ನಾವು ಯಾವಾಗಲೂ ಅತಿರೇಕಗಳನ್ನೇ ನಂಬುತ್ತೇವೆ. ಪರರು ಕೆಟ್ಟರು ಎನ್ನುವುದು ನಮಗೆ ಖುಷಿ ಕೊಡುತ್ತದೆ. ಅದನ್ನ ನಾವು ಮಾತುಗಳಲ್ಲಿ ಆಡಿ ಬಾಯಿಚಪಲ ತೀರಿಸಿಕೊಳ್ಳುತ್ತೇವೆ. ಎರಡು ವರ್ಷಗಳ ಕಾಲ ಯಾವುದೋ ಮಾಯದ ಕನಸಿನ ಹಿಂದೆ ಬಿದ್ದು ಏನೋ ಮಾಡಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಳ್ಳಬೇಕೆಂದು ಬಡಿದಾಡಿದ ಹುಡುಗ, ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದ ಒಂದು ಜೀವ, ಅದೆಷ್ಟು ಸಿಗರೇಟುಗಳನ್ನು ಒಟ್ಟಿಗೆ ಸುಟ್ಟು ಅದೆಷ್ಟು ಕನಸುಗಳನ್ನು ಹಂಚಿಕೊಂಡಿದ್ದವನ ಜೀವನದಲ್ಲಿ ಎದುರಾಗಿದ್ದ ಒಂದು ಆಪಾದನೆ ಸುಳ್ಳು. ಶುದ್ಧ ಸುಳ್ಳು. ಯಾರೋ ಆಗದವರು ಮಾಡಿದ ಸಂಚು ಎಂದು ಮತ್ತೆ ಮತ್ತೆ ಯುಸೂಫ ತನಗೆ ತಾನೇ ಹೇಳಿಕೊಂಡ.
‘ಅದೊಂದು ಘಟಿಸದೆ ಹೋಗಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು?’ ಎಂದವನಿಗೆ ಪದೇ ಪದೇ ಅನ್ನಿಸಲು ಶುರುವಾಗಿತ್ತು. ಒಂದೇ ಒಂದು ಘಟನೆ ಏನೆಲ್ಲವನ್ನು ಬದಲಿಸಿಬಿಡುತ್ತದೆ! ಬದುಕಿಗೆ ಅದೆಂತಹ ಅನೂಹ್ಯ ತಿರುವುಗಳನ್ನು ಕೊಟ್ಟುಬಿಡುತ್ತದೆ? ಇನ್ನೇನು ಎಲ್ಲವೂ ಸರಿಹೋಯಿತು ಎಂದು ಉಸಿರು ತೆಗೆದುಕೊಳ್ಳುವಾಗಲೇ ಹೀಗಾಗಬೇಕಿತ್ತೆ? ಪಾಪ! ಆ ದಿನದ ಸಾಯಂಕಾಲ ಅನಿರೀಕ್ಷಿತವಾಗಿ ಸಿಡಿಲಿನಂತೆ ಬಂದೆರಗಿದ ಆ ಸುದ್ದಿ ತನಗೇ ಗೊತ್ತಿಲ್ಲದಂತೆ ರಾಯಪ್ಪನನ್ನು ನೋಡುವ ನೋಟಕ್ರಮವೇ ಬದಲುಗೊಳ್ಳುತ್ತಿರುವುದನ್ನು ಕಂಡು ಯುಸೂಫ ಬೆರಗಾಗಿದ್ದ. ಎಲ್ಲಿ ನಿಲ್ಲುವುದು? ಯಾವ ನಿಲುವಿನ ಬೆನ್ನಿಗೆ ಆತುಕೊಳ್ಳುವುದು? ಎನ್ನುವ ಈ ಪ್ರಶ್ನೆಗಳೇ ಅವನನ್ನು ಕಂಗೆಡಿಸುತ್ತಿದ್ದವು.
ಎಂದಿನ ಒಂದು ಸಾಯಂಕಾಲ ಯುಸೂಫ ಪೀಜಿ ಪಕ್ಕದ ಪೆಟ್ಟಿಗೆ ಚಾ ಅಂಗಡಿಯಲ್ಲಿ ಎರಡು ಸಿಗರೇಟು ಕೊಂಡು ರೂಮಿಗೆ ಬಂದವನಿಗೆ ಆಶ್ಚರ್ಯ ಕಾದಿತ್ತು. ದೀಪ ಮುಡಿಸುವ ಹೊತ್ತಿನಲ್ಲಿ ರಾಯ ಬೆಚ್ಚಗಿನ ಕಂಬಳಿ ಹೊದ್ದು ಮಲಗಿಕೊಂಡಿದ್ದ. ‘ಲೇ ರಾಯಾ, ಎದ್ದಳಪ್ಪಿ ಸಿಗರೇಟ್ ತಂದೀನಿ. ಹೊಡಿ ಎದ್ದೇಳು ರಾಜ!’ ಎಂದು ಅವನನ್ನು ಉತ್ಸುಕಗೊಳಿಸುವ ಹಳೆ ತಂತ್ರವನ್ನೇ ಬಳಸಿದ್ದ. ರಾಯಪ್ಪನಿಗೆ ಸಿಗರೇಟು ಎಂದರೆ ಸಮಾಧಿೊಂಳಗಿಂದ ಎದ್ದುಬರುವಷ್ಟು ಭೂಮಿಯ ಮೇಲಿನ ಪ್ರಿಯವಾದ ವಸ್ತು ಎಂಬುದು ಇಡೀ ಪೀಜಿಯವರಿಗೇ ಗೊತ್ತು. ಸಿಗರೇಟು ಎಂದೊಡನೆ ಎದ್ದು ಕೂರುವ ಹುಡುಗ ಎರಡು ಮೂರು ಬಾರಿ ಕೂಗಿದರೂ ಎದ್ದೇಳಲಿಲ್ಲ. ಸಿಗರೇಟಿನ ವಾಸನೆ ಮೂಗಿಗೆ ಬಡಿದರೆ ಎದ್ದೇಳದೆ ಇರಲಾರ ಎಂದು ಒಂದು ಸಿಗರೇಟು ಹೊತ್ತಿಸಿ ಕಿಟಕಿಗೆ ಮುಖ ಮಾಡಿ ನಿಂತ ಯುಸೂಫ. ಸಿಗರೇಟು ಮುಗಿಯಲು ಬಂದರೂ ಎದ್ದೇಳುವ ಸುಳಿವೇ ಸಿಗಲಿಲ್ಲ. ಬಹುಶಃ ಜ್ವರವೇನಾದರೂ ಬಂದಿರಬಹುದು ಎಂದುಕೊಂಡು ಕಂಬಳಿ ಎಳೆದುನೋಡಿದ. ರಾಯಪ್ಪನ ಕಣ್ಣುಗಳು ಕೆಂಡದಷ್ಟು ಕೆಂಪಗಾಗಿದ್ದವು. ತಾನು ಬರುವವರೆಗೂ ಅತ್ತಿದ್ದನೋ ಅಥವಾ ಇನ್ನೊಂದು ಮಾತಿಗೆ ಅತ್ತೆ ಬಿಡುತ್ತಾನೋ ಅಥವಾ ಅವು ಕೋಪದಿಂದ ಜ್ವಾಲೆಯಂತೆ ಉರಿಯುತ್ತಿದ್ದ ಕಣ್ಣುಗಳೋ ಅವನಿಗೆ ಗೊಂದಲಕ್ಕಿಟ್ಟುಕೊಂಡಿತು. ಅವನ ಕೂದಲುಗಳು ಕೆದರಿದ್ದವು. ಬಲಗಣ್ಣಿನ ಮೂಲೆಯಲ್ಲಿ ಹಳದಿ ಪಿಚ್ಚು ಎದ್ದು ಕಾಣುತ್ತಿತ್ತು. ಅವನ ಮುಖಭಾವದಿಂದ ಇವತ್ತೂ ಸ್ನಾನ ಮಾಡಿರಲಿಕ್ಕಿಲ್ಲ ಎನ್ನುವುದನ್ನು ಊಹಿಸಿದ. ಕಪ್ಪುಮಣ್ಣಿನ ಮೈಬಣ್ಣ, ಕುಳ್ಳ, ಹುರಿಗಟ್ಟಿದ ದೇಹ, ನೀಳವಾದ ಮೂಗು ಎಲ್ಲವೂ ಅದೇ ಆಗಿದ್ದರೂ ಮುಖದಲ್ಲಿ ಮೊದಲಿರುತ್ತಿದ್ದ ಕಳೆ ಮಾತ್ರ ಮಾಯವಾಗಿ ಹೆಣದ ಮುಖವನ್ನು ಹೊದ್ದಿದ್ದಾನೇನೋ ಎನಿಸತೊಡಗಿತು. ಯುಸೂಫನಿಗೆ ಹೊಟ್ಟೆಯಲ್ಲಿ ಗುಡುಗುಡು ಶುರುವಾಯಿತು. ಅದನ್ನವನು ಗಟ್ ಫೀಲಿಂಗ್ ಎಂದು ಕರೆಯುತ್ತಿದ್ದ. ಹಾಗೆ ಆದಾಗಲೆಲ್ಲ ಎಲ್ಲೋ ಏನೋ ಸರಿಯಿಲ್ಲ ಎನ್ನುವ ಸೂಚನೆ ಅವನಿಗೆ ಸಿಗುತ್ತಿತ್ತು. ಆಗೆಲ್ಲಾ ಅವನು ಬಹು ಎಚ್ಚರದಿಂದ ಸನ್ನಿವೇಶವನ್ನು ನಿಭಾಯಿಸುತ್ತಿದ್ದ. ಸರಕ್ಕನೆ ಕೋಣೆಯನ್ನೊಮ್ಮೆ ಗಮನಿಸಿದ. ಬಟ್ಟೆಗಳು ಅಸಡಾಳವಾಗಿ ರೂಮಿನ ತುಂಬಾ ಅಲ್ಲಲ್ಲಿ ಬಿದ್ದಿದ್ದವು. ರಾಯನ ಬೆಡ್ಡಿನ ಪಕ್ಕದಲ್ಲಿೆುೀಂ ಎರಡು ಸಿಗರೇಟಿನ ಪ್ಯಾಕೆಟ್ಟುಗಳು ಕಂಡವು. ಆಗಷ್ಟೇ ಅವನ್ನು ಹೊಡೆದು ಖಾಲಿ ಮಾಡಿದ್ದಾನೆ ಎಂದು ಊಹಿಸಿದ. ಅದು ಏನೋ ಸರಿಯಿಲ್ಲ ಎನ್ನುವುದನ್ನು ಪುಷ್ಟೀಕರಿಸುತ್ತಿತ್ತು. ‘ಏನಾಯ್ತ್ ಹೇಳೋ ಮಿಸ್ಟರ್ ರಾಯಪ್ಪ. ಮತ್ಯಾವದರ ಹುಡುಗಿ ಲಫಡಾ ಮಾಡಿಕೊಂಡಿೆುೀಂನು? ನೀನು ಕೆಲಸ ಮಾಡುತ್ತಿದ್ದ ಆಸ್ಪತ್ರ್ಯಾಗ ಅದ್ಯಾವ್ದೋ ಅಸ್ಸಾಮ್ ಹುಡುಗಿ ಚಂದಾದಾಳ ಅಂತೇನೋ ಅಂತಿದ್ಯಲ್ಲ. ಅಕಿ ಏನಾರ ಬ್ಯಾಡ ಅಂದಳಾ? ಅಥವಾ ರಾತ್ರಿ ಮೂರ್ ಗಂಟಿತನ ಚಾಟಿಂಗ್ ಮಾಡ್ತಿದೀಯಲ್ಲ, ಅದೇನಾರ ಸಮಸ್ಯಾಗೆತೇನ? ಆ ಮೂರು ಹುಡುಗೀರು ಒಂದಾನ ಅಥ್ವಾ ಬ್ಯಾರೆ ಬ್ಯಾರೇನೋ?’ ಎಂದು ಸಿಕ್ಕ ಅವಕಾಶವನ್ನು ಬಿಟ್ಟುಕೊಡದೆ ಮತ್ತೊಬ್ಬರ ಖಾಸಗಿ ವಿಷಯಗಳನ್ನು ದುರ್ಭರ ಘಳಿಗೆಗಳಲ್ಲಿ ಕೆದಕಿ ಬಾಯಿಬಿಡಿಸುವ ಉಡಾಳ ತಂತ್ರವನ್ನು ಯುಸೂಫ ಪ್ರೋಂಗ ಮಾಡಿದ್ದ. ಗಂಡಸರು ಸಾಮಾನ್ಯವಾಗಿ ಹೆಮ್ಮೆಯಿಂದ ಹೇಳಿಕೊಂಡು ತಿರುಗುವ, ಅವರ ಗುಂಡು ಪಾರ್ಟಿಗಳಲ್ಲಿ ನಿರುಪದ್ರವಿಯಾಗಿ ಉಳಿಯಬಹುದಾದ ಪ್ರೀತಿ ಪ್ರೇಮ ಪ್ರಣಯದ ವಿಷಯಗಳನ್ನೂ ಕೂಡ ಹಂಚಿಕೊಳ್ಳಲು ಯಾವ ಉತ್ಸಾಹವನ್ನೂ ರಾಯ ತೋರಲಿಲ್ಲ. ಎಲ್ಲವೂ ಮುಗಿದು ಹೋಯಿತು ಎನ್ನುವ ಈ ದೈನೇಸಿ ಸ್ಥಿತಿಯಲ್ಲಿ ಅವನನ್ನು ಯುಸೂಫನೆಂದೂ ನೋಡಿರಲಿಲ್ಲ.
