ಎನ್.ಕೇಶವಮೂರ್ತಿ
ನಂಜನಗೂಡಿನ ಸಮೀಪದಲ್ಲಿ ಕೃಷಿ ಮಾಡುತ್ತಿರುವ ರೈತರೊಬ್ಬರನ್ನು ಮಾತನಾಡಿಸುತ್ತಿದ್ದೆ. ಅವರು ತಾವು ಹತ್ತು ಗುಂಟೆ ಜಾಗದಲ್ಲಿ ನೈಸರ್ಗಿಕವಾಗಿ ಕಬ್ಬು ಬೆಳೆದ ಬಗ್ಗೆ ಮಾತನಾಡ್ತಿದ್ರು, ಅವರು ಐದು ಎಕರೇಲಿ ಕಬ್ಬು ಬೆಳೀತಾರೆ, ಆದರೆ, ಹೊಸ ರೀತಿಯಲ್ಲಿ ಕಬ್ಬು ಬೆಳೆಯೋಣ ಅಂದುಕೊಂಡು ಕೇವಲ ಹತ್ತು ಗುಂಟೆಯಲ್ಲಿ ನೈಸರ್ಗಿಕ ಕೃಷಿ ಪ್ರಯೋಗ ಮಾಡಿದ್ದಾರೆ. ಬಳಸಿದ್ದು ಮಾಮೂಲಿ ನಯನ ತಳಿ ಕೆಂಪು ಕಬ್ಬು, ಮೊದಲಿಗೆ ಐದು ಅಡಿ ಅಂತರದಲ್ಲಿ ಸಾಲು ಮಾಡಿ, ಒಂದು ಕಣ್ಣಿನ ಕಬ್ಬಿನ ತುಂಡನ್ನು ನಾಟಿ ಮಾಡಿದ್ದಾರೆ.
ಜಮೀನಿನ ಸಿದ್ಧತೆ ಮಾಡುವಾಗಲೇ ದಂಡಿಯಾಗಿ ಹಟ್ಟಿ ಗೊಬ್ಬರ ಹಾಕಿದ್ದಾರೆ. ಕಬ್ಬಿನ ಬಿತ್ತನೆ ತುಂಡುಗಳನ್ನು ಬೀಜಾಮೃತದಲ್ಲಿ ಉಪಚರಿಸಿ ಬಿತ್ತಿದ್ದಾರೆ. ಕಬ್ಬಿನ ಸಾಲಿನ ನಡುವೆ ಬದನೆ ಕಾಯಿ, ಮೆಣಸಿನ ಕಾಯಿ, ಟೊಮೆಟೋ ಸಸಿಗಳನ್ನು ನಾಟಿ ಮಾಡಿದ್ದಾರೆ. ಕಬ್ಬಿನ ಸಾಲಿನಲ್ಲಿ ಈರುಳ್ಳಿ, ಬೆಂಡೆ ಹಾಗೂ ಸಂಬಾರ ಸೊಪ್ಪು ಬೆಳೆದಿದ್ದಾರೆ. ಸಾಲು ಬಿಟ್ಟು ಸಾಲಿನಲ್ಲಿ ಹೆಸರು, ಉದ್ದು, ಅಲಸಂದೆ ಹಾಕಿದ್ದಾರೆ.
‘ಸಾರ್, ಹಿಂದೆ ನಾವು ಮೂಡು ಅಡಿಗೆ ಕಬ್ಬು ಹಾಕಿದ್ರೆ ಮಧ್ಯದಲ್ಲಿ ಏನೂ ಬೆಳೀತಿರಲಿಲ್ಲ. ಮೂರು ತಿಂಗಳಾದ ಮೇಲೆ ಕಬ್ಬಿನ ಸಾಲಿನ ನಡುವೆ ಓಡಾಡೋಕೂ ಆಗ್ತಿರಲಿಲ್ಲ. ಐದು ಅಡೀಲಿ ಕಬ್ಬು ನಾಟಿ ಮಾಡಿ ಇಷ್ಟೆಲ್ಲಾ ಬೆಳೆ ಹಾಕಿದ ಮೇಲೆ, ನನಗೆ ನಾವು ಕಬ್ಬು ಬೆಳೀತಿದ್ದೀವೋ ಅಥವಾ ತರಕಾರಿ ಬೆಳೀತಿದ್ದೀವೋ ಅನ್ನಿಸೋಕೆ ಶುರುವಾಯ್ತು. ರಾಸಾಯನಿಕ ಗೊಬ್ಬರ ಹಾಕಲಿಲ್ಲ. ಹದಿನೈದು ದಿನಕ್ಕೆ ಒಂದು ಸಲ ಜೀವಾಮೃತ ಕೊಟ್ಟೆ, ಮೊದಲು ಕಬ್ಬು ನರಳುತ್ತಲೇ ಬೆಳೀತು.
