- ರೇಣುಕಾ ನಿಡಗುಂದಿ
ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ ಹುಡುಗಿಯರಲ್ವಾ ಮುಕ್ತವಾಗಿರುತ್ತಾರೆ. ಆ ವಯಸ್ಸಿಗೆ ಎಲ್ಲವೂ ಚೆನ್ನಾಗಿದೆ ಯಾವುದೂ ತಪ್ಪು ಅನಿಸುವುದಿಲ್ಲ. ಇಬ್ಬರೂ ಬೇರೆ ಬೇರೆ ಸಾಮಾಜಿಕ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರು. ಆದರೆ ಅವರ ಪ್ರೀತಿಗೆ ಯಾವುದೂ ಅಡ್ದ ಬರಲಿಲ್ಲ. ಆಕೆಯ ಗುರುತೂ. ದೊಡ್ಡ ಪ್ರತಿಷ್ಠಿತ ಕುಟುಂಬದ ಹುಡುಗಿ, ಆಕರ್ಷಕ ಎತ್ತರ, ಚೆಲುವಿನ ಹುಡುಗಿ ತನ್ನ ಗೆಳತಿ ಎನ್ನುವುದೇ ಅವನಿಗೊಂದು ಹೆಮ್ಮೆಯ ಸಂಗತಿಯಾಗಿತ್ತು. ರಂಗಭೂಮಿ, ಕಲೆ, ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಹುಡುಗಿ. ಪ್ರತಿಷ್ಠಿತ ಮನೆ ಹುಡುಗ ತನ್ನ ‘ಸತ್ಯ’ ಅರಿತೂ ಪ್ರೀತಿಸ್ತಾನಲ್ಲ ಅಂತ ಅವಳಿಗೂ ಖುಶಿ. ಅವರು ಸುತ್ತದ ಜಾಗಗಳಿಲ್ಲ, ಹೋಗದ ಸ್ನೇಹಿತರ ಮನೆಗಳಿಲ್ಲ. ನೋಡಿದವರಿಗೆ ಹೊಟ್ಟೆ ಕಿಚ್ಚಾಗುವಂತಹ ಜೋಡಿ. ಏಳು ವರ್ಷ ಡೇಟಿಂಗ್ ಮಾಡಿದ ಬಳಿಕವೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಅದ್ಧೂರಿಯಾಗಿ ಮದುವೆಯಾಯ್ತು. ಹುಡುಗ ಬಹಳ ಉತ್ಸಾಹ, ಜೋಶ್‌ನಲ್ಲಿ, ಬಹಳ ಉದಾರವಾಗಿ ಆಕೆಗೆ -“ ಹೇ – ನೀನು ‘ಬೈ’ ಅಂದೆಯಲ್ಲಾ, ನಿನಗೆ ಮನಸ್ಸಾದರೆ ಹಾಗೆ ಮಾಡಿಕೋ, ಹೇಗೆ ಬೇಕೋ ಹಾಗಿರು,” ಅಂದೆಲ್ಲ ಪ್ರೋತ್ಸಾಹಿಸಿದ. (ಇಲ್ಲಿ ಪ್ರೋತ್ಸಾಹ ಪದ ಬಳಕೆಯೇ ಸೂಕ್ತ ಎನಿಸುತ್ತದೆ). ಆಕೆಯೂ ನಕ್ಕು ಸುಮ್ಮನಾಗಿದ್ದಳು. ಹಾಗೆಂದು ಆ ಹುಡುಗಿ ಯಾವತ್ತೂ ಅವನು ಕೊಟ್ಟ ಸದರ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಲಿಲ್ಲ. ಅವನ ಕುಟುಂಬದೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ. ಎಲ್ಲರ ಜೊತೆಗೂ ಅತ್ಯಂತ ಸ್ನೇಹ ಆಪ್ತತೆಯಿಂದ ವರ್ತಿಸುತ್ತಿದ್ದ ಆಕೆ ಎಲ್ಲರಿಗೂ ಪ್ರಿಯಳಾಗಿದ್ದಳು. ಸ್ನೇಹಿತರೊಂದಿಗಿನ ವೀಕೆಂಡ್ ಪಾರ್ಟಿಗಳು, ತನ್ನ ಆಫೀಸು, ಅವನ ಆಫೀಸು ಅಂತ ಬದುಕು ಸುಂದರವಾಗಿಯೇ ಸಾಗುತ್ತಿತ್ತು. ಈ ನಡುವೆ ಮನೆಯಲ್ಲಿ ನಾದಿನಿಯ ಮದುವೆಯಲ್ಲಿ ಇಬ್ಬರೂ ಓಡಾಡಿ ಭಾಗವಹಿಸಿದರು. ಸ್ನೇಹಿತರ ಬಳಗದಲ್ಲಿ ಆಗಾಗ ಪಾರ್ಟಿಗಳು ನಡೆಯುತ್ತಿದ್ದವಲ್ಲ, ಒಮ್ಮೆ ಇವರ ಸರತಿ ಬಂತು. ಇಬ್ಬರೂ ಮನೆಯಲ್ಲಿ ಪಾರ್ಟಿ ಸಿದ್ಧತೆ ಮಾಡಿದರು. ಆಕೆ ತನ್ನ ಕೈಯಿಂದ ಹಲವಾರು ತಿಂಡಿ ತಯಾರಿಸಿದಳು. ಕೆಲವೊಂದು ಹೊರಗಿನಿಂದ ಬಂತು. ಡ್ರಿಂಕ್ಸು, ಊಟ, ನಗು ಕೇಕೆಗಳಲ್ಲಿ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಗೆಳೆಯರು ನಡು ರಾತ್ರಿ ಕಳೆದು ನಸುಕಿನ ಯಾವುದೋ ಜಾವದಲ್ಲಿ ಹೊರಟರು, ಕೆಲವರು ಅಲ್ಲಿಯೇ ಉಳಿದು ಕೊಂಡರು. ಜಾಗ ಸಿಕ್ಕಲ್ಲಿ ಉರುಳಿಕೊಂಡರು. ಮರುದಿನ ಆಕೆಯೇ ಅವನಿಗೆ ಹೇಳಿದಳು- “ತಾನು ಗೆಳತಿಯೊಂದಿಗೆ ಮಲಗಿದ್ದು, ಅವಳೊಂದಿಗೆ ಎಲ್ಲವನ್ನೂ ಹಂಚಿಕೊಂಡಿದ್ದು. ” ತಲೆ ಕೆಟ್ಟಂತಾದ ಅವನು ಅವಳ ಕಪಾಳಕ್ಕೆ ‘ರಪ್’ ಅಂತ ಬಾರಿಸಿದ. ಅಲ್ಲಿಗೆ ಅವರ ಮದುವೆ ಆಟ ಮುಗಿಯಿತು. ಮನಸ್ಸುಗಳು ಮುರಿದು ಬಿದ್ದವು. ‘ಫಳಾರ್’ ಅಂತ ಹೃದಯಗಳು ಒಡೆದ ಸದ್ದು ಜಗತ್ತಿಗೆ ಕೇಳಲಿಲ್ಲವಷ್ಟೇ.
ಮುಂದಿನ ದಿನಗಳು ಇಬ್ಬರಿಗೂ ಬರ್ಬರ ವಾಗತೊಡಗಿದವು. ಯಾವ ಸಂತೋಷ ಕೂಟ ಗಳೂ ಸಂತಸ ನೀಡಲಿಲ್ಲ. ಅವಳು ಹೊರಗೆ ಹೋದರೆ ಅನುಮಾನ, ಮನೆಯಲ್ಲಿ ಒಬ್ಬಳೇ ಇದ್ದರೆ ಅನುಮಾನ, ಯಾರೊಂದಿಗಾದರೂ ನಕ್ಕರೆ ಅನುಮಾನ, ಯಾರೊಂದಿಗೆ ಮಲಗಿರಬಹುದು? ಇವಳಾ? . . , ಅವಳಾ? . . . ಎನ್ನುವ ಪಿಶಾಚಿ ಬೆನ್ನುಹತ್ತಿ ಅವರ ಸಂತೋಷವನ್ನು ಕಿತ್ತುಕೊಂಡಿತು. ಅವಳ ಪ್ರಕಾರ – “ಮೊದಲೇ ತಾನು ಬೈಸೆಕ್ಸುವಲ್ ಅಂತ ಹೇಳಿದ್ದೆನಲ್ಲಾ” ಎಂದು. ಇವನ ಪ್ರಕಾರ “ಅವನಿಗೆ ಮೊದಲೇ ಹೇಳದೇ, ತನ್ನದೇ ಎದುರಲ್ಲಿ, ಎನ್ನದೇ ಮನೆಯಲ್ಲಿ ತನ್ನನ್ನು ವಂಚಿಸಿದಳಲ್ಲಾ” ಎಂಬ ಕೋಪ. ಮದುವೆ ಮುಂಚಿನ ಉದಾರ ಆದರ್ಶದ ಮಾತುಗಳೆಲ್ಲಾ ಗಾಳಿಗೆ ತೂರಿ ಹೋಗಿದ್ದವು. ಅಸುರಕ್ಷತೆ, ತನ್ನ ಸಂಗಾತಿ ತನ್ನನ್ನು ಅಲಕ್ಷಿಸುತ್ತಿದ್ದಾಳೆ ಎನ್ನುವ ಮಾನಸಿಕ ಕ್ಷೋಭೆ ಯಲ್ಲಿ ಆತ ಬಳಲತೊಡಗಿದ್ದ. “ಬೇಕೆಂದೇ ತನಗೆ ‘ಗಿಲ್ಟ್’ ಫೀಲ್ ಮಾಡಿಸ್ತಿದಾನೆ, ನೋಯಿಸ್ತಿದಾನೆ” ಅಂತ ಆಕೆಗೆ ಅಸಮಾಧಾನ. ಕೊನೆಗೂ ಸಂಬಂಧ ಉಳಿಯಲಿಲ್ಲ. ಯಾರ ಬುದ್ಧಿ ಮಾತೂ ಪ್ರಯೋಜನಕ್ಕೆ ಬರಲಿಲ್ಲ. ಇಬ್ಬರೂ ಬೇರೆಯಾದರು. ಭಾರತದಲ್ಲಿ ಇಪ್ಪತ್ತೊಂದನೇ ಶತಮಾನದಲ್ಲೂ ಲೈಂಗಿಕತೆ ಬಗ್ಗೆ ತೆರೆದ ಸಂವಾದ ಕಡಿಮೆ. ಲೈಂಗಿಕತೆಯನ್ನು ನೈತಿಕತೆ, ಸಂಸ್ಕೃತಿ ಎಂದು ಮಾತ್ರ ಗ್ರಹಿಸಿಕೊಳ್ಳುವುದರಿಂದ ಅಪರಾಧಬೋಧ, ತಪ್ಪು ಕಲ್ಪನೆಗಳೇ ಹೆಚ್ಚು ಉಂಟಾಗುತ್ತವೆ. ಇಲ್ಲಿ ಇವರಿಬ್ಬರೂ ನನಗೆ ಆಪ್ತವಾಗಿದ್ದ ಜೀವಗಳೇ. ಅವರೊಂದಿಗೆ ಯಾವತ್ತೂ ಚರ್ಚಿಸಲಾಗಲಿಲ್ಲ. ಬಹುಶಃ ಜನರೇಶನ್ ಅಂತರ. ಇಂದು ಅವರಿಬ್ಬರೂ ಬೇರೆಯಾಗಿದ್ದಾರೆ. ತಮ್ಮ ತಮ್ಮ ಲೋಕದಲ್ಲಿ ಸಂತೋಷವಾಗಿರಬಹುದು. ಈ ಘಟನೆ ಕಲಿಸಿದ್ದು – “ಗೇ ಅಥವಾ ಬೈಸೆಕ್ಸುವಲ್ ಆಗಿರುವುದು ಅಂದರೆ “ರೋಗವಲ್ಲ, ಕಾಯಿಲೆ’ ಅಲ್ಲ. ಅವರನ್ನು ಬದಲಾಯಿಸಲು ಹೋಗುವ ಬದಲು, ಅವಮಾನಿಸಲು ಹೋಗುವ ಬದಲು ಪರಸ್ಪರ ಗೌರವ, ಬದುಕಲು ಅವಕಾಶ ಮಾಡಿಕೊಡುವುದರಲ್ಲೇ ಮಾನವೀಯತೆ ಇದೆ. (ಲೇಖಕಿ ದೆಹಲಿಯಲ್ಲಿರುವ ಕನ್ನಡ ಬರಹಗಾರ್ತಿ)
raynuka@gmail.com