ಉತ್ತರ ಕರ್ನಾಟಕದ ಒಂದು ಊರು. ಆ ಊರಿನಲ್ಲಿರುವ ಜನ ಅಲ್ಲಿದೆೆುಂನ್ನಲಾಗುವ ನಿಧಿಯ ತಾವುಗಳ ಬಗ್ಗೆ ಅವರ ಬಿಡುವಿನ ಸಮಯದಲ್ಲಿ ಗುಟ್ಟಾಗಿ ಮಾತನಾಡಿಕೊಳ್ಳುತ್ತಾರೆ. ಅವರ ಊರಿನಲ್ಲಿೆುೀಂ ಆ ತಾವುಗಳು ಎಲ್ಲಿವೆ ಎನ್ನುವ ಜಾಗದ ಬಗ್ಗೆ, ಅದನ್ನು ಹೊರತೆಗೆಯುವ ವಿಧಾನಗಳನ್ನು ಬರೆದಿಟ್ಟಿರುವ ಪುಸ್ತಕ ಯಾರ ಮನೆಯಲ್ಲಿರಬಹುದೆಂದು ಊಹಿಸುತ್ತಾರೆ. ಅವರ ಊರಿನಲ್ಲಿೆುೀಂ ಇರುವ ಹುಡುಗಿಯರನ್ನು ಮೋಹಗೊಳಿಸಿ ತಮ್ಮವರನ್ನಾಗಿಸಿಕೊಳ್ಳಬಹುದಾದ ಮಾಯಾಪುಷ್ಪದ ಬಗ್ಗೆ ನನಗೆ ಗೊತ್ತಿದೆ ಎಂದು ಅಲ್ಲಿನ ಪಡ್ಡೆ ಹುಡುಗರು ಜಂಭ ಕೊಚ್ಚಿಕೊಳ್ಳುತ್ತಾರೆ. ಅಲ್ಲಿನ ಕೆಲವು ಹುಡುಗಿಯರು ಅದರ ಬಗ್ಗೆ ಕ್ಯಾರೇ ಅನ್ನದೆ ಗಟ್ಟಿಗಿತ್ತಿಯರಾಗಿ ತಲೆೆುಂತ್ತಿ ನಡೆದಾಡುತ್ತಾರೆ. ರಾಯಪ್ಪನ ಇಬ್ಬರು ಅಣ್ಣಂದಿರು ಊರವರ ಹೊಟ್ಟೆಕಿಚ್ಚಿನ ಮಂದಿ ಮಾಡಿಸಿದ ಮಾಟದ ಬಲಿಪಶುಗಳಾಗಿ ಕೆಲವು ದಿನ… ಅಲ್ಲಲ್ಲ ಕೆಲವು ವರುಷಗಳೇ ಸನ್ನಿ ಬಡಿದವರಂತೆ ಇದ್ದು ಈಗ ನಿಧಾನವಾಗಿ ಚೇತರಿಸಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಕೊನೆಯವನಿಗೆ ಈ ಯಾವುದರ ಸಾವಾಸವೇ ಬೇಡ. ಇವನಾದರೂ ಪೇಟೆಗೆ ಹೋಗಿ ನಾಲ್ಕಕ್ಷರ ಕಲಿತು ಯಾವುದೋ ಉದ್ಯೋಗ ಪಡೆದು ತಂಪಾಗಿರಲಿ ಎನ್ನುವ ಇಂಗಿತದಿಂದ ಅವನ ತಂದೆ ತಾಯಿ ಓದಲು ಕಳಿಸಿದ್ದಾರೆ. ಇಂತಿಪ್ಪ ಇತಿಹಾಸವಿರುವ ಧರ್ಮರಾಯಪ್ಪ ಅಲಿಯಾಸ್ ರಾಯಪ್ಪ ಎನ್ನುವ ಕನಸುಗಣ್ಣಿನ ಪೋರ ಸಿಟಿಗೆ ಬರುವ ಮುಂಚೆ ಮಾಯಾಪುಷ್ಪದ ಗಂಧ ಹರಡಿ ಅದೇ ಮಾಟದೂರಿನಲ್ಲಿ ಒಂಬತ್ತನೇ ಇಯತ್ತು ಓದುವ ಹುಡುಗಿಯನ್ನು ತನ್ನ ಪ್ರೇಮಪಾಶದಲ್ಲಿ ಮುಳುಗಿಸಿ ಬಸಿರು ಬರಿಸಿ ಪರಂಗಿ ಹಣ್ಣು ತರಿಸಿ ಅಲ್ಲಲ್ಲೇ ಹೊಟ್ಟೆಯನ್ನು ಇಳಿಸಿದ ಇತಿಹಾಸವನ್ನು ಪೇಟೆಯ ಪೀಜಿಯ ಪಾನಗೋಷ್ಠಿಯಲ್ಲಿ ಯುಸೂಫನೆಂಬ ಕಥೆ ಬರೆಯುವ ಹುಚ್ಚಿನ ತಿಕ್ಕಲು ಹುಡುಗನಿಗೆ ಒಂದು ಸ್ನೇಹಭಾವದ ಔನ್ನತ್ಯ ಘಳಿಗೆಯಲ್ಲಿ ಹಂಚಿಕೊಂಡಿದ್ದಾನೆ. ಯುಸೂಫನೆಂಬ ಆಸಾಮಿ ಕೂಡ ಎಂದಾದರೊಂದು ದಿನ ಅವರ ಊರಿಗೆ ಹೋಗಿ ಅಲ್ಲಿ ನಡೆಯುತ್ತದೆ ಎನ್ನುವ ಮಾಟದಾಟದ ಬಗೆಗೆ ಶೋಧಿಸಿ ಒಂದು ಮಹಾಕಾದಂಬರಿಯನ್ನೇ ಬರೆದೇನು ಎನ್ನುವ ಹೊಂಚು ಕೂಡ ಹಾಕಿಕೊಂಡಿದ್ದಾನೆ. ಅದಕ್ಕೆ ರಾಯನ ಸಹಾಯದ ಒಪ್ಪಿಗೆ ಮುದ್ರೆಯೂ ಅದಕ್ಕೆ ಬಿದ್ದಿದೆ.
