Mysore
29
scattered clouds
Light
Dark

ಅನುಭವವೆಂಬ ಗ್ರಂಥಶಾಲೆ

‘ದೇಶ ಸುತ್ತು ಕೋಶ ಓದು’ ಎಂಬ ಕನ್ನಡದ ನಾಣ್ಣುಡಿಯಂತೆ ನನ್ನ ಜೀವನದಲ್ಲಿಯೂ ನಾನು ಭಾರತದ ಹಲವು ಭಾಗಗಳಲ್ಲಿ ಹಾಗೂ ವಿದೇಶಗಳಲ್ಲಿಯೂ ವಿಶ್ವ ಸಂಸ್ಥೆಯ ಪರವಾಗಿ ಕೆಲಸ ಮಾಡಿದ್ದೇನೆ, ಕುಟುಂಬದೊಂದಿಗೆ ಹೊರ ದೇಶಗಳ ಪ್ರವಾಸವನ್ನೂ ಮಾಡಿದ್ದೇನೆ. ಯೂರೋಪಿನ ಕೆಲವು ದೇಶಗಳಲ್ಲದೆ, ಆಫ್ರಿಕಾ ದೇಶಗಳಲ್ಲಿಯೂ, ಅಮೆರಿಕದಲ್ಲಿ ನೆಲೆಸಿರುವುದರಿಂದ ಅನೇಕ ಕುತೂಹಲ ಪ್ರದೇಶಗಳನ್ನೂ ಕಂಡಿದ್ದೇನೆ, ವಿಚಿತ್ರ ಘಟನೆಗಳನ್ನು ಅನುಭವಿಸಿದ್ದೇನೆ. ಅವುಗಳಲ್ಲಿ ಒಂದಿಷ್ಟು ಈಗಲೂ ನೆನಪಿನಲ್ಲಿವೆ.

ಘಟನೆ ಒಂದು: ನಾನು ತಾಂಜಿನಿಯಾದಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಜತೆ ಜರ್ಮನ್ ಯುವಕನೊಬ್ಬ ಕೆಲಸ ಮಾಡುತ್ತಿದ್ದ. ಆ ಯುವಕನಿಗೆ ನನ್ನ ಆಂಗ್ಲ ಭಾಷೆಯ ಪ್ರಭುದ್ಧತೆ ನೋಡಿ ನನ್ನ ಬಗ್ಗೆ ಅಭಿಮಾನ. ಹೀಗಾಗಿ ಅವನು ಬರೆದುದ್ದನ್ನು ನಾನು ನೋಡಿ ಸರಿಪಡಿಸುತ್ತಿದ್ದೆ. ಒಮ್ಮೆ ಸಂದಿಗ್ಧ ಪರಿಸ್ಥಿತಿ ಬಂತು… ಅವನು ತನ್ನ ಪ್ರೇಯಸಿಗೆ ಕಾಗದ ಬರೆದು ನನ್ನ ಬಳಿ ಕೇಳಿ ಸರಿಪಡಿಸಿಕೊಂಡ. ಅದರಲ್ಲಿ ನನ್ನ ಭಾವನೆಗಳೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸಿ ಬರೆದುಕೊಟ್ಟೆ. ಆತ ಅದನ್ನು ಪ್ರೇಯಸಿಗೆ ಕೊಟ್ಟು ಬಂದ ಅದನ್ನು ಕೊಡುವುದಕ್ಕೂ ಮೊದಲು ಅವನ ಪ್ರೇಯಸಿಯನ್ನು ನನಗೆ ದೂರದಿಂದಲೇ ತೋರಿಸಿದ. ನನ್ನ ಅಭಿಪ್ರಾಯವನ್ನು ಕೇಳಿದ. ಆಕೆ ಅಮೆರಿಕ ಪತ್ರಕರ್ತೆ ಎಂದು ತಿಳಿಸಿದ. ಹತ್ತಿರ ಹೋಗಲು ನನಗೆ ಧೈರ್ಯವಿಲ್ಲ. ಆಕೆ ಚೆನ್ನಾಗಿದ್ದಾಳೆ ಎಂದು ಹೇಳಿ ಸುಮ್ಮನಾದೆ. ಜರ್ಮನ್ ದೇಶದ ಜನರು ಯಾವುದೇ ಕೆಲಸವನ್ನು ಮುತುವರ್ಜಿಯಿಂದ ಮಾಡುತ್ತಾರೆ ಎಂಬುದಕ್ಕೆ ಆತ ಆ ಪತ್ರವನ್ನು ನನ್ನಿಂದ ತಿದ್ದಿಸಿಕೊಂಡ ಅನಿಸುತ್ತದೆ.

