ಅಕ್ಷತಾ
ನೀವು ಬೆಕ್ಕುಪ್ರಿಯರಾಗಿದ್ದರೆ ಮೈಸೂರು-ನಂಜನಗೂಡು ರಸ್ತೆಯ ಈ ಮಾರ್ಜಾಲ ಸಂಗ್ರಹಾಲಯಕ್ಕೆ ಭೇಟಿಕೊಡಿ. ಮುದ್ದಿನ ಸಾಕುಪ್ರಾಣಿಯಾಗಿ ಮನೆಯೊಳಗಿರುವ ಬೆಕ್ಕನ್ನು ಕೌತುಕದ ಕಣ್ಣಿನಿಂದ ಹೀಗೂ ನೋಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಮೈಸೂರಿನ ಶರತ್ ಕುಮಾರ್
ಹೆಸರು ಶರತ್ ಕುಮಾರ್. ಕಾರ್ಪೊರೇಟ್ ವಲಯದ ಉದ್ಯೋಗಿ. ಬಹು ಅಂಕಿ ಸಂಬಳವನ್ನು ಪಡೆಯುವುದಕ್ಕೆ ಅಡ್ಡಿಯೇನೂ ಇರಲಿಲ್ಲ. ಆದರೆ ಮನಸ್ಸನ್ನು ಹಿಡಿದಿಟ್ಟುಕೊಂಡಿದ್ದು ಪ್ರಾಣಿ ಪ್ರೀತಿ. ಅದರಲ್ಲೂ ಬೆಕ್ಕಿನ ಮೇಲಿನ ಪ್ರೀತಿ. ಅಪಘಾತದಲ್ಲಿ ಸಾವನ್ನಪ್ಪಿದ ತನ್ನ ಪ್ರೀತಿಯ ಬೆಕ್ಕಿನ ನೆನಪಿನಲ್ಲಿ ಕಟ್ಟಿದ ಸಂಗ್ರಹಾಲಯ ಇಂದು ದೇಶದ ಗಮನ ಸೆಳೆಯುತ್ತಿದೆ.
ಕಾರಣ! ದೇಶದ ಮೊದಲ ಬೆಕ್ಕು ಸಂಗ್ರಹಾಲಯವನ್ನು ಮೈಸೂರು- ನಂಜನಗೂಡು ರಸ್ತೆಯಲ್ಲಿ ಆರಂಭಿಸಿದ್ದಾರೆ. ಮೈಸೂರಿಗನ ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ ಈಗ ಬೆಕ್ಕು ಪ್ರಿಯರ ನೆಚ್ಚಿನ ತಾಣವಾಗಿದೆ. ಸಾಕುಪ್ರಾಣಿಯಾಗಿ ಮನೆಯೊಳಗಿರುವ ಬೆಕ್ಕನ್ನು ಕೌತುಕದ ಕಣ್ಣಿನಿಂದ ಹೀಗೂ ನೋಡ ಬಹುದು ಎಂದು ತೋರಿಸಿಕೊಟ್ಟಿದ್ದಾರೆ ಮೈಸೂರಿನ ಶರತ್ ಕುಮಾರ್.