ಇಷ್ಟೇ ಆಗಿದ್ದರೆ ಎಲ್ಲವೂ ಸುಸೂತ್ರ ಸರಾಗ ಸುಲಲಿತ ಎನ್ನಬಹುದಾಗಿತ್ತು. ಅದ್ಯಾವ ಮಾಯಕದ ಘಳಿಗೆಯಲ್ಲೋ ಏನೋ ಇದ್ದಕ್ಕಿದ್ದಂತೆ ರಾಯ ಆಸ್ಪತ್ರೆಯ ಕೆಲಸ ಬಿಟ್ಟು ಸುಲಭವಾಗಿ ದುಡ್ಡು ಮಾಡುವ ಯಾವುದೋ ಒಂದು ಮಾಯಾಜಿಂಕೆಯ ಮೋಹದ ಕಣ್ಣುಗಳ ನೋಡಿ ಭ್ರಮಿತನಾಗಿ ಅದರ ಹಿಂದೆ ಓಡಲು ಶುರುಮಾಡಿದ್ದೆ ಯುಸೂಫನಿಗೆ ಆಶ್ಚರ್ಯ ತಂದಿಟ್ಟಿತ್ತು. ವಿಜ್ಞಾನದ ವಿದ್ಯಾರ್ಥಿಯಾಗಿ ಅದರಲ್ಲೂ ನರ್ಸಿಂಗ್ ಓದುವ ಒಬ್ಬ ಹುಡುಗ ಒಮ್ಮೆ ಧೂಮಲೀಲೆಯ ಕ್ಷಣಮಾತ್ರದ ದಿವ್ಯ ಪ್ರಸಂಗದಲ್ಲಿ ಭಾಗಿಯಾಗಬೇಕಾದರೆ ‘ಓಂ ಎನ್ನುವ ಮಂತ್ರದಿಂದ ಕ್ಯಾನ್ಸರ್ ಎನ್ನುವ ರೋಗವೇ ಇಲ್ಲವಾಗುತ್ತದೆ’ ಎನ್ನುವ ಕೇವಲ ನಂಬಿಕೆಯ ಮೇಲೆ ನಿಲ್ಲಿಸಿದ ಮಾತುಗಳನ್ನು ಕೇಳಿಸಿಕೊಂಡ ಮೇಲೆ ಇತ್ತ ಆಸ್ತಿಕನೂ ಅಲ್ಲದ ಅತ್ತ ನಾಸ್ತಿಕನೂ ಅಲ್ಲದ ಎಡಬಿಡಂಗಿ ತಾನು ಅಗ್ನೋಸ್ಟಿಕ್ ಎಂದು ಹೇಳಿಕೊಂಡು ತಿರುಗಾಡುವ ತಿಕ್ಕಲು ಯುಸೂಫನೆಂಬ ಸ್ವಯಂಘೋಷಿತ ಕಥೆಗಾರ ರಾಯನ ಅತ್ತವೂ ಸೈ ಇತ್ತವು ಸೈ ಎನ್ನುವ ದ್ವಂದ್ವ ಬುದ್ಧಿಗೆ ಮನಸ್ಸಿನಲ್ಲಿ ನಕ್ಕು ‘ಸಾಧ್ಯವಿದ್ದರೂ ಇರಬಹುದು’ ಎಂದು ತಲೆದೂಗಿದ್ದಾನೆ ಕೂಡ! ನಂಬುವುದು ಕಥೆಗಾರರ ಮೂಲಧರ್ಮ. ಇಲ್ಲವಾದರೆ ಕಥೆ ಎಲ್ಲಿ ಹುಟ್ಟುತ್ತದೆ ಮತ್ತು ಯಾಕಾಗಿ ಹುಟ್ಟುತ್ತದೆ ಹೇಳಿ?
‘ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಮಿ ಹುಡುಗಿಯನ್ನು ಛೇಡಿಸಿ ಧರ್ಮದೇಟು ತಿಂದವನೆ. ಈಗ ಅದೇನು ದುಡ್ಡಿನ ದೆವ್ವ ಬಡ್ಕಂಡಿತೋ ಏನೋ ಇದ್ಯಾವ್ದೋ ಗ್ಲೋಬಲ್ ಮನಿ ಡಾಟ್ ಕಾಮ್ ಎನ್ನುವ ಮನಿ ಲಾಂಡರಿಂಗ್ ಕಂಪನಿಯ ಮೋಹಜಾಲದ ಹಿಂದೆ ಬಿದ್ದಾನೆ ಕಣಣ್ಣೋ!’ ಎಂದು ರಾಯನ ಪರಮಾಪ್ತ ಗೆಳೆಯನೇ ಗುಟ್ಟಾದ ಗಾಸಿಪ್ಪು ಹಂಚುವ ಗಂಡಸರ ಖಯಾಲಿಯ ಕ್ಷಣಗಳಲ್ಲಿ ಯುಸೂಫನಿಗೆ ವಿಷಯ ಮುಟ್ಟಿದೆ. ಅಸಲಿಗೆ ರಾಯ ಯಾರು? ಅವನಿಗೆ ಜೀವನದಲ್ಲಿ ಏನಾಗಬೇಕು? ಅವನು ಓದಿದ ವಿಜ್ಞಾನ ಒಂದು ನಯಾಪೈಸೆ ಕೆಲಸಕ್ಕೂ ಬರುತ್ತದೆಂದು ಅವನಿಗನಿಸುವುದಿಲ್ಲ. ಅವನ ವರ್ತನೆಯಲ್ಲಿ ಧುಮ್ಮಿಕ್ಕಿ ಹರಿಯುವ ಸೋಮಾರಿತನದ ಪರಮಾವಧಿ ಎಷ್ಟಿದೆೆುಂಂದರೆ ಪೀಜಿಯಲ್ಲಿ ರಾತ್ರಿ ಬಾಯಾರಿಕೆಯಾದರೆ ಕೆಳಗಡೆ ಹೋಗಿ ಕುಡಿಯಲು ನೀರನ್ನೂ ಕೂಡ ತರದೇ ತನ್ನ ಬಾಯಾರಿಕೆಯನ್ನೇ ಸಮಾಧಾನಗೊಳಿಸಿಕೊಂಡು ಮಲಗುತ್ತಾನೆ. ಮುಂಜಾನೆ ಎದ್ದು ಯೂಟ್ಯೂಬಿನಲ್ಲಿ ಆಧ್ಯಾತ್ಮಿಕ ಗುರುಗಳ ಭಾಷಣ ಕೇಳಿ ಭಾವುಕೋತ್ಸುಕಗೊಂಡು ಪುನೀತನಾದ ಭಾವದಲ್ಲಿ ಒಮ್ಮೊಮ್ಮೆ ಹನಿಗಣ್ಣಾಗುತ್ತಾನೆ. ಇವನು ಮುಂದೊಮ್ಮೆ ಎಲ್ಲವನ್ನೂ ಎಲ್ಲರನ್ನೂ ನಡುನೀರಲ್ಲಿ ಬಿಟ್ಟು ಈ ಜಗತ್ತು ಶೂನ್ಯ ಎಲ್ಲವೂ ಮೋಹ ಮತ್ತು ಮಾೆುಂ ಎಂದು ಎಲ್ಲಾ ಭವಬಂಧನಗಳಿಂದ ಬಿಡಿಸಿಕೊಂಡು ಉಟ್ಟಬಟ್ಟೆಯಲ್ಲೇ ರಾತ್ರೋ ರಾತ್ರಿ ಹೊರಟುಬಿಡುವವನಂತೆ ಕನಸು ಬೀಳುತ್ತದೆ ಯುಸೂಫನಿಗೆ! ಅದರ ಮುಂದುವರಿಕೆಯಾಗಿ ಮಾಯಾದೇವಿಯೂ ಕೂಡ ತನ್ನ ಮಾಯಾಪುಷ್ಪದ ಬಾಣ ಹೂಡಿ ಮತ್ತದೇ ಮಾೆುಂಯಲ್ಲಿ ಅವನನ್ನು ಬೀಳಿಸಿಕೊಂಡು ತನ್ನ ಸುಳಿೊಂಳಗೆ ಸಿಕ್ಕಿಸಿ ಬಸಿರಿಳಿಸಿ ಕೊಂದ ಮಗುವಿನದ್ದೇ ಸಾವು ಬರಿಸಿ ಆಟ ನೋಡುವ ಕಾಳಿಯಾಗಿ ಕಥೆಗಾರನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಬೆಳಿಗ್ಗೆ ಎಚ್ಚರವಾದಾಗ ಇರುಳು ಬಿದ್ದ ಕನಸಿಗೆ ಬೆಚ್ಚಿದವನು ‘ಇಲ್ಲ ಇಲ್ಲ ನಾನು ಊಹಿಸಿದಂತೆ ಇವ್ಯಾವುದು ಅಲ್ಲ. ಇವನದೊಂದು ಸರಳರೇಖೆಯ ಕಥೆಯಷ್ಟೇ! ಹಳ್ಳಿಯಲ್ಲಿ ಬೆಳೆದ ಒಬ್ಬ ಹುಡುಗನೊಬ್ಬ ಪೇಟೆಗೆ ಬಂದು ಬದುಕು ಕಟ್ಟಿಕೊಳ್ಳಲು, ಅದರಲ್ಲೂ ಕೈಯಲ್ಲಿ ನಾಲ್ಕು ಕಾಸು ಮಾಡಿಕೊಂಡು ಚೂರು ಶ್ರೀಮಂತವಾಗಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ, ಎಲ್ಲರಂತಿರುವ ಸೀದಾ ಸಾದಾ ಕಥೆ. ಇದರ ನಡುವೆ ನಡೆವುದೆಲ್ಲವು ಪ್ರೇಮ ಕಾಮದ ಚರ್ಮ ಮತ್ತು ಆತ್ಮಗಳ ಕರ್ಮ ಮತ್ತು ಮರ್ಮಗಳ ಜೋಕಾಲಿಯಾಟವಷ್ಟೇ’ ಎಂದು ಅವನನ್ನು ನಂಬಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದ.
***
ರಾಯಪ್ಪ ಈ ಎರಡು ವರ್ಷಗಳ ಹಿಂದೆ ಯುಸೂಫ ತಂಗುತ್ತಿದ್ದ ರವೀಂದ್ರನಾಥ ಟ್ಯಾಗೋರ ನಗರದ ಬಸ್ಟ್ಯಾಂಡಿನ ಹೊಸಿಲಿಗೆ ಅಂಟಿಕೊಂಡಿದ್ದ ಪೀಜಿಗೆ ರೂಮ್ಮೇಟಾಗಿ ಬಂದಿದ್ದ. ಆಗವನು ನರ್ಸಿಂಗ್ ಕಾಲೇಜಿನಲ್ಲಿ ಕೊನೆಯ ವರ್ಷದ ಪದವಿ ವ್ಯಾಸಂಗವನ್ನು ಮಾಡುತ್ತಿದ್ದ. ಕಾಲೇಜಿಗೆ ಹತ್ತಿರವಿದ್ದದ್ದರಿಂದ ಅಲ್ಲಿಗೆ ಬಂದು ಸೇರಿಕೊಂಡಿದ್ದ. ಯುಸೂಫ ಆ ಪೀಜಿಗೇ ಸೀನಿಯರ್ ಎನ್ನುವಷ್ಟರ ಮಟ್ಟಿಗೆ ಹಳಬನೆನ್ನಬಹುದಿತ್ತು. ಸುಮಾರು ಐದು ವರ್ಷಗಳ ಕಾಲ ಅದೊಂದೇ ಪೀಜಿಯಲ್ಲಿರಲು ಮುಖ್ಯ ಕಾರಣ ಆ ಪೀಜಿ ಮನೆಯಂತೆ ಇದೆ ಎನಿಸುತ್ತಿರುವುದೇ ಆಗಿತ್ತು. ಆಂಧ್ರ ಮೂಲದವರಾಗಿದ್ದ ಪೀಜಿಯ ಓನರ್ ಮನೆಯನ್ನೇ ಪೇಯಿಂಗ್ ಗೆಸ್ಟಾಗಿ ಪರಿವರ್ತಿಸಿದ್ದರು. ಬಸ್ಟ್ಯಾಂಡಿಗೆ ಅಂಟಿಕೊಂಡೇ ಇದ್ದದ್ದರಿಂದ ಜನರ ಹರಿವು ಚೆನ್ನಾಗಿೆುೀಂ ಇತ್ತು. ಪೀಜಿಯ ಪಕ್ಕಕ್ಕೆ ಎರಡು ಟೀ ಸಿಗರೇಟ್ ಮುರುಕು ತಿಂಡಿಗಳ ಅಂಗಡಿಯಿದ್ದವು. ಅದರ ಪಕ್ಕದಲ್ಲಿೆುೀಂ ಶ್ರೀ ಉಡುಪಿ ದರ್ಶಿನಿ ಎಂಬ ಬ್ರಾಹ್ಮಣ ಹೋಟೆಲ್ ತಲೆೆುಂತ್ತಿ ನಿಂತಿತ್ತು. ಯುಸೂಫ ಬಂದ ಆರಂಭದ ದಿನಗಳಲ್ಲಿ ಪೀಜಿಯ ಕೆಳಮಹಡಿಯಲ್ಲಿ ಸಾರ್ವಜನಿಕರಿಗಾಗಿ ಖಾನಾವಳಿ ತರದ ಒಂದು ಪುಟ್ಟ ಮೆಸ್ ಕೂಡ ಇತ್ತು. ಪೀಜಿಯಲ್ಲಿ ತಂಗಿದ್ದ ಹುಡುಗರೆಲ್ಲರಿಗೂ ಊಟದ ರುಚಿಯಲ್ಲಿ ಯಾವುದೇ ಕೊರತೆಯಿರಲಿಲ್ಲ. ಪೀಜಿಯ ನೇರಕ್ಕೆ ಬ್ಯಾಂಕ್ ಮತ್ತು ಅದರಿಂದ ಕರ್ಣರೇಖೆ ಕೊನೆಯಾಗುವ ಬಿಂದುವಿನಲ್ಲಿ ಪೊಲೀಸ್ ಸ್ಟೇಷನ್ ಇತ್ತು. ಪೊಲೀಸರು ಕೂಡ ಆಗಾಗ ಎಣ್ಣೆ ಪಾರ್ಟಿಯನ್ನು ಪೀಜಿಯ ಡೈನಿಂಗ್ ಹಾಲಿನಲ್ಲಿ ಗುಟ್ಟಾಗಿ ಮಾಡುವುದಿತ್ತು. ಭಾನುವಾರದ ದಿನಗಳಂದು ಎಸ್.