ಘಟನೆ ಎರಡು:
ನನ್ನ ಮಗ ಬಹಳ ವರ್ಷಗಳಿಂದ ಅಮೆರಿಕದಲ್ಲಿ ಕುಟುಂಬ ಸಹಿತ ನೆಲಿಸಿದ್ದಾನೆ. ಅಲ್ಲಿಗೆ ನಾವೂ ಸಾಕಷ್ಟು ಸಲ ಹೋಗಿ, ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸಿದ್ದೇವೆ. ಹೀಗೆ ಒಂದು ಸಲ ಒಂದು ಪ್ರವಾಸಿ ತಾಣಕ್ಕೆ ಹೋಗಿದ್ದಾಗ ಒಂದು ಹೋಟೆಲಿನಲ್ಲಿ ತಂಗಿದ್ದೆವು. ಆ ಹೋಟೆಲ್ ನಡೆಸುತ್ತಿದ್ದವರು ವಯಸ್ಸಾದ ಜರ್ಮನ್ ದಂಪತಿಗಳು, ಇಬ್ಬರೇ ಲವಲವಿಕೆಯಿಂದ ನಮ್ಮನ್ನು ಉಪಚರಿಸುತ್ತಿದ್ದರು. ಅವರು ಇಲ್ಲಿ ಬಹಳ ವರ್ಷಗಳಿಂದ ನೆಲಿಸಿದ್ದರೂ ಅವರು ತಮ್ಮ ದೇಶದ ವರ್ಣನೆ ಮಾಡುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ಆದರೆ ಅವರಿಗೆ ಜರ್ಮನ್ ಭಾಷೆ ಬರುವುದಿಲ್ಲ ಎಂಬುದಷ್ಟೇ ಅವರ ಮನಸ್ಸಿನಲ್ಲಿದ್ದ ಬೇಸರ, ಮಕ್ಕಳು ಅಮೆರಿಕದಲ್ಲಿ ಹುಟ್ಟಿ ಬೆಳೆದಿದ್ದರಿಂದ ಆಂಗ್ಲಭಾಷೆ ಬಿಟ್ಟು ಜರ್ಮನ್ ಕಲಿಯುವ ಇಚ್ಛೆ ತೋರಿಸಲಿಲ್ಲ. ಒಂದು ಸಲ ಮಕ್ಕಳನ್ನು ಜರ್ಮನಿಯ ದಕ್ಷಿಣ ಪ್ರದೇಶಕ್ಕೆ ರಮಣೀಯ ಪದೇಶಗಳಿಗೆ ಕರೆದುಕೊಂಡು ಹೋಗಬೇಕು ಎಂಬುದು ಅವರ ಆಸೆ. ಬಹುಶಃ ಇದೇ ಪರಿಸ್ಥಿತಿ ನಮ್ಮಲ್ಲೂ ಇದೆ. ನಮ್ಮ ಮಕ್ಕಳೂ ಕನ್ನಡ ಮಾತಾಡುವುದು ವಿರಳವಾಗುತ್ತಿರುವುದು ವಿಷಾದದ ಸಂಗತಿ.

