ಆದರೆ ನನ್ನ ಕಾಲುಗಳು ನನ್ನ ಮಾತು ಕೇಳುವುದಿಲ್ಲ ಎನ್ನುವುದು ಇವರ ಬೇಜಾರು, ಹಾಗಾಗಿ ಎಷ್ಟೇ ಆಸೆ ಇದ್ದರೂ ಚಾಮರಾಜನಗರಕ್ಕೆ ಬರುವುದೂ ಕಷ್ಟವೇ! ಯಾಕೆಂದರೆ ಮಕ್ಕಳು ಬಿಡುವುದಿಲ್ಲವಲ್ಲ ಎಂದು ಮಗುವಿನಂತೆ ನಗುತ್ತಾರೆ. ನನ್ನಲ್ಲಿರುವ ಮನಶ್ಯಾಸ್ತ್ರದ ಪುಸ್ತಕಗಳ ನಡುವೆ ಬದುಕುತ್ತಿದ್ದೇನೆ ಎನ್ನುತ್ತಾರೆ ಎಲೆಯ ಮರೆಯ ಕಾಯಿ ಮಂಗಲದ ಬಸವಣ್ಣನವರು.
Venkataraju49@gmail.com