ಐ ಸಮೇತ ಆರಕ್ಷಕ ಗಣವೆಲ್ಲವೂ ಸಹ ಚಿಕನ್ ಫ್ರ್ತ್ಯೈ, ಫಿಶ್ ಫ್ರ್ತ್ಯೈ, ಬಿರಿಯಾನಿ ಇತ್ಯಾದಿಗಳನ್ನೆಲ್ಲಾ ಮಾಡಿಸಿ ಮಧ್ಯಾಹ್ನದ ಭೋಜನವನ್ನು ಅಲ್ಲಿೆುೀಂ ಮುಗಿಸುವುದು ಇತ್ತು. ಪೊಲೀಸರು ಒಮ್ಮೊಮ್ಮೆ ಪೊಲೀಸ್ ಸ್ಟೇಷನ್ನಿನಲ್ಲಿ ಕಡಿಮೆ ಮತ್ತು ಪೀಜಿಯಲ್ಲಿೆುೀಂ ಜಾಸ್ತಿ ಎನ್ನುವಂತೆ ಡೈನಿಂಗ್ ಟೇಬಲ್ಲಿಗೆ ಅಂಟಿಕೊಂಡ ಒಂದು ಬೆಡ್ಡಿನಲ್ಲಿ ಗೊರಕೆ ಸಹಿತ ನಿದ್ದೆ ಹೊಡೆಯುತ್ತಲೋ, ಆಕಳಿಸುತ್ತಲೋ, ಕ್ರಿಕೆಟ್ ನೋಡುತ್ತಲೋ, ಇನ್ಸ್ಟಾದಲ್ಲಿ ರೀಲ್ಸ್ ನೋಡುತ್ತಲೋ ಕಾಣಸಿಗುತ್ತಿದ್ದರು. ಪೀಜಿಯ ಹುಡುಗರ ರೂಮುಗಳೆಲ್ಲಾ ಒಂದನೇ ಮಹಡಿಯಲ್ಲಿದ್ದುದರಿಂದ ಹುಡುಗರಿಗೆ ನಮ್ಮದು ಪೀಜಿ ಕಡಿಮೆ ಮಿನಿ ಪೊಲೀಸ್ ಸೆಕ್ಷನ್ ಆಗಿ ಕಾಣಸಿಗುತ್ತಿತ್ತು. ಪೀಜಿಯಲ್ಲಿ ಒಂದಿಷ್ಟು ಜನ ಹೊಸದಾಗಿ ಟ್ರೇನಿಂಗಿಗೆ ಬಂದ ಪೊಲೀಸರು ಕೂಡ ಇರುತ್ತಿದ್ದರು. ರಾಯಪ್ಪ ಕಾಲೇಜು ಮುಗಿಸಿಬಂದು ಹತ್ತಿರದಲ್ಲೇ ಇದ್ದ ಗೌರಿ ಕ್ಲಿನಿಕ್ಕಿನಲ್ಲಿ ನರ್ಸ್ ಆಗಿ ಪಾರ್ಟ್ ಟೈಮ್ ಜಾಬ್ ಕೂಡ ಮಾಡುತ್ತಿದ್ದ. ಹೀಗೆ ಎಲ್ಲವೂ ಒಂದು ಲಯದಲ್ಲಿ ಸಾಗುತ್ತಿದೆ ಎನಿಸುವಾಗ ಇದ್ದಕ್ಕಿದ್ದಂತೆ ಯಾವುದೋ ತಿರುವಿನಲ್ಲಿ ಸರಕ್ಕನೆ ಎಲ್ಲವೂ ಬದಲಾಗಿ ಹೋಯಿತು.
ಇಡೀ ಪೀಜಿಯ ಬೆಡ್ಡುಗಳಲ್ಲಿ ತಿಗಣೆಗಳು, ಯಾವುದೇ ಸರಿಯಾದ ನಿರ್ವಹಣೆ ಇಲ್ಲದೆ ಅಲ್ಲಲ್ಲಿ ಜಿರಳೆಗಳು, ಅಡುಗೆಮನೆಗೆ ಧಾಂಗುಡಿಯಿಟ್ಟ ಇಲಿ ಹೆಗ್ಗಣಗಳು, ಯಾವುದೋ ದರಿದ್ರತನ ಇಡೀ ಪೀಜಿಗೆ ಅಂಟಿಕೊಂಡುಬಿಟ್ಟಿತು. ಇದೇ ಹೊತ್ತಿನಲ್ಲಿ ರಾಯಪ್ಪ ಒಂದು ದಿನ ತಾನು ಗ್ಲೋಬಲ್ ಮನಿ ಡಾಟ್ ಕಾಮ್ ಎನ್ನುವ ಕಂಪೆನಿಗೆ ಉದ್ಯೋಗಿಯಾಗಿ ಸೆಲೆಕ್ಟ್ ಆಗಿದೀನಿ ಎಂದು ಬಿಡುವಿನ ವೇಳೆಯಲ್ಲಿ ಮನಿ ಎಂಬ ವಿಟಮಿನ್ ಎಂ ಎಂಬ ಮಾಯಾಜಿಂಕೆಯ ಹಿಂದೆ ಬಿದ್ದ. ಉಸಿರು, ಹಣ, ಅಧ್ಯಾತ್ಮ, ಪ್ರೇಮ, ಕಾಮ, ಧೂಮ ಎಲ್ಲ ಬೆರೆತ ವರ್ಣಮಯ ಚಿತ್ರವಾಗಿ ರಾಯನ ಬದುಕು ಯುಸೂಫನಿಗೆ ಕಾಣತೊಡಗಿತು.
***
ಕೆಂಡದ ಕಣ್ಣುಗಳನ್ನು ಹೊತ್ತು ಇನ್ನೇನು ಎಲ್ಲವೂ ಮುಗಿದು ಹೋಯಿತು ಎನ್ನುವ ದೈನೇಸಿ ಭಾವದಲ್ಲಿ ಲಾಕ್ ಓಪನ್ ಮಾಡಿ ವಾಟ್ಸಾಪ್ ತೆರೆದು ಅವನಿಗೆ ಬಂದಿದ್ದ ಆ ಮೆಸೆಜೊಂದನ್ನು ತೋರಿಸಿದ. ರಾಯಪ್ಪನ ಪ್ಯಾನ್ ಕಾರ್ಡ್ ಚಿತ್ರದ ಕೆಳಗೆ ಈ ರೀತಿ ಬರೆದಿತ್ತು.
‘ಈ ಚಿತ್ರದಲ್ಲಿರುವವನು ಇಂದು ಬೆಳಿಗ್ಗೆ ಐದು ವರ್ಷದ ಪುಟ್ಟ ಕಂದಮ್ಮನನ್ನು ಅತ್ಯಾಚಾರ ಮಾಡಿದ್ದಾನೆ. ಇವನನ್ನು ನೀವೆಲ್ಲಾದರೂ ಕಂಡರೆ ದಯವಿಟ್ಟು ಪೊಲೀಸರಿಗೆ ಸುದ್ದಿ ತಿಳಿಸಿ. ಒಬ್ಬ ಕ್ರೂರ ಅಪರಾಧಿ ಜೈಲು ಪಾಲಾಗುವುದಕ್ಕೆ ಸಹಕರಿಸಿ. ಈ ಮೆಸೇಜನ್ನು ಕನಿಷ್ಠ ಐದು ಜನರಿಗಾದರೂ ಫಾರ್ವರ್ಡ್ ಮಾಡಿ’ ಎಂದು ಬರೆದಿತ್ತು.