ಏನಿದು ಬೆಕ್ಕು ಸಂಗ್ರಹಾಲಯ?: ವಿದೇಶಗಳಲ್ಲಿ ಬೆಕ್ಕು ಸಂಗ್ರಹಾಲಯದ ಪರಿಕಲ್ಪನೆಯಿದ್ದರೂ ನಮ್ಮ ದೇಶಕ್ಕೆ ಹೊಸ ಪರಿಚಯ. ದೇಸಿ ತಳಿ ಬೆಕ್ಕುಗಳಿಂದ ಹಿಡಿದು ವಿದೇಶಿ ತಳಿಗಳವರೆಗಿನ ಬೆಕ್ಕುಗಳು ಈ ಕ್ಯಾಟ್ ವರ್ಲ್ಡ್‌ನಲ್ಲಿ ಇದ್ದು, ದುಬಾರಿ ಬೆಲೆಯ ಬೆಕ್ಕುಗಳನ್ನೂ ಇಲ್ಲಿ ವೀಕ್ಷಿಸಬಹುದು. ಬೆಕ್ಕುಗಳ ಮನಸ್ಥಿತಿಗೆ ಪೂರಕವಾದಂತಹ ವಾತಾವರಣ ಸಂಗ್ರಹಾಲಯದಲ್ಲಿದ್ದು ಶುದ್ಧ ಗಾಳಿ, ಸ್ವಚ್ಛ ಆಹಾರ ಮತ್ತು ನೀರು ಪೂರೈಸುವ ಮೂಲಕ ಬೆಕ್ಕುಗಳ ಆರೋಗ್ಯದ ಕುರಿತಾಗಿ ಕಾಳಜಿ ವಹಿಸುತ್ತಾರೆ. ಬೆಕ್ಕುಗಳು ಎಲ್ಲೆಂದರಲ್ಲಿ ಓಡಾಡದಂತೆ ಹಾಗೂ ವೀಕ್ಷಿಸಲು ಬರುವವರಿಂದ ಅವುಗಳಿಗೆ ತೊಂದರೆಯಾಗದ ರೀತಿಯಲ್ಲಿ ಲೇನ್‌ಗಳನ್ನು ನಿರ್ಮಾಣ ಮಾಡಿದುದರಿಂದ ಬೆಕ್ಕುಗಳು ಭಯಮುಕ್ತವಾಗಿ ಓಡಾಡುವುದು ಸಂಗ್ರಹಾಲಯದ ವಿಶೇಷವಾಗಿದೆ. ಹಿಮಾಲಿಯನ್, ಬೆಂಗಾಲಿಯಂತಹ ಸ್ವದೇಶಿ ತಳಿಗಳ ಜೊತೆಗೆ ಸೈಬೀರಿಯನ್, ಪರ್ಷಿಯನ್ ತಳಿಯ ಬೆಕ್ಕುಗಳೂ ಇಲ್ಲಿದ್ದು ಎಲ್ಲವೂ ಪರಸ್ಪರ ಹೊಂದಿಕೊಂಡು ಜೀವಿಸುತ್ತಿರುವುದು ಮಾದರಿಯಾಗಿದೆ.
ಹೀಗಿದೆ ‘ಮಿನ್ ಜಿನ್ ಕ್ಯಾಟ್ ವರ್ಲ್ಡ್’: ಬೆಕ್ಕುಗಳ ದಿನಚರಿ ಪ್ರತಿನಿತ್ಯ ಬೆಕ್ಕುಗಳಿಗೆ ೧೨-೧೬ ಗಂಟೆಗಳ ಕಾಲ ನಿದ್ರೆಯ ಅವಶ್ಯಕತೆಯಿದ್ದು ಮಧ್ಯಾಹ್ನದ ಹೊತ್ತು ಹೆಚ್ಚಾಗಿ ನಿದ್ರಿಸುತ್ತವೆ. ಉಳಿದಂತೆ ಬಾಕಿ ಸಮಯದಲ್ಲಿ ಆಟ, ಊಟದಲ್ಲಿ ಕಳೆಯುವ ಬೆಕ್ಕುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವುದರಿಂದ ಪ್ರವಾಸಿಗರಿಗೆ ಬೆಕ್ಕುಗಳನ್ನು ಮುಟ್ಟಲು ಅವಕಾಶ ಇರುವುದಿಲ್ಲ. ಚಳಿಯಾದಾಗ ಹೊರಗೆ ಬಂದು ಕುಳಿತುಕೊಳ್ಳುವ ಬೆಕ್ಕುಗಳು ಬಿಸಿಲಿನ ಝಳಕ್ಕೆ ಅವುಗಳಿಗೆಂದೇ ಕಟ್ಟಿಕೊಟ್ಟಿರುವ ಸೂರಿನೊಳಗೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ಬೆಕ್ಕಿಗೂ ಪರಿಚಾರಕರಿದ್ದು, ಬೆಕ್ಕುಗಳ ವೈಯಕ್ತಿಕ ಸ್ವಚ್ಛತೆ ಮೊದಲ ಆದ್ಯತೆ. ಇವುಗಳ ಚಟುವಟಿಕೆಯನ್ನು ದೂರದಿಂದಲೇ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದ್ದು, ಮಾರಾಟಕ್ಕೆ ಬೆಕ್ಕುಗಳು ಲಭ್ಯವಿಲ್ಲ.