ಘಟನೆ ಮೂರು: ನಾನು ನನ್ನ ಪತ್ನಿ ಪ್ಯಾರೀಸ್‌ನ ಒಂದು ಪ್ರಖ್ಯಾತ ನೀಸ್ ಎಂಬ ರಮಣೀಯ ಸ್ಥಳಕ್ಕೆ ಹೋಗಿದ್ದೆವು. ಅಲ್ಲಿ ಹರಿಯುತ್ತಿದ್ದ ನದಿಯ ಕಂಡು ಆನಂದಿಸುತ್ತಿದ್ದೆವು. ಏಕಾಏಕಿ ನಾಲ್ಕೈದು ಹುಡುಗಿಯರು ಬಂದು ನಮ್ಮ ಮೈಮೇಲೆಲ್ಲಾ ಕೈ ಆಡಿಸಲು ಶುರು ಮಾಡಿದರು. ನಮ್ಮಲ್ಲಿನ ಹಣ ದೋಚುವ ಪ್ರಯತ್ನವಿರಬಹುದು. ನಮಗೆ ಭಾಷೆ ಗೊತ್ತಿಲ್ಲ. ಹೊಸ ಜಾಗ, ಗಾಬರಿಯಾದೆವು. ಅದೃಷ್ಟವಶಾತ್ ನಮ್ಮ ಪಕ್ಕದ ಬೆಂಚಿನಲ್ಲಿ ಕುಳಿತ್ತಿದ್ದ ಒಬ್ಬ ಪ್ಯಾರೀಸಿನ ವ್ಯಕ್ತಿಯೊಬ್ಬರು ಅವರನ್ನು ಬೆದರಿಸಿ ಓಡಿಸಿದರು. ಅಂತೂ ನಾವು ನಿಟ್ಟುಸಿರು ಬಿಡುವಂತಾಯಿತು.

ಘಟನೆ ನಾಲ್ಕು: ನಾನು ಲಕ್ನೋ ಆಫೀಸಿನ ಮುಖ್ಯಸ್ಥನಾಗಿ ವರ್ಗಾವಣೆಯಾಗಿದ್ದೆ. ಉತ್ತರಪ್ರದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಉಸ್ತುವಾರಿ ನನ್ನ ಮೇಲಿತ್ತು. ಅದರ ವರದಿಯನ್ನು ದೆಹಲಿಯ ಕಚೇರಿಗೆ ಕಳುಹಿಸುತ್ತಿದ್ದೆ. ಈಗಿನ ಅಯೋಧ್ಯೆ ಆಗ ಫೈಸಾಬಾದ್. ಆ ಸಮಯದಲ್ಲಿ ಬಾಬ್ರಿ ಮಸೀದಿಗೆ ಭೇಟಿ ನೀಡಿದ್ದಾಗ 24 ಗಂಟೆಯೂ ಪ್ರಾರ್ಥನೆ ನಡೆಯುತ್ತಿತ್ತು, ಕೆತ್ತನೆಯ ಕೆಲಸಗಳೂ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪತ್ನಿ ಜತೆ ಅಲಹಾಬಾದಿಗೆ ಹೋಗಿದ್ದೆ. ಆಗ ಸಂಗಮದಲ್ಲಿ ಸ್ನಾನ ಮಾಡಿ ನಾನು ಹೊರ ಬಂದೆ. ನನ್ನ ಪತ್ನಿ ಇನ್ನೂ ಸ್ನಾನ ಮಾಡುತ್ತಿದ್ದಳು. ಆಗಲೇ ಅವಳ ಸೊಂಟದವರೆಗೂ ಸಣ್ಣ ಮರಳು ತುಂಬಿಕೊಂಡು ಜೇಡಿ ಮಣ್ಣಿನಂತೆ ಕುಸಿಯುತ್ತಿದ್ದಳು. ಅವಳನ್ನು ಮೇಲೆತ್ತಲು ಹರಸಾಹಸ ಪಟ್ಟು ಆಗದೆ ಕೊನೆಗೆ ಜೀಪ್ ಚಾಲಕನ ಸಹಾಯ ಪಡೆದು ಅವಳನ್ನು ರಕ್ಷಿಸಿದೆ. ಈಗ ನಿವೃತ್ತಿಯಲ್ಲಿರುವ ನಾನು ಸಾಕಷ್ಟು ಸಿಹಿ-ಕಹಿ, ಅನುಭವ ಪಡೆದಿದ್ದೇನೆ. ಇಂತಹ ಒಂದಿಷ್ಟು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.