Mysore
22
overcast clouds
Light
Dark

ಮುಂಗಾರು ಬಿದ್ದಾಗ ಮೂಲಂಗಿ ಬಿತ್ತಿ

• ರಮೇಶ್ ಪಿ.ರಂಗಸಮುದ್ರ

ಇತ್ತೀಚಿನ ವರ್ಷಗಳಲ್ಲಿ ಕೃಷಿ ಚಟುವಟಿಕೆಯ ಪದ್ಧತಿಗಳಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಸಾವಯವ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿ, ಕಾಡು ಕೃಷಿ, ಸಮಗ್ರ ಕೃಷಿ ಹೀಗೆ ಮಣ್ಣಿನ ಫಲವತ್ತತೆಯನ್ನು ಸುಸ್ಥಿರವಾಗಿಟ್ಟುಕೊಂಡು ಮಣ್ಣಿನ ಆರೋಗ್ಯದ ಮೂಲಕ ಪರಿಸರ ಹಾಗೂ ಜೀವಿಗಳ ಆರೋಗ್ಯವನ್ನು ಸುಧಾರಿಸುವ ಕೃಷಿಯತ್ತ ಎಲ್ಲರೂ ಮುಖ ಮಾಡುತ್ತಿರುವುದು ಶುಭಸೂಚಕ. ಮಣ್ಣು ಉಳಿದರೆ ಕೃಷಿ ಉಳಿಯುತ್ತದೆ. ಮಣ್ಣಿನ ಫಲವತ್ತತೆ ಸಮೃದ್ಧಿಗೊಂಡರೆ ಆಹಾರಗಳ ಗುಣಮಟ್ಟ ಉತ್ತಮವಾಗುತ್ತದೆ. ಇಳುವರಿ ಅಧಿಕವಾಗಿ ಲಾಭ ಕೈಗೆ ಬಂದರೆ ಕೃಷಿಕರು, ಅದರಲ್ಲಿಯೂ ಯುವ ಕೃಷಿಕರು ಕೃಷಿಯತ್ತ ಆಸಕ್ತಿ ತೋರುತ್ತಾರೆ.

2018ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ‘ಮೈಸೂರು ಜಿಲ್ಲಾ ಅತ್ಯುತ್ತಮ ಕೃಷಿಕ ಪ್ರಶಸ್ತಿ’ಯನ್ನು ನನಗೆ ನೀಡಿ ಗೌರವಿಸಿತು. ಆ ಸಮಯದಲ್ಲಿ ಕೃಷಿಕರ ಸಾಧನೆಗಳು ಮತ್ತು ಕೃಷಿಯಲ್ಲಿ ಹೊಸ ವಿಚಾರಗಳ ಆವಿಷ್ಠಾರ ಮತ್ತು ಅಳವಡಿಕೆ ವಿಭಾಗದಲ್ಲಿ ನನ್ನ ‘ಮೂಲಂಗಿ ಉಳುಮೆ ಸಿಹಿಗೆಣಸು ಅಗತ್ಯ’ ಎಂಬ ಸ್ವ-ಅನುಭವದ ವಿಚಾರಕ್ಕೆ ತಜ್ಞರ ಮೆಚ್ಚುಗೆ ಸಿಕ್ಕಿತು.

ಸಾಮಾನ್ಯವಾಗಿ ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಭತ್ತ ಬೆಳೆಯುವ ಜಮೀನಿಗೆ ಮುಂಗಾರು ಮಳೆ ಬಿದ್ದಾಗ, ಹಸಿರೆಲೆ ಗೊಬ್ಬರಕ್ಕಾಗಿ ಹುರುಳಿ, ಹೆಸರು ಕಾಳು, ಹಲಸಂದೆ, ಚಂಬೆ, ಗೊಡಮಂಜಿಗಳ ಜೊತೆಗೆ ಯಾವು ದಾದರೊಂದು ತರಕಾರಿ ಬೀಜವನ್ನು ಬಿತ್ತುವುದು ರೂಢಿ, ನಾನು ಬೀನ್ಸ್, ಮೂಲಂಗಿ, ಗೆಡ್ಡೆಕೋಸು, ಶೇಂಗಾ ಮೊದಲಾದ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದೆ. ಇದು ಕೆಲವೊಮ್ಮೆ ಉತ್ತಮ ಲಾಭವನ್ನು ತಂದುಕೊಡುತ್ತಿತ್ತು. 2013-14ರಲ್ಲಿ ಹೀಗೆ ಹಸಿರೆಲೆ ಬಿತ್ತನೆ ಬೀಜಗಳ ಜತೆ ಎಕರೆಗೆ 4 ಕೆಜಿ ಯಂತೆ ಮೂಲಂಗಿ ಬೀಜವನ್ನು ಬಿತ್ತಿದ್ದೆ. ಸರಿಯಾದ ಬೆಲೆ ಸಿಗದ ಪರಿಣಾಮ ಭೂಮಿಯಲ್ಲೇ ಬಿಟ್ಟು ನೀರು ಹಾಯಿಸಿ ಭತ್ತದ ನಾಟಿಗೆ ಸಿದ್ಧಪಡಿಸಿದೆ. ಆ ಕೃಷಿ ಅಂಕಣ ವರ್ಷ 9ರಿಂದ 12 ಇಂಚು ಉದ್ದವಾದ ಮೂಲಂಗಿ ಮಣ್ಣಿನ ಆಳಕ್ಕೆ ಇಳಿದು ಭೂಮಿ ಒಳಗೆ ನೈಸರ್ಗಿಕವಾಗಿ ಉಳುಮೆ ಪ್ರಾರಂಭಿಸಿತ್ತು.

ಸಾಮಾನ್ಯವಾಗಿ ಕಬ್ಬಿಣದ ನೇಗಿಲು, ಟ್ರಾಕ್ಟರ್, ಟಿಲ್ಲರ್ ಉಳುಮೆ ಕೇವಲ 6 ಇಂಚು ಆಳ ಉಳುಮೆ ಮಾಡುತ್ತದೆ. ನಮ್ಮ ಮೂಲಂಗಿ 12 ಇಂಚು ಆಳದವರೆಗೆ ಭೂಮಿಯನ್ನು ಸೀಳಿ ಒಳಗೆ ಇಳಿದು, ಕಳಿತು, ಹಸಿರೆಲೆ ಗೊಬ್ಬರದ ಜತೆ ಬೆರೆತು ನಮ್ಮ ಜಮೀನಿಗೆ ಒಂದು ಪರಿಮಳ ತಂದಿತ್ತು. ಹಾಗೆಯೇ ನನ್ನ 20 ಗುಂಟೆ ಜಮೀನಿಗೆ ಸಿಹಿ ಗೆಣಸು ಬಳ್ಳಿಯನ್ನು ನಾಟಿ ಮಾಡಿದ್ದು, ಸಸ್ಯಜನ್ಯ ಗೊಬ್ಬರದ ಪೋಷಕಾಂಶಗಳು ದೊರೆತು, ಒಂದು ಗುಂಟೆಗೆ 110 ಕೆಜಿಯ ಇಳುವರಿಯನ್ನು ನೀಡಿತ್ತು. ಈಗಲೂ 3-4 ವರ್ಷಗಳಿಗೊಮ್ಮೆ ಈ ಉಪಾಯ ಮಾಡುತ್ತಲೇ ಬರುತ್ತಿದ್ದೇನೆ. ಯಾವುದೇ ತರಕಾರಿ ಹಾಗೂ ಭತ್ತ, ರಾಗಿ, ಕಬ್ಬು ಬೆಳೆಗಳ ಇಳುವರಿ ಸುಸ್ಥಿರವಾಗಿದೆ.
rameshprangasamudra@gmail.com

ಮೂಲಂಗಿ ಉಳುಮೆ, ಗೆಡ್ಡೆಗೆಣಸು ಅಗೆತ ಉಪಯೋಗಗಳು
• ನೀರು ಹಾಯಿಸಿ ಉಳುಮೆ ಮಾಡುವ ಭತ್ತ, ರಾಗಿ, ಮುಂತಾದ ಗದ್ದೆಗಳಿಗೆ ಹೆಚ್ಚು ಅನುಕೂಲ.
• ಉಳುಮೆ ಕೈಬಿಟ್ಟಿರುವ ನೈಸರ್ಗಿಕ ಹಾಗೂ ಶೂನ್ಯ ಬಂಡವಾಳ ಕೃಷಿ ಭೂಮಿಗೆ ಸೂಕ್ತ.
• ದೊಡ್ಡ ಹಿಡುವಳಿದಾರರಿಗೆ ಅನುಕೂಲ,
• ಸಾವಯವ ಇಂಗಾಲ ವೃದ್ಧಿಗೆ ಅನುಕೂಲ
• ಕಲ್ಲುಭೂಮಿಯಲ್ಲಿ ಆಳವಾಗಿ ನೀರು ಇಂಗಿ ಮಣ್ಣು ಮೃದುವಾಗಿ ಹೂಮಸ್ ವೃದ್ಧಿಯಾಗಲು ಸೂಕ್ತ
· ಮಣ್ಣಿನ ಆಳದಲ್ಲಿರುವ ಎರೆಹುಳು, ಸೂಕ್ಷಾಣು ಜೀವಿಗಳಿಗೆ ವಿಪುಲ ವಾದ ಸಸ್ಯಜನ್ಯ ಪೋಷಕಾಂಶಗಳು ವೃದ್ಧಿಯಾಗಿ ನೈಸರ್ಗಿಕ ಉಳುಮೆ ಚಾಲನೆಯಲ್ಲಿರುತ್ತದೆ.
• ಗಿಡಗಳು ಸದೃಢವಾಗಿ ಬೆಳೆಯಲು ಸಹಕಾರಿ.
• ಮಣ್ಣಿನಲ್ಲಿ ಕ್ಷಾರತೆ ಕುಗ್ಗಿ, ಹೂಮಸ್ ಹೆಚ್ಚಾಗುತ್ತದೆ ಹಾಗೂ ಪಿಎಚ್‌ ಮೌಲ್ಯ ಸಮಸ್ಥಿತಿಗೆ ಬರುತ್ತದೆ.
• ಟ್ರ್ಯಾಕ್ಟರ್, ಟಿಲ್ಲರ್ ಉಳುಮೆಯಿಂದ ತೋಟಗಳ ಗಿಡದ ಬೇರಿಗೆ ಹಾನಿಯಾಗುವುದು ನಿಲ್ಲುತ್ತದೆ.

ಮೂಲಂಗಿ, ಕ್ಯಾರೆಟ್, ಬೀಟ್ ರೊಟ್, ಸಿಹಿಗೆಣಸು, ಮರ ಗೆಣಸು, ಕೆಸುವಿನ ಗೆಡ್ಡೆ, ಗೆಡ್ಡೆ ಕೋಸು, ಕೀರೆ ಸೊಪ್ಪು, ದಂಟಿನ ಸೊಪ್ಪು ಮುಂತಾದ ಗೆಡ್ಡೆ ಗೆಣಸು ಜಾತಿಯ ಸಸ್ಯವರ್ಗಗಳನ್ನು ನೈಸರ್ಗಿಕ, ಉಳುಮೆ ಅಗತೆಗೆ
ಬಳಸಬಹುದು.