ಸಂಗ್ರಹಾಲಯ ಕಲ್ಪನೆಯ ಹಿಂದಿನ ಉದ್ದೇಶ: ಶರತ್ ಕುಮಾರ್ ಸ್ವಭಾವತಃ ಬೆಕ್ಕು ಪ್ರಿಯರು. ಮೊದಮೊದಲು ತಾನು ಸಾಕುತ್ತಿದ್ದ ಬೆಕ್ಕಿನ ಕುರಿತಾಗಿ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದವರು, ನಂತರ ಸ್ನೇಹಿತರು ಬೆಕ್ಕಿನ ಕುರಿತಾಗಿ ಸಂದೇಹಗಳನ್ನು ಕೇಳಿದಾಗ ಹೇಳುವಷ್ಟರ ಮಟ್ಟಿಗೆ ಬೆಕ್ಕಿನ ಜೀವನ ಶೈಲಿ ಆಸಕ್ತಿಯ ವಿಷಯವಾಯಿತು. ಹೀಗೆ ಪ್ರತಿಯೊಬ್ಬರಿಗೂ ಮಾಹಿತಿ ಹೇಳುತ್ತಾ ಕುಳಿತುಕೊಳ್ಳುವುದರ ಬದಲಾಗಿ ಸಂಶಯಗಳನ್ನು ಪರಿಹರಿಸಿಕೊಳ್ಳಲೆಂದೇ ಒಂದು ಸಮಗ್ರ ಮಾಹಿತಿ ಕೇಂದ್ರ ಇದ್ದರೆ ಹೇಗಿರುತ್ತದೆ? ಎಂಬ ಯೋಚನೆಯೇ ಇವತ್ತು ಬೆಕ್ಕು ಸಂಗ್ರಹಾಲಯ ರೂಪುಗೊಳ್ಳಲು ಕಾರಣವಾಗಿದೆ. ಇದು ಕೇವಲ ಕ್ಯಾಟ್ ಮ್ಯೂಸಿಯಂ ಮಾತ್ರವಲ್ಲ. ಸಾಕುವವರಿಗೆ ಬೆಕ್ಕಿನ ಕುರಿತಾಗಿ ಮಾಹಿತಿ ತಾಣವೂ ಆಗಿದೆ. ಗೋಡೆಗಳಲ್ಲಿ ಅಂಟಿಸಿರುವ ಭಿತ್ತಿಪತ್ರಗಳು, ಚಿತ್ರಗಳು ಬೆಕ್ಕಿನ ಜೀವನ ಶೈಲಿ, ಆಹಾರ ಕ್ರಮ, ಹಾವಭಾವ, ಗುಣ ಇತ್ಯಾದಿ] ವಿಷಯಗಳ ಆಕರವೂ ಹೌದು. ಒಮ್ಮೆ ಸಂಗ್ರಹಾಲಯಕ್ಕೆ ಭೇಟಿ ಕೊಟ್ಟರೆ ಮುದ್ದಿನ ಬೆಕ್ಕು ನೋಡುವುದಷ್ಟೇ ಅಲ್ಲ, ಬೆಕ್ಕಿನ ಮುದ್ದಿಸಿಕೊಳ್ಳುವ ಕಲೆಯನ್ನೂ ತಿಳಿದುಕೊಳ್ಳಬಹುದು. ಮನೆಯಲ್ಲಿ ಬೆಕ್ಕು ಸಾಕಣೆ ಬಲುಕಷ್ಟ ಎನ್ನುವವರಿಗೆ ಬೆಕ್ಕುಗಳನ್ನು ದೂರದಿಂದಲೇ ಮುದ್ದಿಸಲು ಒಂದೊಳ್ಳೆ ಅವಕಾಶವಾಗಿದೆ.