ಇದನ್ನು ನೇರವಾಗಿ ಇವನಿಗೆ ಕಳಿಸಿರಲಿಲ್ಲ. ರಾಯ ಹೊಸದಾಗಿ ಕೆಲಸ ಮಾಡುತ್ತಿದ್ದ ಗ್ಲೋಬಲ್ ಮನಿ ಡಾಟ್ ಕಾಮ್‌ನ ಮಿಂಚಂಚೆ ಹುಡುಕಿ ವರ್ಗಾಯಿಸಿದ್ದರು. ರಾಯನ ಟೀಮ್ ಲೀಡರ್ ಕರೆ ಮಾಡಿ ‘ಇದೇನಿದು ಮಿಸ್ಟರ್ ರಾಯಪ್ಪ? ನಿಮ್ಮ ಮೇಲೆ ಹೀಗೊಂದು ಆರೋಪ ಬಂದಿದೆ. ಇದು ನಿಜಾನಾ?’ ಎಂದು ಕೇಳಿದ್ದರು. ರಾಯನಿಗೆ ಕಾಲಕೆಳಗೆ ನೆಲಕುಸಿದ ಅನುಭವ. ಒಂದೇ ಒಂದು ಆರೋಪ ಇಡೀ ಜೀವನವನ್ನೇ ಕಸಿದುಕೊಳ್ಳುವಷ್ಟು ಸಶಕ್ತವಾಗಿತ್ತು. ಯುಸೂಫನಿಗೂ ಇದು ಆಘಾತ ತಂದಿತ್ತು.
***
ರಾಯಪ್ಪ ಆಸ್ಪತ್ರೆ ಕೆಲಸ ಬಿಟ್ಟು ಹದಿನೈದು ದಿನಗಳಾದರೂ ಅಲ್ಲಿನ ಮೂಳೆ ಡಾಕ್ಟರು ತುರ್ತಾಗಿ ಆಪರೇಷನ್ ಬಂದಾಗ ಇವನಿಗೆ ಕರೆ ಮಾಡಿ ಸಹಾಯಕ್ಕೆ ಬರಲು ಗುಪ್ತವಾಗಿ ಸೂಚಿಸುತ್ತಿದ್ದರು. ಆಪಾದನಾ ಒಕ್ಕಣಿಕೆಯಲ್ಲಿದ್ದಂತೆ ಅಂದು ಅವನು ಆಸ್ಪತ್ರೆಗೇ ಹೋಗಿರಲಿಲ್ಲ. ಇದೊಂದು ಶುದ್ಧ ಆಪಾದನೆ. ಅದೇ ಯಾರೋ ಆಗದವರು ಇವನ ಮೇಲೆ ಈ ರೀತಿ ಮಾಡಿದ್ದಾರೆ. ಆಗದವರು ಎಂದರೆ? ಈ ಮಟ್ಟಿಗೆ ಆಪಾದನೆ ಮಾಡುವಷ್ಟರ ಮಟ್ಟಿಗೆ ರಾಯ ಅವರಿಗೇನು ಮಾಡಿರಬಹುದು? ಕೆಂಡವಿಲ್ಲದೆ ಹೊಗೆಯಾಡುತ್ತದೆಯೇ? ಯುಸೂಫನ ಮನಸ್ಸು ಒಂದೇ ಬಾರಿಗೆ ಹಲವು ಕೋನಗಳಲ್ಲಿ ಯೋಚಿಸಹತ್ತಿತು. ಎರಡೂ ಕಡೆ ವಾಲುವುದಕ್ಕೂ ಸಾಕ್ಷಿ ಎನ್ನುವಂತೆ ಹಲವು ಘಟನೆಗಳಿದ್ದವು. ಯಾವ ಕಡೆ ವಾಲುವುದಕ್ಕೆ ಸಾಧ್ಯವೋ ಆ ಕಡೆ ನಿಂತು ಚುಕ್ಕೆಗಳನ್ನು ಜೋಡಿಸಿಕೊಳ್ಳಲಿಕ್ಕೆ ಸಾಧ್ಯವಿತ್ತು.
ಆ ಆಪಾದನೆ ನಿಜವೇ ಇದ್ದಿರಬಹುದು ಎನ್ನುವುದನ್ನು ಪುಷ್ಟೀಕರಿಸುವಂತೆ ರಾಯ ಎದುರುಗಡೆಯೇ ಇದ್ದ ಪೊಲೀಸ್ ಸ್ಟೇಷನ್ನಿನಲ್ಲಿ ಒಂದು ಎಫ್‌ಐಆರ್ ಕೂಡ ದಾಖಲಿಸಿರಲಿಲ್ಲ. ತಪ್ಪೇ ಮಾಡಿಲ್ಲ ಎಂದ ಮೇಲೆ ಯಾಕೆ ರಾಜಾರೋಷವಾಗಿ ಹೋಗಿ ಸೈಬರ್ ಕ್ರ್ತ್ಯೈಂ ಅಡಿಯಲ್ಲಿ ಮತ್ತು ಮಾನನಷ್ಟ ಮೊಕದ್ದಮೆ ಇತ್ಯಾದಿಗಳಡಿಯಲ್ಲಿ ಒಂದು ಕಂಪ್ಲೇಂಟ್ ಕೂಡ ಕೊಡಲಿಲ್ಲ? ಕೇಳಿದ್ದಕ್ಕೆ ‘ಇಲ್ಲ ಇಲ್ಲ ನಮ್ಮ ಅಣ್ಣ ಅದಾನ ಊರಾಗ. ಅವನಿಗೆ ಹೇಳೀನಿ. ಅವ ಎಲ್ಲಾ ನೋಡಿಕೊಳ್ತಾನ!’ ಎಂದು ಹೇಳಿದ್ದ. ಮನೆಯಲ್ಲಿ ಹೇಳಿ ಮುಂದಿನ ಮೂರೇ ದಿನದಲ್ಲಿ ಮಾಡಿದ್ದ ಸಾಲಗಳನ್ನೆಲ್ಲಾ ತೀರಿಸಿ ಪೀಜಿ ತೊರೆದು ಊರು ಸೇರಿದ. ‘ಯಾಕಿಂಗ್ ಅವಸರ ಮಾಡ್ಲಿಕತ್ತಿ ರಾಯಾ. ನೀನಿಂಗೆ ಅವಸರವಸರ ಮಾಡಿ ಊರು ಬಿಟ್ಟು ಹೊಂಟಿ ಅಂದ್ರ ಆಪಾದನೆ ನಿಜ ಅಂತ ಆಗಂಗಿಲ್ಲೇನು?’ ಎಂದು ಕೇಳಿದ್ದಕ್ಕೆ ‘ಇಲ್ಲಾ ಬ್ರೋ. ಮನೇಲಿ ನೀನಲ್ಲಿರೋದೆ ಬ್ಯಾಡ. ಬಡಾನ ನೀನಿಲ್ಲಿಗೆ ಬಾ. ಜಲ್ದಿ ನಿನಿಗೆ ಒಂದು ಹುಡುಗಿ ನೋಡಿ ಮದ್ವಿ ಮಾಡ್ತೀವಿ ಅಂತ ಕುಂತಾರ. ಮನಿೋಂರು ಭಾಳ ಹೆದರಿಯಾರೆ’ ಎಂದಿದ್ದ.
