Mysore
25
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮತಾಂಧ ಮಗ, ತಾಯಿ ಹೃದಯದ ಅಪ್ಪ …

ನಾಝಿಯಾ ಬೇಗಂ

ಆ ದಿನ ಮೂರು ಮನೆಗಳ ಗಣತಿ ಕಾರ್ಯ ಮುಗಿಸಿ ನಾಲ್ಕನೆಯ ಮನೆಗೆ ಬಂದೆ. ೩೫ರ ಆಸುಪಾಸಿನ ವಿದ್ಯಾವಂತ ತರುಣ ಮನೆಯೊಳಗಿ ನಿಂದ ಹೊರಬಂದ. ಕೈಯಲ್ಲಿದ್ದ ಸರಂಜಾಮು ಕಂಡು ಆತನಿಗೆ ಗಣತಿಗಾಗಿ ಎಂಬುದು ಗೊತ್ತಿದ್ದರೂ ‘ಏನೆಂದು’ ಕೇಳಿದ. ‘ಸಮೀಕ್ಷೆಗಾಗಿ ಬಂದಿದ್ದೇವೆ, ರೇಷನ್ ಕಾರ್ಡ್ ಬೇಕಿತ್ತು’ ಕೇಳಿದೆ. ಉದಾಸಿನನಾಗಿ ರೇಷನ್ ಕಾರ್ಡ್ ಕೈಗಿಟ್ಟಾಗ ಸರ್ವರ್ ನನ್ನ ಪುಣ್ಯಕ್ಕೆ ಸರಿಯಾಗಿ ಕೆಲಸ ಮಾಡಿತು. ಎರಡ್ಮೂರು ಪ್ರಶ್ನೆಗಳಿಗೆ ಅರೆ ಮನಸ್ಸಿನಿಂದ ಉತ್ತರಿಸಿ ನಂತರ ಆತನೇ ಉದ್ಧಟತನದ ಪ್ರಶ್ನೆಗಳನ್ನು ಕೇಳತೊಡಗಿದ.

‘ನೀವು ಮೊದಲೇ ಮುಸಲ್ಮಾನರು, ನಂಬುವುದು ಕಷ್ಟ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿದರೆ ಆಮೇಲೆ…’ ಹೀಗೆ ಏನೇನೋ ಹೇಳತೊಡಗಿದವನಿಗೆ ಗುರುತಿನ ಚೀಟಿ ತೋರಿಸಿದೆ. ಇಷ್ಟಾದರೂ ಜಗ್ಗದ ಅವನ ಹುಂಬತನ ನನ್ನ ಕಾಲಿನೊಳಗಿನ ನಡೆದ ದಣಿವಿಗೆ ಸಿಟ್ಟು ತರಿಸಿತ್ತು. ‘ಇಷ್ಟವಿಲ್ಲದಿದ್ದರೆ ನಿರಾಕರಣೆ ಪತ್ರ ಬರೆದುಕೊಡಿ’ ಹೇಳಿದೆ. ಅದಕ್ಕೂ ಒಪ್ಪದ ಯುವಕ ಇನ್ನಷ್ಟು ಕೂಗಾಡತೊಡಗಿದಾಗ ಮನೆಯೊಳಗಿನಿಂದ ಆತನ ತಂದೆ ಹೊರಬಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿಫಲವಾಗಿ, ಮಗನನ್ನೇ ಅಲ್ಲಿಂದ ಸಾಗಹಾಕಿ ಉಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಕೊಟ್ಟು ಸಹಕರಿಸಿದರು.

ಬಿಸಿಲಿಗೆ ಬಳಲಿದ್ದ ನನ್ನ ಮುಖ ನೋಡಿ ‘ನೀನು ನನ್ನ ಮಗಳಂತೆ, ಬಿಸಿಲಿಗೆ ಓಡಾಡಿ ದಣಿದಿದ್ದೀಯ, ಬಾ ಸ್ವಲ್ಪ ಶರಬತ್ತನ್ನಾದರೂ ಕುಡಿ. ಮಗನಾಡಿದ ಮಾತಿಗೆ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಜ್ಯೂಸ್ ಬಾಟಲಿ ಹಿಡಿದು ಎದುರು ಕುಳಿತು ಕ್ಷಮೆಯಾಚಿಸಿದಾಗ, ಹಿರಿಯರ ಅಸಹಾಯಕ ಸ್ಥಿತಿಗೆ ನೊಂದುಕೊಂಡೆ. ವಿದ್ಯಾವಂತ ಮಗನ ಅಜ್ಞಾನಕ್ಕೆ ಮರುಗಬೇಕೋ ಅಥವಾ ಅಪ್ಪನ ಮಾನವೀಯ ಗುಣ ತುಂಬಿದ ಆತಿಥ್ಯಕ್ಕೆ ಖುಷಿಪಡಬೇಕೋ ಎಂಬ ಗೊಂದಲದಲ್ಲಿ ಆ ಮನೆಯ ಸಮೀಕ್ಷೆ ಮುಗಿಸಿದೆ…