ವರ್ಷದ ಎಲ್ಲ ದಿನಗಳೂ ಬೆಳಿಗ್ಗೆ ೧೦ರಿಂದ ರಾತ್ರಿ ೮.೩೦ರ ತನಕ ಬೆಕ್ಕು ಸಂಗ್ರಹಾಲಯ ತೆರೆದಿದ್ದು, ಮಧ್ಯಾಹ್ನ ೧೨ ಗಂಟೆಯ ಮೊದಲು ಸಂಜೆ ನಾಲ್ಕರ ನಂತರ ಭೇಟಿ ಮಾಡುವುದು ಉತ್ತಮ. ದೀರ್ಘ ಸಮಯದ ನಿದ್ರೆಯ ಅವಶ್ಯಕತೆಯಿರುವ ಬೆಕ್ಕು ಮಧ್ಯಾಹ್ನದ ವೇಳೆ ನಿದ್ರಿಸುವುದರಿಂದ ಚಟುವಟಿಕೆ ನೋಡಲು ಸಿಗದು. ಹಾಗಿದ್ದಾಗ ಭೇಟಿ ಕೊಡಲೇಬೇಕೆನ್ನುವವರು ಮಧ್ಯಾಹ್ನದ ಹೊತ್ತನ್ನು ತಪ್ಪಿಸುವುದು ಒಳ್ಳೆಯದು. ೧೦ ವರ್ಷದೊಳಗಿನ ಕಿರಿಯರಿಗೆ ಪ್ರವೇಶ ಶುಲ್ಕ ೬೯ ರೂಪಾಯಿ ಆಗಿದ್ದು, ಹತ್ತು ವರ್ಷ ಮೇಲ್ಪಟ್ಟವರು ೯೯ರೂಪಾಯಿ ಟಿಕೆಟ್ ದರವನ್ನು ಪಾವತಿಸಬೇಕಾಗುತ್ತದೆ. ಇತ್ತೀಚೆಗೆ ಎಂದರೆ ಜನವರಿ ೧೫ರಂದು ಈ ಬೆಕ್ಕು ಸಂಗ್ರಹಾಲಯ ಆರಂಭಗೊಂಡಿದ್ದು ಸದ್ಯಕ್ಕೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಇಲ್ಲದಿರುವ ಕಾರಣ ಸಂಗ್ರಹಾಲಯದ ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆದು ಒಳಹೋಗಬೇಕಾಗುತ್ತದೆ. ಸೆಲ್ಛಿ ಕಾರ್ನರ್, ಸೆಲ್ಛಿ ವಿತ್ ಕ್ಯಾಟ್ ಇತ್ಯಾದಿ ಸೌಲಭ್ಯಗಳಿದ್ದು ಮನೆಯಲ್ಲಿ ಬೆಕ್ಕು ಸಾಕಲಾಗದಿರುವ ಬೆಕ್ಕು ಪ್ರಿಯರಿಗೆ ನೆಚ್ಚಿನ ತಾಣವಾಗುವುದರಲ್ಲಿ ಎರಡು ಮಾತಿಲ್ಲ.
ಬೆಕ್ಕು ಮನುಷ್ಯ ಸಂಗವನ್ನು ಬಯಸುವಂತಹ ಪ್ರಾಣಿ. ಅದು ಎಂದಿಗೂ ಒಂಟಿಯಾಗಿ ಬಾಳಲಾರದು. ‘ಬೆಕ್ಕಿರುವುದೇ ಮುದ್ದಿಸಿಕೊಳ್ಳಲು’ ಎಂಬ ಮಾತು ಬಹಳ ಹಿಂದಿನಿಂದಲೂ ಇರುವ ರೂಢಿಯ ಮಾತು. ಆದ್ದರಿಂದ ನಿಮಗೂ ಬೆಕ್ಕುಗಳನ್ನು ನೋಡಬೇಕು. ಅವುಗಳ ಕುರಿತು ಇನ್ನಷ್ಟು ತಿಳಿಯಬೇಕು ಎಂಬ ಕುತೂಹಲವಿದ್ದರೆ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಭಾರತದ ಮೊದಲ ಬೆಕ್ಕು ಸಂಗ್ರಹಾಲಯ ‘ಮಿನ್ ಜಿನ್ ಕ್ಯಾಟ್ ವರ್ಲ್ಡ್’ಗೆ ಒಮ್ಮೆ ಭೇಟಿ ನೀಡಬೇಕು. ನಿತ್ಯ ದಿನಚರಿಯಿಂದ ಬೇಸತ್ತ ಬದುಕು ಒಂದು ದಿನ ಬೆಕ್ಕಿನ ದಿನಚರಿಯ ಸಹವಾಸಕ್ಕೆ ಸಿಗಬೇಕು. ಇಷ್ಟಾದರೆ ಮಾರ್ಜಾಲ ನಡೆ, ನೋಟ, ಗುರಿ… ಹೀಗೆ ಪ್ರತಿಯೊಂದರ ತಿಳಿವು ನಮ್ಮದಾಗುತ್ತದೆ.
‘ಬೆಕ್ಕಿಗೂ ನಮ್ಮಂತೆ ಭಾವನೆಗಳಿರುತ್ತವೆ. ಆಯಾ ಸನ್ನಿವೇಶಕ್ಕೆ ತಕ್ಕಂತೆ ಅವುಗಳು ಪ್ರತಿಕ್ರಿಯಿಸುತ್ತವೆ. ಆದರೆ ಅದನ್ನು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸಬೇಕು. ಬೆಕ್ಕುಗಳು ಸಿಟ್ಟು ಅಥವಾ ಭಯದಲ್ಲಿದ್ದಾಗ ಆ ಕ್ಷಣಕ್ಕೆ ನಾವು ಮುಟ್ಟಲೆತ್ನಿಸಿದರೆ ಆಕ್ರಮಣಕಾರಿಯಾಗಬಹುದು. ಆದ್ದರಿಂದ ಬೆಕ್ಕುಮತ್ತೆ ಸಹಜಸ್ಥಿತಿಗೆ ಬರುವವರೆಗೂ ಕಾಯಬೇಕು. ಒಮ್ಮೆ ಬೆಕ್ಕು ತಾನಿರುವ ಪರಿಸರಕ್ಕೆ ಹೊಂದಿಕೊಂಡರೆ ನಂತರ ನೋಡಿಕೊಳ್ಳುವುದು ಸುಲಭ. ಮೂರು ತಿಂಗಳ ಬೆಕ್ಕಿನ ಮರಿಯಿಂದ ಹಿಡಿದು ಎಲ್ಲಾ ವಯೋಮಾನದ] ಬೆಕ್ಕುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸುವುದು ಅತಿಮುಖ್ಯ. ಸ್ನೇಹಿತರಸಹಕಾರದಿಂದ ಈಗಷ್ಟೇ ಪ್ರಾರಂಭಗೊಂಡಿರುವ ಮ್ಯೂಸಿಯಂ ಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸುವ ಯೋಜನೆಗಳಿವೆ. ಅದರಲ್ಲಿ ಮುಖ್ಯವಾದದ್ದು ಕ್ಯಾಟ್ ಕೆಫೆಟೇರಿಯಾ. ಬೆಕ್ಕುಗಳೊಂದಿಗೆ ಸಮಯ ಕಳೆಯುತ್ತಾ ಕಾಫಿ ಕುಡಿಯಬೇಕು ಎಂಬುದು ಕನಸು. ಈಗಾಗಲೇ ಬಹಳಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಮಾಹಿತಿ ಹಂಚಿಕೊಳ್ಳಲು ಬಹು ಸಂತಸವಿದೆ. ಆರಂಭಿಕ ಹಂತದಲ್ಲಿರುವ ಸಂಗ್ರಹಾಲಯದಲ್ಲಿ ಈಗ ಕೆಲವು ತಳಿಗಳ ಬೆಕ್ಕುಗಳಷ್ಟೇ ಇದ್ದು, ಇನ್ನಷ್ಟು ವಿಸ್ತರಿಸಬೇಕು. ಕಾಲಕಾಲಕ್ಕೆ ಲಸಿಕೆ ಹಾಕಿಸುವುದು ಬೆಕ್ಕುಗಳಿಗೆ ಅತಿಮುಖ್ಯ. ಮೂರು ತಿಂಗಳಿನ ಮರಿಯಿಂದ ಮೊದಲ ಲಸಿಕೆ ಆರಂಭವಾಗುತ್ತದೆ. ಅವುಗಳ ಆರೋಗ್ಯಕ್ಕೆ ಪೂರಕ ಮಾಹಿತಿಗಳನ್ನು ಪಶು ವೈದ್ಯಾಧಿಕಾರಿಗಳಲ್ಲಿ ಪಡೆದುಕೊಂಡು ಆರೈಕೆ ಮಾಡಬೇಕು’ ಎನ್ನುತ್ತಾರೆ ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ ಬೆಕ್ಕು ಸಂಗ್ರಹಾಲಯದ ಸ್ಥಾಪಕ ಶರತ್ ಕುಮಾರ್.