ಮತ್ತೊಂದು ಕಡೆ ನಿಂತು ಯೋಚಿಸಿದರೆ ನಾವು ಯಾವಾಗಲೂ ಅತಿರೇಕಗಳನ್ನೇ ನಂಬುತ್ತೇವೆ. ಪರರು ಕೆಟ್ಟರು ಎನ್ನುವುದು ನಮಗೆ ಖುಷಿ ಕೊಡುತ್ತದೆ. ಅದನ್ನ ನಾವು ಮಾತುಗಳಲ್ಲಿ ಆಡಿ ಬಾಯಿಚಪಲ ತೀರಿಸಿಕೊಳ್ಳುತ್ತೇವೆ. ಎರಡು ವರ್ಷಗಳ ಕಾಲ ಯಾವುದೋ ಮಾಯದ ಕನಸಿನ ಹಿಂದೆ ಬಿದ್ದು ಏನೋ ಮಾಡಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಳ್ಳಬೇಕೆಂದು ಬಡಿದಾಡಿದ ಹುಡುಗ, ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದ ಒಂದು ಜೀವ, ಅದೆಷ್ಟು ಸಿಗರೇಟುಗಳನ್ನು ಒಟ್ಟಿಗೆ ಸುಟ್ಟು ಅದೆಷ್ಟು ಕನಸುಗಳನ್ನು ಹಂಚಿಕೊಂಡಿದ್ದವನ ಜೀವನದಲ್ಲಿ ಎದುರಾಗಿದ್ದ ಒಂದು ಆಪಾದನೆ ಸುಳ್ಳು. ಶುದ್ಧ ಸುಳ್ಳು. ಯಾರೋ ಆಗದವರು ಮಾಡಿದ ಸಂಚು ಎಂದು ಮತ್ತೆ ಮತ್ತೆ ಯುಸೂಫ ತನಗೆ ತಾನೇ ಹೇಳಿಕೊಂಡ. ಆ ಮೆಸೇಜು ಅವನಿಗೆ ತಲುಪಿದಾಗ ರಾಯನ ಕಣ್ಣುಗಳಲ್ಲಿ ಕಂಡ ಭಯ, ಅಸಹಾಯಕತೆ ತನ್ನಲ್ಲಿ ಕೊನೆಯವರೆಗೂ ಉಳಿಯಲಿದೆ ಎಂದು ನಿದ್ದೆಯೂ ಹತ್ತುತ್ತಿರಲಿಲ್ಲ.
ಮತ್ತದೇ ಪ್ರಶ್ನೆಗಳು… ಎಲ್ಲಿ ನಿಲ್ಲುವುದು? ಯಾವ ನಿಲುವಿನ ಬೆನ್ನಿಗೆ ಆತುಕೊಳ್ಳುವುದು?
ಮತ್ಯಾವುದೋ ನಿದ್ದೆ ಹತ್ತದ ಘಳಿಗೆಯಲ್ಲಿ ಹೊಳೆಯುತ್ತದೆ. ಮುಂದೆ ಎಂದೋ ಒಮ್ಮೆ ರಾಯಾ ಯುಸೂಫ ಬರೆಯಲಿರುವ ಕಥೆಯಲ್ಲಿ ಬರುತ್ತಾನೆೆುೀಂ? ಅಷ್ಟಕ್ಕೂ ಊಹೆಗಳು ಕಥೆಯಾಗುವುದಿಲ್ಲವಲ್ಲ.
***
ಹೊರಡುವ ದಿನ ರಾಯ ಅವನ ಕಡು ನೀಲಿ ಶರ್ಟ್ ಒಂದನ್ನು ಯುಸೂಫನಿಗೆ ಕೊಟ್ಟು ‘ಭಾಯ್, ಇದು ನಿನ್ನ ಮೇಲೆ ಚೆನ್ನಾಗಿ ಕಾಣುತ್ತದೆ. ನನ್ನ ನೆಪ್ಪಿಗಿರ್ಲಿ’ ಎಂದು ಹೇಳಿ ಅಪ್ಪಿಕೊಂಡು ಬೀಳ್ಕೊಟ್ಟು ಹೊರಟುಹೋದ. ಅವನು ಹೋದ ಸಂಜೆ ಆ ಕಡುನೀಲಿ ಶರ್ಟನ್ನು ಹಾಕಿಕೊಂಡು ಕನ್ನಡಿಯ ಮುಂದೆ ನಿಂತು ನೋಡಿಕೊಂಡ ಯುಸೂಫ. ಬಿಂಬ ಅವನಿಗಿಂತ ದೂರದಲ್ಲಿ ನಿಂತಂತೆ ಅನಿಸಿತು. ಮೆಟ್ಟಿಲಿಳಿದು ಕೆಳಗಿನ ಮಹಡಿಗೆ ಹೋದ. ಪೊಲೀಸರು ಟೀವಿ ನೋಡುತ್ತಿದ್ದರು. ಚಹಾ ಅಂಗಡಿಯಲ್ಲಿ ಸಿಗರೇಟನ್ನು ಕೊಂಡು ನಾಲ್ಕೇ ಪಫಿನಲ್ಲಿ ಮುಗಿಸಿ ಹಾಗೆ ಸುಮ್ಮನೆ ಗಾಳಿಗೆ ಮೈೊಂಡ್ಡಿ ಹೋದಾಗ ನೂರು ಹೆಜ್ಜೆ ಮುಗಿಯುವಲ್ಲಿ ಬಲಪಕ್ಕದಲ್ಲಿ ಗೌರಿ ಕ್ಲಿನಿಕ್ ಕಂಡಿತು. ಯುಸೂಫನ ಕಣ್ಮುಂದೆ ತಾನೆಂದೂ ಕಂಡಿರದ ಐದು ವರ್ಷದ ಆ ಪುಟ್ಟ ಹುಡುಗಿಯ ಅಸ್ಪಷ್ಟ ಆಕೃತಿ ಕಣ್ಮುಂದೆ ಬಂದಂತಾಗಿ ಸಂಕಟವಾಗತೊಡಗಿತು.
(ಕಥೆಗಾರ ದಾದಾಪೀರ್ ಜೈಮನ್ ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರಶಸ್ತಿ ವಿಜೇತರು)