ಜಾತಿ, ಮತ ಧರ್ಮಗಳಾಚೆಗೆ ಮಾನವೀಯ ನೆಲೆಯಲ್ಲಿ ಒಗ್ಗಟ್ಟಿನ ಸೂತ್ರವನ್ನು ಮಕ್ಕಳಿಗೆ ಬೋಽಸುವ ನಮ್ಮ ವ್ಯಕ್ತಿತ್ವವನ್ನು ನಡವಳಿಕೆ, ಜ್ಞಾನ, ಪ್ರತಿಭೆಯ ಮೂಲಕ ಗುರುತಿಸದೆ ಹಿಜಾಬ್ ಮೂಲಕವಷ್ಟೇ ಗುರುತಿಸಿ ‘ನಾನು ಮುಸ್ಲಿಂ’ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಮಗ ಮಾಡಿದ ಅವಮಾನ ಶಿಕ್ಷಿತ ಸಮಾಜದಲ್ಲಿರುವ ಮೂಢತ್ವದ ಪ್ರತಿಬಿಂಬದಂತೆ ಕಂಡಿತು.

ಆಸ್ತಿ ವಿವರ ಕೊಡಲು ಹಿಂಜರಿದವರು ಕೆಲವರಾದರೆ, ವಯಸ್ಕ ಮಕ್ಕಳಿಲ್ಲದ ಮನೆಗಳಲ್ಲಿ ಒಂಟಿತನ ಅನುಭವಿಸುತ್ತಿರುವ ವಯೋವೃದ್ಧರ ಅಸಹಾಯಕತೆ ಇವೆಲ್ಲವೂ ನೋಡಸಿಕ್ಕಿತು. ಸಮೀಕ್ಷೆಗೆಂದು ಬಿಸಿಲು ಮಳೆಯೆನ್ನದೆ ಹಳ್ಳಿ ಪಟ್ಟಣಗಳನ್ನು ಸುತ್ತಿದ, ಸುತ್ತುತ್ತಿರುವ ಪ್ರತಿಯೊಬ್ಬ ಶಿಕ್ಷಕರೂ ಆತಿಥ್ಯ, ಅವಮಾನ ಹೀಗೆ ವಿಭಿನ್ನ ಸನ್ನಿವೇಶಗಳನ್ನು ಎದುರಿಸಿರುವುದಂತೂ ನಿಜ. ಇದು ಶಿಕ್ಷಕಿಯಾಗಿ ನನ್ನೊಬ್ಬಳದ್ದೇ ಅನುಭವವಲ್ಲ, ನನ್ನಂತೆ ಫೈಲು ಹಿಡಿದು ಗಣತಿ ಕಾರ್ಯಕ್ಕೆ ಹೊರಟ ಎಲ್ಲಾ ಶಿಕ್ಷಕರೂ ಎದುರಿಸುವ ಪಾಸಿಟಿವ್ ಮತ್ತು ನೆಗೆಟಿವ್ ಪ್ರತಿಕ್ರಿಯೆಗಳು. ಧನಾತ್ಮಕ ಪ್ರತಿಕ್ರಿಯೆಯನ್ನು ಗೌರವದಿಂದ ಒಪ್ಪಿಕೊಂಡು, ಋಣಾತ್ಮಕ ಮಾತಿನಿಂದ ನೋಯಿಸುವವರ ಅಜ್ಞಾನಕ್ಕೆ ಮರುಕಪಟ್ಟು ಮತ್ತೆ ಮುಂದಿನ ಮನೆಯತ್ತ ಹೆಜ್ಜೆ ಹಾಕಿ ಗಣತಿ ಕಾರ್ಯದಲ್ಲಿ ಭಾಗಿಯಾಗುತ್ತಿದ್ದುದು ನನಗೆ ಅಭ್ಯಾಸವಾಗಿತು.

” ವಿದ್ಯಾವಂತ ಮಗನ ಅಜ್ಞಾನಕ್ಕೆ ಮರುಗಬೇಕೋ ಅಥವಾ ಅಪ್ಪನ ಮಾನವೀಯ ಗುಣ ತುಂಬಿದ ಆತಿಥ್ಯಕ್ಕೆ ಖುಷಿಪಡಬೇಕೋ ಎಂಬ ಗೊಂದಲದಲ್ಲಿ ಆ ಮನೆಯ ಸಮೀಕ್ಷೆ ಮುಗಿಸಿದೆ…”

Tags:
error: Content is protected !!