ತೀಕ್ಷ್ಣ ದೃಷ್ಟಿಗೆ ಹೆಸರುವಾಸಿಯಾದ ಬೆಕ್ಕಿನ ಕುರಿತು ಕಾಳಜಿಯಿಂದ, ಪ್ರೀತಿಯಿಂದ, ದೂರದೃಷ್ಟಿಯಿಟ್ಟುಕೊಂಡು ಮೈಸೂರಿನಲ್ಲಿ ಆರಂಭಿಸಿದ ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ಗೆ ನೀವೂ ಬೆಕ್ಕುಪ್ರಿಯರಾಗಿದ್ದರೆ ಭೇಟಿ ಕೊಡಿ. ನೀವು ಭೇಟಿ ಕೊಡಲಿಚ್ಛಿಸುವ ಮೈಸೂರಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿರಲಿ ನಂಜನಗೂಡು ರಸ್ತೆಯ ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’
ಬೆಕ್ಕುಗಳು ‘ಕೃತಘ್ನ’ ಎಂಬ ತಪ್ಪು ಕಲ್ಪನೆ ನಮ್ಮ ನಡುವೆ ಹಿಂದಿನಿಂದಲೂ ಇದೆ. ಆದರೆ ಬೆಕ್ಕುಗಳು ತೀಕ್ಷ ಗ್ರಾಹಿಗಳು. ಒಂದು ಬಾರಿ ಪ್ರೀತಿಸಲಾರಂಭಿಸಿದರೆ ಮಾಲೀಕನ ಪ್ರತೀ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ ಅನುಕರಣೆ ಮಾಡಲು ಯತ್ನಿಸುತ್ತದೆ. ಮನುಷ್ಯನಲ್ಲಿರುವ ಎಲ್ಲಾ ಭಾವನೆಗಳು ಬೆಕ್ಕಿಗೂ ಇದ್ದು ಸಿಟ್ಟು, ರೋಷ, ಭಯ ಮುಂತಾದವುಗಳನ್ನು ತಕ್ಷಣಕ್ಕೆ ನಿಯಂತ್ರಿಸಲಾರದ ಮುಗ್ಧ ಜೀವಿಗಳು. ತಾನು ಬೇಟೆಯಾಡಿದ ತಿನಿಸಿನ ಒಂದಂಶವನ್ನು ಮಾಲೀಕನಿಗಾಗಿ ಹೊತ್ತು ತರುವ ಬೆಕ್ಕುಗಳೂ ಇವೆ. ಬೆಕ್ಕುಗಳಿಗೂ ಬಾಲ್ಯ, ಯೌವನ, ವೃದ್ಧಾಪ್ಯವೆಂಬ ಮೂರು ಕಾಲಘಟ್ಟಗಳಿದ್ದು ವಯೋ ಸಹಜ ನಡವಳಿಕೆಗಳಿರುತ್ತವೆ. ಮನುಷ್ಯರಲ್ಲಿರುವ ಪ್ರೇಮ ಪ್ರಕರಣದಂತೆ ‘ಕ್ಯಾಟ್ ಲವ್’ ಕೂಡ ಇದ್ದು, ಸಂಗಾತಿಗಾಗಿ ಕಾಯುವ, ಹಪಹಪಿಸುವ, ಜವಾಬ್ದಾರಿಯುತ ಬೆಕ್ಕುಗಳಿವೆ. ಬೆಕ್ಕೆಂದು ಮೂಗು ಮುರಿಯುವ ಮುನ್ನ, ಬೆಕ್ಕನ್ನೂ ಗಮನಿಸಿದರೆ ತಿಳಿಯದ ಎಷ್ಟೋ ವಿಷಯಗಳು ಅರಿವಿಗೆ ಬರುತ್ತವೆ.