ಪಕ್ಕದ ರಾಸಾಯನಿಕ ವಿಧಾನದ ಕಬ್ಬು ಹುಲುಸಾಗಿ ಬೆಳೀತಿತ್ತು. ಓ ಈ ವಿಧಾನ ಸರಿ ಇಲ್ಲವೇನೋ ಅನ್ನಿಸೋಕೆ ಶುರುವಾಯಿತು’ ಅಂತಾ ಹೇಳುವಾಗ ನನ್ನ ಕುತೂಹಲ ಜಾಸ್ತಿಯಾಯ್ತು. ಅವರು ಮುಂದುವರಿದು ಹೇಳಿದು, “ಆದರೆ ನೋಡಿ ಸಾರ್ ಐದು ತಿಂಗಳ ಬಳಿಕ ಈ ವಾರದಕಬ್ಬು ಹಿಂದಿನದನ್ನು ಮರೆತಂತೆ ಬೆಳೆಯತೊಡಗಿತು. ಅರವತ್ತು ಹಾಗೂ ತೊಂಬತ್ತು ದಿನಗಳ ಮಧ್ಯದಲ್ಲಿ ಬೆಳೆದ ಬೆಳೆ ಕೈ ಸೇರಿತು.
ಮಾರೋವಷ್ಟು ಇರದಿದ್ರೂ, ನಮ್ಮ ಮನೆ, ನೆಂಟರಿಷ್ಟರು ಎಲ್ಲಾರಿಗೂ ಸೊಪ್ಪು, ತರಕಾರಿ ಹಂಚಿದ್ದಿ, ಸುಮಾರು ಇಪ್ಪತ್ತು ಕಿಲೋಗ್ರಾಂನಷ್ಟು ಪ್ರತೀ ಕಾಳು ಸಿಕ್ಕು. ಜೊತೆಗೆ ಒಂದಷ್ಟು ಹಸೀ ಕಾಯಿ ಸಹಾ ಬಳಸಿದ್ದಿ. ಯಾವತ್ತೂ, ನಾವು ಐದು ಎಕರೇಕಬ್ಬಲ್ಲೂ ಇಷ್ಟು ಬೆಳೆದಿರಲಿಲ್ಲ. ಮನೆಯವರಿಗೆ ತುಂಬಾ ಖುಷಿಯಾಯ್ತು, ನಾವು ಇಷ್ಟೆಲ್ಲಾ ಬೆಳೆ ಬೆಳೆದಿದ್ದರಿಂದ ಮತ್ತೊಂದು ಉಪಯೋಗ ಆಯ್ತು. ಕಬ್ಬಿನಲ್ಲಿ ಕಳೆ ಬೆಳೀಲಿಲ್ಲ. ರಾಸಾಯನಿಕ ವಿಧಾನದಲ್ಲಿ ಕಳೆನಾಶಕ ಬಳಸಬೇಕಾಯ್ತು. ಏನೇ ಆದರೂ ಕಬ್ಬಿನ ಇಳುವರಿ ಮುಖ್ಯ ಅಲ್ವಾ? ಕಾದು ನೋಡೋಣ ಅಂತಾ ಸುಮ್ಮನಾದೆ’ ಅಂದ್ರು, ಕಬ್ಬು ಕಟಾವು ಮಾಡಿದಾಗ ಇವರಿಗೆ ಹತ್ತು ಗುಂಟೆಯಲ್ಲಿ ಹತ್ತು ಟನ್ ಇಳುವರಿ ಬಂದಿದೆ. ಕಬ್ಬು ಮಾರಿಲ್ಲ. ಬೆಲ್ಲ ಮಾಡಿದ್ದಾರೆ. ಒಂದು ಟನ್ ಗೆ 125 ಕೇಜಿ ಬೆಲ್ಲ ಬಂದಿದೆ. ಹತ್ತು ಗುಂಟೇಲಿ ಸಿಕ್ಕ ಒಂದೂ ಕಾಲು ಟನ್ ಬೆಲ್ಲವನ್ನು ನೇರವಾಗಿ ಗ್ರಾಹಕರಿಗೆ ಮಾರಿದ್ದಾರೆ. ಅದೂ ಕೆಜಿಗೆ 40 ರೂಪಾಯಿ ದರದಲ್ಲಿ. ಅಲ್ಲದೆ ಹತ್ತು ಗುಂಟೇಲಿ ಬಂದ ಆದಾಯ 50 ಸಾವಿರ ರೂ., ಆಗಿದ್ದ ಖರ್ಚು ಕೇವಲ 10 ಸಾವಿರ ರೂ., ಉಳಿದದ್ದು 40 ಸಾವಿರ ರೂ.ಆದಾಯ. ಎಕರೆಗೆ ಲೆಕ್ಕಾಚಾರ ಮಾಡಿದ್ರೆ ಒಂದು ಲಕ್ಷದ ಅರವತ್ತು ಸಾವಿರ ಆದಾಯ. ಈಗ ನೀವೇ ಹೇಳಿ ಏಕೆ ಈ ತರಹ ಕಬ್ಬು ಬೆಳೀಬಾರದು?
(ಲೇಖಕರು ಮೈಸೂರಿನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ.