Light
Dark

ಸಿನಿಮಾಲ್‌ : ಕೊರೊನಾ ನಡುವೆ ಕಜಕಿಸ್ತಾನದಲ್ಲಿ ಚಿತ್ರಿಸಿದ ‘ಗಾಳಿಪಟ 2’

‘ಮುಂಗಾರು ಮಳೆ’ಯ ನಂತರ ಯೋಗರಾಜ ಭಟ್-ಗಣೇಶ್ ಜೋಡಿಯ ‘ಗಾಳಿಪಟ’ ಕೂಡ ಯಶಸ್ವೀ ಚಿತ್ರಗಳಲ್ಲಿ ಒಂದಾಯಿತು. ಈಗ ಆ ಜೋಡಿಯ ‘ಗಾಳಿಪಟ ೨’ ತೆರೆಗೆ ಸಿದ್ಧವಾಗಿದೆ. ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೊರೊನಾ ನಡುವೆ ವಿದೇಶಕ್ಕೆ ತೆರಳಿ ಚಿತ್ರೀಕರಿಸಿದ ಮೊದಲ ಚಿತ್ರತಂಡ ‘ಗಾಳಿಪಟ ೨’. ಭಾರತದ ಯಾವ ಭಾಷೆಯ ಚಿತ್ರತಂಡಗಳೂ ಹೊರದೇಶಗಳಿಗೆ ತೆರಳಿರಲಿಲ್ಲ. ಕಜಕಿಸ್ತಾನದಲ್ಲಂತೂ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಚಿತ್ರೀಕರಣ. ಯೋಗರಾಜ ಭಟ್ ಹೇಳುತ್ತಾರೆ: ‘ಎಲ್ಲಾ ಕಡೆ ಲಾಕ್ ಡೌನ್. ಅಂತಹ ಸಮಯದಲ್ಲಿ ದೂರದ ಕಜಕಿಸ್ತಾನದಲ್ಲಿ ಚಿತ್ರೀಕರಣ ಮಾಡುವುದು ಅಂದರೆ ಕಷ್ಟ ಸಾಧ್ಯ. ಅದನ್ನು ಸಾಧ್ಯ ಮಾಡಿದವರು ನಮ್ಮ ನಿರ್ಮಾಪಕ ರಮೇಶ್ ರೆಡ್ಡಿ. ಈ ಹಾಡಿಗೆ ಸ್ನೋ ಬೇಕಾಗಿದ್ದರಿಂದ ಅಲ್ಲಿಗೆ ಹೋದೆವು. ಆದರೆ ಕೊನೆಗೆ ಯಾಕಾದರೂ ಬಂದೆವೊ? ಅನಿಸುವಷ್ಟು ಚಳಿ ಅಲ್ಲಿ. ಇಷ್ಟೆಲ್ಲ ಕಷ್ಟಗಳ ನಡುವೆ ಎಲ್ಲರಿಗೂ ಇಷ್ಟವಾಗುವ ಹಾಡನ್ನು ಚಿತ್ರಿಸಿಕೊಂಡು ಬಂದಿದ್ದೇವೆ’.

ಈಗ ‘ದೇವ್ಲೇ ದೇವ್ಲೇ’ ಎಂದು ಆರಂಭವಾಗುವ ಹಾಡನ್ನು ಮೊದಲು ‘ದೇವ್ರೇ ದೇವ್ರೇ…’ ಎಂದು ಬರೆದಿದ್ದರಂತೆ ಭಟ್ಟರು. ಅದನ್ನು ನೋಡಿ ಅರ್ಜುನ್ ಜನ್ಯ, ‘ಇದು ಮಾಮೂಲಿ ತರಹ ಇದೆ. ಸ್ವಲ್ಪ ಏನಾದರೂ ಬದಲಾವಣೆ ಮಾಡಿ’ ಎಂದಾಗ, ‘ರ’ ಕಾರ ತೆಗೆದು ‘ಲ’ ಕಾರ ಹಾಕಲು ಹೇಳಿದ್ದು, ವಿಜಯ್ ಪ್ರಕಾಶ್ ಹಾಡಿದ್ದು, ಹಿಂದಿನ ಹಾಡುಗಳಂತೆ ಈ ಹಾಡು ಕೂಡ ಗೆಲ್ಲುತ್ತೆ ಎನ್ನುವ ಭರವಸೆ ಅವರದು. ನಿರ್ಮಾಪಕ ರಮೇಶ್ ರೆಡ್ಡಿ, ಕಲಾವಿದರಾದ ಗಣೇಶ್, ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ಸುಧಾ ಬೆಳವಾಡಿ, ಸಂಗೀತ ಸಂಯೋಜಕ ಅರ್ಜುನ್ ಜನ್ಯ , ಗಾಯಕ ವಿಜಯ್ ಪ್ರಕಾಶ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ನೃತ್ಯ ಸಂಯೋಜಕಧನು, ಆನಂದ್‌ಆಡಿೋಂ ಶ್ಯಾಮ್ ‘ದೇವ್ಲೆ ದೇವ್ಲೆ’ ಹಾಡಿನ ಬಗ್ಗೆ ಹಾಗೂ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